ಮತ್ತೊಮ್ಮೆ ಕಬ್ಬು ಬೆಳೆಗಾರರು ಸಿಡಿದೆದ್ದಿದ್ದಾರೆ. ಟನ್‌ ಕಬ್ಬಿಗೆ 5,500 ರು. ಬೆಂಬಲ ಬೆಲೆ ನೀಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಅವರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಪರಿಣತರನ್ನೊಳಗೊಂಡ ಉನ್ನತ ಮಟ್ಟದ ಜಂಟಿ ಸಮಿತಿ ರಚಿಸಿದೆ.

ಕಬ್ಬು ಬೆಳೆಗಾರರು ಸಿಡಿದೆದ್ದಿರುವುದು ಯಾಕೆ?

- ಬ್ರೆಜಿಲ್‌ ರೀತಿ ದೇಶದಲ್ಲಿ ಕಬ್ಬಿಗೆ ಮುಕ್ತ ಮಾರುಕಟ್ಟೆ ಕಲ್ಪಿಸಲು ಇರುವ ಸಮಸ್ಯೆಯಾದರೂ ಏನು?

--

- ಮಹಾಬಲೇಶ್ವರ ಹೊನ್ನೆಮಡಿಕೆಬ್ಲರ್ಬ್‌:86 ಸಕ್ಕರೆ ಕಾರ್ಖಾನೆಗಳನ್ನು ಹೊಂದಿರುವ ಕರ್ನಾಟಕ, ಕಬ್ಬಿನ ಉತ್ಪಾದನೆಯಲ್ಲಿ ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ. ಉತ್ತರ ಕರ್ನಾಟಕದ ಸಕ್ಕರೆ ಕಣಜ ಎಂದೇ ಖ್ಯಾತಿವೆತ್ತ ಬೆಳಗಾವಿ, ರಾಜ್ಯದಲ್ಲಿಯೇ ಅತಿ ಹೆಚ್ಚು ಕಬ್ಬನ್ನು ಬೆಳೆಯುವ ಜಿಲ್ಲೆ ಎನಿಸಿಕೊಂಡಿದೆ. ಉಳಿದಂತೆ, ಬಾಗಲಕೋಟೆ, ಮಂಡ್ಯ ಸೇರಿ 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಬ್ಬನ್ನು ಬೆಳೆಯಲಾಗುತ್ತದೆ.

++++++++

ಮತ್ತೊಮ್ಮೆ ಕಬ್ಬು ಬೆಳೆಗಾರರು ಸಿಡಿದೆದ್ದಿದ್ದಾರೆ. ಟನ್‌ ಕಬ್ಬಿಗೆ 5,500 ರು. ಬೆಂಬಲ ಬೆಲೆ ನೀಡಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಅವರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ಪರಿಣತರನ್ನೊಳಗೊಂಡ ಉನ್ನತ ಮಟ್ಟದ ಜಂಟಿ ಸಮಿತಿ ರಚಿಸಿದೆ. ಆದರೆ, ಈ ಸಮಿತಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಫಲವಾಗಲಿದೆಯೇ? ಈ ಸಮಿತಿ ನೀಡುವ ವರದಿಯನ್ನು ಸರ್ಕಾರ ಜಾರಿಗೊಳಿಸಲಿದೆಯೇ? ಗ್ಯಾರಂಟಿ ಇಲ್ಲ! ಸದ್ಯದ ಹೋರಾಟಕ್ಕೆ ಒಂದಷ್ಟು ತೇಪೆ ಹಚ್ಚಬಹುದು ಅಷ್ಟೇ. ಹಾಗಾಗಿ, ಮುಂದಿನ ವರ್ಷವೂ ಕಬ್ಬು ಬೆಳೆಗಾರರ ಹೋರಾಟ ಗ್ಯಾರಂಟಿ!

ಸ್ವಾತಂತ್ರ್ಯಾನಂತರ ಗ್ರಾಮೀಣ ಸಬಲೀಕರಣದ ದೃಷ್ಟಿಯಿಂದ ದೇಶದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ಸ್ಥಾಪಿಸಲಾಯಿತು. ರೈತರೇ ಮಾಲೀಕರಾಗಬೇಕು ಎಂಬ ಆಶಯ ಇದರ ಹಿಂದಿತ್ತು. ಆದರೆ, ಕಾಲಕ್ರಮೇಣ ರಾಜಕೀಯ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ ಸಹಕಾರ ಸಂಸ್ಥೆಗಳ ಪ್ರಮುಖ ಹುದ್ದೆಗಳನ್ನು ಹಿಡಿಯುವ ಮೂಲಕ ಅವುಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಇದು ಮುಂದೆ ಸಕ್ಕರೆ ಲಾಬಿಗೆ ಮೂಲವಾಯಿತು.ವಿಶ್ವದಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆಯುವ ಮತ್ತು ರಫ್ತು ಮಾಡುವ ಬ್ರೆಜಿಲ್‌ನಲ್ಲಿ ಕಬ್ಬಿಗೆ ಮುಕ್ತ ಮಾರುಕಟ್ಟೆ ವ್ಯವಸ್ಥೆ ಇದೆ. ಇದು ಜಾಗತಿಕ ಸಕ್ಕರೆ ಮಾರುಕಟ್ಟೆ ಮತ್ತು ಎಥೆನಾಲ್‌ನ ಬೆಲೆಗಳನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ಕೂಡ ವಹಿಸುತ್ತದೆ. ಆದರೆ, ಬ್ರೆಜಿಲ್‌ ಬಳಿಕ ವಿಶ್ವದ ಎರಡನೇ ಅತಿ ದೊಡ್ಡ ಸಕ್ಕರೆ ಉತ್ಪಾದಕ ರಾಷ್ಟ್ರವಾಗಿರುವ ಭಾರತದಲ್ಲಿ ಕಬ್ಬಿಗೆ ಮುಕ್ತ ಮಾರುಕಟ್ಟೆ ದರವನ್ನು ಕಲ್ಪಿಸಲಾಗಿಲ್ಲ. ಕೇಂದ್ರ ಸರ್ಕಾರವೇ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಹಾಗೂ ಕೋಟಾ ನೀಡುವ ಮೂಲಕ ಮಾರುಕಟ್ಟೆಯನ್ನು ನಿಯಂತ್ರಿಸುತ್ತಿದೆ. ರಂಗರಾಜನ್ ಸಮಿತಿಯಂತಹ (2012) ಹಲವು ತಜ್ಞರ ಸಮಿತಿಗಳು ಕಬ್ಬು ವಲಯವನ್ನು ಮುಕ್ತ ಮಾರುಕಟ್ಟೆಗೆ ಒಳಪಡಿಸಲು ಶಿಫಾರಸ್ಸು ಮಾಡಿವೆಯಾದರೂ, ಸರ್ಕಾರ ಈ ಶಿಫಾರಸ್ಸುಗಳನ್ನು ಮಾನ್ಯ ಮಾಡಿಲ್ಲ. ಇದಕ್ಕೆ ಸರ್ಕಾರ ಕೊಡುವ ಕಾರಣ ರೈತರು, ಗ್ರಾಹಕರು ಹಾಗೂ ಸಕ್ಕರೆ ಕಾರ್ಖಾನೆಗಳ ಹಿತದೃಷ್ಟಿ.

ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಉತ್ತರಾಖಂಡ ರಾಜ್ಯಗಳು ಕಬ್ಬಿಗೆ ಅಧಿಕೃತವಾಗಿ ಎಸ್‌ಎಪಿ (ರಾಜ್ಯ ಬೆಂಬಲ ಬೆಲೆ) ಘೋಷಿಸಿದ್ದು, ಕೇಂದ್ರ ಸರ್ಕಾರ ನಿಗದಿಪಡಿಸುವ ಎಫ್‌ಆರ್‌ಪಿಗಿಂತ ಹೆಚ್ಚಿನ ಬೆಲೆಯನ್ನು ನೀಡುತ್ತಿವೆ. ನೆರೆಯ ತಮಿಳುನಾಡು, ನೇರವಾಗಿ ಎಸ್‌ಎಪಿ ನೀಡದಿದ್ದರೂ, ಕೇಂದ್ರದ ಎಫ್‌ಆರ್‌ಪಿ ದರಕ್ಕಿಂತ ಹೆಚ್ಚುವರಿಯಾಗಿ ಪ್ರತಿ ಮೆಟ್ರಿಕ್ ಟನ್‌ಗೆ ₹709.5ರಷ್ಟು ವಿಶೇಷ ಪ್ರೋತ್ಸಾಹಕ ಧನವನ್ನು ರೈತರಿಗೆ ನೀಡುತ್ತಿದೆ. ಈಗ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ರಾಜ್ಯ ಸರ್ಕಾರ ಎಸ್‌ಎಪಿ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.

ಕಬ್ಬಿಗೆ ಮುಕ್ತ ಮಾರುಕಟ್ಟೆ ಏಕೆ ಇಲ್ಲ?

ಸರ್ಕಾರ ಕೊಡುವ ಕಾರಣಗಳು:- ಎಫ್‌ಆರ್‌ಪಿ ದರ ನಿಗದಿಯಿಂದಾಗಿ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆ ಕುಸಿದರೂ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ನಿಗದಿಪಡಿಸಿದ ಕನಿಷ್ಠ ಬೆಲೆಯನ್ನು ನೀಡಲೇಬೇಕಾಗುತ್ತದೆ. ಇದರಿಂದ ರೈತರಿಗೆ ಆಗುವ ನಷ್ಟ ತಪ್ಪಿಸಬಹುದು.- ಕಬ್ಬನ್ನು ಕಟಾವು ಮಾಡಿದ 24 ಗಂಟೆಗಳ ಒಳಗೆ ಅರೆಯಬೇಕು. ಇಲ್ಲದಿದ್ದರೆ ಅದರಲ್ಲಿನ ಸಕ್ಕರೆ ಅಂಶ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಿ, ರೈತರು ತಮ್ಮ ಕಬ್ಬನ್ನು ದೂರದ ಮಾರುಕಟ್ಟೆಗಳಿಗೆ ಕೊಂಡೊಯ್ದು ಮುಕ್ತವಾಗಿ ಹರಾಜು ಹಾಕಲು ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಸಿಕ್ಕ ಬೆಲೆಗೆ ಮಾರಬೇಕಾದ ಅನಿವಾರ್ಯತೆ ಎದುರಾಗುತ್ತದೆ.- ಸರ್ಕಾರ ಪ್ರತಿ ಸಕ್ಕರೆ ಕಾರ್ಖಾನೆಗೆ ಇಂತಿಷ್ಟೇ ಕಿಲೋಮೀಟರ್ ವ್ಯಾಪ್ತಿಯಲ್ಲಿ ‘ಕಬ್ಬು ಮೀಸಲು ಪ್ರದೇಶ’ ವನ್ನು ನಿಗದಿಪಡಿಸಿದೆ. ಆ ವ್ಯಾಪ್ತಿಯ ರೈತರು ಅಲ್ಲಿನ ಕಾರ್ಖಾನೆಗೇ ಕಬ್ಬು ನೀಡಬೇಕು ಮತ್ತು ಕಾರ್ಖಾನೆ ನಿಗದಿತ ಅವಧಿಯೊಳಗೆ, ನಿಗದಿತ ದರ ನೀಡಿ ಆ ಕಬ್ಬನ್ನು ಕಡ್ಡಾಯವಾಗಿ ಖರೀದಿಸಬೇಕು.

- ಕಬ್ಬು ಮತ್ತು ಸಕ್ಕರೆ ಎರಡೂ ದೇಶದಲ್ಲಿ ಅಗತ್ಯ ವಸ್ತುಗಳ ಕಾಯ್ದೆ ಅಡಿಯಲ್ಲಿ ಬರುವುದರಿಂದ ಸರ್ಕಾರವೇ ಪ್ರತಿ ತಿಂಗಳು ಕಾರ್ಖಾನೆಗಳು ಎಷ್ಟು ಸಕ್ಕರೆ ಮಾರಾಟ ಮಾಡಬೇಕು ಎಂಬ ಕೋಟಾವನ್ನು ನಿರ್ಧರಿಸುತ್ತದೆ. ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಯಾಗದಂತೆ ತಡೆಯಲು ಸಕ್ಕರೆ ವ್ಯಾಪಾರಿಗಳ ದಾಸ್ತಾನು ಮಿತಿ, ಆಮದು ಮತ್ತು ರಫ್ತು ನೀತಿಗಳನ್ನು ನಿಯಂತ್ರಿಸುತ್ತದೆ. ಆ ಮೂಲಕ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಕೊರತೆಯಾಗದಂತೆ ತಡೆಯುತ್ತದೆ, ಬೆಲೆ ಏರಿಕೆಯನ್ನು ನಿಯಂತ್ರಿಸುತ್ತದೆ. - ಕಬ್ಬಿನಿಂದ ಇಂಧನಕ್ಕೆ ಬಳಸುವ ಎಥೆನಾಲ್ ಮತ್ತು ವಿದ್ಯುತ್ ಉತ್ಪಾದನೆಗೆ ಬಳಸುವ ಬಗಾಸ್ ತಯಾರಿಸಲಾಗುತ್ತದೆ. ದೇಶದ ಇಂಧನ ಭದ್ರತೆ ಮತ್ತು ತೈಲ ಆಮದು ಕಡಿಮೆ ಮಾಡುವ ಉದ್ದೇಶದಿಂದ ಎಥೆನಾಲ್ ಉತ್ಪಾದನೆಗೆ ಕಬ್ಬನ್ನು ಎಷ್ಟು ಬಳಸಬೇಕು ಮತ್ತು ಅದಕ್ಕೆ ಎಷ್ಟು ದರ ನೀಡಬೇಕು ಎಂಬುದನ್ನು ಸರ್ಕಾರದ ಮೂಲಕ ನಿಯಂತ್ರಿಸಬಹುದು.- ಸರ್ಕಾರದ ನೀತಿಯಿಂದಾಗಿಯೇ ಕಬ್ಬು ಬೆಳೆಗೆ ಇತರ ಬೆಳೆಗಳಿಗಿಂತ ಹೆಚ್ಚಿನ ಬೆಲೆ ಮತ್ತು ಮಾರುಕಟ್ಟೆ ಗ್ಯಾರಂಟಿ ಸಿಗುತ್ತಿದೆ.

ರೈತರ ವಾದವೇನು?

ಆದರೆ, ಕಬ್ಬಿಗೆ ಮುಕ್ತ ಮಾರುಕಟ್ಟೆ ಕಲ್ಪಿಸದಿರಲು ಸಕ್ಕರೆ ಕಾರ್ಖಾನೆಗಳ ಮಾಲೀಕರ ಪ್ರಭಾವಶಾಲಿ ಲಾಬಿ, ರಾಜಕೀಯ ಹಿತಾಸಕ್ತಿಗಳು ಪ್ರಮುಖ ಕಾರಣ ಎಂಬುದು ರೈತ ಸಂಘಟನೆಗಳು ಮತ್ತು ಆರ್ಥಿಕ ತಜ್ಞರ ವಾದ.

- ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಉತ್ತರ ಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಕ್ಕರೆ ಕಾರ್ಖಾನೆಗಳು ಪ್ರಭಾವಿ ರಾಜಕಾರಣಿಗಳ ಒಡೆತನದಲ್ಲಿವೆ ಅಥವಾ ಅವರ ನಿಯಂತ್ರಣದಲ್ಲಿವೆ. ಕಬ್ಬು ಬೆಳೆಯುವ ಜಿಲ್ಲೆಗಳಲ್ಲಿ ಲಕ್ಷಾಂತರ ಕಾರ್ಮಿಕರು, ರೈತರು ಇರುವುದರಿಂದ ಇದು ದೊಡ್ಡ ಮತ ಬ್ಯಾಂಕ್‌ ಆಗಿದೆ. ಅಲ್ಲದೆ, ಚುನಾವಣೆಗಳಿಗೆ ಭಾರಿ ಪ್ರಮಾಣದ ಹಣ ಉದ್ಯಮದಿಂದ ಹರಿದು ಬರಲು ಈ ಲಾಬಿ ಕೆಲಸ ಮಾಡುತ್ತದೆ.- ಪ್ರಸ್ತುತ ಇರುವ ನಿಯಮಗಳ ಪ್ರಕಾರ, ಒಂದು ನಿರ್ದಿಷ್ಟ ವ್ಯಾಪ್ತಿಯ (ಉದಾಹರಣೆಗೆ 15 ರಿಂದ 25 ಕಿ.ಮೀ.) ಒಳಗಿರುವ ರೈತರು ತಮ್ಮ ಕಬ್ಬನ್ನು ಅದೇ ಭಾಗದ ನಿಗದಿತ ಸಕ್ಕರೆ ಕಾರ್ಖಾನೆಗೆ ನೀಡಬೇಕು. ಇದು ಕಾರ್ಖಾನೆಗಳಿಗೆ ಏಕಸ್ವಾಮ್ಯ ನೀಡುತ್ತದೆ. ಮುಕ್ತ ಮಾರುಕಟ್ಟೆ ಬಂದರೆ ರೈತರು ಹೆಚ್ಚು ದರ ಕೊಡುವ ಬೇರೆ ಜಿಲ್ಲೆಯ ಅಥವಾ ಬೇರೆ ಭಾಗದ ಕಾರ್ಖಾನೆಗಳಿಗೆ ಕಬ್ಬು ಮಾರಬಹುದು. ಈ ಸಕ್ಕರೆ ಲಾಬಿ, ಮುಕ್ತ ಮಾರುಕಟ್ಟೆ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಇದನ್ನು ಎದುರು ಹಾಕಿಕೊಳ್ಳಲು ಯಾವ ಸರ್ಕಾರವೂ ಸಿದ್ದವಿಲ್ಲ.- ಕಬ್ಬಿನ ರಸದಿಂದ ಎಥೆನಾಲ್‌ ತಯಾರಿಸಲು ಸರ್ಕಾರ ನೀಡುವ ಪ್ರೋತ್ಸಾಹಧನ ಸಕ್ಕರೆ ಉದ್ಯಮಕ್ಕೆ ಭಾರಿ ಲಾಭ ತಂದುಕೊಡುತ್ತಿದ್ದು, ಸಕ್ಕರೆ ಲಾಬಿ ಸರ್ಕಾರದ ಎಥೆನಾಲ್‌ ನೀತಿಯನ್ನು ತಮಗೆ ಪೂರಕವಾಗಿ ಬಳಸಿಕೊಳ್ಳುತ್ತಿದೆ. ಇದರ ಲಾಭ ನೇರವಾಗಿ ರೈತರಿಗೆ ತಲುಪದೆ, ಕಾರ್ಖಾನೆಗಳ ಮಾಲೀಕರ ಪಾಲಾಗುತ್ತಿದೆ ಎಂಬುದು ರೈತ ಸಂಘಟನೆಗಳ ಆರೋಪ.- ರಾಜಕೀಯ ನಾಯಕರ ನಿಯಂತ್ರಣದಲ್ಲಿರುವ ಕಾರ್ಖಾನೆಗಳು ಉದ್ದೇಶಪೂರ್ವಕವಾಗಿ ರೈತರಿಗೆ ಕಬ್ಬಿನ ಬೆಲೆಯನ್ನು ಕಡಿಮೆ ಮಾಡುವ ಮೂಲಕ ಚುನಾವಣೆ ನಿಧಿಗೆ ಅಥವಾ ವೈಯಕ್ತಿಕ ಸಂಪತ್ತಿಗೆ ಅಕ್ರಮ ಹಣ ಸಂಗ್ರಹಿಸುತ್ತವೆ.

ರೈತರಿಗೀಗ ಸಂಕಷ್ಟದ ದಿನಗಳು:ಸಾಮಾನ್ಯವಾಗಿ ತಳಿಯನ್ನಾಧರಿಸಿ 10 ರಿಂದ 14 ತಿಂಗಳುಗಳಲ್ಲಿ ಕಬ್ಬು ಕಟಾವಿಗೆ ಬರುತ್ತದೆ. ಆದರೆ, ಕಬ್ಬು ಕಟಾವಿನ ವೇಳೆ ಕಾರ್ಮಿಕರ ಕೊರತೆ, ಹೆಚ್ಚಿನ ಕೂಲಿ, ಅಧಿಕ ಸಾಗಾಣಿಕೆ ವೆಚ್ಚ ರೈತರಿಗೆ ದೊಡ್ಡ ಸವಾಲಾಗುತ್ತಿದೆ. ಪರ್ಯಾಯವಾಗಿ ಕಬ್ಬು ಕಟಾವಿಗೆ ದುಬಾರಿ ಬೆಲೆಯ ಕಟಾವು ಯಂತ್ರಗಳನ್ನು ಬಳಸುವುದು ಸಣ್ಣ ಹಿಡುವಳಿದಾರರಿಗೆ ಆರ್ಥಿಕವಾಗಿ ಸಾಧ್ಯವಾಗುತ್ತಿಲ್ಲ.

ಸರ್ಕಾರ ಕಬ್ಬಿಗೆ ಮೂಲಬೆಲೆಯನ್ನು ನಿಗದಿಪಡಿಸಿದೆಯಾದರೂ ಇಳುವರಿ ಮೇಲೆ ರೈತರಿಗೆ ಸಿಗುವ ದರ ನಿಗದಿಯಾಗುತ್ತದೆ. ಉದಾಹರಣೆಗೆ ಬಾಗಲಕೋಟೆ ಹಾಗೂ ಬೆಳಗಾವಿ ವಿಭಾಗದಲ್ಲಿ ಕಬ್ಬಿನ ಇಳುವರಿ ಪ್ರಮಾಣ ಹೆಚ್ಚಿರುವುದರಿಂದ (11-11.5%; ಅಂದರೆ 1 ಕೆಜಿ ಕಬ್ಬಿನಿಂದ 11-11.5 ಕೆಜಿ ಸಕ್ಕರೆ ತಯಾರಿಸಬಹುದು) ಅಲ್ಲಿನ ಕಬ್ಬಿಗೆ ಹೆಚ್ಚಿನ ದರ ಸಿಗುತ್ತದೆ. ಆದರೆ, ಮಂಡ್ಯ, ಮೈಸೂರು ಭಾಗದಲ್ಲಿ ಇಳುವರಿ ಪ್ರಮಾಣ(9-9.5%) ಕಡಿಮೆ ಇರುವುದರಿಂದ ಅವರಿಗೆ ಸಿಗುವ ದರ ಕಡಿಮೆ.

ಕಬ್ಬು ಹೆಚ್ಚು ನೀರನ್ನು ಬೇಡುವ ಬೆಳೆಯಾಗಿದ್ದು, ಇತ್ತೀಚಿನ ಬರಗಾಲ ಕಬ್ಬಿನ ಇಳುವರಿಯನ್ನು ನಾಶಪಡಿಸುತ್ತಿದೆ. ಕಬ್ಬನ್ನು ಕಾಡುವ ಕೆಂಪು ಕೊಳೆ ರೋಗ ಮತ್ತು ಇತರ ಕೀಟಬಾಧೆಗಳು ನಷ್ಟಕ್ಕೆ ಕಾರಣವಾಗುತ್ತಿವೆ. ಕಾರ್ಖಾನೆಗಳು ರೈತರಿಂದ ಕಬ್ಬು ಪಡೆದರೂ ತಿಂಗಳುಗಟ್ಟಲೆ, ವರ್ಷಗಟ್ಟಲೆ ಹಣ ಪಾವತಿಸದೆ ರೈತರನ್ನು ಸತಾಯಿಸುತ್ತವೆ. ಕೇಂದ್ರ ಸರ್ಕಾರದ ಕಬ್ಬು ನಿಯಂತ್ರಣ ಕಾಯ್ದೆ–1966 ಹಾಗೂ ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ಅಧಿನಿಯಮ-2013ರ ಪ್ರಕಾರ, ಕಬ್ಬು ಪೂರೈಸಿದ14 ದಿನಗಳ ಒಳಗೆ ಕಾರ್ಖಾನೆಗಳು ಹಣ ಪಾವತಿಸಬೇಕು. ವಿಳಂಬವಾದರೆ 15% ಬಡ್ಡಿ ನೀಡಬೇಕು. ಆದರೆ, ಈ ಕಾನೂನು ಪಾಲನೆಯಾಗುತ್ತಿಲ್ಲ.

ರೈತರಿಗೆ ಪರಿಹಾರ ಏನು?

ಕಬ್ಬು ಬೆಳೆಗಾರರ ಹೋರಾಟಕ್ಕೆ ದಶಕಗಳ ಇತಿಹಾಸವಿದೆ. ಆದರೆ, ರೈತರ ನಡುವೆ ಜಾತಿ, ರಾಜಕೀಯ ಭಿನ್ನಾಭಿಪ್ರಾಯ ಸೃಷ್ಟಿಸಿ ಹೋರಾಟವನ್ನು ವ್ಯವಸ್ಥಿತವಾಗಿ ಹತ್ತಿಕ್ಕಲಾಗುತ್ತಿದೆ. ಹೀಗಾಗಿ, ರೈತರು ಪರ್ಯಾಯ ಮಾರ್ಗಗಳತ್ತ ಯೋಚಿಸಬೇಕಿದೆ. ಸ್ಥಳೀಯವಾಗಿ ಬೆಲ್ಲದ ಗಾಣಗಳನ್ನು ಪ್ರೋತ್ಸಾಹಿಸಿ, ರೈತರೇ ಒಕ್ಕೂಟಗಳನ್ನು ರಚಿಸಿಕೊಂಡು ಸಾವಯವ ಬೆಲ್ಲ, ಕಬ್ಬಿನ ಜ್ಯೂಸ್‌ ಮತ್ತಿತರ ಪದಾರ್ಥಗಳ ಸಂಸ್ಕರಣ ಘಟಕಗಳನ್ನು ಸ್ಥಾಪಿಸುವತ್ತ ಹೆಜ್ಜೆ ಹಾಕಬೇಕಿದೆ. ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಿಕೊಂಡು ನೇರವಾಗಿ ಮಾರುಕಟ್ಟೆಗೆ ಮೌಲ್ಯವರ್ಧಿತ ಉತ್ಪನ್ನಗಳನ್ನು ತಂದರೆ ಸಕ್ಕರೆ ಲಾಬಿಯ ಮೇಲಿನ ಅವಲಂಬನೆ ಕಡಿಮೆ ಆಗಲಿದೆ.