ಪರಿಸರ ಪ್ರವಾಸೋದ್ಯಮ ಕೇವಲ ಮನೋರಂಜನೆಯ ಭಾಗವಾಗಿ ಉಳಿದಿಲ್ಲ. ಇದು ಪ್ರಕೃತಿ ಮತ್ತು ಪರಿಸರ ಸಂರಕ್ಷಣಾ ಜಾಗೃತಿ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಸಂರಕ್ಷಿಸುವ ಹಾಗೂ ಪ್ರೋತ್ಸಾಹಿಸುವ ಅನೇಕ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದಲೇ ಚಾರಣ ಅಥವಾ ಟ್ರಕ್ಕಿಂಗ್ ನಮ್ಮಲ್ಲಿ ಬೃಹತ್ ಚಟುವಟಿಕೆಯಾಗಿ ಬೆಳೆಯುತ್ತಿದೆ
ವಿನೋದ್ ಕುಮಾರ್ ಬಿ.ನಾಯ್ಕ್
ಸೊಕ್ಕಿದ್ದವರು ಯಾಣಕ್ಕೆ ಹೋಗಿ…ರೊಕ್ಕ ಇದ್ದವರು ಗೋಕರ್ಣಕ್ಕೆ ಹೋಗಿ…ಎನ್ನುವ ನಾಣ್ಣುಡಿ ಚಾಲ್ತಿಯಲ್ಲಿದೆ. ಯಾಣ ಎನ್ನುವ ಪರಿಸರದ ಅದ್ಭುತ ಕಲಾಕುಸುರಿ ಸದಾ ಮಾನವನಿಗೆ ಸವಾಲೆಸೆಯುತ್ತಲೇ ಬಂದಿದೆ. ಯಾಣಕ್ಕೆ ಈ ಹಿಂದೆ ಹೋಗಿ ತಲುಪುವುದೇ ಒಂದು ದುಸ್ಸಾಹಸವಾಗಿತ್ತು. ಅಲ್ಲಿಗೆ ಹೋಗಲು ಎಂಟೆದೆ ಧೈರ್ಯ ಬೇಕಿತ್ತು. ಅಲ್ಲಿಗೆ ಹೋಗಲೇ ಆಗುವುದಿಲ್ಲ ಎನ್ನುವ ಪರಿಸ್ಥಿತಿ ಹಿಂದೆ ಇದ್ದಾಗ, ಆತನ ಸೊಕ್ಕು ಮುರಿಯುತ್ತದೆ ಎನ್ನುವ ಮಾತಿತ್ತು. ಈಗ ಯಾಣ ಒಂದು ಪ್ರಸಿದ್ಧ ಪ್ರವಾಸ ತಾಣ.
ವೈವಿಧ್ಯಮಯ ಪರಿಸರ ಮತ್ತು ಶ್ರೀಮಂತ ಜೀವ ಸಂಕುಲಕ್ಕೆ ಬಹಳ ಹೆಸರುವಾಸಿ
ನಮ್ಮ ರಾಜ್ಯ ತನ್ನ ವೈವಿಧ್ಯಮಯ ಪರಿಸರ ಮತ್ತು ಶ್ರೀಮಂತ ಜೀವ ಸಂಕುಲಕ್ಕೆ ಬಹಳ ಹೆಸರುವಾಸಿ. ನಿತ್ಯ ಹರಿದ್ವರ್ಣ ಕಾಡುಗಳಿಂದ ಹಿಡಿದು ಕುರುಚಲು ಅರಣ್ಯಗಳನ್ನು ಹೊಂದಿರುವ ಕರ್ನಾಟಕ ಅಸಂಖ್ಯಾತ ಸಸ್ಯ ಮತ್ತು ಪ್ರಾಣಿ ಪ್ರಭೇದಗಳ ನೆಲೆ. ರುದ್ರ ರಮಣೀಯ ಪರ್ವತ ಸಾಲುಗಳು ಮತ್ತು ಭೋರ್ಗರೆಯುವ ಜಲಪಾತಗಳನ್ನು ಹೊಂದಿರುವ ನಮ್ಮ ರಾಜ್ಯ ಪರಿಸರ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಹಳ ದೊಡ್ಡ ತಾಣ ಎಂದು ಹೆಗ್ಗುರುತು ಸ್ಥಾಪಿಸಿದೆ.
ಕರ್ನಾಟಕದಲ್ಲಿ ಪರಿಸರ ಪ್ರವಾಸೋದ್ಯಮ ಕೇವಲ ಮನೋರಂಜನೆಯ ಭಾಗವಾಗಿ ಉಳಿದಿಲ್ಲ. ಇದು ಪ್ರಕೃತಿ ಮತ್ತು ಪರಿಸರ ಸಂರಕ್ಷಣಾ ಜಾಗೃತಿ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಸಂರಕ್ಷಿಸುವ ಹಾಗೂ ಪ್ರೋತ್ಸಾಹಿಸುವ ಅನೇಕ ಅಂಶಗಳನ್ನು ಒಳಗೊಂಡಿದೆ. ಆದ್ದರಿಂದಲೇ ಚಾರಣ ಅಥವಾ ಟ್ರಕ್ಕಿಂಗ್ ನಮ್ಮಲ್ಲಿ ಬೃಹತ್ ಚಟುವಟಿಕೆಯಾಗಿ ಬೆಳೆಯುತ್ತಿದೆ.
ನಿಸರ್ಗದ ರೋಚಕ ಮತ್ತು ನಿಗೂಢತೆಯ ನಡುವೆ ಆಹ್ಲಾದಕರ ಮತ್ತು ಉಲ್ಲಾಸದಾಯಕ ಚಾರಣಗಳನ್ನು ಕೈಗೊಳ್ಳಲು ಮತ್ತು ನೈಸರ್ಗಿಕ ಸೌಂದರ್ಯದ ಜೊತೆಗೆ ಜೈವಿಕ ವೈವಿಧ್ಯತೆಯನ್ನು ಅನ್ವೇಷಿಸಲು ಚಾರಣಗಳು ವಿಪರೀತ ಅವಕಾಶಗಳನ್ನು ನೀಡುತ್ತವೆ. ಅಂತಹ ವಿಶಿಷ್ಟ ಮತ್ತು ವಿಭಿನ್ನ ಅವಕಾಶಗಳ ಬಾಗಿಲನ್ನು ಅರಣ್ಯ ಇಲಾಖೆ ರಾಜ್ಯದ ಚಾರಣಪ್ರಿಯರಿಗೆ ತೆರೆದಿಟ್ಟಿದೆ.
ರಾಜ್ಯದಲ್ಲಿ ಅರಣ್ಯ ಇಲಾಖೆ ಒಟ್ಟು 41 ಪಥಗಳಲ್ಲಿ ಚಾರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಈ ಚಾರಣ ಪಥಗಳನ್ನು ಋತುಮಾನಕ್ಕೆ ಅನುಗುಣವಾಗಿ ಜನರಿಗೆ ಟ್ರಕ್ಕಿಂಗ್ ಮಾಡಲು ಅನುಮತಿ ನೀಡಲಾಗುತ್ತದೆ. ಕೊಡಗು, ಚಿಕ್ಕಮಗಳೂರು, ಕಲಬುರಗಿ, ತುಮಕೂರು, ಚಾಮರಾಜನಗರ ಮತ್ತು ಉತ್ತರ ಕನ್ನಡ ಹೀಗೆ ಅನೇಕ ಜಿಲ್ಲೆಗಳಲ್ಲಿ ಚಾರಣ ಪಥಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಸಾಮಾನ್ಯ, ಮಧ್ಯಮ ಮತ್ತು ಕಠಿಣ ಚಾರಣ ಪಥಗಳು ಎಂದು ವಿಂಗಡಣೆ ಮಾಡಲಾಗಿದೆ. ಈ ಪಥಗಳು ಅದೆಷ್ಟು ಜನಪ್ರಿಯವಾಗಿವೆ ಎಂದರೆ, ಕೆಲ ಪಥಗಳಿಗೆ ಯಾವಾಗ ಮುಂಗಡ ಬುಕಿಂಗ್ ಮಾಡಲು ಹೋದಾಗಲೂ ಅದು “ಫುಲ್” ಅಗಿರುತ್ತದೆ.
ಕುಮಾರ ಪರ್ವತ, ಕುದುರೆ ಮುಖ, ತಡಿಯಾಂಡಮೋಳ್, ಸಾವನದುರ್ಗ, ಸ್ಕಂದಗಿರಿ, ಗಂಗಡಿಕಲ್ಲು, ಎತ್ತಿನ ಭುಜ ಹೀಗೆ ಅನೇಕ ಜನಪ್ರಿಯ ಚಾರಣ ಪಥಗಳು ನಮ್ಮಲ್ಲಿವೆ. ಇತ್ತೀಚಿನ ದಿನಗಳಲ್ಲಿ ಅರಣ್ಯ ಇಲಾಖೆ ನಡೆಸುವ ಈ ಚಾರಣಗಳು ಅದೆಷ್ಟು ಜನಪ್ರಿಯವಾಗಿವೆ ಎಂದರೆ, ಬಿಸಿಲೆ ಘಾಟ್ ಬಳಿ ಒಂದೇ ದಿನ ಸಾವಿರಾರು ಮಂದಿ ಚಾರಣಕ್ಕೆಂದು ಬಂದು ಬಿಟ್ಟಿದ್ದರು. ಇದಾದ ನಂತರ ಇಲಾಖೆ ಎಲ್ಲವನ್ನೂ ಆನ್ಲೈನ್ ಮಾಡಿ ದಿನಕ್ಕೆ ಇಂತಿಷ್ಟೇ ಜನರನ್ನು ಟ್ರಕ್ಕಿಂಗ್ಗೆ ಅವಕಾಶ ಮಾಡಿಕೊಡುತ್ತಿದೆ. ಟ್ರಕ್ಕಿಂಗ್ಗೆ ಅವಕಾಶ ಮಾಡಿಕೊಡುವ ಮುನ್ನ ಅರಣ್ಯ ಇಲಾಖೆ ಅತ್ಯಂತ ಬಿಗಿ ನಿಯಮಗಳನ್ನು ವಿಧಿಸಿದೆ.
ಯಾರೂ ಪ್ಲಾಸ್ಟಿಕ್ ವಸ್ತುಗಳನ್ನು ಚಾರಣ ಪಥಗಳಲ್ಲಿ ಕೊಂಡೊಯ್ಯುವಂತಿಲ್ಲ
ಯಾರೂ ಪ್ಲಾಸ್ಟಿಕ್ ವಸ್ತುಗಳನ್ನು ಚಾರಣ ಪಥಗಳಲ್ಲಿ ಕೊಂಡೊಯ್ಯುವಂತಿಲ್ಲ. ಅರಣ್ಯ ಇಲಾಖೆಯ ಗಾರ್ಡ್ ಪ್ರತಿ ತಂಡದ ಜೊತೆಗೆ ಇರಲೇಬೇಕು. ಚಾರಣಪಥ ಬಿಟ್ಟು ಆ ಕಡೆ ಈ ಕಡೆ ಹೋಗುವಂತಿಲ್ಲ. ನಿರ್ದಿಷ್ಟ ಸ್ಥಳದಲ್ಲೇ ವಿಶ್ರಾಂತಿ ಪಡೆಯಬೇಕು ಹೀಗೆ ಕೆಲ ಷರತ್ತುಗಳನ್ನು ವಿಧಿಸಿ ಅನುಮತಿ ನೀಡುತ್ತಿದೆ. ಇದರಿಂದಾಗಿ ಯಾವುದೇ ಸಮಸ್ಯೆಗಳಿಲ್ಲದೇ ಈ ಚಟುವಟಿಕೆ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚೆಚ್ಚು ಜನಪ್ರಿಯವಾಗುತ್ತಿವೆ. ಜೊತೆಗಿರುವ ಅರಣ್ಯ ಇಲಾಖೆಯ ಗೈಡ್ ಚಾರಣಿಗರನ್ನು ಸುರಕ್ಷಿತವಾಗಿ ಕರೆತರುವ ಜೊತೆಗೆ ಆ ಪ್ರದೇಶ ಗಿಡಮರ, ಹಕ್ಕಿ, ಪಕ್ಷಿ, ಅರಣ್ಯ ವೈವಿಧ್ಯತೆ, ಕೀಟ, ಸರೀಸೃಪ, ವನ್ಯಜೀವಿಗಳ ಬಗ್ಗೆ ಸಮಗ್ರವಾಗಿ ಮಾಹಿತಿಯನ್ನೂ ನೀಡುತ್ತಾ ಹೋಗುತ್ತಾರೆ.
ಕಳೆದ ವರ್ಷ ರಾಜ್ಯದ ಚಾರಣ ಪಥಗಳಲ್ಲಿ ಚಾರಣ ಮಾಡಿದವರ ಸಂಖ್ಯೆ 6 ಲಕ್ಷದ 14 ಸಾವಿರ. ಒಂದು ವರ್ಷದಲ್ಲಿ ಸದ್ಯದ ಅಂದಾಜಿನ ಪ್ರಕಾರ ಸರಾಸರಿ 5 ಲಕ್ಷ ಮಂದಿ ಚಾರಣಕ್ಕೆ ಹೋಗುತ್ತಿದ್ದಾರೆ ಎಂದರೆ, ಇಲಾಖೆಗೆ ಇದು ಒಂದು ಹೊಸ ಆದಾಯದ ಮೂಲವೂ ಆಯಿತು. ಜೊತೆಗೆ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಒಂದು ಚಟುವಟಿಕೆಯನ್ನೂ ನೀಡಿದಂತಾಯಿತು. ಈ ಪೈಕಿ ಅಂತರಗಂಗೆ ಪಥಕ್ಕೆ 16 ಸಾವಿರ ಮಂದಿ, ಬಲ್ಲಾಳರಾಯನದುರ್ಗ ಕೋಟೆಗೆ 14 ಸಾವಿರ, ಬಂಡಾಜೆ ಜಲಪಾತಕ್ಕೆ 53 ಸಾವಿರ, ಕುಮಾರ ಪರ್ವತಕ್ಕೆ 11 ಸಾವಿರ, ಎತ್ತಿನ ಭುಜಕ್ಕೆ 35 ಸಾವಿರ, ಗಂಗಡಿಕಲ್ಲಿಗೆ 27 ಸಾವಿರ, ಸಾವನದುರ್ಗ-ಸ್ಕಂದಗಿರಿಗೆ 50 ಸಾವಿರಕ್ಕೂ ಹೆಚ್ಚು ಚಾರಣಿಗರು ಭೇಟಿ ನೀಡಿ ಪ್ರಕೃತಿಯ ಸೊಬಗನ್ನು ಸವಿದಿದ್ದಾರೆ.
ಅರಣ್ಯ ಇಲಾಖೆ ರಾಜ್ಯದ ನಾನಾ ಭಾಗಗಳಲ್ಲಿ ಚಾರಣಕ್ಕೆ ಅವಕಾಶ ಕಲ್ಪಿಸಿದಾಗ ಅನೇಕ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಈ ಚಾರಣ ಚಟುವಟಿಕೆ ಯೋಜನಾಬದ್ಧವಾಗಿ ಹಾಗೂ ನಿಯಂತ್ರಿತವಾಗಿ ಮಾಡಲು ಶುರು ಮಾಡಿದ ಮೇಲೆ ಹಾಗೂ ಇದು ಜನರಲ್ಲಿ ಪರಿಸರ, ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿಯೂ ನೆರವಾಗುತ್ತದೆ ಎನ್ನುವುದು ಖಾತ್ರಿಯಾದ ಮೇಲೆ ವಿರೋಧವೂ ಕಡಿಮೆಯಾಯಿತು. ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮಲ್ಲಿ ಅತ್ಯಂತ ಯೋಜನಾಬದ್ಧವಾಗಿ ಮಾರ್ಗಸೂಚಿಗಳ ಪಾಲನೆ ಮೂಲಕ ಚಾರಣ ಚಟುವಟಿಕೆಯನ್ನು ಅರಣ್ಯ ಇಲಾಖೆ ನಡೆಸಿಕೊಂಡು ಬರುತ್ತಿದೆ.
ಒಟ್ಟಾರೆ, ಕರ್ನಾಟಕದ ಅರಣ್ಯ ಮತ್ತು ಪರ್ವತ ಪ್ರದೇಶಗಳು ಹಾಗೂ ಜಲಪಾತಗಳು ಪರಿಸರ ಪ್ರವಾಸೋದ್ಯಮದ ಜೊತೆಗೆ ಸಾಹಸಕ್ಕೂ ಕೈ ಬೀಸಿ ಕರೆಯುತ್ತವೆ. ಅರಣ್ಯ ಇಲಾಖೆ ಈ ರೀತಿಯ ನಾನಾ ವೈವಿಧ್ಯಮಯ ಚಟುವಟಿಕೆಗಳ ಮೂಲಕ ತನ್ನ ಸಂರಕ್ಷಣಾ ಚಟುವಟಿಕೆಗಳಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುತ್ತಿದೆ. ಜೊತೆಗೆ ಅವರಲ್ಲಿ ಪರಿಸರ ಪ್ರೇಮವನ್ನೂ ಹೆಚ್ಚಿಸಲು ತನ್ನ ಸಂಪನ್ಮೂಲಗಳನ್ನು ವಿವೇಚನಾಯುಕ್ತವಾಗಿ ಬಳಸಿಕೊಳ್ಳುತ್ತಿದೆ.

