ಶ್ರೀರಾಮ ಸರ್ವಕಾಲಕ್ಕೂ ಯಾಕೆ ವಂದನೀಯ ?

Published : Mar 27, 2026, 10:31 AM IST
Sri rama Navami 2026

ಸಾರಾಂಶ

ಅಹಲ್ಯೆಯನ್ನು ಉದ್ಧರಿಸಿದ ರಾಮ ತನ್ನ ಪಟ್ಟಾಭಿಷೇಕವಾದ ನಂತರ ತುಂಬು ಗರ್ಭಿಣಿ ಸೀತೆಯನ್ನು ಯಾಕೆ ಕಾಡಿಗೆ ಬಿಟ್ಟ ಎಂದು ಎಲ್ಲರಿಗೂ ಅಚ್ಚರಿ ಆಗಬಹುದು. ಪ್ರಶ್ನಾರ್ಥಕ ಆಗಬಹುದು. ರಾಮ ಅಷ್ಟು ನಿಷ್ಕರುಣಿಯೇ ಎನಿಸಬಹುದು.

 -ವೀಣಾರಾವ್‌ ಚಿಂತಾಮಣಿ. ಲೇಖಕಿ.

ಈ ದಿನ ರಾಮ ನವಮಿ. ಅಸತ್ಯ, ಅನೀತಿ, ಅಧರ್ಮವನ್ನು ಹೊಡೆದೋಡಿಸಿದ ಶ್ರೀರಾಮಚಂದ್ರನ ಜನುಮದಿನ. ಧರ್ಮ ಸಂಸ್ಥಾಪನೆ ಮಾಡಿದ ಯುಗಪುರುಷ ಹುಟ್ಟಿದ ದಿನ. ಸುಭಿಕ್ಷವಾದ ನಾಡನ್ನು ನಾವು ರಾಮರಾಜ್ಯ ಎನ್ನುತ್ತೇವೆ. ತ್ರೇತಾಯುಗದಲ್ಲಿ ರಾಮರಾಜ್ಯ ಸ್ಥಾಪನೆ ಮಾಡಿದ ಶ್ರೀರಾಮಚಂದ್ರ ನ್ಯಾಯ ನಿಷ್ಠುರತೆಗೆ ಹೆಸರಾದವನು. ತನ್ನ ರಾಜ್ಯದಲ್ಲಿ ಎಲ್ಲಿಯೂ ಅನ್ಯಾಯ ಉಸಿರಾಡಬಾರದು ಎಂದು ಏಕಮೇವ ನಿಷ್ಠೆಯಿಂದ ರಾಜ್ಯವಾಳಿದವನು. ಅದಕ್ಕಾಗಿ ತನ್ನ ಸಂಸಾರವನ್ನೂ ತೊರೆಯಲು ಹಿಂದೆ ಮುಂದೆ ನೋಡಲಿಲ್ಲ.

ರಾಮ ಒಬ್ಬ ಇತಿಹಾಸ ಪುರುಷ. ಜ್ಞಾನಿ. ವೀರ ಪರಾಕ್ರಮಿ. ಧರ್ಮವನ್ನೇ ಉಸಿರಾಡುತಿದ್ದ ರಾಮ ತನ್ನ ರಾಜ್ಯದಲ್ಲೂ ಧರ್ಮ ಸಂಸ್ಥಾಪನೆ ಮಾಡಿ ಮುಂದಿನ ಎಷ್ಟೋ ಪೀಳಿಗೆಗಳಿಗೆ ರಾಜ್ಯಭಾರ ಹೇಗೆ ಮಾಡಬೇಕೆಂಬ ಬುನಾದಿ ಹಾಕಿಕೊಟ್ಟ. ವಚನ ನಿಭಾವಣೆ ಎಂದರೆ ಹೇಗಿರಬೇಕು ಎಂದು ತೋರಿದ ಮಹಾನುಭಾವ. ತಂದೆ ಕೊಟ್ಟ ವಚನಕ್ಕೆ ತನ್ನ ಸ್ವಂತ ಸುಖವನ್ನೂ ತೊರೆದು ಅರಮನೆಯಿಂದ ಕಾಡಿಗೆ ನಡೆದುಬಿಟ್ಟ. ತಂದೆಯ ಮಾತೆಂದರೆ ಅವನಿಗೆ ವೇದವಾಕ್ಯ. ‘ನೀನು ಕೊಟ್ಟ ವಚನಕ್ಕೆ ನಾನೇಕೆ ತಲೆಕೊಡಬೇಕು’ ಎಂದು ಅವನು ದಶರಥನನ್ನು ಕೇಳಲಿಲ್ಲ. ತಂದೆಯ ಮಾತೇ ಅಲ್ಲದೆ ಇಡೀ ರಘುಕುಲ ಸತ್ಯಕ್ಕೆ, ಧರ್ಮಕ್ಕೆ, ಕೊಟ್ಟ ವಚನಕ್ಕೆ ತಲೆಬಾಗುತ್ತದೆ ಎಂಬುದನ್ನು ತೋರಿಸಿಕೊಟ್ಟ ಧೀರ.

ಪಶ್ಚತ್ತಾಪಕ್ಕಿಂತ ಪ್ರಾಯಶ್ಚಿತ ಮೇಲು:

ಚಿಕ್ಕವಯಸ್ಸಿನಲ್ಲೇ ಅಂದರೆ ಹದಿನಾರನೇ ವಯಸ್ಸಿಗೇ ವಿಶ್ವಾಮಿತ್ರರೊಡನೆ ಕಾಡು ಮೇಡು ಅಲೆದು ಮುನಿಗಳ ಸೇವೆ ಮಾಡಿ ಅವರಿಂದ ಅಸ್ತ್ರ ಶಸ್ತ್ರಗಳ ಮರ್ಮಗಳನ್ನು ಅರಿತವನು. ವಿದ್ಯೆ ಕಲಿಯಬೇಕಾದರೆ ಸ್ವಂತಸುಖ ವರ್ಜ್ಯ ಎಂದು ಲೋಕಕ್ಕೆ ತೋರಿಸಿಕೊಟ್ಟವನು ರಾಮ. ಗುರುದಕ್ಷಿಣೆಯಾಗಿ ವಿಶ್ವಾಮಿತ್ರರ ಯಜ್ಞಕ್ಕೆ ವಿಘ್ನ ಒಡ್ಡುತ್ತಿದ್ದ ತಾಟಕಿ ಸುಬಾಹುವನ್ನು ಸಂಹರಿಸಿ ಲೋಕಕ್ಕೆ ನೆಮ್ಮದಿಯನ್ನು ತಂದುಕೊಟ್ಟನು. ಅಲ್ಲಿಂದ ಮುಂದೆ ಗೌತಮಾಶ್ರಮಕ್ಕೆ ಬಂದು ಅಹಲ್ಯೆಯ ಶಾಪ ವಿಮೋಚನೆ ಮಾಡಿ ಅವಳ ಕರುಣ ಕತೆಯನ್ನು ಕೇಳಿ ಪಶ್ಚತ್ತಾಪಕ್ಕಿಂತ ಪ್ರಾಯಶ್ಚಿತ್ತ ಇಲ್ಲವೆಂದು ಪ್ರಪಂಚಕ್ಕೆ ತೋರಿಸಿಕೊಟ್ಟವನು ರಾಮ.

ಅಹಲ್ಯೆಯನ್ನು ಉದ್ಧರಿಸಿದ ರಾಮ ತನ್ನ ಪಟ್ಟಾಭಿಷೇಕವಾದ ನಂತರ ತುಂಬು ಗರ್ಭಿಣಿ ಸೀತೆಯನ್ನು ಯಾಕೆ ಕಾಡಿಗೆ ಬಿಟ್ಟ ಎಂದು ಎಲ್ಲರಿಗೂ ಅಚ್ಚರಿ ಆಗಬಹುದು. ಪ್ರಶ್ನಾರ್ಥಕ ಆಗಬಹುದು. ರಾಮ ಅಷ್ಟು ನಿಷ್ಕರುಣಿಯೇ ಎನಿಸಬಹುದು. ಆದರೆ ಆಗಿನ ಸಾಮಾಜಿಕ ಜೀವನ ಹಾಗೂ ನ್ಯಾಯನಿಷ್ಠುರತೆಗಳ ಕಾಲಲ್ಲಿ ರಾಮ ಹಾಗೆ ಮಾಡದೆ ಬೇರೆ ವಿಧಿ ಇರಲಿಲ್ಲ. ಒಬ್ಬ ರಾಜನನ್ನು ಅನುಸರಿಸುವ ಅವನ ಪ್ರಜೆಗಳು ರಾಜನ ಹಾದಿಯನ್ನೇ ತುಳಿಯುತ್ತಾರೆ. ಅವರ ಎಷ್ಟೋ ವೈಯುಕ್ತಿಕ ವಿಷಯಗಳಿಗೆ ರಾಜನ ಮಾರ್ಗವನ್ನೇ ಅನುಸರಿಸುತ್ತಾರೆ. ರಾಜ ತಂದೆಯ ಹಾಗೆ. ಆಗಿನ ಕಾಲಕ್ಕೆ ರಾಜನೇ ಆದರ್ಶ. ಹಾಗಾಗಿ ರಾಜ ಕನಸಿನಲ್ಲೂ ತಪ್ಪು ದಾರಿ ತುಳಿಯುವಂತಿಲ್ಲ. ನ್ಯಾಯ ಎನಿಸಿದ್ದನ್ನು ಕಡೆಗಣಿಸುವಂತಿಲ್ಲ. ರಾಮನಿಗೂ ಗೊತ್ತು ಸೀತೆ ಪಾಪವಿಲ್ಲದವಳು ಎಂದು. ಸೀತೆಗೂ ಗೊತ್ತು ರಾಮನ ಮೇಲೆ ಇರುವ ಪ್ರಜೆಗಳ ನಂಬಿಕೆ. ಈಗಿನ ದಿನಗಳಂತೆ ಆಗ ಫ್ಲಾಶ್ ಬ್ಯಾಕ್ ಆಗಲಿ ಅಥವಾ ವಿಡಿಯೋ ಚಿತ್ರೀಕರಣ ಆಗಲಿ ಇರಲಿಲ್ಲ. ಸೀತೆಯ ಅಗ್ನಿಪರೀಕ್ಷೆ ತೋರಿಸಲು. ಸೀತೆಯ ಪವಿತ್ರತೆಯ ಕುರಿತು ರಾಮ ಢಂಗುರ ಸಾರಬೇಕಾದ ಅಗತ್ಯವೂ ಇರಲಿಲ್ಲ. ದಂಪತಿ ಅವರಿಬ್ಬರೇ ಮಾತನಾಡಿಕೊಂಡು ದೃಢನಿಶ್ಚಯ ಮಾಡಿಕೊಂಡರು. ಸೀತೆ ಮತ್ತೆ ಕಾಡಿಗೆ ಹೋಗಲು ಅಣಿಯಾದಳು. ಯಾರಿಗೂ ಈ ಒಳಗುಟ್ಟು ತಿಳಿಯಲಿಲ್ಲ. ಸೀತೆಗೆ ರಾಮನ ಕೀರ್ತಿಗೆ ಕಳಂಕ ಬರಬಾರದೆನ್ನುವ ಕಾಳಜಿ. ರಾಮನಿಗೆ ಸೀತೆ ಜನರ ಬಾಯಿಗೆ ಬೀಳಬಾರದೆನ್ನುವ ಎಚ್ಚರಿಕೆ. ಎಂಥ ಅನೋನ್ಯ ದಾಂಪತ್ಯ!

ತಪಸ್ವಿಯ ಜೀವನ ಶೈಲಿ:

ರಾಮ ನಿರ್ದಯಿ ಖಂಡಿತಾ ಅಲ್ಲ. ಸೀತೆ ವಾಲ್ಮಿಕಿ ಮಹರ್ಷಿಗಳ ಆಶ್ರಮ ಸೇರಿದ ಮೇಲೆ ರಾಮನೇನೂ ಅರಮನೆಯ ಸುಖಭೋಗಗಳಲ್ಲಿ ಮುಳುಗಲಿಲ್ಲ. ತಾನೂ ಹಂಸತೂಲಿಕಾ ತಲ್ಪ ತ್ಯಜಿಸಿದ. ದರ್ಭೆಯ ಚಾಪೆಯ ಮೇಲೆ ಮಲಗಿದ. ಷಡ್ರಸಗಳಲ್ಲಿ ಭುಂಜಿಸಲಿಲ್ಲ. ಕಂದಮೂಲ ಫಲಗಳನ್ನೇ ಸೇವಿಸಿದ. ಕಿರೀಟ ಪೀತಾಂಬರ, ಭುಜಕೀರ್ತಿ ಕನಕಾಂಗದ ಕೇಯೂರಗಳು ಚಕ್ರವರ್ತಿಯ ಲಾಂಛನಗಳಾದವೇ ವಿನಾಃ ರಾಮನ ಆಭರಣ ಆಗಲಿಲ್ಲ. ತಪಸ್ವಿಯ ಹಾಗೆ ಜೀವನ ನಡೆಸಿದ ಚಕ್ರವರ್ತಿ ಅವನು. ಇದ್ದೂ ಇಲ್ಲದ ಹಾಗೆ ಜೀವನ ನಡೆಸಿದ ವಿರಾಗಿ.

ರಾಮನ ತ್ಯಾಗ ಮತ್ತು ವಿರಹ ದೊಡ್ಡದು. ಸೀತೆಯನ್ನು ಕಾಡಿಗೆ ಕಳುಹಿಸಿದ ರಾಮ ಮಾನಸಿಕವಾಗಿ ಎಷ್ಟು ಕೊರಗಿರಬಹುದು. ಸಹಧರ್ಮಿಣಿಯಾದ ಅವನ ಮನಸ್ಸಿಗೆ ಕನ್ನಡಿಯಂತೆ ನಡೆದುಕೊಳ್ಳುತ್ತಿದ್ದ ಸೀತೆ ಜೊತೆಯಲ್ಲಿ ಇಲ್ಲದಿದ್ದಾಗ ಅವನ ಮನಸ್ಸು ಎಷ್ಟು ತಳಮಳಿಸಿರಬಹುದು? ಭರತ, ಲಕ್ಷ್ಮಣ ಶತ್ರುಘ್ನರ ಮಕ್ಕಳ ಆಟಪಾಟ ನೋಡುತ್ತಾ ತನ್ನ ಮಕ್ಕಳನ್ನು ನೆನೆದು ಅವನ ಮನಸ್ಸು ಎಷ್ಟು ಪರಿತಪಿಸಿರಬಹುದು? ಈ ಎಲ್ಲವನ್ನೂ ರಾಮ ಮಾಡಿದ್ದು ಯಾಕಾಗಿ? ತನ್ನ ಪ್ರಜೆಗಳ ಸುಖಕ್ಕೋಸ್ಕರ ತನ್ನ ಪ್ರಜೆಗಳು ನ್ಯಾಯವಾದ ಮಾರ್ಗದಲ್ಲಿ ನಡೆಯಬೇಕೆಂದು ರಾಮ ಮಾಡಿದ ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅದಕ್ಕೇ ರಾಮ ಸದಾ ವಂದನೀಯ.

ರಾಮ ಎಲ್ಲ ಕಾಲಕ್ಕೂ ಮಾದರಿ:

ತ್ಯಾಗದ ಮತ್ತೊಂದು ಹೆಸರೇ ರಾಮ. ಈಗಿನ ರಾಜಕೀಯ ನಾಯಕರು ರಾಮನಿಂದ ಕಲಿಯಬೇಕಾದ್ದು ಬಹಳ ಇವೆ. ರಾಮನ ಆಡಳಿತ, ರಾಮನ ಆದರ್ಶ, ರಾಮನ ದೂರಾಲೋಚನೆ, ಸುಖಭೋಗಗಳ ಮಧ್ಯೆ ಇದ್ದರೂ ಕಮಲದ ಎಲೆಯ ಮೇಲಿನ ನೀರಿನಂತೆ ಇದ್ದ ರಾಮನ ವೈರಾಗ್ಯ, ರಾಮನ ಕರುಣೆ ಅಂತಃಕರಣ, ಪ್ರಜೆಗಳನ್ನು ತನ್ನ ಮಕ್ಕಳಂತೆ ಕಾಣುವ ಅವನ ಪ್ರಜಾವಾತ್ಸಲ್ಯ ಪ್ರಜೆಗಳಲ್ಲಿ ಬೇಧಭಾವ ಎಣಿಸದ ಅವನ ನ್ಯಾಯ ನಿಷ್ಠುರತೆ, ನೀತಿ ಧರ್ಮ ಎಲ್ಲದರಲ್ಲೂ ರಾಮ ಒಂದು ಹೆಜ್ಜೆ ಮುಂದೆಯೇ ಇರುತ್ತಾನೆ. ಆ ಕಾರಣದಿಂದಲೇ ತ್ರೇತಾಯುಗ ದ್ವಾಪರ ಯುಗಗಳು ಮುಗಿದು ಕಲಿಯುಗ ಬಂದರೂ ರಾಮ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಇದ್ದಾನೆ. ರಾಮನ ಆದರ್ಶ ನಮಗೆಲ್ಲ ಮಾದರಿ.

ರಾಮಾಯಣ ಓದಿದರೆ ಸಾಲದು ಅದನ್ನು ಮನನ ಮಾಡಬೇಕು. ರಾಮಾಯಣದ ಪ್ರತಿಪಾತ್ರವನ್ನು ಮನಸ್ಸಿನಲ್ಲಿ ಅಚ್ಚಳಿಯದೆ ಇಳಿಸಿಕೊಳ್ಳಬೇಕು. ಆಗ ಕಷ್ಟಗಳು ಬಂದಾಗ ಎದೆಗುಂದದೆ ಸಹಿಸುವ ಶಕ್ತಿ ಬರುತ್ತದೆ. ಸತ್ಯ ಧರ್ಮ ನ್ಯಾಯ ಸದಾಕಾಲ ನಾವು ಪಾಲಿಸುವ ಮನೋಧರ್ಮ ಬರುತ್ತದೆ. ರಾಮನಂಥ ಪ್ರಜಾರಕ್ಷಕರು ಇದ್ದಾಗ ಮಾತ್ರ ದೇಶ ರಾಮರಾಜ್ಯವಾಗುತ್ತದೆ.

PREV
Read more Articles on

Recommended Stories

ಮರ್ಯಾದಾಗೇಡು ಹತ್ಯೆ ವಿಧೇಯಕ : ಸಮಸಮಾಜ ನಿರ್ಮಾಣಕ್ಕೆ ಬಲ
ಇರಾನನ್ನು ಹಗುರವಾಗಿ ಪರಿಗಣಿಸಿದ ಯುಎಸ್‌ಗೆ ಶಾಕ್‌