ಇರಾನನ್ನು ಹಗುರವಾಗಿ ಪರಿಗಣಿಸಿದ ಯುಎಸ್‌ಗೆ ಶಾಕ್‌

Published : Mar 26, 2026, 12:34 PM IST
iran

ಸಾರಾಂಶ

ಎರಡನೇ ವಿಶ್ವ ಯುದ್ಧದ ನಂತರ ಜಗತ್ತು ಹತ್ತಾರು ಸೀಮಿತ ಸಂಘರ್ಷಗಳನ್ನು ಕಂಡಿದೆ. ಅದರ ಪರಿಣಾಮವನ್ನೂ ಅನುಭವಿಸಿದೆ. ಆದರೆ, ಸದ್ಯ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ಹಿಂದಿನ ಎಲ್ಲ ಸಮರಗಳಿಗಿಂತ ಭಿನ್ನ.

  ಲೆಫ್ಟಿನೆಂಟ್ ಜನರಲ್ ಬಿ.ಕೆ. ಬೋಪಣ್ಣ

----

- ಮಂಜುನಾಥ ನಾಗಲೀಕರ್

ಎರಡನೇ ವಿಶ್ವ ಯುದ್ಧದ ನಂತರ ಜಗತ್ತು ಹತ್ತಾರು ಸೀಮಿತ ಸಂಘರ್ಷಗಳನ್ನು ಕಂಡಿದೆ. ಅದರ ಪರಿಣಾಮವನ್ನೂ ಅನುಭವಿಸಿದೆ. ಆದರೆ, ಸದ್ಯ ನಡೆಯುತ್ತಿರುವ ಅಮೆರಿಕ-ಇಸ್ರೇಲ್ ಹಾಗೂ ಇರಾನ್ ನಡುವಿನ ಸಂಘರ್ಷ ಹಿಂದಿನ ಎಲ್ಲ ಸಮರಗಳಿಗಿಂತ ಭಿನ್ನ. ಒಂದು ದೇಶದ ಪದಾತಿ ದಳ, ಟ್ಯಾಂಕರ್‌ಗಳು ಇನ್ನೊಂದು ದೇಶಕ್ಕೆ ನುಗ್ಗಿ ಅತಿಕ್ರಮಣ ಮಾಡುವುದು ಹಿಂದೆ ಯುದ್ಧ ಎನಿಸುತ್ತಿತ್ತು. ಆದರೆ, ಇಸ್ರೇಲ್‌, ಅಮೆರಿಕ-ಇರಾನ್‌ ಯುದ್ಧ ಆರಂಭಗೊಂಡು ಮೂರು ವಾರ ಕಳೆದರೂ ಭೂಸೇನೆ ಇನ್ನೂ ರಂಗಕ್ಕೆ ಇಳಿದೇ ಇಲ್ಲ. ಬದಲಾಗಿ ವೈಮಾನಿಕ ದಾಳಿ ಅಬ್ಬರವೇ ಮುಂದುವರೆದಿದೆ. ಈ ಬಾರಿ ಯುದ್ಧವಿಮಾನಗಳಿಗಿಂತ ಡ್ರೋನ್‌ಗಳು, ಕ್ಷಿಪಣಿಗಳು, ಮಾನವ ರಹಿತ ವೈಮಾನಿಕ ಅಸ್ತ್ರಗಳೇ ಆರ್ಭಟ ನಡೆಸುತ್ತಿವೆ. ತನ್ಮೂಲಕ ಆಧುನಿಕ ಸಮರ ಶೈಲಿ ಬದಲಾಗಿದೆ ಮತ್ತು ಬದಲಾಗುತ್ತಲೇ ಸಾಗುತ್ತದೆ ಎಂಬುದನ್ನು ಈ ಸಮರ ನಿರೂಪಿಸುತ್ತಿರುವಂತೆ ಕಾಣುತ್ತದೆ. ಈ ಹಿಂದೆ ಸೀಮಿತ ಸಂಘರ್ಷಗಳು ಯುದ್ಧನಿರತ ದೇಶಗಳನ್ನಷ್ಟೇ ಕಾಡುತ್ತಿದ್ದವು. ಆದರೆ, ಈ ಸಮರ ಸಂಬಂಧವೇ ಇಲ್ಲದ ದೇಶದ ಮೂಲೆಯಲ್ಲಿ ಕೂತ ಶ್ರೀಸಾಮಾನ್ಯನಿಗೂ ಬಿಸಿ ಮುಟ್ಟಿಸತೊಡಗಿದೆ. ಹೀಗಾಗಿ ಮುಂದಿನ ಜಾಗತಿಕ ಸಂಘರ್ಷಗಳು ಜಗತ್ತಿನ ಸ್ವರೂಪವನ್ನೇ ಬದಲಿಸಬಲ್ಲವೇ? ಸೈನಿಕರ ನೇರ ಹಣಾಹಣಿ ಬದಲು ರಿಮೋಟ್ ಕಂಟ್ರೋಲ್‌ ಸಂಘರ್ಷ ಹೆಚ್ಚಾಗುವುದೇ? ದುರ್ಬಲ ದೇಶ-ಬಲಶಾಲಿ ದೇಶ ಎಂಬ ವ್ಯಾಖ್ಯಾನವೇ ಬದಲಾಗಲಿದೆಯೇ? ಈ ಯುದ್ಧ ಭಾರತದ ಮೇಲೆ ಬೀರಲಿರುವ ಪರಿಣಾಮವೇನು? ಭಾರತೀಯ ಸೇನೆ ಇದರಿಂದ ಕಲಿಯಬೇಕಾಗಿರುವುದು ಏನು? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರಿಸಲು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದಾರೆ ಭಾರತೀಯ ಸೇನೆಯ ನಿವೃತ್ತ ಲೆಫ್ಟಿನೆಂಟ್ ಜನರಲ್ ಬಿ.ಕೆ. ಬೊಪಣ್ಣ.

- ಇರಾನ್‌-ಇಸ್ರೇಲ್-ಯುಎಸ್‌ ಸಂಘರ್ಷವು ಯುದ್ಧದ ವ್ಯಾಖ್ಯಾನವನ್ನೇ ಬದಲಿಸುತ್ತಿದೆಯೇ?

ಹೌದು, ಆಧುನಿಕ ಯುದ್ಧಗಳು ಕೆಲ ದಶಕಗಳ ಹಿಂದೆ ಇದ್ದ ಸೈನಿಕ ಕೇಂದ್ರಿತ ಯುದ್ಧವಾಗಿ ಉಳಿದಿಲ್ಲ. ಕೃತಕ ಬುದ್ಧಿಮತ್ತೆಯ ಬಳಕೆ, ಕಡಿಮೆ ಬೆಲೆಯ ಪರಿಣಾಮಕಾರಿ ಡ್ರೋನ್‌, ಕ್ಷಿಪಣಿ, ಮಾನವ ರಹಿತ ನೌಕೆಗಳು, ಸಮುದ್ರದಾಳದಲ್ಲಿ ಗೌಪ್ಯವಾಗಿ ಬಾಂಬ್ ಇಟ್ಟು ಸ್ಫೋಟಿಸುವುದು, ಮಾನವರಹಿತ ಬೋಟ್‌ಗಳಿಂದ ಎದುರಾಳಿಗಳ ಹಡಗುಗಳ ಮೇಲೆ ದಾಳಿ, ಸೈಬರ್ ದಾಳಿಯಂಥ ಹೊಸ ಶೈಲಿ ಸೃಷ್ಟಿಸಿದೆ. ಮಾನವ ಅರ್ಥಾತ್ ಸೈನಿಕರ ಜೀವ ಹಾನಿ ಬಹುವಾಗಿ ತಡೆಯುವ ದಿಸೆಯಲ್ಲಿ ಯುದ್ಧಗಳು ಸಾಗುತ್ತಿವೆ.

- ಅಂದರೆ, ಇನ್ನು ಸೈನಿಕರಗಿಂತ ತಂತ್ರಜ್ಞಾನಗಳ ನಡುವೆಯೇ ಹೊಯ್ ಕೈ ನಡೆಯುವುದೇ?

ಕಳೆದ 2 ದಶಕಗಳಲ್ಲಿ ವ್ಯಾಪಕ ಬದಲಾವಣೆಗಳಾಗಿವೆ. ಜಿಪಿಎಸ್, ನ್ಯಾವಿಗೇಷನ್, ರೇಡಾರ್, ಮ್ಯಾಪಿಂಗ್, ಕ್ಷಿಪಣಿ, ಕೃತಕ ಬುದ್ಧಿಮತ್ತೆ, ಮಾನವ ರಹಿತ ನೌಕೆ, ಹೊಸ ತಲೆಮಾರಿನ ಯುದ್ಧ ವಿಮಾನಗಳು, ಡ್ರೋನ್ ತಂತ್ರಜ್ಞಾನದಲ್ಲಿ ಅಭಿವೃದ್ಧಿ ಮತ್ತು ಸುಧಾರಣೆಗಳಾಗಿವೆ. ಹೀಗಾಗಿ, ಬಹುತೇಕ ದೇಶಗಳ ಯುದ್ಧ ತಂತ್ರ ಬದಲಾಗಿದೆ. ತಂತ್ರಜ್ಞಾನದಲ್ಲಿ ಯಾರು ಮುಂದಿರುತ್ತಾರೋ ಅವರೇ ಯುದ್ಧದಲ್ಲಿ ಮೇಲುಗೈ ಸಾಧಿಸುತ್ತಾರೆ. ಮುಂದಿನ ದಿನಗಳಲ್ಲೂ ಯುದ್ಧದ ಸ್ವರೂಪ ಬಹುತೇಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ, ಡ್ರೋನ್, ಕ್ಷಿಪಣಿ ದಾಳಿ ಸುತ್ತ ಸುತ್ತುವರೆಯುತ್ತದೆ.

-ಸೈಬರ್‌ ಯುಗದಲ್ಲಿ ರಣರಂಗದ ಅಖಾಡ ಬದಲಾಗುತ್ತಿದೆಯೇ?

ಬಹುತೇಕ ದೇಶಗಳು ಐಟಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿವೆ. ಆಡಳಿತ, ಬ್ಯಾಂಕಿಂಗ್, ಸಾರಿಗೆ ಸೇರಿ ಸರ್ಕಾರಿ ಮತ್ತು ಖಾಸಗಿ ವಲಯದ ಸಂಪೂರ್ಣ ವ್ಯವಸ್ಥೆಯೂ ಐಟಿ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಇವುಗಳನ್ನು ಹ್ಯಾಕ್ ಮಾಡುವುದರಿಂದ ಇಡೀ ದೇಶದ ವ್ಯವಸ್ಥೆಯನ್ನೇ ಅಲುಗಾಡಿಸಬಹುದು. ಅದೇ ರೀತಿ ತೈಲ ಸಂಸ್ಕರಣಾ ಘಟಕ, ವಿದ್ಯುತ್ ಉತ್ಪಾದನಾ ಕೇಂದ್ರಗಳು, ಗ್ರಿಡ್‌ಗಳು ಆಯಾ ದೇಶಗಳ ಶ್ವಾಸಕೋಶ, ಹೃದಯವಿದ್ದಂತೆ. ಅವುಗಳ ಮೇಲೆ ದಾಳಿ ಮಾಡಿದರೆ ಇಡೀ ದೇಶದ ವ್ಯವಸ್ಥೆಯೇ ಅಲುಗಾಡಿ ಹೋಗುತ್ತದೆ. ತನ್ನ ಜನರಿಗೆ ಅನಾನುಕೂಲವಾಗುತ್ತದೆ ಎಂದು ಆಡಳಿತ ನಡೆಸುವವರು ಶತ್ರು ರಾಷ್ಟ್ರಗಳಿಗೆ ಶರಣಾಗುವ ಸಾಧ್ಯತೆ ರಣರಂಗದ ಅಖಾಡ ಬದಲಾಗಲು ಕಾರಣ.

- ಭೂಸೇನೆ ಕಾಲಿಟ್ಟು ಅತಿಕ್ರಮಣ ಮಾಡಿದರೆ ಯುದ್ಧ ಎಂದು ಪರಿಗಣನೆಯಾಗುತ್ತಿತ್ತಲ್ವಾ?

ಆ ರೀತಿಯ ಯುದ್ಧ ಮಾಡುವ ಕಾಲ ಹೊರಟು ಹೋಗಿದೆ. ಇಂದಿನ ಪರಿಸ್ಥಿತಿಯಲ್ಲಿ ಯಾವ ದೇಶದ ಜಾಗವನ್ನು ಕೂಡ ವಶಪಡಿಸಿಕೊಳ್ಳಲಾಗದು, ಯಾವ ದೇಶವೂ ಅಷ್ಟು ಸುಲಭವಾಗಿ ತನ್ನ ದೇಶದ ಜಾಗ ಬಿಟ್ಟು ಕೊಡುವುದಿಲ್ಲ. ಹಿಂದೆ ಭೂಭಾಗ ವಶಪಡಿಸಿಕೊಳ್ಳುವ ಉದ್ದೇಶದಿಂದ ಕೆಲ ದಶಕಗಳ ಹಿಂದೆ ಸೈನಿಕರು ಮತ್ತೊಂದು ದೇಶಕ್ಕೆ ಪ್ರವೇಶಿಸುತ್ತಿದ್ದರು. ಇಂದು ಅಂಥ ಉದ್ದೇಶ ಮತ್ತು ಸನ್ನಿವೇಶ ಕಾಣುತ್ತಿಲ್ಲ. ಹೀಗಾಗಿ, ಅಂತಹ ಸಾಧ್ಯತೆಗಳು ಇಲ್ಲ. ಅಮೆರಿಕಕ್ಕೆ ತನ್ನ ಸೈನಿಕರನ್ನು ಕಳೆದುಕೊಳ್ಳಲು ಇಷ್ಟವಿಲ್ಲ.

- ಅಸಲಿಗೆ, ಈ ಸಂಘರ್ಷಕ್ಕೆ ಬಹಿರಂಗವಾಗಿ ನೀಡುತ್ತಿರುವ ಕಾರಣಗಳೇ ಅಂತರಂಗದಲ್ಲೂ ಇದೆಯೇ?

ಇದೊಂದು ಗೊತ್ತು, ಗುರಿ, ಉದ್ದೇಶ ಇಲ್ಲದ ಯುದ್ಧ. ನ್ಯೂಕ್ಲಿಯರ್ ಬಾಂಬ್ ತಂತ್ರಜ್ಞಾನ ಅಭಿವೃದ್ಧಿ, ದಾಳಿಯ ಊಹೆ ಆಧಾರದ ಮೇಲೆ ಇರಾನ್ ಮೇಲೆ ದಾಳಿ ನಡೆಸಲಾಗಿದೆ.

- ಇದೇ ನಿಜವಾದ ಕಾರಣವೇ ಅಥವಾ ಅಂತರಂಗದಲ್ಲಿ ಬೇರೆ ಕಾರಣ‍ವಿರಬಹುದೇ?

ಟ್ರಂಪ್‌ಗೆ ತಲೆ ಸರಿಯಿಲ್ಲ ಎನಿಸುತ್ತದೆ. ಒಂದೊಂದು ಕ್ಷಣ, ಒಂದೊಂದು ದಿನವೂ ಒಂದೊಂದು ರೀತಿ ಮಾತನಾಡುತ್ತಾರೆ. ಇರಾನ್ ಜೊತೆಗೆ ಯುದ್ಧ ಮಾಡುವ ಸಲಹೆಯನ್ನು ಯಾರು ನೀಡಿದರೋ ಗೊತ್ತಿಲ್ಲ. ಆದರೆ, ಇರಾನ್ ಅನ್ನು ಅಮೆರಿಕ ಹಗುರವಾಗಿ ಪರಿಗಣಿಸಿತ್ತು. ತಡವಾಗಿ ಅದರ ಸಾಮರ್ಥ್ಯದ ಅರಿವಾಗಿದೆ. ಪ್ರತಿ ದಾಳಿಯನ್ನು ನೋಡಿ ಅಮೆರಿಕಕ್ಕೆ ಶಾಕ್ ಆಗಿದೆ. ಒಂದು ರೀತಿ ಅಮೆರಿಕ ನಗೆಪಾಟಲಿಗೆ ಈಡಾಗುವಂತಾಗಿದೆ. ಇಸ್ರೇಲಿನ ಒತ್ತಡದಿಂದ ಯುದ್ಧಕ್ಕೆ ಇಳಿದಿರಬಹುದು. ಆದರೆ, ಅಮೆರಿಕಕ್ಕೆ ಇದು ಬೇಕಾಗಿರಲಿಲ್ಲ.

- ಮುಸ್ಲಿಂ ದೇಶ ಇರಾನ್‌ ತನ್ನ ನೆರೆಯ ಮುಸ್ಲಿಂ ದೇಶಗಳ ಮೇಲೂ ದಾಳಿ ಮಾಡುತ್ತಿದೆಯಲ್ವಾ?

ದೂರದ ಅಮೆರಿಕ ದೇಶದ ಮೇಲೆ ಇರಾನ್‌ಗೆ ನೇರ ದಾಳಿ ಮಾಡಲಾಗುತ್ತಿಲ್ಲ. ಆದರೆ ಯುಎಇ, ಬಹ್ರೇನ್, ಸೌದಿ ಅರೆಬಿಯಾ ಸೇರಿ ಬಹುತೇಕ ಗಲ್ಫ್ ರಾಷ್ಟ್ರಗಳಲ್ಲಿ ಅಮೆರಿಕ ಸೇನಾ ನೆಲೆಗಳಿವೆ. ಅವುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಯುದ್ಧಕ್ಕೆ ಸಂಬಂಧವಿಲ್ಲದ ದೇಶಗಳು ಅನಗತ್ಯವಾಗಿ ಯುದ್ಧದಲ್ಲಿ ಸಿಲುಕಿದಂತಾಗಿದೆ. ಅವುಗಳ ಆರ್ಥಿಕತೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.

- ಸಣ್ಣ ಹಾಗೂ ಸೀಮಿತ ಮಿಲಿಟರಿ ಸಾಮರ್ಥ್ಯದ ಇರಾನ್‌ ಈ ಪರಿ ತಿರುಗೇಟು ಹೇಗೆ ನೀಡುತ್ತಿದೆ? ಚೀನಾ, ರಷ್ಯಾ ಬೆಂಬಲ ನೀಡುತ್ತಿದೆಯೇ?

ಚೀನಾ ಹಾಗೂ ರಷ್ಯಾ ಇರಾನ್‌ಗೆ ಬಹುವಾಗಿ ಬೆಂಬಲಿಸುತ್ತಿವೆ. ಅಮೆರಿಕ ವಿರುದ್ಧ ಇರುವ ಈ ಎರಡು ದೇಶಗಳ ಜೊತೆ ಇರಾನ್ ಸಂಬಂಧ ಬಲವಾಗಿದೆ. ಮಿಲಿಟರಿ, ತಂತ್ರಜ್ಞಾನ ವಿಚಾರದಲ್ಲಿ ಎರಡು ರಾಷ್ಟ್ರಗಳು ಇರಾನ್‌ಗೆ ಸಾಕಷ್ಟು ಬೆಂಬಲ ನೀಡುತ್ತಿವೆ. ಹೀಗಾಗಿಯೇ ಇರಾನ್ ಅಮೆರಿಕಗೆ ಸಾಕಷ್ಟು ಪ್ರತಿರೋಧ ನೀಡುತ್ತಿದೆ.

- ಈ ಹಿಂದೆ ಅಮೆರಿಕ ಯುದ್ಧಕ್ಕೆ ನಿಂತರೆ ನ್ಯಾಟೋ ಜತೆಗಿರುತ್ತಿತ್ತು. ಚೀನಾ-ರಷ್ಯಾದಂಥ ದೇಶಗಳು ವಿರುದ್ಧ ಇರುತ್ತಿದ್ದವು. ಆದರೆ, ಈಗ ಯಾರು ಯಾರ ಕಡೆ ಅಂತಲೇ ಗೊತ್ತಾಗುತ್ತಿಲ್ಲವಲ್ಲ?

ಈ ಯುದ್ಧದಿಂದ ಯಾವುದೇ ಲಾಭವಿಲ್ಲ. ಬರೀ ನಷ್ಟವೆಂಬುದು ಸ್ಪಷ್ಟವಾಗಿದೆ. ಹೀಗಾಗಿ, ಯಾವುದೇ ದೇಶವೂ ನೇರವಾಗಿ ಸ್ಪಷ್ಟ ನಿಲುವು ತಾಳುವುದಿಲ್ಲ.

- ಅಮೆರಿಕ ಅಧ್ಯಕ್ಷರು ನೇರವಾಗಿ ಕರೆ ನೀಡಿದರೂ ಅದರ ಮಿತ್ರ ರಾಷ್ಟ್ರಗಳು ಹಿಂಜರಿಯುತ್ತಿರಲು ಕಾರಣ?

ಪ್ರತಿಯೊಂದು ದೇಶಕ್ಕೂ ಅದರದೇ ಆದ ಹಿತಾಸಕ್ತಿಗಳಿವೆ. ಈ ಯುದ್ಧದಲ್ಲಿ ಅಮೆರಿಕ, ಇಸ್ರೇಲ್ ಹೊರತುಪಡಿಸಿ ಬೇರೆ ರಾಷ್ಟ್ರಗಳ ಹಿತಾಸಕ್ತಿ ಕಾಣಿಸಿಲ್ಲ. ಹೀಗಾಗಿ, ಟ್ರಂಪ್ ಕರೆಗೆ ಯಾರೂ ಬೆಂಬಲಿಸುತ್ತಿಲ್ಲ.

- ನೇರವಾಗಿ ಕೇಳುತ್ತೇನೆ. ನ್ಯಾಟೋ ರಣರಂಗಕ್ಕೆ ಇಳಿದಿಲ್ಲವೇಕೆ?

ನ್ಯಾಟೋ ಸದಸ್ಯ ರಾಷ್ಟ್ರಗಳ ಸಮಗ್ರತೆಗೆ ಧಕ್ಕೆ, ದಾಳಿ ನಡೆದಾಗ ಮಾತ್ರ ಮಿಲಿಟರಿ ಕಾರ್ಯಾಚರಣೆ ಮಾಡಬೇಕು ಎಂಬ ನಿಯಮವಿದೆ. ಇಲ್ಲಿ ನ್ಯಾಟೋ ಸದಸ್ಯ ರಾಷ್ಟ್ರಗಳ ಮೇಲೆ ದಾಳಿಯಾಗಿಲ್ಲ. ಹೀಗಾಗಿ, ನ್ಯಾಟೋ ಮಧ್ಯಪ್ರವೇಶಿಸಿಲ್ಲ.

- ಈ ಯುದ್ದದಲ್ಲಿ ಡಾಲರ್‌ ವಾರ್ ಕೂಡ ನಡೆದಿದೆಯೇ? ಇರಾನ್ ಏಕೆ ಚೀನಾ ಕರೆನ್ಸಿ ಮೂಲಕ ತೈಲ ವ್ಯವಹಾರಕ್ಕೆ ಆಗ್ರಹಿಸುತ್ತಿದೆ?

ಅಮೆರಿಕ ಪ್ರಾಬಲ್ಯ ಕಡಿಮೆ ಮಾಡುವುದೇ ಚೀನಾ ಕರೆನ್ಸಿ ಬಳಕೆಯ ಹಿಂದಿರುವ ಪ್ರಮುಖ ಉದ್ದೇಶ. ಭಾರತ ಕೂಡ ರಷ್ಯಾದಿಂದ ತೈಲ ಖರೀದಿಗೆ ರುಪಾಯಿ ರೂಪದಲ್ಲಿ ಹಣ ನೀಡಿದೆ.

- ಯುದ್ದ ಆರಂಭಗೊಂಡು ಮೂರು ವಾರವಾಗಿದೆ. ಯಾರ ಕೈ ಮೇಲಾಗಿದೆ?

ಯುದ್ಧದಲ್ಲಿ ಇರಾನ್ ಸೋತಿಲ್ಲ. ಅಮೆರಿಕ, ಇಸ್ರೇಲ್ ಗೆದ್ದಿಲ್ಲ. ಹಾಗೆ ನೋಡಿದರೆ ಅನೇಕ ವಿಚಾರಗಳಲ್ಲಿ ಇರಾನ್ ಮೇಲುಗೈ ಸಾಧಿಸುತ್ತಿದೆ. ತನ್ನ ದೇಶದ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಬೇಕು. ಅಪ್ರಚೋದಿತ ದಾಳಿ ಮಾಡಬಾರದು ಎಂದು ಇರಾನ್ ಷರತ್ತು ಹಾಕಿದೆ. ಹೀಗಾಗಿ, ಇಲ್ಲಿ ಯಾವುದೇ ಫಲಿತಾಂಶ ಕಾಣಿಸುವುದು ಕಷ್ಟ. ಅಮೆರಿಕ ಸೇರಿ ಎಲ್ಲಾ ದೇಶಗಳ ಮೇಲೆ ಇರಾನ್ ಒತ್ತಡ ಹಾಕುತ್ತಿದೆ.

- ಈ ಸಮರದಲ್ಲಿ ಭಾರತದ ನಿಲುವು ಸರಿಯಿದೆಯೇ?

ನೆಹರು ಕಾಲದಿಂದಲೂ ಭಾರತ ಅಲಿಪ್ತ / ತಟಸ್ಥ ನೀತಿ ಹೊಂದಿದೆ. 150 ಕೋಟಿ ಜನಸಂಖ್ಯೆಯ ಅಭಿವೃದ್ಧಿ ಹೊಂದುತ್ತಿರುವ ಭಾರತದಂಥ ಬೃಹತ್ ರಾಷ್ಟ್ರಕ್ಕೆ ಇರಾನ್, ಇಸ್ರೇಲ್, ಅಮೆರಿಕ ದೇಶಗಳು ಬೇಕು. ಇರಾನ್‌ನೊಂದಿಗೆ ಭಾರತಕ್ಕೆ ಐತಿಹಾಸಿಕ ಸಾಂಸ್ಕೃತಿಕ ಸಂಬಂಧವಿದೆ. ಇನ್ನು ತಂತ್ರಜ್ಞಾನ, ಕೈಗಾರಿಕೆ, ಉದ್ಯಮಕ್ಕೆ ಸಂಬಂಧಿಸಿ ಅಮೆರಿಕ, ಇಸ್ರೇಲ್ ಜೊತೆಗೆ ದೇಶದ ಸಂಬಂಧಕ್ಕೆ ತನ್ನದೇ ಆದ ಮಹತ್ವವಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ನಿಲುವು ಸರಿಯಾಗಿದೆ. ಅಲ್ಲದೆ, ಯುದ್ಧ ತಡೆಯಲು ಮಧ್ಯಸ್ಥಿಕೆ ವಹಿಸಲು ಭಾರತದ ಪ್ರಧಾನಿ ಪ್ರಯತ್ನಿಸಿದ್ದಾರೆ.

- ಯುದ್ದ ಧೀರ್ಘಾವಧಿಯಾದರೆ ಭಾರತದ ಮೇಲೆ ಆಗುವ ಪರಿಣಾಮಗಳು?

ಇಂಧನ ಮತ್ತು ಎಲ್ಪಿಜಿಗಾಗಿ ಭಾರತ ಬಹುದೊಡ್ಡ ಪ್ರಮಾಣದಲ್ಲಿ ಗಲ್ಫ್ ರಾಷ್ಟ್ರಗಳನ್ನು ಅವಲಂಬಿಸಿದೆ. ಶೇ.40ಕ್ಕಿಂತ ಹೆಚ್ಚು ಇಂಧನ ಗಲ್ಫ್ ದೇಶಗಳಿಂದ ಬರುತ್ತದೆ. ಹರ್ಮುಜ್ ಜಲಸಂಧಿಯನ್ನು ಇರಾನ್ ನಿಯಂತ್ರಿಸುತ್ತಿದೆ. ಗ್ಯಾಸ್ ಕೊರತೆಯಿಂದ ಪ್ರತಿಯೊಂದು ಮನೆಗೂ ಯುದ್ಧದ ಬಿಸಿ ತಟ್ಟಿದೆ. ಹೀಗೆಯೇ ಮುಂದುವರೆದರೆ ದೇಶದ ಆರ್ಥಿಕ ಪರಿಸ್ಥಿತಿ ಭಾರಿ ಪ್ರಮಾಣದಲ್ಲಿ ಕುಸಿತವಾಗಿ ಅಭಿವೃದ್ಧಿಗೆ ಭಾರಿ ಹೊಡೆತ ನೀಡುತ್ತದೆ.

- ಇಂತಹ ಯುದ್ದದಿಂದ ಭಾರತ ತನ್ನ ಹಿತ ಕಾಪಾಡಲು ಕಲಿಯಬೇಕಿರುವ ಪಾಠವೇನು?

ನಮ್ಮ ದೇಶದ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಡಿಆರ್‌ಡಿಒ, ವಾಯುಸೇನೆ ಸೇರಿ ಸಂಬಂಧಿಸಿದ ಸಂಸ್ಥೆಗಳು ನಿರಂತರವಾಗಿ ಬಲಪಡಿಸುತ್ತಿವೆ. ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯನ್ನು ಭಾರತ ಸಮರ್ಥವಾಗಿ ಎದುರಿಸಿದೆ. ನಷ್ಟ ತಡೆದಿದೆ. ಸಾವಿರಾರು ಮೈಲಿ ದೂರದಿಂದ ದಾಳಿ ನಡೆಸಬಲ್ಲ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಯುದ್ಧದಲ್ಲಿ ಬಳಸುತ್ತಿರುವ ಕಾರಣ ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬಲಪಡಿಸುವುದು ಅತ್ಯಂತ ಅಗತ್ಯ ಮತ್ತು ಅನಿವಾರ್ಯ.

- ಯುದ್ಧದಿಂದ ಜನಸಾಮಾನ್ಯರ ಮೇಲೆ ಪರಿಣಾಮವೇನು?

ಕಚ್ಚಾ ತೈಲದಿಂದ ಅನೇಕ ಉಪ ಉತ್ಪನ್ನಗಳು ತಯಾರಾಗುತ್ತವೆ. ಕೃಷಿ ಪ್ರಧಾನವಾಗಿರುವ ನಮ್ಮ ದೇಶಕ್ಕೆ ಭಾರೀ ಪ್ರಮಾಣದ ಗೊಬ್ಬರ ಬೇಕಾಗುತ್ತದೆ. ಅಗತ್ಯ ಪ್ರಮಾಣದಲ್ಲಿ ಗೊಬ್ಬರ ಉತ್ಪಾದನೆಯಾಗದಿದ್ದರೆ ಕೃಷಿಗೆ ಅಗತ್ಯವಿರುವಷ್ಟು ಗೊಬ್ಬರ ಸಿಗುವುದಿಲ್ಲ. ಆಗ, ಉತ್ಪಾದನೆ ಕುಸಿತವಾಗುತ್ತದೆ. ಇದರಿಂದ ದೇಶದ ಆಹಾರ ಭದ್ರತೆಗೆ ಧಕ್ಕೆಯಾಗುವ ಆತಂಕವಿದೆ. ಅನೇಕ ದೇಶಗಳಿಗೆ ನಮ್ಮ ಕೃಷಿ ಉತ್ಪನ್ನಗಳ ರಫ್ತು ಕಡಿಮೆಯಾಗಿ ಆರ್ಥಿಕತೆ ಕುಸಿತವಾಗುತ್ತದೆ. ಅಮೆರಿಕ ಸೇರಿ ಬೇರೆ ದೇಶಗಳಿಂದ ತೈಲ ತರಿಸಿಕೊಂಡರೂ ಬೆಲೆ ಹೆಚ್ಚು. ಇದರಿಂದ ದೇಶದಲ್ಲಿ ಬೆಲೆ ಏರಿಕೆಯಾಗಿ ಜನಸಾಮಾನ್ಯರ ಜೀವನ ಕಷ್ಟವಾಗುತ್ತದೆ.

PREV
Read more Articles on

Recommended Stories

ವಯಸ್ಸು ಖಚಿತಪಡಿಸಿಕೊಂಡ ಮೇಲೆಯೇ ಮದ್ಯ ಮಾರಾಟ ಮಾಡಿ : ಹೈಕೋರ್ಟ್‌
ಯುದ್ಧವಿದ್ದರೂ ಚಿನ್ನದ ದರ ಕುಸಿತವೇಕೆ ? - 1983 ರ ಬಳಿಕ ವಾರದಲ್ಲೇ ಭಾರಿ ಕುಸಿತ