- ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮ: ಕುರುಬೂರು ಶಾಂತಕುಮಾರ್
ಕನ್ನಡಪ್ರಭ ವಾರ್ತೆ ಮೈಸೂರು
ದೇಶದ ಎಲ್ಲಾ ರಾಜ್ಯಗಳಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಯಿಂದ ಕಿಸಾನ್ ಮಹಾ ಪಂಚಾಯತ್ ಕೇರಳದ ಪಾಲಕಾಡನಲ್ಲಿ ಡಿ.20, ತಮಿಳುನಾಡಿನ ಚೆನ್ನೈನಲ್ಲಿ ಡಿ.21, ಕರ್ನಾಟಕದ ಬೆಂಗಳೂರಿನಲ್ಲಿ ಡಿ.23, ತೆಲಂಗಾಣದ ಹೈದರಾಬಾದ್ ನಲ್ಲಿ ಡಿ.26 ರಂದು ರೈತರ ಬೃಹತ್ ಅಧಿವೇಶನಗಳನ್ನು ನಡೆಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ರೈತರ ಎಚ್ಚರಿಕೆಯ ಶಕ್ತಿ ಪ್ರದರ್ಶನ ಮಾಡಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.ರೈತರ ಬೆಳೆ ಸಾಲದ ಬಡ್ಡಿಮನ್ನಾ ಎನ್ನುವುದು ನಾಟಕೀಯವಾಗಿದೆ. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾಕ್ಕಾಗಿ ಡಿ.23 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ರೈತರ ಮಹಾಧಿವೇಶನ ಹಮ್ಮಿಕೊಳ್ಳಲಾಗಿದೆ ಎಂದು ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕೈಗಾರಿಕೆ, ಉದ್ಯಮಿಗಳಿಗೆ ಸಂಕಷ್ಟದ ನೆರವು ಎಂದು 12 ಲಕ್ಷ ಕೋಟಿ ಮನ್ನಾ ಮಾಡಿರುವ ರೀತಿ ರೈತರ ಸಾಲ ಮನ್ನಾ ಆಗಬೇಕು. ಇದೇ ದಿನ ರೈತರು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಡಿ.23 ರಂದು ಸಾಲ ಮನ್ನಾ ಕೋರಿಕೆ ಅರ್ಜಿ ಸಲ್ಲಿಸಲಾಗುತ್ತದೆ. ಸಾಲ ಪಡೆದ ರೈತರೇ ಈ ಅಧಿವೇಶನಕ್ಕೆ ಸ್ವಯಂ ಪ್ರೇರಿತರಾಗಿ ಬರಬೇಕು ಎಂದು ಅವರು ಮನವಿ ಮಾಡಿದರು.
ಕೇಂದ್ರ ಸರ್ಕಾರ ಸಕ್ಕರೆ ರಪ್ತು ನಿಷೇಧ, ಯಥೆನಾಲ್ ಉತ್ಪಾದನೆಗೆ ತಡೆ ಹಾಕಿರುವುದು ಕಬ್ಬು ಬೆಳೆಯುವ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ. ಕೇಂದ್ರ ಸರ್ಕಾರ ಈ ಬಗ್ಗೆ ಮರುಪರಿಶೀಲನೆ ನಡೆಸಲಿ ಎಂದು ಅವರು ಆಗ್ರಹಿಸಿದರು.
ದೇಶದ 140 ಕೋಟಿ ಜನರಿಗೆ ಆಹಾರ ಉತ್ಪಾದಿಸಲು ತಮ್ಮ ಜೀವನವನ್ನೆ ತ್ಯಾಗ ಮಾಡುತ್ತಿರುವ 60 ವರ್ಷ ಪೂರೈಸಿದ ರೈತರಿಗೆ ತಿಂಗಳಿಗೆ ಕನಿಷ್ಠ 5000 ರೂ. ಪಿಂಚಣಿ ನೀಡುವ ಯೋಜನೆ ಜಾರಿಗೆ ತರಬೇಕು. ರೈತನ ಮಗನ ಮದುವೆಯಾಗುವ ವಧುವಿಗೆ ಸರ್ಕಾರಿ ಕೆಲಸದಲ್ಲಿ ಶೇ.10 ಮೀಸಲಾತಿ ನೀಡುವ ನೀತಿ ಜಾರಿಗೆ ತರಬೇಕು. ರೈತರ ಮಕ್ಕಳು ಕೃಷಿಯಿಂದ ವಲಸೆ ಹೋಗುವುದನ್ನು ತಪ್ಪಿಸಬೇಕು. ದೇಶದ ರೈತರನ್ನು ಸಂರಕ್ಷಿಸಲು ವಿಶ್ವ ವ್ಯಾಪಾರ ಒಪ್ಪಂದದಿಂದ ಭಾರತ ಸರ್ಕಾರ ಹೊರ ಬರಬೇಕು. ಬಗರ್ ಹುಕುಂ ಸಾಗುವಳಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಅಡೆತಡೆಗಳನ್ನು ನಿವಾರಿಸಿ ಕೂಡಲೇ ಸಾಗುವಳಿ ಪತ್ರ ನೀಡಬೇಕು ಎಂದು ಅವರು ಒತ್ತಾಯಿಸಿದರು.
----
ರೈತರ ಸಾಲ ಮನ್ನಾ ಆಗದಂತೆ ವಂಚಿಸಲು ಬ್ಯಾಂಕುಗಳು ಬಡ್ಡಿ ದುಪ್ಪಟ್ಟು ಆಗುತ್ತದೆ, ಸುಸ್ತಿಯಾಗುತ್ತದೆ ಎಂದು ಹೆದರಿಸಿ ಆಂಗ್ಲ ಭಾಷೆಯ ಪತ್ರಕ್ಕೆ ರೈತರ ಸಹಿ ಪಡೆದು, ಸಾಲ ನವೀಕರಣ ಮಾಡುತ್ತಿದ್ದಾರೆ. ಇದರಿಂದ ರೈತರು ಸಾಲ ಮನ್ನಾದಿಂದ ವಂಚಿತವಾಗುತ್ತಾರೆ. ಈ ಬಗ್ಗೆ ರೈತರು ಜಾಗೃತರಾಗಿರಬೇಕು.