;Resize=(412,232))
ಈಗ ಕೆಲವು ದಿನಗಳ ಹಿಂದಷ್ಟೇ ಮಗಳಿಗೆ ಅಬ್ಯೂಸಿವ್ ಮದುವೆಯಿಂದ ಬಿಡುಗಡೆ ಕೊಡಿಸಿ ಅದೇ ಮಮತೆಯಿಂದ ಡೋಲು ಬಾರಾತ್‌ನೊಂದಿಗೆ ಮಗಳನ್ನು ಮನೆಗೆ ಕರೆತಂದ ತಂದೆಯ ನಡೆ ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಹೆಣ್ಣುಮಕ್ಕಳು ಹೊಸ್ತಿಲು ದಾಟಿ ಸೂರ್ಯನನ್ನು ನೋಡುತ್ತಿದ್ದುದೇ ಅಪರೂಪವಾಗಿದ್ದ 1885ರ ಅಭೇದ್ಯ ಕಾಲಕೋಶದಲ್ಲಿ ತಂದೆಯೊಬ್ಬ ಅದರಲ್ಲೂ ಮಲತಂದೆಯೊಬ್ಬ ಮಗಳಿಗೆ ಒಪ್ಪಿಗೆಯಿರದ ಮದುವೆಯಿಂದ ಕಾನೂನುಬದ್ದವಾಗಿ ಹೊರಬರಲು ಬೆಂಬಲವಾಗಿ ನಿಂತು ಏಜ್ ಆಫ್ ಕನ್ಸಂಟ್ ಆಕ್ಟ್1891 ಅಸ್ತಿತ್ವಕ್ಕೆ ಬರಲು ಒಂದು ರೀತಿ ಮೂಲ ಕಾರಣಕರ್ತರಾದ ಅರ್ಜುನ ಸಖಾರಾಮ್ ರಾವತ್ ಅವರ ಬದುಕು ಮತ್ತು ದೇಶದ ಮೊದಲ ಕಾನೂನುಬದ್ದ ವಿಚ್ಛೇದನ ಪಡೆದ ಹಾಗೂ ಕಾದಂಬಿನಿ ಗಂಗೂಲಿ ಮತ್ತು ಆನಂದಿಬಾಯಿ ಜೋಷಿರವರೊಂದಿಗೆ ದೇಶದಲ್ಲಿ ಮೊದಲು ಪ್ರಾಕ್ಟೀಸ್ ಮಾಡಿದ ವೈದ್ಯೆಯಾಗಿ ಕಟ್ಟಿಬಿಗಿದ ವ್ಯಸಸ್ಥೆಯಲ್ಲಿ ಹೀಗೂ ಬದುಕಿನ ಸಾಧ್ಯತೆಯ ತೋರಿದ ರುಕ್ಮಾಬಾಯಿ ರಾವತ್ ಅವರ ಜೀವಿತಗಳು ಸಾಧನೆಯಾಗಿ ಮಾರ್ಪಟ್ಟಂತೆ ಬದುಕು ಪ್ರವಹಿಸಿದ ರೀತಿ ಬೀರಿದ ಪ್ರಭಾವದಿಂದ ಈ ಲೇಖನ ಹೊಮ್ಮಿದೆ.
1876ರಲ್ಲಿ 11ರ ಬಾಲೆಯನ್ನು 19ರ ಹುಡುಗನಿಗೆ ಕಟ್ಟಿ ಅದೊಂದು ಮದುವೆ ಎಂದು ಸಂಭ್ರಮಿಸುತ್ತಿದ್ದ ಕಾಲವದು. ಆ ಬಾಲೆ 20 ರ ವಯಸ್ಸಿಗೆ ಬರುವ ಹೊತ್ತಿಗೆ ಆಕೆಯ ಅಂತರಂಗ ಏಳಿಸುವ ಪ್ರಶ್ನೆಗಳಿಗೆ ಆಕೆಯ ಬಳಿ ಜವಾಬುಗಳೇ ಇರಲಿಲ್ಲವೇನೊ! ಆಕೆಯ ದೇಹ ಮತ್ತು ಮನಸ್ಸಿನ ಮೇಲೆ ತನಗೆ ಕಾನೂನುಬದ್ದ ಹಕ್ಕಿದೆ ಎಂದು ಆ ವ್ಯಕ್ತಿ ನ್ಯಾಯಾಲಯದ ಮೆಟ್ಟಿಲೇರುತ್ತಾನೆ. ತನಗೆ ಅರಿವಿಲ್ಲದ ಆಯುವಿನಲ್ಲಿ ಆದ ವಿವಾಹ ತಾನು ಒಪ್ಪುವುದಿಲ್ಲ ಎಂದು ಆ ಬಾಲೆ ಧಿಕ್ಕರಿಸಿ ನಿಲ್ಲುತ್ತಾಳೆ. ಪುರುಷ ಪ್ರಧಾನ ವ್ಯವಸ್ಥೆ ಇದನ್ನು ಒಪ್ಪುವುದಾದರೂ ಹೇಗೆ? ಕಂಡು ಕೇಳರಿಯದ ಇಂತಹ ನಿರಾಕರಣೆ ಬೆಳಗಾಗುವ ಹೊತ್ತಿಗೆ ಬ್ರಿಟೀಷ್ ಆಡಳಿತ ಒಳಗೊಂಡಂತೆ ಸಮಸ್ತ ದೇಶದಾದ್ಯಂತ ಸಂಚಲನ ಮೂಡಿಸುವ ಸುದ್ದಿಯಾಗುತ್ತದೆ. ನ್ಯಾಯಾಲಯ ಆಕೆಯ ಮುಂದೆ ಎರಡೇ ಆಯ್ಕೆ ಇಡುತ್ತದೆ. ಒಂದೋ ಮದುವೆಯಾದವನೊಂದಿಗೆ ಆಕೆ ಬಾಳಬೇಕು ಇಲ್ಲ ಜೈಲು ಶಿಕ್ಷೆ ಅನುಭವಿಸಬೇಕು! ಕಣ್ಣಿಗೊತ್ತಿಕೊಂಡು ಆಕೆ ಶಿಕ್ಷೆ ಅನುಭವಿಸಲು ಸಿದ್ದಳಾಗುತ್ತಾಳೆ! ಈ ಘಟನೆಯ ನಂತರದ ಆಕೆಯ ಹೋರಾಟ ಭಾರತದ ನೆಲದಲ್ಲಿ ಹೆಣ್ಣಿನ ಬದುಕಿನಲ್ಲಿ ಒಂದು ಇತಿಹಾಸ ಸೃಷ್ಟಿಸಿ ಏಜ್ ಆಫ್ ಕನ್ಸಂಟ್ ಆಕ್ಟ್1891ರ ಹುಟ್ಟಿಗೆ ಕಾರಣವಾಯಿತು.
ರುಕ್ಮಾಬಾಯಿ 22-11-1864 ರಲ್ಲಿ ಮುಂಬೈನಲ್ಲಿ ಸತಾರ ಸಮುದಾಯದಲ್ಲಿ ಜಯಂತಿಬಾಯಿ ಮತ್ತು ಜನಾರ್ಧನ ಪಾಂಡುರಂಗರವರ ಮಗಳಾಗಿ ಜನಿಸಿದಳು. ಎರಡುವರೆ ವರ್ಷದ ಮಗುವಾಗಿದ್ದಾಗಲೇ ತಂದೆ ಜನಾರ್ಧನ ಪಾಂಡುರಂಗರವರ ದೇಹಾಂತ್ಯವಾಗುತ್ತದೆ. ತಾಯಿ ಜಯಂತಿಬಾಯಿಯವರಿಗೆ ಅವರ ಸಮುದಾಯದಲ್ಲಿ ಅಂಗಿಕಾರವಾದ ವಿಧವಾ ವಿವಾಹದಲ್ಲಿ ವಿಧುರ ಅರ್ಜುನ ಸಖಾರಾಮ ರಾವತ್ ಅವರೊಂದಿಗೆ ವಿವಾಹವಾಗುತ್ತದೆ. ಅರ್ಜುನ ಸಖಾರಾಮ ವೃತ್ತಿಯಿಂದ ವೈದ್ಯರು ಮತ್ತು ಸಮಾಜಸುಧಾರಕರು. ರುಕ್ಮಾಬಾಯಿ 11ರ ವಯಸ್ಸಿಗೆ ಬಂದಾಗ ಅವಳ ಮಲತಂದೆಯ ಸೋದರ ಸಂಬಂಧಿ 19ರ ಹರೆಯದ ದಾದಾಜಿ ಭಿಕಾಜಿಯವರೊಂದಿಗೆ ರುಕ್ಮಾಬಾಯಿ ಪ್ರೌಢಾವಸ್ಥೆ ತಲುಪುವವರೆಗೂ ವೈವಾಹಿಕ ಬದುಕಿಗೆ ಅವಕಾಶವಿಲ್ಲ ಮತ್ತು ದಾದಾಜಿ ಭಿಕಾಜಿ ಮನೆ ಅಳಿಯನಾಗಿ ಇರುವುದು ಎಂಬ ಒಪ್ಪಂದದೊಂದಿಗೆ ವಿವಾಹವಾಗುತ್ತದೆ. ರುಕ್ಮಾಬಾಯಿ ಪ್ರೌಢಾವಸ್ಥೆ ತಲುಪಿದ ಕೂಡಲೇ ಭಿಕಾಜಿ, ರುಕ್ಮಾಬಾಯಿಯನ್ನು ತನ್ನೊಂದಿಗೆ ಸಂಸಾರ ಜೀವನಕ್ಕೆ ಕಳುಹಿಸಿಕೊಡುವಂತೆ ಕೇಳುತ್ತಾನೆ. ರುಕ್ಮಾಬಾಯಿ ಇದನ್ನು ಸ್ಪಷ್ಟವಾಗಿ ನಿರಾಕರಿಸುತ್ತಾಳೆ. ಅವಳ ಈ ನಿರ್ಣಯಕ್ಕೆ ಅವಳ ಮಲತಂದೆ ಬೆನ್ನೆಲುಬಾಗಿ ನಿಲ್ಲುತ್ತಾನೆ. ರುಕ್ಮಾಬಾಯಿಯ ನಿರಾಕರಣೆಗೆ ಹಿಂದೆಗೆಯದ ಭಿಕಾಜಿ ತೀವ್ರ ಪ್ರತಿರೋಧ ತೋರಿ 1885ರಲ್ಲಿ ದಾದಾಜಿ ಭಿಕಾಜಿ – ರುಕ್ಮಾಬಾಯಿ ಪ್ರಕರಣದಲ್ಲಿ ವೈವಾಹಿಕ ಜೀವನದ ಹಕ್ಕುಗಳ ಪುನಃಸ್ಥಾಪನೆಗಾಗಿ ಕೋರಿ ಮುಂಬೈ ನ್ಯಾಯಾಲಯದ ಮೋರೆ ಹೋದ. ರುಕ್ಮಾಬಾಯಿಯ ಎಲ್ಲಾ ಹೆಜ್ಜೆಯಲ್ಲೂ ಆಕೆಗೆ ಬೆನ್ನೆಲುಬಾಗಿ ನಿಂತಿದ್ದ ಅವಳ ತಂದೆ ಅರ್ಜುನ ಸಖಾರಾಮ ರಾವತ್ 16 ಏಪ್ರಿಲ್ 1885 ರಂದು ಮರಣ ಹೊಂದಿದ್ದು ಅವಳ ನೈತಿಕ ಶಕ್ತಿ ಕಸಿಯುತ್ತದೆ.
ರುಕ್ಮಾಬಾಯಿಯ ಅಂತರಗದ ದಟ್ಟತೆಗಳಿಗೆ ಸುರಂಗ ಕೊರೆದಂತೆ ನೋವು ಪದಗಳಾಗಿ ಪ್ರವಹಿಸಿದ ‘ಎ ಹಿಂದೂ ಲೇಡಿ’ ಹೆಸರಿನಲ್ಲಿ ಟೈಮ್ಸ್ ಆಫ್ ಇಂಡಿಯಾದಲ್ಲಿ ಬರೆದ ‘ಇನ್ ಫ್ಯಾಂಟ್ ಮ್ಯಾರೇಜ್ ಅಂಡ್ ಎನ್ ಫೋರ್ಸಡ್ ವಿಡೋಹುಡ್’ ಎರಡು ಲೇಖನಗಳು ಬ್ರಿಟೀಷ್ ಇಂಡಿಯಾ ಮತ್ತು ದೇಶದಾದ್ಯಂತ ಪ್ರಭಾವ ಬೀರಿದ್ದವು. ಅವಳ ಲೇಖನದಲ್ಲಿ ಅನುಮತಿಯಿರದೇ ಜೀವನವೊಂದನ್ನು ಒಪ್ಪಿಕೊಳ್ಳುವ ನೋವಿನ ಅಗಾಧತೆ ಶಬ್ದಗಳಲ್ಲಿ ಪ್ರವಹಿಸಿದೆ ಎಂದರೆ ಸರಿಯಾದೀತು. ಆಕೆಯ ಲೇಖನದ ಅತ್ಯಂತ ಮನಃಕಲಕುವ ಕೆಲವು ಸಾಲುಗಳು ಹೀಗಿವೆ;
Sir, I am one of those unfortunate Hindu women, whose hard lot it is to suffer the unnameable miseries entailed by the custom of early marriage. This wicked practice has destroyed the happiness of my life. It comes between me and that thing which I prize above all others—study and mental cultivation. Without the least fault of mine I am doomed to seclusion; every aspiration of mine to rise above my ignorant sisters is looked upon with suspicion, and is interpreted in the most uncharitable manner.
‘ಎ ಹಿಂದೂ ಲೇಡಿ’ ಹೆಸರಿನಲ್ಲಿ ಟೈಮ್ಸ್ ಆಫ್ ಇಂಡಿಯಾದಲ್ಲಿ ರುಕ್ಮಾಬಾಯಿ ಬರೆದ ಲೇಖನ ಜಸ್ಟೀಸ್ ರಾಬರ್ಟ್ ಪಿನ್ಹೆ ಗಮನ ಸೆಳೆದಿತ್ತು. ನ್ಯಾಯಾಧೀಶರಾದ ಜೆ.ಪಿನ್ಹೆ ಈ ಪ್ರಕರಣದಲ್ಲಿ ಹೆಣ್ಣಿಗೆ ಅರಿವಿಲ್ಲದ ಆಯುವಿನಲ್ಲಿ ಘಟಿಸಿದ ಮದುವೆ, ತಿಳುವಳಿಕೆ ಇರುವ ಪ್ರಾಯದಲ್ಲಿ ಆಕೆ ಮಾಡುತ್ತಿರುವ ಆಯ್ಕೆ ಮತ್ತು ಬದುಕಿನ ಹಾದಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಆಕೆಯದ್ದು ಎಂಬುದನ್ನು ಮನಗಂಡರು. ದಾದಾಜಿ ಪರ ಅಡ್ವೊಕೇಟ್ ಲಾತೆಮ್ ವಾದ ಮಂಡಿಸುವ ಮೊದಲೇ ದಿನಾಂಕ:21-09-1985ರಂದು ‘ಆಕೆಯ ಒಪ್ಪಿಗೆ ಇರದೇ ಆಕೆಯನ್ನು ಆತನೊಂದಿಗೆ ಇರಲು ಹೇಳುವುದು ಬರ್ಬರ ಮತ್ತು ಕ್ರೂರ’ ಎಂದು ಉಲ್ಲೇಖಿಸಿ ಪ್ರಕರಣ ವಜಾಗೊಳಿಸಿ ಆದೇಶಿಸಿದರು. ಇದೊಂದು ಆದೇಶ ಬೆಳಾಗಗುವ ಹೊತ್ತಿಗೆ ಸಂಪ್ರದಾಯಸ್ಥ ಭಾರತೀಯರನ್ನು ದಂಗೆ ಏಳಿಸಿತ್ತು. ಒಂದೆಡೆ ಬ್ರಿಟೀಷರ ಆಡಳಿತವಿರುವುದೇ ಭಾರತದ ಸಂಪ್ರದಾಯಗಳನ್ನು ನಾಶಪಡಿಸಲೆಂದು ಎಂದು ಸಂಪ್ರದಾಯಸ್ಥರು ಆಕ್ರೋಶದಿಂದ ಸಿಡಿದೆದ್ದರು. ಇನ್ನೊಂದೆಡೆ ಹೆಣ್ಣೊಬ್ಬಳನ್ನು ಇಷ್ಟವಿಲ್ಲದ ಮದುವೆ ಬಲವಂತದಿಂದ ಒಪ್ಪಿಕೊಳ್ಳುವಂತೆ ಮಾಡುತ್ತಿರುವುದರ ವಿರುದ್ಧ ಕೆಲವು ಸಮಾಜ ಸುಧಾರಕರು ವಾದಕ್ಕಳಿದರು. ಆ ಆದೇಶ ಉದ್ದೀಪಿಸಿದ ತೀವ್ರತೆಯ ಕಾವು ಎಷ್ಟಿತ್ತೆಂದರೆ ಸಂಪ್ರದಾಯಸ್ಥ ಭಾರತೀಯರ ಬೆಂಬಲದಿಂದ ದಾದಾಜಿ ಭಿಕಾಜಿ ಮುಂಬೈ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ. ಸಂಪ್ರದಾಯವಾದಿಗಳ ಆಗ್ರಹದಿಂದಾಗಿ 14 ಮಾರ್ಚ್ 1886ರಲ್ಲಿ ಜಸ್ಟಿನ್ ಚಾರ್ಲ್ಸ ಸರ್ಜೆಂಟ್ ಮತ್ತು ಜಸ್ಟೀಸ್ ಎಲ್ ಹೆಚ್ ಬ್ಯಾಲೆ ಒಳಗೊಂಡ ಪೀಠ, ಈಗಾಗಲೇ ಮದುವೆ ಸಂಪನ್ನಗೊಂಡಿರುವುದರಿಂದ ಸಹಬಾಳ್ವೆಗೆ ಹಿಂದೂ ಕಾಯ್ದೆ ಪ್ರಕಾರ ಮಹಿಳೆಯ ಒಪ್ಪಿಗೆ ಅಪ್ರಮುಖವಾಗುವುದನ್ನು ಪರಿಗಣಿಸಿ, ಮರುವಿಚಾರಣೆಗೆ ಕೆಳಗಿನ ನ್ಯಾಯಾಲಯಕ್ಕೆ ಪ್ರಕರಣವನ್ನು ಹಿಂದಿರುಗಿಸಿತು.
ಪ್ರಕರಣ ಕೆಳ ನ್ಯಾಯಾಲಯಕ್ಕೆ ಹಿಂದಿರುಗುವ ಹೊತ್ತಿಗೆ ನ್ಯಾಯಾಧೀಶರಾದ ಜೆ.ಪಿನ್ಹೆ ನಿವೃತ್ತರಾಗಿದ್ದರು. ಅವರ ಸ್ಥಾನದಲ್ಲಿ ಜಸ್ಟೀಸ್ ಫರ್ಹಾನ್ ಸ್ಥಾನ ಅಲಂಕರಿಸಿದ್ದರು. ಡಿವಿಜನ್ ಬೆಂಚಿನ ಮೇಲ್ಮನವಿ ಆದೇಶ ಪರಿಶೀಲಿಸಿ ರುಕ್ಮಾಬಾಯಿ ದಾದಾಜಿಯವರೊಂದಿಗೆ ಬದುಕಬೇಕು ಅಥವಾ 6 ತಿಂಗಳ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಆದೇಶಿಸಿತು!
ತನ್ನ ಆತ್ಮಸಾಕ್ಷಿ ಸತ್ಯ ಮತ್ತು ಋಜುತ್ವವನ್ನು ಬಲಿಹಾಕುತ್ತಿರುವ ವ್ಯವಸ್ಥೆ! ತನಗೆ ಒಪ್ಪಿಗೆಯಿರದ ಬದುಕನ್ನು ತಿರಸ್ಕರಿಸಲು ಅವಕಾಶವಿಲ್ಲದ ಸಾಮಾಜಿಕ ಕಾಯ್ದೆ, ಎಲ್ಲವನ್ನೂ ಎದುರಿಸಿ ರೋಸಿದ ರುಕ್ಮಾಬಾಯಿ ಇಷ್ಟವಿಲ್ಲದ ಬದುಕು ಒಪ್ಪಿ ಬದುಕುಪೂರ್ತಿ ನೋಯುವುದಕ್ಕಿಂತ ಶಿಕ್ಷೆ ಅನುಭವಿಸುವುದಾಗಿ ನಿರ್ಣಯ ಘೋಷಿಸಿದಳು. ಅತೀ ಸಂಪ್ರದಾಯಸ್ಥ ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣೊಬ್ಬಳು ಹೀಗೆ ಪುರುಷನನ್ನು ತಿರಸ್ಕರಿಸುವುದು ಮದುವೆಯನ್ನು ಕಾನೂನುಬದ್ದವಾಗಿ ಮುರಿದು ಹೊರಬರುವುದು ಸಮಾಜದಲ್ಲಿ ಕೇಳರಿಯದ ವಿಷಯವಾಗಿತ್ತು. ಆದರೆ ರುಕ್ಮಾಬಾಯಿ ಹೋರಾಟ ಇಲ್ಲಿಗೆ ನಿಲ್ಲಲಿಲ್ಲ. ಲಂಡನ್ ನ ಪ್ರೈವಿ ಕೌನ್ಸಿಲ್‌ನಲ್ಲಿ ಅಂತಿಮ ಮೇಲ್ಮನವಿ ಸಲ್ಲಸಿದಳು.
ದಿನದಿನಕ್ಕೆ ಪ್ರಕರಣದ ತೀವ್ರತೆಯ ಕಾವು ಹೆಚ್ಚಿ ಹೆಣ್ಣಿನ ನೋವು ಹೆಣ್ಣಿಗೆ ಅರ್ಥವಾಗುವುದು ಎಂಬಂತೆ ಕೊನೆಗೆ ವಿಕ್ಟೋರಿಯಾ ರಾಣಿ ಖುದ್ದು ಭಾಗಿಯಾಗಿ ರುಕ್ಮಾಬಾಯಿ-ದಾದಾಜಿ ಭಿಕಾಜಿ ವಿವಾಹ ರದ್ದುಗೊಳಿಸುವ ಕುರಿತು ಸೂಚನೆ ನೀಡಿದಳು. ರುಕ್ಮಾಬಾಯಿ ದಾದಾಜಿ ಭಿಕಾಜಿಯವರಿಗೆ 2000 ರು. ಪರಿಹಾರ ನೀಡುವಂತೆ ಮತ್ತು ವಿವಾಹವನ್ನು ರದ್ದುಗೊಳಿಸುವಂತೆ ಒಪ್ಪಂದವಾಯಿತು. ಇಲ್ಲಿಗೆ ರುಕ್ಮಾಬಾಯಿ ಒಪ್ಪಿಗೆಯಿರದ ವಿವಾಹದ ವಿರುದ್ದದ ಹೋರಾಟದಿಂದ ಮುಕ್ತಳಾದಳು. ಸ್ವಂತಿಕೆಯ ಪುಷ್ಟಿಗೆ ಬೇಕಾದ ಸ್ವಾತಂತ್ರದ ತೇವ ಒದಗಿ ಬಂದಂತೆ, ಅವಳ ಈ ದಿಟ್ಟ ನಡೆ ಕಂಡು ಅವಳ ಹೋರಾಟದ ಆರಂಭಿಕ ಹಂತದಲ್ಲೇ ಬೆಹ್ರಾಮ್ ಜಿ ಮಲಬಾರಿ ಮತ್ತು ಪಂಡಿತ ರಮಾಬಾಯಿ, ಅಡಿಲೇಡ್ ಮ್ಯಾನಿಂಗ್ ಮುಂತಾದವರು 1885-1877 ರ ಅವಧಿಯಲ್ಲಿ ರುಕ್ಮಾಬಾಯಿ ಡಿಫೆನ್ಸ್ ಕಮಿಟಿಯನ್ನು ಅವಳ ಕಾನೂನಾತ್ಮಕ ಹೋರಾಟಕ್ಕಾಗಿ ಮತ್ತು ಮುಂದಿನ ವಿಧ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ಮತ್ತು ಸ್ಥೈರ್ಯ ನೀಡುವ ಸಲುವಾಗಿ ಸ್ಥಾಪಿಸಿದರು. ಈ ಕಮಿಟಿಗೆ ಮಹಾರಾಜ ಶಿವಾಜಿರಾವ್ ಹೋಳ್ಕರ್, ಡಾ. ಎಡಿತ್ ಪೆಚೆ ಅವರು ಆರ್ಥಿಕ ಸಹಾಯ ಮಾಡಿದರು. ಇದರಿಂದಾಗಿ ಲಂಡನ್‌ನ ಸ್ಕೂಲ್ ಆಫ್ ಮೆಡಿಸಿನ್‌ನಲ್ಲಿ 1889 ರಲ್ಲಿ ವೈದ್ಯಕೀಯ ಅಭ್ಯಾಸ ಮಾಡಿದಳು. ಅದರ ನಂತರ ಸೂರತ್‌ನಲ್ಲಿ ಮಹಿಳೆಯರಿಗಾಗಿ ಮೆಡಿಕಲ್ ಆಫೀಸರ್ ಆಗಿ 23 ವರ್ಷ ಮತ್ತು ರಾಜ್ ಕೋಟ್‌ನಲ್ಲಿ 12 ವರ್ಷ ಸೇವೆ ಸಲ್ಲಸಿದಳು.
ರುಕ್ಮಾಬಾಯಿ ಕದನದ ಬೆನ್ನಲ್ಲೇ 11ರ ವಯಸ್ಸಿನ ಬಾಲಕಿ ಫುಲ್ಮೋನಿ ದಾಸಿ ಆಕೆಯ 35ರ ಪತಿಯ ದೈಹಿಕ ದೌರ್ಜನ್ಯದಿಂದ ಸಾವನ್ನಪ್ಪಿದ ಪ್ರಕರಣ ದೇಶವ್ಯಾಪಿ ಸಂಚಲನ ಸೃಷ್ಟಿಸಿತು. 1860ರ ಇಂಡಿಯನ್ ಪೀನಲ್ ಕೋಡ್‌ನಲ್ಲಿ ಈ ದೇಶದ ಹೆಣ್ಣಿಗೆ ಮದುವೆ ಮತ್ತು ವೈವಾಹಿಕ ಜೀವನದ ವಯಸ್ಸು 10 ಎಂದಾಗಿತ್ತು. ಈ ಸರದಿ ಹೋರಾಟ ಮತ್ತು ಪ್ರಕರಣಗಳ ಪ್ರಭಾವದಿಂದಾಗಿ ಬ್ರಿಟೀಷ್ ಆಡಳಿತ ಹಿಂದೂ ಕಾಯ್ದೆಯಲ್ಲಿ ಮಧ್ಯ ಪ್ರವೇಶಿಸಿವಂತಾಯಿತು. 1891 5ಮಾರ್ಚ್ 19 ರಲ್ಲಿ ಲಾರ್ಡ ಲೌನ್ಸ್ ಡೌನ್ ಗೌರ್ವನರ್ ಅಧ್ಯಕ್ಷತೆಯಲ್ಲಿ ‘ಏಜ್ ಆಫ್ ಕನ್ಸಂಟ್ ಆಕ್ಟ್-1891’ ಅಸ್ತಿತ್ವಕ್ಕೆ ಬಂದಿತು. ಸಂಪ್ರದಾಯಬದ್ದ ಹಿಂದೂಗಳ ತೀವ್ರ ಪ್ರತಿರೋಧದ ನಡುವೆಯೂ ಹೆಣ್ಣಿನ ವೈವಾಹಿಕ ಜೀವನದ ವಯಸ್ಸನ್ನು 12ಕ್ಕೆ ಹೆಚ್ಚಿಸಲಾಯಿತು ಮತ್ತು ಇದರ ಉಲ್ಲಂಘನೆ ಅಪರಾಧವನ್ನಾಗಿ ಪರಿಗಣಿಸುವಂತೆ ಮಸೂದೆ ಅಂಗೀಕಾರವಾಯಿತು. ಈ ಕಾಯ್ದೆಯಿಂದ ಸಮಾಜಿಕವಾಗಿ ಹೆಚ್ಚು ವ್ಯತ್ಯಾಸ ತರದಿದ್ದರೂ ಆಕೆಯ ಮತ್ತು ಅಂದು ಆಕೆಯ ಹಿಂದೆ ನಿಂತು ಹೊರಾಡಿದ ಸಮಾಜ ಸುಧಾರಕರು ಎಂದಿಗೂ ಸ್ಮರಣಿಯರು.
ಇಂದಿಗೂ ಅತೀ ಚಿಕ್ಕ ವಯಸ್ಸಿನಲ್ಲಿ, ಮದುವೆ ಮಕ್ಕಳು ಎಂಬ ಹೊಣೆ ಹೊತ್ತು ಕೊಟ್ಯಂತರ ಹೆಣ್ಣೂ ಜೀವಗಳು ಆತ್ಮಕ್ಕೆ ಒಪ್ಪಿಗೆಯಿರದಿದ್ದರೂ ಮಕ್ಕಳು-ಸಮಾಜವನ್ನು ಈ ಕಾಲಕ್ಕೂ ಸಮಾಜವನ್ನು ಎದುರಿಸಲು ಅದರಿಂದ ಹೊರಬರಲು ಚೇತನವಿಲ್ಲದೇ ಭಾರತದ ನೆಲದಲ್ಲಿ ಸಂಸಾರದ ಹೊರೆ ಭರಿಸುತ್ತಿದ್ದಾರೆ. ಹೆಣ್ಣು ಹೊಸ್ತಿಲು ದಾಟಿ ಹೊರ ಬರುತ್ತಿದ್ದುದೇ ಅಪರೂಪವೆನ್ನುವ ಕಾಲದಲ್ಲಿ ಹೆಣ್ಣಿಗೂ ತನ್ನಿಚ್ಛೆಯಂತೆ ಬದುಕುವುದು ಸಾಧ್ಯವಿದೆ ಎಂದು ನಿರೂಪಿಸಿದ ದಿಟ್ಟತನ, ಇಂಥದ್ದೊಂದು ಹೋರಾಟ ಮೊದಲಿಟ್ಟು ಆತ್ಮ ಇಚ್ಛೆಯಂತೆ ವಿಭಿನ್ನ ಹಾದಿಯ ಬದುಕು ಬದುಕಿದ ರುಕ್ಮಾಬಾಯಿಯ ಜೀವಿತದ ರೀತಿ ಅತ್ಯಂತ ಪ್ರಭಾವಶಾಲಿಯಾಗಿದೆ.