ಭಾರತದಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಎಐ ಬಳಕೆ ವೇಗವಾಗಿ ವಿಸ್ತರಿಸುತ್ತಿದೆ. ಕೊರೋನಾ ಸಂದರ್ಭದಲ್ಲಿ ಸಂಶೋಧನಾ ಸಂಸ್ಥೆಗಳು ಹಾಗೂ ಔಷಧ ಕಂಪನಿಗಳು ಎಐ ಆಧರಿತ ಮಾದರಿಗಳನ್ನು ಬಳಸಿಕೊಂಡು ಲಸಿಕೆ ಸಂಶೋಧನೆಯನ್ನು ತ್ವರಿತಗೊಳಿಸಿದವು. ಕೃಷಿ ಕ್ಷೇತ್ರದಲ್ಲೂ ಇದರ ಬಳಕೆ ಆರಂಭವಾಗಿದೆ.

ಕೃತಕ ಬುದ್ಧಿಮತ್ತೆ (ಎಐ) ಜೈವಿಕ ತಂತ್ರಜ್ಞಾನದಲ್ಲಿ ವೇಗವಾಗಿ ಪರಿವರ್ತನಾ ಶಕ್ತಿಯಾಗಿ ಹೊರಹೊಮ್ಮಿದೆ. ಇದು ವಿಜ್ಞಾನಿಗಳು ಮತ್ತು ಕೈಗಾರಿಕೆಗಳು ಜೈವಿಕ ಸವಾಲುಗಳನ್ನು ಎದುರಿಸುವ ರೀತಿ ಹಾಗೂ ವೈದ್ಯಕೀಯ, ಕೃಷಿ, ಪರಿಸರ ನಿರ್ವಹಣೆ ಮತ್ತು ಕೈಗಾರಿಕಾ ಪ್ರಕ್ರಿಯೆಗಳಿಗಾಗಿ ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸುವ ರೀತಿಯನ್ನು ಮರು ರೂಪಿಸುತ್ತಿದೆ. ಉನ್ನತ ಮಟ್ಟದ ಡೇಟಾ ವಿಶ್ಲೇಷಣೆ, ಮೆಷೀನ್ ಲರ್ನಿಂಗ್ ಆಲ್ಗೋರಿದಮ್‌ಗಳು ಹಾಗೂ ಸ್ವಯಂಚಾಲಿತ ತಂತ್ರಗಳನ್ನು ಬಳಸುವ ಮೂಲಕ ‘ಎಐ’ ಜೈವಿಕ ತಂತ್ರಜ್ಞಾನ ಸಂಶೋಧನೆಯ ವ್ಯಾಪ್ತಿಯನ್ನು ವಿಸ್ತರಿಸುತ್ತದೆ, ಹೊಸ ಆವಿಷ್ಕಾರಗಳ ಸಾಧ್ಯತೆಗಳನ್ನು ಅನಾವರಣಗೊಳಿಸುತ್ತದೆ ಮತ್ತು ಸಂಶೋಧನೆಯಿಂದ ಉತ್ಪನ್ನಾಭಿವೃದ್ಧಿವರೆಗೆ ಪ್ರತಿಯೊಂದು ಹಂತದಲ್ಲೂ ನಿಖರತೆ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಜೈವಿಕ ತಂತ್ರಜ್ಞಾನದಲ್ಲಿ ಎಐ ಮಹತ್ವ, ಬಹುಮುಖಿ ಅನ್ವಯಿಕೆಗಳು ಹಾಗೂ ಸಂಶೋಧನಾ ವ್ಯಾಪ್ತಿ ಜೀವಶಾಸ್ತ್ರದಲ್ಲಿ ಹೊಸ ಯುಗದ ಉದಯವನ್ನು ಸೂಚಿಸುತ್ತವೆ.

ಜೈವಿಕ ತಂತ್ರಜ್ಞಾನದಲ್ಲಿ ಎಐ:

ಎಐ ಅಪಾರ ಜಿನೋಮಿಕ್, ಅಣ್ವಿಕ ಮತ್ತು ಜೈವಿಕ ರಾಸಾಯನಿಕ ದತ್ತಾಂಶವನ್ನು ವೇಗವಾಗಿ ವಿಶ್ಲೇಷಿಸಿ, ಮಾದರಿ, ಸಂಬಂಧ ಹಾಗೂ ಪ್ರವೃತ್ತಿಗಳನ್ನು ಪತ್ತೆಹಚ್ಚುತ್ತದೆ. ಇದರಿಂದ ಔಷಧ ಸಂಶೋಧನೆ, ರೋಗಪತ್ತೆ ಮತ್ತು ಉತ್ಪನ್ನಾಭಿವೃದ್ಧಿ ವೇಗವಾಗಿ, ಕಡಿಮೆ ವೆಚ್ಚದಲ್ಲಿ ನಡೆಯುತ್ತವೆ. ಸಂಶೋಧನೆ ಹಾಗೂ ಕೈಗಾರಿಕಾ ಪ್ರಕ್ರಿಯೆಗಳಲ್ಲಿ ನಿಖರತೆ, ಮರು ಉತ್ಪಾದನೀಯತೆ, ಮಾಪನೀಯತೆ ಹೆಚ್ಚಿಸಿ, ದೋಷಗಳನ್ನು ಕಡಿಮೆ ಮಾಡುತ್ತದೆ. ಕೃಷಿ, ಔಷಧ ತಯಾರಿಕೆ ಹಾಗೂ ಕೈಗಾರಿಕಾ ಜೈವಿಕ ತಂತ್ರಜ್ಞಾನದಲ್ಲಿ ನವೀನತೆ, ಕಾರ್ಯಕ್ಷಮತೆ ಮತ್ತು ವಾಣಿಜ್ಯೀಕರಣಕ್ಕೆ ಎಐ ಪ್ರಮುಖ ಸಾಧನವಾಗಿದೆ.

ಭಾರತದಲ್ಲಿ ಹೇಗೆ ಬಳಕೆ?:

ಭಾರತದಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಎಐ ಬಳಕೆ ವೇಗವಾಗಿ ವಿಸ್ತರಿಸುತ್ತಿದೆ. ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಭಾರತೀಯ ಸಂಶೋಧನಾ ಸಂಸ್ಥೆಗಳು ಹಾಗೂ ಔಷಧ ಕಂಪನಿಗಳು ಎಐ ಆಧರಿತ ಗಣಕ ಮಾದರಿಗಳನ್ನು ಬಳಸಿಕೊಂಡು ಲಸಿಕೆ ಸಂಶೋಧನೆಯನ್ನು ತ್ವರಿತಗೊಳಿಸಿದವು. ಕೃಷಿ ಕ್ಷೇತ್ರದಲ್ಲಿ ಐಸಿಎಆರ್‌ ಮತ್ತು ವಿವಿಧ ಕೃಷಿ ವಿಶ್ವವಿದ್ಯಾಲಯಗಳು ಎಐ ಆಧರಿತ ತಂತ್ರಜ್ಞಾನಗಳನ್ನು ಬಳಸಿ ಬೆಳೆ ರೋಗ ಪತ್ತೆ, ಕೀಟಗಳ ಮೇಲ್ವಿಚಾರಣೆ, ನೀರಾವರಿ ನಿರ್ವಹಣೆ ಹಾಗೂ ಇಳುವರಿ ಮುನ್ಸೂಚನೆಗಳನ್ನು ನೀಡುತ್ತಿವೆ. ಜಿನೋಮಿಕ್ಸ್ ಕ್ಷೇತ್ರದಲ್ಲಿ ಸಿಎಸ್‌ಐಆರ್‌-ಐಜಿಐಬಿ ಎಐ ನೆರವಿನಿಂದ ಜಿನೋಮ್ ವಿಶ್ಲೇಷಣೆ, ರೋಗ ಸಂಬಂಧಿತ ಜೀನ್‌ಗಳ ಗುರುತಿಸುವಿಕೆ ಹಾಗೂ ನಿಖರ ವೈದ್ಯಕೀಯ (ಪ್ರೆಸೆಶನ್‌ ಮೆಡಿಸಿನ್‌) ಸಂಶೋಧನೆಗಳನ್ನು ನಡೆಸುತ್ತಿದೆ. ಕೈಗಾರಿಕಾ ಜೈವಿಕ ತಂತ್ರಜ್ಞಾನದಲ್ಲಿ ಎಐ ಮೂಲಕ ಕಿಣ್ವೀಕರಣದ (ಫರ್ಮೆಂಟೇಷನ್‌) ಪ್ರಕ್ರಿಯೆಗಳ ನೈಜ-ಕಾಲ ಮೇಲ್ವಿಚಾರಣೆ ಹಾಗೂ ಉತ್ಪಾದನಾ ದಕ್ಷತೆಯನ್ನು ಹೆಚ್ಚಿಸಲಾಗುತ್ತಿದೆ. ಪರಿಸರ ಕ್ಷೇತ್ರದಲ್ಲಿ ತ್ಯಾಜ್ಯ ನಿರ್ವಹಣೆ, ಜೀವಶುದ್ಧೀಕರಣ (ಬಿಯೋರೆಮಿಡಿಯೇಷನ್‌) ಮತ್ತು ಜೈವಿಕ ವೈವಿಧ್ಯ ಸಂರಕ್ಷಣೆಯಲ್ಲಿಯೂ ಎಐ ಪರಿಣಾಮಕಾರಿಯಾಗಿ ಬಳಸಲಾಗುತ್ತಿದೆ. ಈ ಬೆಳವಣಿಗೆಗಳು ಭಾರತದಲ್ಲಿ ಆರೋಗ್ಯ, ಕೃಷಿ, ಕೈಗಾರಿಕೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಜೈವಿಕ ತಂತ್ರಜ್ಞಾನವನ್ನು ಹೆಚ್ಚು ಪರಿಣಾಮಕಾರಿ, ನಿಖರ ಹಾಗೂ ಶಾಶ್ವತವಾಗಿಸಲು ಮಹತ್ತರ ಕೊಡುಗೆ ನೀಡುತ್ತಿವೆ.

ಔಷಧ ಸಂಶೋಧನೆ ಮತ್ತು ಅಭಿವೃದ್ಧಿ:

ಹೊಸ ಔಷಧಗಳ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಕ್ರಿಯೆಯು ಸಾಂಪ್ರದಾಯಿಕವಾಗಿ ಬಹಳ ದುಬಾರಿ, ಸಮಯ ತೆಗೆದುಕೊಳ್ಳುವ ಮತ್ತು ಹೆಚ್ಚಿನ ಅಪಾಯವನ್ನು ಒಳಗೊಂಡಿರುತ್ತದೆ. ಸಾವಿರಾರು ರಾಸಾಯನಿಕ ಸಂಯುಕ್ತಗಳಲ್ಲಿ ಪರಿಣಾಮಕಾರಿ ಔಷಧೀಯ ಗುಣಗಳನ್ನು ಹೊಂದಿರುವ ಅಣುಗಳನ್ನು ಗುರುತಿಸಲು ವರ್ಷಗಳ ಕಾಲ ಬೇಕಾಗುತ್ತದೆ. ಎಐ ತಂತ್ರಜ್ಞಾನವು ಈ ಪ್ರಕ್ರಿಯೆಯನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಎಐ ವಿವಿಧ ಜೈವಿಕ ಮತ್ತು ರಾಸಾಯನಿಕ ದತ್ತಾಂಶಗಳನ್ನು ವಿಶ್ಲೇಷಿಸಿ, ನಿರ್ದಿಷ್ಟ ರೋಗಗಳಿಗೆ ಪರಿಣಾಮಕಾರಿಯಾಗಬಹುದಾದ ಸಂಯುಕ್ತಗಳನ್ನು ಮುಂಚಿತವಾಗಿ ಗುರುತಿಸುತ್ತದೆ. ಅಲ್ಲದೆ, ಔಷಧ ಮತ್ತು ಜೈವಿಕ ಗುರಿಗಳ (ಬಯಾಲಾಜಿಕಲ್‌ ಟಾರ್ಗೆಟ್ಸ್‌) ನಡುವಿನ ಪರಸ್ಪರ ಕ್ರಿಯೆಯನ್ನು ಮಾದರೀಕರಿಸಿ, ಔಷಧದ ಪರಿಣಾಮಕಾರಿತ್ವ ಹಾಗೂ ಸಂಭವನೀಯ ಅಡ್ಡಪರಿಣಾಮಗಳನ್ನು ಊಹಿಸುತ್ತದೆ. ಕ್ಲಿನಿಕಲ್ ಪರೀಕ್ಷೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡುತ್ತದೆ. ಕೋವಿಡ್-19 ಸೇರಿದಂತೆ ಅನೇಕ ಹೊಸ ಔಷಧಗಳ ಅಭಿವೃದ್ಧಿಯಲ್ಲಿ ಎಐ ಗಮನಾರ್ಹ ಕೊಡುಗೆ ನೀಡಿದೆ.

ಜಿನೋಮಿಕ್ಸ್ ಮತ್ತು ಜಿನೋಮ್ ಎಡಿಟಿಂಗ್:

ಜೀವಿಗಳ ಜಿನೋಮ್‌ಗಳು ಅಪಾರ ಪ್ರಮಾಣದ ಮಾಹಿತಿಯನ್ನು ಒಳಗೊಂಡಿರುತ್ತವೆ. ಈ ಮಾಹಿತಿಯನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದರಲ್ಲಿರುವ ಜೀನ್‌ಗಳ ಕಾರ್ಯಗಳನ್ನು ಗುರುತಿಸುವುದು ಸಂಕೀರ್ಣ ಕಾರ್ಯವಾಗಿದೆ. ಎಐ ಜಿನೋಮಿಕ್ ದತ್ತಾಂಶವನ್ನು ವಿಶ್ಲೇಷಿಸಿ, ಜೀನ್‌ಗಳ ರಚನೆ, ಕಾರ್ಯ ಹಾಗೂ ಅವುಗಳ ನಡುವಿನ ಸಂಬಂಧಗಳನ್ನು ಪತ್ತೆಹಚ್ಚಲು ನೆರವಾಗುತ್ತದೆ.

ಸಿಆರ್‌ಐಎಸ್‌ಪಿಆರ್‌ ಮುಂತಾದ ಜಿನೋಮ್ ತಂತ್ರಜ್ಞಾನಗಳ ಬಳಕೆಯಲ್ಲಿ ಎಐ ಅತ್ಯಂತ ನಿಖರತೆಯನ್ನು ಒದಗಿಸುತ್ತದೆ. ಯಾವ ಜೀನ್‌ಳನ್ನು ಪರಿವರ್ತಿಸಬೇಕು, ಯಾವ ಸ್ಥಳದಲ್ಲಿ ಸಂಪಾದನೆ ಮಾಡಬೇಕು ಮತ್ತು ಅನಗತ್ಯ ಪರಿಣಾಮಗಳನ್ನು ಹೇಗೆ ತಪ್ಪಿಸಬೇಕು ಎಂಬುದನ್ನು ಊಹಿಸಲು ಎಐ ಸಹಾಯ ಮಾಡುತ್ತದೆ. ಇದರಿಂದ ಆನುವಂಶಿಕ ಕಾಯಿಲೆಗಳ ಚಿಕಿತ್ಸೆ, ಸುಧಾರಿತ ಬೆಳೆಗಳ ಅಭಿವೃದ್ಧಿ ಮತ್ತು ಜೈವಿಕ ಸಂಶೋಧನೆಗೆ ಹೊಸ ಅವಕಾಶಗಳು ಸೃಷ್ಟಿಯಾಗಿವೆ.

ಕೃಷಿ ಜೈವಿಕ ತಂತ್ರಜ್ಞಾನ:

ಜನಸಂಖ್ಯೆ ಹೆಚ್ಚಳ ಮತ್ತು ಹವಾಮಾನ ಬದಲಾವಣೆಯ ಸವಾಲುಗಳ ನಡುವೆ ಆಹಾರ ಭದ್ರತೆಯನ್ನು ಕಾಪಾಡುವುದು ಜಾಗತಿಕ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಎಐ ಕೃಷಿ ಜೈವಿಕ ತಂತ್ರಜ್ಞಾನಕ್ಕೆ ಮಹತ್ತರ ಕೊಡುಗೆ ನೀಡುತ್ತಿದೆ. ಎಐ ಆಧರಿತ ವ್ಯವಸ್ಥೆಗಳು ಮಣ್ಣಿನ ಗುಣಮಟ್ಟ, ಹವಾಮಾನ, ತೇವಾಂಶ ಮತ್ತು ಬೆಳೆಗಳ ಆರೋಗ್ಯದ ಮಾಹಿತಿಯನ್ನು ವಿಶ್ಲೇಷಿಸಿ ಉತ್ಪಾದಕತೆಯನ್ನು ಹೆಚ್ಚಿಸಲು ನೆರವಾಗುತ್ತವೆ. ಕೀಟ ಮತ್ತು ರೋಗಗಳ ಪ್ರಾರಂಭಿಕ ಹಂತದಲ್ಲಿಯೇ ಪತ್ತೆಹಚ್ಚುವ ಮೂಲಕ ಬೆಳೆ ನಷ್ಟವನ್ನು ಕಡಿಮೆ ಮಾಡಬಹುದು. ನೀರಾವರಿ ವೇಳಾಪಟ್ಟಿಯನ್ನು ನಿಖರವಾಗಿ ನಿರ್ಧರಿಸುವುದರಿಂದ ನೀರಿನ ಉಳಿತಾಯ ಸಾಧ್ಯವಾಗುತ್ತದೆ. ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಮುಂಚಿತವಾಗಿ ಅಂದಾಜಿಸಿ ಸೂಕ್ತ ಕೃಷಿ ತಂತ್ರಗಳನ್ನು ರೂಪಿಸಲು ಎಐ ಸಹಕಾರಿಯಾಗಿದೆ.

ಕೈಗಾರಿಕಾ ಜೈವಿಕ ಸಂಸ್ಕರಣೆ:

ಕೈಗಾರಿಕಾ ಜೈವಿಕ ತಂತ್ರಜ್ಞಾನದಲ್ಲಿ ಔಷಧಗಳು, ಎನ್‌ಜೈಮ್‌ಗಳು, ಜೈವಿಕ ಇಂಧನಗಳು ಮತ್ತು ಇತರ ಜೈವಿಕ ಉತ್ಪನ್ನಗಳ ಉತ್ಪಾದನೆಗಾಗಿ ವಿವಿಧ ಜೈವಿಕ ಪ್ರಕ್ರಿಯೆಗಳನ್ನು ಬಳಸಲಾಗುತ್ತದೆ. ಈ ಪ್ರಕ್ರಿಯೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಎಐ ಪ್ರಮುಖ ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಕಿಣ್ವೀಕರಣ (ಫರ್ಮೆಂಟೇಷನ್‌), ಶುದ್ಧೀಕರಣ ಮತ್ತು ಉತ್ಪಾದನಾ ಹಂತಗಳ ಮಾಹಿತಿಯನ್ನು ಎಐ ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡುತ್ತದೆ. ತಾಪಮಾನ, ಪಿಹೆಚ್- ಹೈಡ್ರೋಜನ್ ಅಯಾನ್‌ಗಳ ಸಾಂದ್ರತೆಯನ್ನು ಸೂಚಿಸುವ ಮಾನ, ಪೋಷಕಾಂಶಗಳ ಮಟ್ಟ ಮತ್ತು ಉತ್ಪಾದನಾ ದರಗಳಂತಹ ಅಂಶಗಳನ್ನು ನಿರಂತರವಾಗಿ ವಿಶ್ಲೇಷಿಸಿ ಪ್ರಕ್ರಿಯೆಯನ್ನು ಉತ್ತಮಗೊಳಿಸುತ್ತದೆ. ಇದರಿಂದ ಉತ್ಪಾದನಾ ವೆಚ್ಚ ಕಡಿಮೆಯಾಗುವುದರ ಜೊತೆಗೆ ಉತ್ಪನ್ನಗಳ ಗುಣಮಟ್ಟ ಮತ್ತು ಉತ್ಪಾದನಾ ಸಾಮರ್ಥ್ಯ ಹೆಚ್ಚುತ್ತದೆ.

ಪರಿಸರ ಮತ್ತು ಜೈವಿಕ ತಂತ್ರಜ್ಞಾನ:

ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ನಿಯಂತ್ರಣದಲ್ಲಿ ಎಐ ಮಹತ್ವದ ಪಾತ್ರ ವಹಿಸುತ್ತಿದೆ. ತ್ಯಾಜ್ಯ ನಿರ್ವಹಣೆ, ಮಾಲಿನ್ಯ ಪತ್ತೆ ಮತ್ತು ಜೀವಶುದ್ಧೀಕರಣ ಕಾರ್ಯಗಳಲ್ಲಿ ಎಐ ಆಧರಿತ ವ್ಯವಸ್ಥೆಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತವೆ. ಎಐ ಪರಿಸರದ ದತ್ತಾಂಶವನ್ನು ವಿಶ್ಲೇಷಿಸಿ ಮಾಲಿನ್ಯದ ಮೂಲಗಳನ್ನು ಗುರುತಿಸುತ್ತದೆ ಮತ್ತು ಸೂಕ್ತ ಪರಿಹಾರಗಳನ್ನು ಸೂಚಿಸುತ್ತದೆ. ಜೈವಿಕ ಪ್ಲಾಸ್ಟಿಕ್‌ಗಳ ಅಭಿವೃದ್ಧಿ, ತ್ಯಾಜ್ಯವನ್ನು ಉಪಯುಕ್ತ ಉತ್ಪನ್ನಗಳಾಗಿ ಪರಿವರ್ತಿಸುವ ತಂತ್ರಜ್ಞಾನಗಳು ಹಾಗೂ ಜೀವವೈವಿಧ್ಯ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಎಐ ಬಳಕೆ ಹೆಚ್ಚುತ್ತಿದೆ. ಅಳಿವಿನಂಚಿನಲ್ಲಿರುವ ಜೀವಿಗಳ ಮೇಲ್ವಿಚಾರಣೆ ಮತ್ತು ಪರಿಸರ ವ್ಯವಸ್ಥೆಗಳ ಆರೋಗ್ಯ ಮೌಲ್ಯಮಾಪನದಲ್ಲಿಯೂ ಎಐ ಪ್ರಮುಖ ಪಾತ್ರ ವಹಿಸುತ್ತದೆ.

ಡಾ. ಬಿ. ಈ. ರಂಗಸ್ವಾಮಿ,

ಉಪಕುಲಪತಿ, ದಾವಣಗೆರೆ ವಿಶ್ವವಿದ್ಯಾಲಯ,

ದಾವಣಗೆರೆ

 ==

ಡಾ. ವಾಸುದೇವ ನಾಯಕ ಕೆ. ಬಿ. ಎಲ್,

ಪ್ರಾಧ್ಯಾಪಕ, ಜೈವಿಕ ತಂತ್ರಜ್ಞಾನ ವಿಭಾಗ,

ಬಿಐಇಟಿ, ದಾವಣಗೆರೆ.