ಜನರ ನಡುವಿನ ‘ಸಾಹೇಬ’

Published : Mar 29, 2026, 04:34 PM IST
Bhanuprabha

ಸಾರಾಂಶ

ಮೊದಲು ಇದ್ದ ಹೆಸರು ಪಾಂಡುರಂಗ. ನಂತರ ಅದು ವಿಠ್ಠಲ ಆಯಿತು. ಶಾಲೆಯ ಮಾಸ್ತರರಿಗೆ ಇದು ಯಾಕೋ ಮರಾಠಿ ಟೇಲರ್ ಅಂಗಡಿ ಓನರ್ ಹೆಸರಿನಂತಿದೆ ಅನಿಸಿ ಆ ಹೆಸರಿಗೆ ಒಂದಿಷ್ಟು ಮರ್ಯಾದೆ ಕೊಡಲು ‘ಮೂರ್ತಿ’ ಜೋಡಿಸಿದರು.

- ಜಿ. ಎನ್. ಮೋಹನ್

ಮೊದಲು ಇದ್ದ ಹೆಸರು ಪಾಂಡುರಂಗ. ನಂತರ ಅದು ವಿಠ್ಠಲ ಆಯಿತು. ಶಾಲೆಯ ಮಾಸ್ತರರಿಗೆ ಇದು ಯಾಕೋ ಮರಾಠಿ ಟೇಲರ್ ಅಂಗಡಿ ಓನರ್ ಹೆಸರಿನಂತಿದೆ ಅನಿಸಿ ಆ ಹೆಸರಿಗೆ ಒಂದಿಷ್ಟು ಮರ್ಯಾದೆ ಕೊಡಲು ‘ಮೂರ್ತಿ’ ಜೋಡಿಸಿದರು. ಹಿಂದೆ, ಮುಂದೆ, ಮಧ್ಯೆ ಅನ್ನುವ ಪಾಸ್‌ಪೋರ್ಟ್ ಕಾನೂನಿನ ಪ್ರಕಾರ ಹೇಳುವುದಾದರೆ ಇವರ ಹೆಸರು ಐರವಳ್ಳಿ ಮಲ್ಲೇಗೌಡ ವಿಠ್ಠಲಮೂರ್ತಿ. ವಿದೇಶಿಗರ ಬಾಯಲ್ಲಿ ‘ಮಿ. ಐರವಳ್ಳಿ’. ಇಷ್ಟೆಲ್ಲಾ ಆದರೂ ಊರಲ್ಲಿ ಇವರು ದೊಡ್ಡವರಿಗೆ ಪುಟ್ಟಸ್ವಾಮಿ, ಚಿಕ್ಕವರಿಗೆ ಪುಟ್ಟಸ್ವಾಮಣಯ್ಯ.

ಇದೆಲ್ಲಾ ಹೇಳಬೇಕು ಅಂತ ಯಾಕೆ ಅನಿಸಿತು ಎಂದರೆ ವಿಠ್ಠಲಮೂರ್ತಿ ಅವರ ‘ಬದುಕು ಜಟಕಾ ಬಂಡಿ, ನಾನದರ ಸಾಹೇಬ..’ ಕೃತಿಯಲ್ಲಿ ‘ಪ್ರಾರಬ್ಧಗಳಿಗೆ ಅಂತ್ಯ ಹಾಡಿದ ಕುವೆಂಪು ಯುಗ’ ಎನ್ನುವ ಒಂದು ಅಧ್ಯಾಯವಿದೆ. ಹೇಗೆ ಹೆಸರಿನ ಮೂಲಕವೇ ಸಮಾಜವನ್ನು ಒಡೆದ, ಜಾತಿಯನ್ನು ಕಟ್ಟಿಕೊಂಡೇ ಬದುಕು ಸವೆಸಬೇಕಾಗಿ ಬಂದ, ಹೆಸರಿನ ಕಾರಣಕ್ಕಾಗಿಯೇ ನಗೆಪಾಟಲಿಗೆ ತುತ್ತಾಗಬೇಕಾಗಿ ಬಂದ ರಾಜಕಾರಣವನ್ನು ವಿಠ್ಠಲಮೂರ್ತಿಯವರು ಬಯಲಿಗಿಡುತ್ತಾರೆ.

ಕೂಲಿಮಠದಲ್ಲಿ ಅಕ್ಷರ ಲೋಕವನ್ನು ಕೈಗೆಟುಕಿಸಿಕೊಂಡ ಹುಡುಗ ಪ್ರವೇಶಿಸಿದ್ದು ‘ಊರವರಿಗೆ ನಾಟಕ ಕಲಿಸುವ ಬದಲು ಮಕ್ಕಳಿಗೆ ಅಕ್ಷರ ಕಲಿಸಿ'''' ಎಂದ ನಾಟಕ ಮೇಷ್ಟರ ಒತ್ತಾಸೆಯಿಂದಾಗಿ ಆರಂಭವಾದ ಮೊದಲ ಪ್ರಾಥಮಿಕ ಶಾಲೆಯಲ್ಲಿ. ಬರೀ ಅಕ್ಷರವನ್ನು ಮಾತ್ರ ಕೈಗೆಟುಕಿಸಿಕೊಂಡಿದ್ದರೆ ವಿಠ್ಠಲಮೂರ್ತಿಯವರ ಈ ಕೃತಿ ನಮ್ಮೆದುರು ಇರುತ್ತಿರಲಿಲ್ಲವೇನೋ, ಬದಲಿಗೆ ಅವರು ಅಕ್ಷರದ ಜೊತೆಗೆ ಅರಿವನ್ನೂ ತಮ್ಮದಾಗಿಸಿಕೊಂಡರು. ಅಪ್ಪನ ಬಾರುಕೋಲಿನಿಂದ ಕಲಿತಷ್ಟೇ ಪಾಠವನ್ನು ಅವರು ಅಮ್ಮನ ಪ್ರೀತಿಯಿಂದಲೂ ಕಲಿತಿದ್ದಾರೆ. ಬಂಧುಗಳಿಂದ, ಸ್ನೇಹಿತರಿಂದ, ಕೊನೆಗೆ ತಮ್ಮ ಮನೆಯ ಆಡುಗೆಯವರು, ವಾಹನ ಚಾಲಕನಿಂದಲೂ ಅರಿವಿನ ಕಾಣ್ಕೆಯನ್ನು ಪಡೆದಿದ್ದಾರೆ.

ತಾವು ಹಾಸನ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದಾಗ, ಒಕ್ಕೂಟವು ತೀವ್ರವಾಗಿ ಎದುರಿಸುತ್ತಿದ್ದ ಸಮಸ್ಯೆಯನ್ನು ನಿವಾರಿಸಿದ್ದು ಅವರ ವಾಹನ ಚಾಲಕ ಕೊಟ್ಟ ಸಲಹೆಯ ಮೇರೆಗೆ. ಅಂದಿನಿಂದ ಇಂದಿನವರೆಗೂ ಅವರಿಗೆ ಕೇಳಿಸಿಕೊಳ್ಳುವ ಗುಣವಿದೆ. ಆ ಕಾರಣಕ್ಕಾಗಿಯೇ ಅವರಿಗೆ ಮ್ಯಾಂಚೆಸ್ಟರ್‌ನಲ್ಲಿ ಕನ್ನಡಿಗರ ಸಮಾವೇಶ ಮಾಡಲು ಸಾಧ್ಯವಾಗಿದೆ. ಪಟ್ಟದಕಲ್ಲು, ನವರಸಪುರ ಉತ್ಸವಕ್ಕೆ ಚಾಲನೆ ಕೊಡಲು ಸಾಧ್ಯವಾಗಿದೆ.

ಜಗತ್ತು ಅರ್ಥವಾಗುವ ಮೊದಲೇ ಅಪ್ಪ ಎದುರು ಕೂತು ಪ್ರತಿ ದಿನ ಓದಿಸಿದ ‘ಕುಮಾರವ್ಯಾಸ ಭಾರತ’ದಿಂದಾಗಿ ಪಡೆದ ಓದಿನ ಹಸಿವು ಮುಂದುವರೆದು ಕುವೆಂಪು ಮೂಲಕ ತಮ್ಮ ಅರಿವಿನ ಕಿಟಕಿಯನ್ನು ತೆರೆಯುವಂತೆ ಮಾಡಿತು. ವಿಠ್ಠಲಮೂರ್ತಿಯವರ ಈ ಕೃತಿಯನ್ನು ಓದಿದರೆ ಪುಟ ಪುಟದಲ್ಲೂ ಆ ಅರಿವಿನ ಶಾಲ್ಮಲೆ ಹರಿಯುತ್ತಿರುವುದನ್ನು ಕಾಣಬಹುದು. ಪಟ್ಟದಕಲ್ಲು ಉತ್ಸವಕ್ಕೆ ಇಡೀ ಕನ್ನಡನಾಡು ಕಣ್ಣಾಗಿದ್ದಾಗ, ಅದನ್ನು ಉದ್ಘಾಟಿಸಲು ರಾಜಕಾರಣಿಗಳು ತಹ ತಹ ಪಡುತ್ತಿದ್ದಾಗ ಆ ಮೊತ್ತ ಮೊದಲನೆಯ ಪಟ್ಟದಕಲ್ಲು ಉತ್ಸವವನ್ನು ಉದ್ಘಾಟಿಸಲು ವಿಠ್ಠಲಮೂರ್ತಿಯವರು ಕೈ ಹಿಡಿದು ವೇದಿಕೆಗೆ ಕರೆದುಕೊಂಡು ಬಂದದ್ದು ಚೌಡಿಕೆಯ ಗೌರಮ್ಮ ಮಾದರ ಅವರನ್ನು!

‘ನೀವು ಬಬ್ಬೂರುಕಮ್ಮೆಯವರೆ, ಹೊಯ್ಸಳ ಕರ್ನಾಟಕದವರೆ’ ಎಂದು ಕೇಳಿದವರಿಗೆ ‘ನಾನು ಅಖಿಲ ಕರ್ನಾಟಕದವನು’ ಎಂದು ಹೇಳುವ ದಿಟ್ಟತನ ಇವರಿಗೆ ಬಂದದ್ದು ಆ ಅರಿವಿನ ಬಲದಿಂದಲೇ, ವಿಜಾಪುರದಲ್ಲಿ ಎರಡು ಜಾತಿಗಳ ನಡುವೆ ಅರಳಿದ ಒಂದು ಪ್ರೇಮ ಆರೇಳು ಜನರನ್ನು ಮಚ್ಚಿನಿಂದ ಕೊಲ್ಲುವಂತೆ ಮಾಡಿದಾಗ, ಜಾತಿಯೊಳಗೆ ನಾಯಕನಾರು ಎನ್ನುವ ಪ್ರತಿಷ್ಠೆ ಕಾರಣಕ್ಕೆ ಒಡಲಲ್ಲಿ ಹಸುಗೂಸು ಹೊತ್ತಾಕೆಯನ್ನೂ ಸೇರಿ 10 ಜನರನ್ನು ಸುಟ್ಟು ಕೊಂದು ಹಾಕಿದಾಗ, ನರಗುಂದ ನವಲಗುಂದ ಸೇರಿದಂತೆ ಆಸುಪಾಸಿನ ಎಲ್ಲಾ ಹಳ್ಳಿಗಳ ರೈತರ ನಿಟ್ಟುಸಿರನ್ನು ಬಣ್ಣಿಸುವಾಗ ...

...‘ಸರ್ಕಾರಿ ಶಾಲೆಗಳಲ್ಲಿ ಓದಿದ್ದೇವೆ, ಎಲ್ಲರೂ ಸೇರಿ ಸರ್ಕಾರಿ ಶಾಲೆಯ ಋಣ ತೀರಿಸೋಣ’ ಎಂದು ಎಲ್ಲಾ ಎಂಜಿನಿಯರುಗಳಿಗೆ ಮನವಿ ಮಾಡಿದ ಕಾರಣಕ್ಕೆ 10 ತಿಂಗಳಲ್ಲಿ 850 ಹೊಸ ಶಾಲಾ ಕೊಠಡಿಗಳು ನಿರ್ಮಾಣವಾಗಿ, 1200 ಹಳೆಯ ಕೊಠಡಿಗಳು ರಿಪೇರಿಗೊಂದು ನಿಂತವು. ಬೇಲೂರು ಹಳೇಬೀಡಿನಲ್ಲಿ ಬೆಳ್ಳಂಬೆಳಗ್ಗೆ ಪ್ರವಾಸ ಬಂದ ವಿದ್ಯಾರ್ಥಿನಿಯರು ಶೌಚಾಲಯ ಹುಡುಕುತ್ತಾ ಪರಿಪಾಟಲು ಪಡುತ್ತಿದ್ದುದನ್ನು ಕಂಡು ಇಡೀ ರಾಜ್ಯದ ಎಲ್ಲ ಪ್ರವಾಸ ಕೇಂದ್ರಗಳಲ್ಲೂ ಮೂಲಭೂತ ಸೌಕರ್ಯ ಒದಗಿಸಲು ಕ್ರಿಯಾಯೋಜನೆ ತಯಾರಿಸಿದರು.

ಪ್ರವಾಸೋದ್ಯಮ ಎಂದರೆ ವಿದೇಶಕ್ಕೆ ಪದೇ ಪದೇ ಹಾರುವುದು ಎಂದುಕೊಂಡವರ ನಡುವೆ ಶೌಚಾಲಯ ಕಟ್ಟಿಸಲು ಹೊರಟ ವಿಠ್ಠಲಮೂರ್ತಿಯವರು ಇದ್ದರು, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂದರೆ ಜಿಲ್ಲೆಯ ಎರಡನೇ ನವಾಬ ಎಂದುಕೊಂಡವರ ನಡುವೆ ಶಾಲೆ ಋಣ ತೀರಿಸಲು ಹೊರಟ ವಿಠ್ಠಲಮೂರ್ತಿ ಇದ್ದರು. ‘ಕನ್ನಡ ಸಾಹಿತ್ಯ ಪರಿಷತ್ತು ಸಾಹಿತಿಗಳದ್ದು, ಸರ್ಕಾರದ ಕೈಗೆ ಕೊಟ್ಟು ಸರ್ಕಾರಿ ಸಾಹಿತ್ಯ ಪರಿಷತ್ತು ಮಾಡಬೇಡಿ’ ಎಂದು ಕಳಕಳಿಯಿಂದ ಕೇಳಿದ ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತಾಧಿಕಾರಿ ವಿಠ್ಠಲಮೂರ್ತಿ ಇದ್ದರು. ತೇಜಸ್ವಿಯವರು ಒಂದು ಇನ್‌ಲ್ಯಾಂಡ್ ಲೆಟರ್‌ನಲ್ಲಿ ಕಳಿಸಿದ ಟಿಪ್ಪಣಿ ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಬೀಜ ಊರುವಂತೆ ಮಾಡಿತ್ತು.

ಈ ಕೃತಿ ಕೇವಲ ವಿಠ್ಠಲಮೂರ್ತಿ ಅವರಿಗೆ ಹಿಡಿದ ಕನ್ನಡಿಯಲ್ಲ, ಜೊತೆಗೆ ಅಂದಿನ ಕಾಲಕ್ಕೂ ಹಿಡಿದ ಕನ್ನಡಿ. ವಿಠ್ಠಲಮೂರ್ತಿಯವರು ತಾವು ಅಧಿಕಾರಿಯಾಗಿದ್ದಾಗಿನ ನೆನಪುಗಳನ್ನು ಹೇಳುತ್ತಿದ್ದರೂ ಹಿನ್ನೆಲೆಯಲ್ಲಿ ಆಗಿನ ಕಾಲ, ಆಗಿನ ರಾಜಕಾರಣ, ಆಗಿನ ಏಳು ಬೀಳುಗಳೂ ಇವೆ.

ಚುನಾವಣೆಯಲ್ಲಿ ಠೇವಣಿ ಇಡಲು ಬೇಕಾದ ಹಣ ಜೇಬಿನಲ್ಲಿಟ್ಟುಕೊಳ್ಳದ ಗುಂಡೂರಾವ್ ಇದ್ದಾರೆ. ತಲೆ ತಿನ್ನಲು ಬಂದ ಜನರ ನಡುವೆ ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಗಜಲ್ ಕೇಳುತ್ತಾ ಕುಳಿತುಕೊಳ್ಳುವ ಜೆ ಎಚ್ ಪಟೇಲ್ ಇದ್ದಾರೆ, ಹೊರಡುವಾಗ ಎದ್ದು ನಿಂತು ಕೈ ಕುಲುಕಿ ಬೀಳ್ಕೊಡುತ್ತಿದ್ದ ರಾಮಕೃಷ್ಣ ಹೆಗಡೆ ಅವರಿದ್ದಾರೆ. ಶಿಫಾರಸಿಗೆ ಮನ್ನಣೆ ನೀಡಲಿಲ್ಲ ಎಂದು ರಾತ್ರೋರಾತ್ರಿ ಎತ್ತಂಗಡಿ ಮಾಡಿಸಿದರೂ ಸರ್ಕಾರಿ ನಿವಾಸವನ್ನು ಮುತುವರ್ಜಿಯಿಂದ ಮಂಜೂರು ಮಾಡಿಸಿಕೊಟ್ಟ ದೇವೇಗೌಡರಿದ್ದಾರೆ.

ಇವು ಕಾಲದ ಕಥೆಗಳು, ವ್ಯಕ್ತಿ ಕಥನಗಳು, ಕನ್ನಡ ನಾಡಿನ ಒಳಗೆ ಆಡಿದ ಏಳು ಬೀಳುಗಳ ಕಥನವೂ ಹೌದು.

ಶಾಲೆಗೆ ಚಕ್ಕರ್ ಹೊಡೆದ ಕಾರಣಕ್ಕಾಗಿ ಅಪ್ಪನಿಂದ ಇನ್ನಿಲ್ಲದಂತೆ ಏಟು ತಿಂದ ವಿಠ್ಠಲಮೂರ್ತಿ ಅವರು ಪದವಿ ತಲುಪುವ ವೇಳೆಗೆ ಎರಡು ಬಾರಿ ಡಬಲ್ ಪ್ರೊಮೋಷನ್ ಪಡೆದಿದ್ದರು. 22 ವರ್ಷಕ್ಕಾಗಲೇ ಪಾಠ ಮಾಡಲು ತರಗತಿಯ ಕೊಠಡಿಗೆ ಹೊಕ್ಕಾಗ ಅಲ್ಲಿ ಇವರ ಸಹಪಾಠಿಗಳೇ ಇದ್ದದ್ದೂ ಹೌದು. ಕೈಗೆಟುಕುವ ಬೆಲೆಯಲ್ಲಿ ಸರ್ಕಾರ ಮುದ್ರಿಸಿಕೊಟ್ಟ ಕುಮಾರವ್ಯಾಸ ಭಾರತ ಹೇಗೆ ಮನೆ ಮನೆ ತಲುಪಿತು ಎಂದು ಕಂದುಕೊಂಡಿದ್ದ ಹುಡುಗ ವಿಶ್ವ ಕನ್ನಡ ಸಮ್ಮೇಳನ ನಡೆಸಲು ಸಜ್ಜಾದಾಗ ಕನ್ನಡದ ಅತ್ಯುತ್ತಮ ಕೃತಿಗಳನ್ನು ಸುಲಭ ಬೆಲೆಗೆ ಅಚ್ಚು ಮಾಡಿಸಿಕೊಟ್ಟರು. ವಿದ್ಯಾರ್ಥಿಯಾಗಿದ್ದಾಗ ಮನ ಹೊಕ್ಕ ಎಂ ಎಸ್ ಐ ಎಲ್ ಹಾಡುಗಳು ಅವರೇ ಎಂ ಎಸ್ ಐ ಎಲ್ ನಿರ್ದೇಶಕರಾಗಿ ನೇಮಕವಾದಾಗ ಎಲ್ಲೆಡೆ ಹುಡುಕಿಸಿ ಸಿ ಡಿ ರೂಪದಲ್ಲಿ ಮತ್ತೆ ಜನರಿಗೆ ಕೊಟ್ಟರು.

‘ನೀವು ಯಾಕೆ ಆಕ್ಟರ್ ಆಗಬಾರದು’ ಎಂದು ಇವರನ್ನು ಕೇಳಿದ್ದು ಬಿ ವಿ ಕಾರಂತರು. ಅದಕ್ಕೂ ಹಲವು ವರ್ಷ ಮುಂಚೆಯೇ ಡಾ. ರಾಜಕುಮಾರ್ ಅವರು ‘ಮನಸ್ಸು ಮಾಡಿ, ಸಿನೆಮಾದಲ್ಲಿ ಪಾತ್ರ ಮಾಡುವಿರಂತೆ’ ಎಂದು ಪ್ರೀತಿಯಿಂದ ಒತ್ತಾಯಿಸಿದ್ದರು.

ಈ ಕೃತಿಗೆ ‘ಬದುಕು ಜಟಕಾ ಬಂಡಿ, ನಾನದರ ಸಾಹೇಬ’ ಎನ್ನುವ ಹೆಸರಿದೆ. ತಮ್ಮ ವೃತ್ತಿಯುದ್ದಕ್ಕೂ ಸಾಹೇಬ ಹುದ್ದೆಯಲ್ಲಿಯೆ ಇದ್ದ ವಿಠ್ಠಲಮೂರ್ತಿ ಅವರು ಆ ಹುದ್ದೆಯನ್ನು ಜನಸಾಮಾನ್ಯರ ಕಡೆಗೆ ನಡೆಸಿಕೊಂಡು ಬಂದರು.

‘ನಿಮ್ಮ ವೃತ್ತಿ ಬದುಕಿನಲ್ಲಿ ನೀವು ಮರೆಯಲಾಗದ ಗಳಿಗೆ ಯಾವುದು’ ಎಂದು ಕೇಳಿದರೆ ಅವರು ದೇವರಾಜ ಅರಸು ಅವರ ಭೂ ಸುಧಾರಣಾ ಕಾಯಿದೆಯಡಿ ಜನರ ಪರವಾಗಿ ನಿಂತು ಅವರಿಗೆ ಭೂಮಿ ಕೊಡಿಸಿದ ಘಳಿಗೆಯನ್ನು ಸ್ಮರಿಸುತ್ತಾರೆ. ‘ಜಮೀನಿನ ಹಕ್ಕು ಪಡೆದ ಒಬ್ಬೊಬ್ಬ ವ್ಯಕ್ತಿ ಕಣ್ಣಲ್ಲಿ ಕಂಡ ಸಂತೋಷ ಮತ್ತು ಕೃತಜ್ಞತಾ ಭಾವ ನಾನು ನನ್ನ ಬದುಕಿನಲ್ಲಿ ಅನುಭವಿಸಿದ ಅತ್ಯಂತ ಸಂತೋಷ ಹಾಗೂ ಧನ್ಯತೆಯ ಕ್ಷಣಗಳು’ ಎನ್ನುತ್ತಾರೆ.

‘ಕೃಷಿ ಗೊತ್ತಿರೋ ನೀನು ಕೃಷಿ ಇಲಾಖೆಯಲ್ಲಿರಬೇಕು ಅದು ಬಿಟ್ಟು ಆ ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ಏನು ಮಾಡುತ್ತಿದ್ದೀಯ’ ಎಂದಿದ್ದರಂತೆ ಪೂರ್ಣಚಂದ್ರ ತೇಜಸ್ವಿ. ಆ ಕಾರಣಕ್ಕಾಗಿಯೊ, ಇಲ್ಲ ಅವರ ತಂದೆ ‘ಒಬ್ಬ ಬೆಳೆಗಾರ ತನ್ನ ತೋಟದಲ್ಲಿ ಪ್ರತಿನಿತ್ಯ ತಿರುಗಾಡಬೇಕೆಂದು ತೋಟದಲ್ಲಿರುವ ಗಿದ ಮರಗಳು ಅಪೇಕ್ಷಿಸುತ್ತವೆ’ ಎಂದು ಹೇಳುತ್ತಿದ್ದ ಕಾರಣಕ್ಕೋ ವಿಠ್ಠಲಮೂರ್ತಿ ಅವರು ಮತ್ತೆ ಮಲೆನಾಡಿಗೆ ಹೊರಳಿಕೊಂಡಿದ್ದಾರೆ. ‘ಸಾಹೇಬ’ರನ್ನು ಕಂಡು ಗಿಡ ಮರಗಳಿಗೂ ಸಂತಸವಾಗಿದೆ.

 ಕೃತಿ: ಬದುಕು ಜಟಕಾ ಬಂಡಿ, ನಾನದರ ಸಾಹೇಬ..

ಲೇ: ಐ ಎಂ. ವಿಠ್ಠಲಮೂರ್ತಿ

ಪ್ರ : ಬಹುರೂಪಿ

ಪುಟ: 176

ಬೆಲೆ: ರೂ 300

ಸಂಪರ್ಕ: 70191 82729

PREV
Read more Articles on

Recommended Stories

ಮತಾಂತರ : ಸುಪ್ರೀಂ ರೀತಿ ಎಚ್ಚರಿಸಿದ್ದ ಅಂಬೇಡ್ಕರ್‌
ಗ್ಯಾಸ್‌ ಬಿಕ್ಕಟ್ಟಿಗೆ ಕೊಳವೆ ಅನಿಲವೇ ಮದ್ದು