ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಹುಟ್ಟಿದ ದಾಮೋದರ ಗೋವಿಂದ ದೇಶಪಾಂಡೆ ಅವರು ಬೇಂದ್ರೆಯವರ ಬಹಳ ಆತ್ಮೀಯ ಸಖರೂ ಆಗಿದ್ದರು. ಮುಂದೆ ಪುಣೆ, ಮುಂಬೈಗಳಲ್ಲೇ ಇವರು ನೆಲೆಗೊಂಡರು. ಇವರು ಮೂಲತಃ ಲೇಬರ್ ಆಫೀಸರ್ ಆಗಿದ್ದರು.

- ಆನಂದ ಝುಂಜರವಾಡ

ಧಾರವಾಡ : ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಹುಟ್ಟಿದ ದಾಮೋದರ ಗೋವಿಂದ ದೇಶಪಾಂಡೆ ಅವರು ಬೇಂದ್ರೆಯವರ ಬಹಳ ಆತ್ಮೀಯ ಸಖರೂ ಆಗಿದ್ದರು. ಮುಂದೆ ಪುಣೆ, ಮುಂಬೈಗಳಲ್ಲೇ ಇವರು ನೆಲೆಗೊಂಡರು. ಇವರು ಮೂಲತಃ ಲೇಬರ್ ಆಫೀಸರ್ ಆಗಿದ್ದರು.

ಜೊತೆಗೆ, ದಾ. ಗೋ. ಒಬ್ಬ ಕಾದಂಬರಿಕಾರರೂ ಆಗಿದ್ದರು. ‘ಸಿನಿಕ್’ ಎಂಬ ಕಾವ್ಯನಾಮದಿಂದ ಬರೆಯುತ್ತಿದ್ದ ದಾ. ಗೋ. ಅವರ ಕಾದಂಬರಿಗಳಲ್ಲಿ ಆಧುನಿಕ ಬದುಕಿನ ವಿಷಾದಗಳು, ತಲ್ಲಣಗಳು ಸಮರ್ಥವಾಗಿ ಮೈದಳೆದಿವೆ.

ಬೇಂದ್ರೆಯವರೊಂದಿಗಿನ ಸಖ್ಯದ ಫಲವಾಗಿ ಅವರು ಬದುಕಿನ ಘನವಾದ ಅರ್ಥವನ್ನೂ ತಿಳಿಯತೊಡಗಿದರು.

ನನಗೆ ದಾ. ಗೋ. ಅವರ ಪರಿಚಯವಾದ ಮೇಲೆ ಅನೇಕ ಸಲ ಪುಣೆಯ ಕೊಥರೂಡ್‌ನಲ್ಲಿದ್ದ ಅವರ ಮನೆಗೆ ಹೋಗಿ ಭೇಟಿಯಾಗಿದ್ದೆ. ಪ್ರತಿಸಲವೂ ಬೇಂದ್ರೆಯವರನ್ನು ಬಿಟ್ಟು ಬೇರೆ ವಿಷಯವೇ ಇರುತ್ತಿರಲಿಲ್ಲ. ಬೇಂದ್ರೆಯವರ ಕುರಿತು ಹದಿಮೂರು ಲೇಖನಗಳನ್ನು ಮರಾಠಿಯಲ್ಲಿ ಬರೆದ ದಾ. ಗೋ. ಅವರೊಂದಿಗಿನ ಒಂದು ನೆನಪು ಇಲ್ಲಿದೆ. ಬೇಂದ್ರೆಯವರ ಪುಣ್ಯತಿಥಿಯ ಸಂದರ್ಭದಲ್ಲಿ ಅದನ್ನು ಕನ್ನಡಿಗರೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಅದು 1995ರ ಆಸುಪಾಸು ಇರಬೇಕು. ನಾನು ಪುಣೆಗೆ ಹೋಗಿದ್ದೆ.

ಎಂದಿನಂತೆ ದಾ. ಗೋ. ಅವರ ಮನೆಗೂ ಹೋಗಿದ್ದೆ.

ದಾ. ಗೋ. ತುಂಬ ಕೆಮ್ಮುತ್ತಿದ್ದರು. ಅವರ ಶ್ರೀಮತಿ, “ಅವರ ಆರೋಗ್ಯ ಸರಿಯಾಗಿಲ್ಲ. ಬೇಂದ್ರೆಯವರ ಕುರಿತು ಏನೂ ಮಾತಾಡಬೇಡಿ. ಬೇಂದ್ರೆಯವರ ನೆನಪಾದರೆ ಅವರು ಭಾವಾವೇಶಕ್ಕೊಳಗಾಗಿಬಿಡುತ್ತಾರೆ” ಎಂದರು.

ನಾನು ಸುಮ್ಮನೆ ಏನೇನೋ ಮಾತನಾಡಿ ವಿಷಯಾಂತರ ಮಾಡಲು ಪ್ರಯತ್ನಿಸುತ್ತಿದ್ದರೂ, ದಾ. ಗೋ. ಬೇಂದ್ರೆಯವರ ಕುರಿತು ಏನೇನೋ ಹೇಳಲು ಹೋಗುತ್ತಿದ್ದರು. ಆದರೆ, ಅವರಿಂದ ಮಾತು ಹೊರಡುತ್ತಿರಲಿಲ್ಲ.

ಕೊನೆಗೆ ಅವರ ಶ್ರೀಮತಿ ಅವರನ್ನು ಸ್ನಾನಕ್ಕೆಂದು ಬಾತ್‌ರೂಮ್‌ಗೆ ಕಳುಹಿಸಿ, ನನಗೆ ಚಹಾ ಮಾಡಿಕೊಟ್ಟರು.

ದಾ. ಗೋ. ಹೊರಗೆ ಬರುವವರೆಗೆ ನಾವಿಬ್ಬರೇ ಮಾತನಾಡುತ್ತ ಕುಳಿತೆವು.

ನಾನು ಕೇಳಿದೆ: “ಬೇಂದ್ರೆಯವರು ತಮ್ಮ ಕಕ್ಕ ಬಂಡೋಪಂತರ ಶುಕ್ರವಾರ ಪೇಟೆಯ ಮನೆಗೆ ಬಂದರೂ ಇಲ್ಲಿಗೆ ನಾಲ್ಕೈದು ದಿನ ಬಂದು ಇರುತ್ತಿದ್ದರಂತೆ. ಬೇಂದ್ರೆಯವರು ಇಲ್ಲಿ ಹೇಗೆ ಇರುತ್ತಿದ್ದರು? ಅವರ ಒಂದು ದಿನದ ದಿನಚರಿ ಹೇಗಿರುತ್ತಿತ್ತು?”

ಶ್ರೀಮತಿ ದಾ. ಗೋ. ಹೇಳಿದರು:

“ಬೇಂದ್ರೆಯವರು ಬೆಳಗಿನ ಐದು ಗಂಟೆಗೇ ಎದ್ದು ಏನೋ ಜಪ ಮಾಡುತ್ತಿದ್ದರು. ನಂತರ ಕಣ್ಣು ಮುಚ್ಚಿಕೊಂಡು ಏನೋ ಧ್ಯಾನ ಮಾಡುತ್ತಿದ್ದರು. ನಾನು ಹೋಗಿ, ‘ಅಣ್ಣಾ, ನಿಮಗೆ ಚಹಾ ಮಾಡಿಕೊಟ್ಟು ಬಿಡ್ತೀನಿ’ ಎನ್ನುತ್ತಿದ್ದೆ. ಆಗ ಅವರು, ‘ದಾ. ಗೋ. ಏಳೋದು ಇನ್ನೂ ತಡ ಆಗ್ತದೆ’ ಎನ್ನುತ್ತಿದ್ದರು. ಆದರೆ ಅಣ್ಣಾ, ‘ಬೇಡ, ಅವನೂ ಎಚ್ಚರವಾಗಲಿ’ ಎನ್ನುತ್ತಿದ್ದರು.

“ನಂತರ ದಾ. ಗೋ. ಎಚ್ಚರವಾದ ಮೇಲೆ, ಬೇಂದ್ರೆಯವರು ಮಾತು ಶುರು ಮಾಡುತ್ತಿದ್ದ ರೀತಿಯೇ ಬೇರೆ. ಯಾವುದೋ ಘನವಾದ ಚರ್ಚೆ ಅರ್ಧಕ್ಕೆ ನಿಂತಿದ್ದು, ಅಲ್ಲಿಂದಲೇ ಮುಂದುವರಿಯುತ್ತಿದೆ ಎನ್ನುವಂತೆ, ‘ಅದು ಏನಾಗ್ತದೆ ಅಂದರೆ, ಕರ್ಮದ ಫಲ ನಮಗೆ ಬೇಕಾದಂತೆ ಸಿಗೋದೇ ಇಲ್ಲ...’ ಎಂದು ಮಾತು ಶುರು ಮಾಡುತ್ತಿದ್ದರು. ಚಹಾ ಆದ ನಂತರ ಇಬ್ಬರೂ ವಾಕಿಂಗ್‌ಗೆ ಹೋಗುತ್ತಿದ್ದರು. ದಾರಿಯುದ್ದಕ್ಕೂ ಬರೀ ಬೇಂದ್ರೆಯವರದೇ ಮಾತು, ಮಾತು, ಮಾತು!

“ಮನೆಗೆ ಬಂದ ಮೇಲೆ, ‘ನೀ ಬಾಗಿಲು ಹಾಕಿಕೊಂಡು ಸ್ನಾನ ಮಾಡು. ನಾ ಹೊರಗೆ ನಿಂತು ಇನ್ನೂ ಒಂದಿಷ್ಟು ವಿಷಯ ಹೇಳ್ತೀನಿ’ ಎಂದು ಬೇಂದ್ರೆಯವರು ಮಾತಾಡುತ್ತಲೇ ಬಾತ್‌ರೂಮ್‌ನ ಹೊರಗೆ ನಿಲ್ಲುತ್ತಿದ್ದರಂತೆ.

“ಆದರೆ ದಾ. ಗೋ. ಲೇಬರ್ ಆಫೀಸರ್. ದೊಡ್ಡ ಹುದ್ದೆಯಲ್ಲಿದ್ದವರು. ಆಫೀಸಿಗೆ ಹೋಗಬೇಕಲ್ಲ!

“ಬೇಂದ್ರೆಯವರಿಗೆ ಈಗ ನಾವು ರೂಢಿಸಿಕೊಂಡಿರುವಂತೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಎಂಬ ಕ್ರಮ ಅಷ್ಟಾಗಿ ಒಗ್ಗುತ್ತಿರಲಿಲ್ಲ. ಬೆಳಗಿನ ಹತ್ತು ಗಂಟೆಗೇ ಊಟ ಬೇಕಾಗುತ್ತಿತ್ತು. ಸ್ನಾನವಾದ ಮೇಲೆ ದೇವರ ಮುಂದೆ ಕುಳಿತು, ಸಾಮಾನ್ಯವಾಗಿ ಒಂದು ಧೋತರ, ಬನಿಯನ್ ಹಾಕಿಕೊಂಡೇ ‘ಸಾವಿತ್ರಿ’ ಕಾವ್ಯ ಓದುತ್ತಿದ್ದರು. ಗಾಯತ್ರಿ ಮಂತ್ರ ಹೇಳುತ್ತಿದ್ದರು.

“ನಂತರ ಇಬ್ಬರ ಊಟ. ಬೇಂದ್ರೆಯವರಿಗೆ ಯಾವುದೇ ಕಟ್ಟುಪಾಡಿನ ಆಚಾರದ ಅಂಗವಾಗಿ ಅಲ್ಲ, ಸ್ವಭಾವತಃ ಊಟದಲ್ಲಿ ಅತಿಯಾದ ಖಾರ, ಎಣ್ಣೆ ಹಾಕಿದ ಅಡುಗೆ ಸೇರುತ್ತಿರಲಿಲ್ಲ. ಅಡುಗೆ ಸಾತ್ತ್ವಿಕವಾಗಿರಬೇಕು ಅನ್ನುವುದು ಅವರ ಜೈವಿಕ ಅವಶ್ಯಕತೆಯಾಗಿತ್ತು. ಆದರೆ ನಿತ್ಯವೂ ಊಟದಲ್ಲಿ ಏನಾದರೂ ಸಿಹಿ ಬೇಕಾಗುತ್ತಿತ್ತು. ಕೊನೆಗೆ ನಾನೇ ಒಂದು ಬಾಳೆಹಣ್ಣು, ಹಾಲು, ಸಕ್ಕರೆ ಕಲಿಸಿ ಬಡಿಸುತ್ತಿದ್ದೆ. ದಾ. ಗೋ. ಸಿಹಿ ತಿನ್ನುತ್ತಿರಲಿಲ್ಲ. ನಾನು ಬೇಂದ್ರೆಯವರಿಗಷ್ಟೇ ಸಿಹಿ ಮಾಡಿ ಹಾಕುತ್ತಿದ್ದೆ. ದಾ. ಗೋ. ತಮ್ಮ ಊಟಕ್ಕಿಂತ ಬೇಂದ್ರೆಯವರ ಊಟದ ಅಡುಗೆಯ ಬಗ್ಗೆಯೇ ಹೆಚ್ಚು ಕಾಳಜಿ ವಹಿಸುತ್ತಿದ್ದರು.

“ಮುಂದೆ ದಾ. ಗೋ. ಆಫೀಸಿಗೆ ಹೋದ ಮೇಲೆ, ಬೇಂದ್ರೆಯವರು ದೀಕ್ಷಿತರ ಇಂಟರ್‌ನ್ಯಾಷನಲ್ ಬುಕ್ ಡಿಪೋಗೆ ಹೋಗಿ ಮೂರ್ನಾಲ್ಕು ತಾಸು ಕುಳಿತು ಬರುತ್ತಿದ್ದರು. ಬೇಂದ್ರೆಯವರನ್ನು ಭೇಟಿಯಾಗಿ ಮಾತನಾಡಲು ಮರಾಠಿಯ ಘಟಾನುಘಟಿ ಲೇಖಕರು ಅಲ್ಲಿಗೆ ಬರುತ್ತಿದ್ದರು. ಅದೂ ಕೂಡ ಇಲ್ಲಿನ ಮ. ಗ್ರ. ಮಾ. ಅಡ್ಡೆಯಂತೆಯೇ ಇರಬೇಕು.

“ಸಂಜೆ ಮತ್ತೆ ವಾಕಿಂಗ್, ಅತ್ಯಂತ ಅಲ್ಪ ಪ್ರಮಾಣದ ಊಟ, ಪ್ರಾರ್ಥನೆ, ಬದುಕಿನ ಕುರಿತು ಸಂತರ ಚಿಂತನೆಗಳ ಒಂದಿಷ್ಟು ಮಾತು, ನಂತರ ನಿದ್ದೆ.

“ಅಣ್ಣಾ ಅವರಿಗೆ ನಾನು ಮಾಡಿದ ಅಡುಗೆ ನನಗೇ ಒಂದು ಬಗೆಯ ಅಚ್ಚರಿ ತರ್ತಾ ಇತ್ತು. ‘ಇಷ್ಟು ರುಚಿಯಾದ ಅಡುಗೆ ನಾನು ಹೇಗೆ ಮಾಡಿದೆ?’ ಎಂದು ನನಗೇ ಗಾಬರಿಯಾಗುತ್ತಿತ್ತು. ಉಣ್ಣುವವನು ಸಂತನಾದರೆ, ನಾನು ಅಡುಗೆ ಮಾಡಿ ಬಡಿಸುವವಳು ಸಂಸಾರಿ. ಈ ಭಾವವೇ ಅಡುಗೆ ಮಾಡುವಾಗ ಕರಗಿ ಹೋಗುತ್ತಿತ್ತು. ನಾನು ಯಾವುದೋ ಸಂತನ ಸೇವೆ ಮಾಡುತ್ತಿದ್ದೇನೆ ಅನ್ನಿಸುತ್ತಿತ್ತು.”

ಇದು ಶ್ರೀಮತಿ ದಾ. ಗೋ. ಅವರ ಮಾತು.

ಆದರೆ, ಇಲ್ಲಿ ಒಂದು ವಿಚಿತ್ರವನ್ನು ಗಮನಿಸಬೇಕು. ದಾ. ಗೋ. ಸ್ವತಃ ಲೇಖಕರು. ಮೂರು ಕಾದಂಬರಿಗಳನ್ನು ಬರೆದಿದ್ದಾರೆ. ಅವರ ಕಾವ್ಯನಾಮ ‘ಸಿನಿಕ್’.

ಒಬ್ಬ ಸಿನಿಕ್ ಮನುಷ್ಯ ಬೇಂದ್ರೆಯವರ ಭಕ್ತನೂ ಆಗುವುದು ಹೇಗೆ ಸಾಧ್ಯ ಎಂದು ನಾನು ಮೂರ್ಖನಂತೆ ತಲೆ ಕೆಡಿಸಿಕೊಂಡೆ.

ದಾ. ಗೋ. ಅವರೇ ಒಂದು ದಿನ ಹೇಳಿದರು:

“ಝುಂಜರವಾಡ, ನಮ್ಮ ವಿಚಾರಕ್ಕಿಂತ, ನಮ್ಮ ಬರಹಕ್ಕಿಂತ ಬದುಕು ಅನ್ನೋದು ದೊಡ್ಡದು. ಅದನ್ನ ಅಣ್ಣಾನೇ ನನಗೆ ತಿಳಿಸಿದರು. ನನ್ನ ಸಿನಿಕ್ ತನದೊಂದಿಗೂ ಬೇಂದ್ರೆಯವರಿಂದ ಪಾಠ ಕಲಿತೆ.”