ಶಿರಸಿ: ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರ ಹಿತ ಕಾಪಾಡಲು ಸಂಪೂರ್ಣ ವಿಫಲವಾಗಿದೆ. ಕಬ್ಬು ಬೆಳೆಯುವ ರೈತರಿಗೆ ಸೂಕ್ತ ಬೆಂಬಲ ಬೆಲೆ ನೀಡಲು ಕೇಂದ್ರ ಸರ್ಕಾರವು ವಿಳಂಬ ನೀತಿ ಅನುಸರಿಸುತ್ತಿದೆ ಎಂದು ರಾಜ್ಯ ಆಡಳಿತ ಸುಧಾರಣೆ ಆಯೋಗದ ಅಧ್ಯಕ್ಷ ಆರ್‌.ವಿ. ದೇಶಪಾಂಡೆ ಆರೋಪಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನೀತಿ ರೈತರಿಗೆ ಮಾರಕವಾಗಬಹುದು ಎಂದು ಹೇಳಿದರು.

ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರ ಯಾವಾಗಲೂ ರೈತರ ಜತೆ ಇರಲಿದೆ. ಬರಗಾಲದಿಂದ ಸಂಕಷ್ಟದಲ್ಲಿದ್ದ ರೈತರಿಗೆ ರಾಜ್ಯ ಸರ್ಕಾರದಿಂದ ₹2,500 ಪ್ರಾರಂಭಿಕ ಪರಿಹಾರ ನೀಡಲು ಮುಖ್ಯಮಂತ್ರಿ ಆದೇಶ ಮಾಡಿದ್ದಾರೆ. ರಾಜ್ಯ ಸರ್ಕಾರ ಇದಷ್ಟೇ ಮಾಡಿದರೆ ಸಾಲದು. ಇನ್ನೂ ಅನೇಕ ಕೆಲಸಗಳು ಬಾಕಿ ಇವೆ. ಈ ಸಲ ಮಳೆಯ ಅಭಾವದಿಂದ ಬತ್ತ, ಕಬ್ಬು ಮತ್ತು ಗೋವಿನಜೋಳ ಬೆಳೆಗಳು ಹಾಳಾದ ಕಾರಣ ರೈತರಿಗೆ ಬೆಳೆ ಸಾಲ ಕಟ್ಟಲು ಸಾಧ್ಯವಾಗುತ್ತಿಲ್ಲ. ಬೆಳೆ ಸಾಲ ಕಟ್ಟದಿದ್ದರೆ ಬ್ಯಾಂಕಿನವರು ರೈತರನ್ನು ಡಿಪಾರ್ಟರ್ ಮಾಡದಂತೆ ಕ್ರಮ ಕೈಗೊಳ್ಳಬೇಕಾಗಿದೆ. ಹೊಸ ಬೆಳೆಗೆ ಬೆಳೆ ಸಾಲ ನೀಡುವಂತಾಗಬೇಕು ಎಂದು ಮುಖ್ಯಮಂತ್ರಿ, ಕಂದಾಯ ಸಚಿವರು, ಕಂದಾಯ ಕಾರ್ಯದರ್ಶಿಗೆ ಪತ್ರ ಬರೆದಿದ್ದೇವೆ. ಇನ್ನೊಂದು ಎರಡು ಮೂರು ದಿನದಲ್ಲಿ ಇದಕ್ಕೆ ಸಂಬಂಧಿಸಿದಂತೆ ಆದೇಶ ಮಾಡುವ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.

ಉತ್ತರ ಕನ್ನಡ ಜಿಲ್ಲೆಯ ಕುಮಟಾ, ಕಾರವಾರ, ಹೊನ್ನಾವರ ಮತ್ತು ಸಿದ್ದಾಪುರ ತಾಲೂಕಿನಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಜಿಲ್ಲಾಡಳಿತ ನೋಡಿಕೊಳ್ಳಬೇಕು ಎಂದು ಹೇಳಿದರು.

ಪಶ್ಚಿಮ ಪದವೀಧರ ಚುನಾವಣೆ ಶುಕ್ರವಾರ ನಡೆಯಲಿದ್ದು, ಕಾರ್ಯಕರ್ತರು ಶ್ರಮವಹಿಸಿ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮೋಹನ ಲಿಂಬಿಕಾಯಿ ಅವರನ್ನು ಈ ಬಾರಿ ಮೊದಲ ಪ್ರಾಶಸ್ತ್ಯದ ಮತ ನೀಡುವ ಮೂಲಕ ಆರಿಸಿ ತರಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.


ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ್ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ್, ಕೆಪಿಸಿಸಿ ಸದಸ್ಯ ದೀಪಕ್ ದೊಡ್ಡೂರು, ಶಿರಸಿ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಗಣೇಶ ದಾವಣಗೆರೆ, ರಮೇಶ್ ದುಬಾಸಿ ಉಪಸ್ಥಿತರಿದ್ದರು.