ಬೆಳಗಾವಿ, ಬಾಗಲಕೋಟೆ ಬಳಿಕ ಕಬ್ಬು ಬೆಳೆಗಾರರ ಕಿಚ್ಚು ಸಕ್ಕರೆ ನಾಡು ಮಂಡ್ಯಕ್ಕೂ ಹಬ್ಬಿದ್ದು, ಕಬ್ಬಿಗೆ ಸೂಕ್ತ ಬೆಲೆ ನಿಗದಿ ಹಾಗೂ ಕೃಷಿ ಸಾಲಮನ್ನಾ ಸೇರಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ರೈತರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರಿನಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ/ ಬಾಗಲಕೋಟೆ:

ಬೆಳಗಾವಿ, ಬಾಗಲಕೋಟೆ ಬಳಿಕ ಕಬ್ಬು ಬೆಳೆಗಾರರ ಕಿಚ್ಚು ಸಕ್ಕರೆ ನಾಡು ಮಂಡ್ಯಕ್ಕೂ ಹಬ್ಬಿದ್ದು, ಕಬ್ಬಿಗೆ ಸೂಕ್ತ ಬೆಲೆ ನಿಗದಿ ಹಾಗೂ ಕೃಷಿ ಸಾಲಮನ್ನಾ ಸೇರಿ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಸಾವಿರಾರು ಸಂಖ್ಯೆಯಲ್ಲಿ ರೈತರು ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಗಣಂಗೂರಿನಲ್ಲಿ ಶುಕ್ರವಾರ ಬೃಹತ್‌ ಪ್ರತಿಭಟನೆ ನಡೆಸಿದರು. ಗಣಂಗೂರು ಸಮೀಪದ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಟೋಲ್‌ ಪ್ಲಾಜಾಗೆ ಮುತ್ತಿಗೆ ಹಾಕಿ, ವಾಹನಗಳ ಸಂಚಾರ ತಡೆದು, ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಬಾಗಲಕೋಟೆ ಜಿಲ್ಲೆ ಕೆರೂರ ಪಟ್ಟಣದ ಬಾದಾಮಿ ಕ್ರಾಸ್‌ನಲ್ಲಿ ಪ್ರತಿಭಟನೆ ನಡೆಸಿದ ರೈತರು, ರಾಷ್ಟ್ರೀಯ ಹೆದ್ದಾರಿ- 218ರಲ್ಲಿ ಕೆಲಕಾಲ ರಸ್ತೆ ತಡೆ ನಡೆಸಿದರು.

ಮೇಲುಕೋಟೆ ಕ್ಷೇತ್ರದ ಶಾಸಕ ಹಾಗೂ ರೈತ ನಾಯಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಗಣಂಗೂರಿನಲ್ಲಿ ಪ್ರತಿಭಟನೆ ನಡೆಯಿತು. ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ರೈತರು ಸುಮಾರು ಒಂದೂವರೆ ತಾಸು ಬೆಂಗಳೂರು-ಮೈಸೂರು ಹೆದ್ದಾರಿ ತಡೆದು, ತಮ್ಮ ಆಕ್ರೋಶ ವ್ಯಕ್ತಪಡಿದರು.

ಪ್ರತಿ ಟನ್ ಕಬ್ಬಿಗೆ ಕನಿಷ್ಠ ₹5,500 ದರ ನಿಗದಿಪಡಿಸಬೇಕು, ಸಕ್ಕರೆ ಕಾರ್ಖಾನೆಗಳ ಮಾಲೀಕರು ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ರೈತರ ಖಾತೆಗೆ ಜಮೆ ಮಾಡಬೇಕು ಎಂದು ರೈತರು ಪಟ್ಟು ಹಿಡಿದರು. ಜೊತೆಗೆ ತೀವ್ರ ಸಂಕಷ್ಟದಲ್ಲಿರುವ ರೈತರ ಸಂಪೂರ್ಣ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆ ತೀವ್ರತೆ ಗಮನಿಸಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಗಣಂಗೂರು ಟೋಲ್ ಸುತ್ತಮುತ್ತ ಪೊಲೀಸ್ ವರಿಷ್ಠಾಧಿಕಾರಿ ಡಾ। ಶೋಭಾರಾಣಿ ನೇತೃತ್ವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿ, ಬಿಗಿ ಭದ್ರತೆ ಒದಗಿಸಲಾಗಿತ್ತು.

ಬೆಳಗ್ಗೆಯೇ ಟೋಲ್ ಮುತ್ತಿಗೆ ಹಾಕಲು ಮುಂದಾದ ರೈತರನ್ನು ತಡೆಯಲು ಪೊಲೀಸರು ಹರಸಾಹಸ ಪಟ್ಟರು. ಸ್ಥಳಕ್ಕೆ ಭೇಟಿ ನೀಡಿದ ಐಜಿಪಿ ಬೋರಲಿಂಗಯ್ಯ ಅವರು ರೈತರೊಂದಿಗೆ ಮಾತುಕತೆ ನಡೆಸಿ ಹೈವೇ ರಸ್ತೆ ಮಾತ್ರ ತಡೆ ಮಾಡಿ ಹೆದ್ದಾರಿಯ ಸರ್ವೀಸ್ ರಸ್ತೆಗಳನ್ನು ತಡೆಯದಂತೆ ಮನವೊಲಿಸಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಪ್ರತಿಭಟನಾಕಾರರು ಸರ್ವೀಸ್ ರಸ್ತೆ ಹಾಗೂ ಹೈವೇ ಎರಡನ್ನೂ ಸಂಪೂರ್ಣ ಬಂದ್ ಮಾಡಿ, ರಸ್ತೆಯಲ್ಲಿ ಕುಳಿತು ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.

ಬಳಿಕ, ರೈತರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಪೊಲೀಸರ ಮನವಿಯನ್ನೂ ಲೆಕ್ಕಿಸದೆ ಬ್ಯಾರಿಕೇಡ್ ಹಾಗೂ ತಂತಿ ಬೇಲಿಗಳನ್ನು ಮುರಿದುಕೊಂಡು ಏಕಾಏಕಿ ಹೆದ್ದಾರಿಗೆ ನುಗ್ಗಿ ಟೋಲ್ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಒಂದೂವರೆ ಗಂಟೆ ವಾಹನ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತು. ಎರಡೂ ಬದಿ ವಾಹನಗಳ ಸಂಚಾರಕ್ಕೆ ತಡೆಯಾದ್ದರಿಂದ ಕಿಲೋ ಮೀಟರ್‌ಗಳ ಉದ್ದಕ್ಕೂ ವಾಹನಗಳು ಜಮಾವಣೆಗೊಂಡಿದ್ದವು.

ಸ್ಥಳಕ್ಕೆ ಸಚಿವ ಎನ್ ಚಲುವರಾಯಸ್ವಾಮಿ, ಸೆಸ್ಕ್ ಅಧ್ಯಕ್ಷ ಹಾಗೂ ಶಾಸಕ ರಮೇಶ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ। ಕುಮಾರ್‌ ಆಗಮಿಸಿ ರೈತರನ್ನು ಸಮಾಧಾನಪಡಿಸಿದರು. ರೈತರ ಬಳಿ ಮನವಿ ಪತ್ರ ಸ್ವೀಕರಿಸಿದ ಸಚಿವ ಎನ್.ಚಲುವರಾಯಸ್ವಾಮಿ, ಪ್ರತಿಭಟನೆ ಹಿಂಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

----

(ಬಾಕ್ಸ್‌):

ಕೆರೂರಲ್ಲೂ ಪ್ರತಿಭಟನೆ:

ಇದೇ ವೇಳೆ, ಬಾಗಲಕೋಟೆ ಜಿಲ್ಲೆ ಕೆರೂರಲ್ಲಿ ರೈತರು ಬಾದಾಮಿ ಕ್ರಾಸ್‌ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ರಾಷ್ಟ್ರೀಯ ಹೆದ್ದಾರಿ 218ನ್ನು ಕೆಲಕಾಲ ಬಂದ್‌ ಮಾಡಿದರು. ಬಳಿಕ, ಪಟ್ಟಣದ ಅಂಬೇಡ್ಕರ್‌ ವೃತ್ತದ ಬಳಿ ಧರಣಿ ನಡೆಸಿದರು. ಬಾದಾಮಿ ತಹಸೀಲ್ದಾರ ಅಮರೇಶ ಪಮ್ಮಾರ ಮತ್ತು ಕೆಬಿಜೆಎನ್ಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿಶ್ವನಾಥ ಮೇಲನ್ನವರ ಧರಣಿ ಸ್ಥಳಕ್ಕೆ ಭೇಟಿ ನೀಡಿ, ರೈತರ ಮನವೊಲಿಸಿದರು. ಬಳಿಕ, ಪ್ರತಿಭಟನೆಯನ್ನು ವಾಪಸ್‌ ಪಡೆಯಲಾಯಿತು.