ಗ್ಯಾಸ್‌ ಬಿಕ್ಕಟ್ಟಿಗೆ ಕೊಳವೆ ಅನಿಲವೇ ಮದ್ದು

Published : Mar 27, 2026, 12:49 PM IST
LPG

ಸಾರಾಂಶ

ಎಲ್‌ಪಿಜಿ ಅಭಾವದ ಪರಿಸ್ಥಿತಿಯನ್ನು ತಪ್ಪಿಸಲು ಸರ್ಕಾರ ಕೊಳವೆ ಅನಿಲ ಸಂಪರ್ಕದ ಮೊರೆ ಹೋಗುತ್ತಿದೆ. ಎಲ್ಲಿ ಸಾಧ್ಯವೋ ಅಲ್ಲಿ ಸಂಪರ್ಕಕ್ಕೆ ಕೋರುತ್ತದೆ. ಹಿಂದೆ ಇದರ ಅಳವಡಿಕೆ ರಾಜ್ಯ ಸರ್ಕಾರ, ಗ್ರಾಹಕರ ವಿವೇಚನೆಗೆ ಬಿಟ್ಟಿದ್ದ ಕೇಂದ್ರ ಈಗ ತಾನೇ ಮುತುವರ್ಜಿ ತೆಗೆದುಕೊಂಡಿದೆ. ಅದಕ್ಕೆ ಕಾರಣವೂ ಇದೆ

 ಅಜಿತ್ ಶೆಟ್ಟಿ ಹೆರಂಜೆ

ರಾಜ್ಯ ಸಹ ಸಂಚಾಲಕರು

ಪ್ರಕಾಶನ ಪ್ರಕೋಷ್ಠ

ಬಿಜೆಪಿ ಕರ್ನಾಟಕ

 ಪ್ರತಿ ಸಂಕಷ್ಟದ ಸಂದರ್ಭಗಳು ಭಾರತದ ಸಾಮರ್ಥ್ಯ ಪರೀಕ್ಷಿಸಿವೆ. 1960ರ ಹಸಿರು ಕ್ರಾಂತಿ,1975ರ ತುರ್ತು ಪರಿಸ್ಥಿತಿ ಇರಬಹುದು. 1991ರ ಆರ್ಥಿಕ ಕುಸಿತ ಅಥವಾ 2020ರ ಕೋವಿಡ್ ಸಂಕಷ್ಟವೇ ಇರಬಹುದು, ಜಗತ್ತು ಈ ಎಲ್ಲಾ ಸಂದರ್ಭದಲ್ಲಿ ಭಾರತದ ಕಥೆ ಮುಗಿದೇ ಹೋಯಿತು ಎನ್ನುವಂತೆ ಮಾತನಾಡುತ್ತಿದ್ದಾಗ ಭಾರತ ಅವರ ನಿರೀಕ್ಷೆಗೆ ಪರಿಸ್ಥಿತಿಯನ್ನು ತನಗೆ ಅನುಕೂಲ ರೀತಿ ಮಾಡಿಕೊಂಡಿತ್ತು. ಈಗ 2026ರಲ್ಲಿ ಕೊಲ್ಲಿ ಯುದ್ಧ ದೇಶವನ್ನು ಮತ್ತೆ ಅಂತಹುದೇ ವಿಷಮ ಪರಿಸ್ಥಿತಿಗೆ ಒಡ್ಡಿದೆ. ಅಡುಗೆ ಮನೆಯ ಕಿಚ್ಚು ಆರಿಸುವ ಸವಾಲು ಹಾಕುತ್ತಿದೆ. 2010ರಲ್ಲಿ ಇಂತಹದ್ದೇ ಪರಿಸ್ಥಿತಿ ಬಂದಾಗ ಅಂದು ತೈಲವನ್ನು ಸರಕಾರ ಪಡಿತರ ಮೂಲಕ ವಿತರಿಸುವ ಅನಿವಾರ್ಯತೆಯಿತ್ತು. ಇವತ್ತು ಆ ಸಮಸ್ಯೆ ಇಲ್ಲಿದ್ದರೂ ಎಲ್ಪಿಜಿಗೆ ಸಂಕಷ್ಟ ಬಂದಿದೆ. ಭಾರತದ ಬಹುಪಾಲು ಅಂದರೆ ಶೇ. 55 ಅಧಿಕ ಎಲ್ಪಿಜಿಯನ್ನು ನಾವು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತೇವೆ. ಉಳಿದವುಗಳನ್ನು ಆಮದಾದ ಕಚ್ಚಾತೈಲ ಸಂಸ್ಕರಣೆ ಮಾಡಿ ದೇಶದಲ್ಲೇ ಉತ್ಪಾದನೆ ಮಾಡುತ್ತಾರೆ. ವಿದೇಶದಿಂದ ನೇರವಾಗಿ ಆಮದು ಮಾಡುವ ಎಲ್ಪಿಜಿಯ ಶೇ.30 ಕ್ಕೂ ಅಧಿಕ ಹೋರ್ಮುಜ್‌ ಜಲಸಂಧಿ ಮೂಲಕವೇ ಬರಬೇಕು. ಇದರಿಂದ ಆಗಿರುವ ಸಂಕಟದಿಂದ ಪಾರಾಗಲು ಸರ್ಕಾರ ಎಲ್ಲಿ ಸಾಧ್ಯವೋ ಅಲ್ಲಿ ಎಲ್ಪಿಜಿ ಬದಲು ಕೊಳವೆ ಅನಿಲದ ಸಂಪರ್ಕ ಕೊಡಿಸುವುದು. ಇಷ್ಟು ದಿನ ಕೇಂದ್ರ, ರಾಜ್ಯ ಹಾಗು ಗ್ರಾಹಕರ ವಿವೇಚನೆಗೆ ಬಿಟ್ಟಿತ್ತು, ಈಗ ಆಯ್ಕೆ ಬದಲು ಕಡ್ಡಾಯ ಎನ್ನುವ ರೀತಿ ಒತ್ತಾಯಿಸುತ್ತಿದೆ.

ಈಗ ಏಕೆ ಈ ತುರ್ತು ಅಗತ್ಯ?

ಭಾರತದಂತಹ ಬೃಹತ್ ಮೊತ್ತದ ಜನಸಂಖ್ಯೆ ಇರುವ ದೇಶದಲ್ಲಿ ಇವತ್ತು ಸುಮಾರು 40 ಕೋಟಿ ಗೃಹೋಪಯೋಗಿ ಅನಿಲ ಸಂಪರ್ಕ ಇದ್ದರೆ ವಾಣಿಜ್ಯಕ್ಕೆ ದಿನ ಒಂದಕ್ಕೆ ಸುಮಾರು 25 ಲಕ್ಷ ಸಿಲಿಂಡರ್ ಬಳಕೆಯಾಗುತ್ತಿದೆ. ಭಾರತದಲ್ಲಿ ಇವತ್ತು ಸುಮಾರು 4 ವಾರಗಳಿಗೆ ಸಾಕಾಗುವ ಎಲ್ಪಿಜಿ ಶೇಖರಣಾ ವ್ಯವಸ್ಥೆ ಇದ್ದರೂ ಇವತ್ತಿನ ಅನಿಶ್ಚಿತತೆಯನ್ನು ಪರಿಗಣಿಸಿದರೆ ಅದು ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕಾಣುತ್ತಿದೆ.

ಎಲ್ಪಿಜಿಯ ಪ್ರತಿನಿತ್ಯದ ಆಮದು ಮತ್ತು ಉತ್ಪಾದನೆ 0.085 MMT ಆದರೆ, ಖರ್ಚು ಕೂಡ ಅದೇ ಪ್ರಮಾಣದಲ್ಲಿದೆ. ಇದರ ಜೊತೆಗೆ ಕಾಳಸಂತೆ. ಕೆಲವು ದಿನಗಳಿಂದ ಸರಕಾರ ಮಾಡುತ್ತಿರುವ ದಾಳಿಗಳಿಂದ ಇದೂ ಕೂಡ ಬೆಳಕಿಗೆ ಬಂದಿದೆ, ಎಲ್ಲೆಲ್ಲಿ ಸರಕಾರ ಮತ್ತು ಗ್ರಾಹಕರ ಮಧ್ಯೆ ಏಜೆನ್ಸಿಗಳು, ಮಧ್ಯವರ್ತಿಗಳು ಇರುತ್ತಾರೋ ಅಲ್ಲಿ ಭ್ರಷ್ಟಾಚಾರ, ಕಾಳಸಂತೆ ಸಾಮಾನ್ಯ. ಇಂತಹ ಪರಿಸ್ಥಿತಿಗೆ ಕೊಳವೆ ಅನಿಲವೇ ಸರಿಯಾದ ರಾಮಬಾಣ.

ಕೊಳವೆ ಅನಿಲ ಭಾರತದಲ್ಲೇ ಉತ್ಪಾದನೆ

ಕೊಳವೆ ಅನಿಲ ಅಂದರೆ ಮುಖಾಂತರ ಬರುವ ನೈಸರ್ಗಿಕ ಅನಿಲ. ಭಾರತ ನೈಸರ್ಗಿಕ ಅನಿಲದ ಬೇಡಿಕೆಯಲ್ಲಿ ಶೇ. 50ಕ್ಕಿಂತ ಹೆಚ್ಚು ಭಾಗವನ್ನು ದೇಶೀಯವಾಗಿಯೇ ಗಣಿಗಾರಿಕೆ ಮಾಡುತ್ತದೆ. ಪ್ರಮುಖವಾಗಿ ಆಂಧ್ರಪ್ರದೇಶದ ಕರಾವಳಿಯ ಕೃಷ್ಣ-ಗೋದಾವರಿ (KG) ಬೇಸಿನ್, ಅರಬ್ಬಿ ಸಮುದ್ರದ ಮುಂಬೈ ಹೈ, ಅಸ್ಸಾಂನ ತೈಲ ನಿಕ್ಷೇಪಗಳು ಮತ್ತು ರಾಜಸ್ಥಾನದ ಬಾರ್ಮರ್ ಪ್ರದೇಶಗಳಲ್ಲಿ ಅನಿಲ ಉತ್ಪಾದನೆ ನಿರಂತರವಾಗಿ ನಡೆಯುತ್ತಿದೆ. ಓಎನ್ಜಿಸಿ (ONGC) ಮತ್ತು ಇತರ ಪೆಟ್ರೋಲಿಯಂ ಸಂಸ್ಥೆಗಳು ಹೊಸ ಅನಿಲ ನಿಕ್ಷೇಪಗಳ ಶೋಧನೆಗಾಗಿ ಸುಮಾರು 20 ಶತಕೋಟಿ ಡಾಲರ್‌ಗಳಷ್ಟು ($20 Billion) ಬೃಹತ್ ಹೂಡಿಕೆ ಮಾಡುತ್ತಿವೆ. ಈ ದೇಶೀಯ ಉತ್ಪಾದನೆಯು ಹೆಚ್ಚಾದಷ್ಟೂ ನಮ್ಮ ಇಂಧನ ಭದ್ರತೆ ಗಟ್ಟಿಯಾಗುತ್ತದೆ, ನಮ್ಮ ಅಡುಗೆ ಮನೆಯ ಬಜೆಟ್ ಮೇಲೆ ನೇರ ಪರಿಣಾಮ ಬೀರದಂತೆ ತಡೆಯಬಹುದು. ಪ್ರಸ್ತುತ ಭಾರತದ ಪ್ರತಿದಿನ ಬಳಕೆಗೆ 0.028 Million Metric Standard Cubic Meters per day (MMSCMD) ಇದರಲ್ಲಿ ಶೇ.65ಭಾರತದಲ್ಲೇ ಉತ್ಪಾದನೆಯಾದರೆ ಉಳಿದ ಭಾಗವನ್ನು ಕತಾರ್, ಅಮೆರಿಕ, ಆಸ್ಟ್ರೇಲಿಯಾ, ರಷ್ಯಾ, ಯುಎಇ, ಮತ್ತು ಆಫ್ರಿಕಾದಿಂದ ಆಮದು ಮಾಡಿಕೊಳ್ಳುತ್ತದೆ. ಯುದ್ಧದ ನಂತರ ಕೊಲ್ಲಿ ರಾಷ್ಟ್ರ ಹೊರತುಪಡಿಸಿ ಆಸ್ಟ್ರೇಲಿಯಾ, ಅಮೆರಿಕ ಹಾಗು ರಷ್ಯಾದಿಂದ ಆಮದಿಗೆ ಒಪ್ಪಂದ ಮಾಡಿಕೊಳ್ಳುತ್ತಿದೆ. ಭವಿಷ್ಯದ ಅನ್ವೇಷಣೆ ಮತ್ತು ಹೊಸ ಸಾಧ್ಯತೆಗಳು

ಸಾಂಪ್ರದಾಯಿಕ ಅನಿಲ ಬಾವಿಗಳಲ್ಲದೆ, ಭಾರತವು ಹೊಸ ತಂತ್ರಜ್ಞಾನಗಳ ಮೂಲಕ ಅನಿಲ ಅನ್ವೇಷಣೆಯ ಸಾಧ್ಯತೆಗಳನ್ನು ವಿಸ್ತರಿಸುತ್ತಿದೆ. ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಮಧ್ಯಪ್ರದೇಶದ ಕಲ್ಲಿದ್ದಲು ಗಣಿಗಳಲ್ಲಿ ಕಲ್ಲಿದ್ದಲಿನ ಪದರಗಳ ನಡುವೆ ಸಿಲುಕಿರುವ ಕೋಲ್ ಬೆಡ್ ಮೀಥೇನ್ (CBM) ಅನ್ನು ಈಗ ವೈಜ್ಞಾನಿಕವಾಗಿ ಹೊರತೆಗೆಯಲಾಗುತ್ತಿದೆ. ಇದರೊಂದಿಗೆ, ಗುಜರಾತಿನ ಕ್ಯಾಂಬೇ ಬೇಸಿನ್ ಮತ್ತು ಕಾವೇರಿ ಬೇಸಿನ್‌ನಲ್ಲಿ ಭೂಗರ್ಬದ ಬಂಡೆಗಳ ಪದರಗಳಲ್ಲಿ ಅಡಗಿರುವ ಶೇಲ್ ಗ್ಯಾಸ್ (Shale Gas) ಅನ್ವೇಷಣೆಯೂ ಭರದಿಂದ ಸಾಗುತ್ತಿದೆ. ಸಮುದ್ರದ ತಳದಲ್ಲಿ ಮಂಜುಗಡ್ಡೆಯ ರೂಪದಲ್ಲಿರುವ ''ಗ್ಯಾಸ್ ಹೈಡ್ರೇಟ್ಸ್'' ಸಂಶೋಧನೆಯು ಯಶಸ್ವಿಯಾದರೆ ಭಾರತದ ಇಂಧನ ಚಿತ್ರಣವೇ ಸಂಪೂರ್ಣವಾಗಿ ಬದಲಾಗಲಿದೆ. ಇತ್ತೀಚೆಗೆ ಅಂಡಮಾನ್ ದ್ವೀಪಗಳ ಪಕ್ಕದಲ್ಲಿ ದೇಶದ ಅತ್ಯಂತ ದೊಡ್ಡ ಪೆಟ್ರೋಲಿಯಂ ನಿಕ್ಷೇಪ ಪತ್ತೆಯಾಗಿದ್ದು ಇಲ್ಲಿಯೂ ಹೇರಳ ಪ್ರಮಾಣದ ನೈಸರ್ಗಿಕ ಅನಿಲಗಳು ಇರುವ ಸಾಧ್ಯತೆಗಳ ಬಗ್ಗೆ ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ, ಒಟ್ಟಿನಲ್ಲಿ ಭಾರತ ಎಲ್ಪಿಜಿಗೆ ಹೋಲಿಸಿದರೆ ಕೊಳವೆ ಅನಿಲದ ವಿಚಾರದಲ್ಲಿ ಹೆಚ್ಚು ಆತ್ಮನಿರ್ಭರವಾಗಿದೆ.

ಬೃಹತ್ ವಿತರಣಾ ಜಾಲ ಮತ್ತು ಪ್ರಸ್ತುತ ಸ್ಥಿತಿ

ಸರ್ಕಾರವು ಈ ಬೃಹತ್ ಮೂಲಸೌಕರ್ಯ ಯೋಜನೆಯನ್ನು 2034ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಿದೆ. ದೇಶದ ಸುಮಾರು 784 ಜಿಲ್ಲೆಗಳಲ್ಲಿ ತಲುಪಿಸಲು 5.46 ಲಕ್ಷ ಕಿ.ಮೀನಷ್ಟು ಪೈಪ್‌ ಜಾಲವನ್ನು ನಿರ್ಮಿಸಲಾಗುತ್ತಿದೆ. ಪ್ರಸ್ತುತ ಸುಮಾರು 1.6 ಕೋಟಿ ಮನೆಗಳಿಗೆ ಈಗಾಗಲೇ ಕೊಳವೆ ಅನಿಲದ ಸಂಪರ್ಕ ಸಿಕ್ಕಿದ್ದು ಮುಂದಿನ 12.63 ಕೋಟಿ ಮನೆಗಳಿಗೆ ಕೊಳವೆ ಅನಿಲದ ಸಂಪರ್ಕ ಕಲ್ಪಿಸುವ ಮತ್ತು ಸಾರಿಗೆ ವಲಯಕ್ಕಾಗಿ 18,336 ಸಿಎಎನ್‌ಜಿ ಸ್ಟೇಷನ್‌ಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ‘ಸಿಂಗಲ್ ವಿಂಡೋ ಕ್ಲಿಯರೆನ್ಸ್’ ಮೂಲಕ ಪೈಪ್ಲೈನ್ ಅಳವಡಿಕೆಗೆ ಇದ್ದ ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸಿರುವುದು ಈ ಯೋಜನೆಗೆ ವೇಗ ನೀಡಿದೆ.

ಕೇಂದ್ರ ಈಗಾಗಲೇ ರಾಜ್ಯ ಸರಕಾರಗಳು ತ್ವರಿತ ಅನುಮತಿಗಳನ್ನು ಕೊಟ್ಟು ವೇಗವಾಗಿ ಸಂಪರ್ಕ ಕೊಡಿಸಬೇಕು ಎಂದು ಒತ್ತಡ ಹೇರುತ್ತದೆ. ಎಲ್ಲೆಲ್ಲಿ ಈ ಕೊಳವೆ ಅನಿಲ ಸಿಗುತ್ತದೆಯೋ ಅಲ್ಲಿ ಗ್ರಾಹಕರು ಅದನ್ನೇ ಪಡೆಯಬೇಕು. ಅಲ್ಲಿ ಎಲ್‌ಪಿಜಿ ಸೌಲಭ್ಯ ನಿಲ್ಲಿಸಲಾಗುವುದು ಎಂದು ಸರಕಾರ ಹೇಳಿದೆ. ಒಂದೊಮ್ಮೆ ನಿಯಮಗಳಲ್ಲಿ ಸಡಲಿಕೆ ಆಗಿ ರಾಜ್ಯ ಸರಕಾರಗಳು ಕೇಂದ್ರಕ್ಕೆ ಸಹಕಾರ ಕೊಟ್ಟರೆ ಮತ್ತಷ್ಟು ವೇಗ ಪಡೆಯಲಿದೆ. ಸುರಕ್ಷತೆ, ಜೇಬಿಗೂ ಹೊರೆ ಇಲ್ಲ.

ಸಾಮಾನ್ಯ ಗ್ರಾಹಕನಿಗೆ ಇದು ಆರ್ಥಿಕವಾಗಿ ಲಾಭದಾಯಕವಾಗಿದೆ. ಅಂಕಿಅಂಶಗಳ ಪ್ರಕಾರ, ಎಲ್ಪಿಜಿ ಸಿಲಿಂಡರುಗಳಿಗೆ ಹೋಲಿಸಿದರೆ ಕೊಳವೆ ಅನಿಲದ ದರವು ಸುಮಾರು ಶೇಕಡಾ 15 ರಿಂದ 20 ರಷ್ಟು ಅಗ್ಗವಾಗಿದೆ. ಇದು ಸಿಲಿಂಡರಿನಂತೆ ಮುಂಗಡ ಹಣ ಪಾವತಿಸುವ ಅಗತ್ಯವಿಲ್ಲದ ''ಪೋಸ್ಟ್-ಪೇಯ್ಡ್'' ಮೀಟರ್ ವ್ಯವಸ್ಥೆಯಾಗಿದೆ. ಎಲ್ಪಿಜಿ ಸಿಲಿಂಡರಿನ ಕೊನೆಯಲ್ಲಿ ಸ್ವಲ್ಪ ಪ್ರಮಾಣದ ಅನಿಲವು ದ್ರವ ರೂಪದಲ್ಲಿ ಬಳಕೆಯಾಗದೆ ಉಳಿಯುವ (Residual waste) ಸಮಸ್ಯೆಯೂ ಇಲ್ಲಿಲ್ಲ, ಏಕೆಂದರೆ ಪೈಪ್ ಮೂಲಕ ಬರುವ ಪ್ರತಿ ಅಣುವೂ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗುತ್ತದೆ.

ಅಲ್ಲದೆ, ಸಿಲಿಂಡರ್ ವಿತರಣಾ ಶುಲ್ಕ ಅಥವಾ ಟಿಪ್ಸ್ ನೀಡುವ ಗುಪ್ತ ವೆಚ್ಚಗಳು ಇಲ್ಲಿ ಸಂಪೂರ್ಣವಾಗಿ ಮಾಯವಾಗುತ್ತವೆ. ಸುರಕ್ಷತೆಯ ದೃಷ್ಟಿಯಿಂದಲೂ ಅತ್ಯುತ್ತಮ. ಗಾಳಿಗಿಂತ ಹಗುರವಾಗಿರುವುದರಿಂದ, ಅಕಸ್ಮಾತ್ ಸೋರಿಕೆಯಾದರೂ ಅದು ತಕ್ಷಣವೇ ವಾತಾವರಣದಲ್ಲಿ ವಿಲೀನಗೊಂಡು ಅಪಾಯವನ್ನು ತಗ್ಗಿಸುತ್ತದೆ.

‘ಆಪದಾ ಮೆ ಅವಸರ್’

ಗ್ರಾಮೀಣ ಭಾರತದ ಸಬಲೀಕರಣಕ್ಕೂ ಪೂರಕ. ನಗರಗಳು ಕೊಳವೆ ಅನಿಲಕ್ಕೆ ಬದಲಾದಾಗ ಉಳಿತಾಯವಾಗುವ ಸಿಲಿಂಡರುಗಳನ್ನು ಹಳ್ಳಿಗಳಿಗೆ ಪೂರೈಸಬಹುದು. ಆದರೆ, ದೇಶಾದ್ಯಂತ ಕೊಳವೆ ಅಳವಡಿಸಲು ಬೇಕಾದ ಭೂಸ್ವಾಧೀನ ಮತ್ತು ಬೃಹತ್ ಹೂಡಿಕೆ ಇಂದಿನ ಮುಂದಿರುವ ಪ್ರಮುಖ ಸವಾಲುಗಳಾಗಿವೆ. ಪೂರೈಕೆ ಸರಪಳಿಯಲ್ಲಿನ ಹಸ್ತಕ್ಷೇಪಗಳನ್ನು ತೊಡೆದುಹಾಕಿ, ಜನಸಾಮಾನ್ಯರಿಗೆ ಅಗ್ಗದ ಮತ್ತು ನಿರಂತರ ಅನಿಲ ಪೂರೈಕೆ ಮಾಡುವುದು ಸರ್ಕಾರದ ಸ್ಪಷ್ಟ ಉದ್ದೇಶ. ಆರಂಭಿಕ ಹಂತದಲ್ಲಿ ಗ್ರಾಹಕರಿಗೆ ಬದಲಾವಣೆಯ ಬಗ್ಗೆ ಅಳುಕಿರಬಹುದು, ಆದರೆ ದೀರ್ಘಾವಧಿಯ ಆರ್ಥಿಕ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇದು ಅನಿವಾರ್ಯ, ಸ್ವಾಗತಾರ್ಹ.

ಈ ಮಹತ್ತರ ಬದಲಾವಣೆಯು ನಮ್ಮ ದೇಶದ ಇಂಧನ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಬರೆಯಲಿದೆ. ಒಟ್ಟಿನಲ್ಲಿ ಕೊಲ್ಲಿ ಯುದ್ಧದ ಮೂಲಕ ಭಾರತಕ್ಕೆ ಎದುರಾಗಿರುವ ಈ ಅನಿಲ ಬಿಕ್ಕಟ್ಟು ಭಾರತವನ್ನು ಪರ್ಯಾಯ ವ್ಯವಸ್ಥೆಯತ್ತ ವೇಗವಾಗಿ ತೆರೆದುಕೊಳ್ಳಲು ಸಿದ್ಧಪಡಿಸುತ್ತಿದೆ. ಪ್ರಧಾನಿ ಮೋದಿಯವರ ಸದಾ ಹೇಳುವ ‘ಆಪದಾ ಮೆ ಅವಸರ್’ ಅನ್ನುವ ಅವರ ಮಾತಿಗೆ ಅನ್ವರ್ಥವಾಗಿದೆ.

PREV
Read more Articles on

Recommended Stories

ಸ್ವತಃ ರಾಮನನ್ನು ಕಾಡಿದ್ದ ಆ ಪ್ರಶ್ನೆ - ‘ಯಾರು ಆ ಪುರುಷ’
ಶ್ರೀರಾಮ ಸರ್ವಕಾಲಕ್ಕೂ ಯಾಕೆ ವಂದನೀಯ ?