ಈ ಬಾರಿ ಮುಂಗಾರು ತೀವ್ರ ಪ್ರಮಾಣದಲ್ಲಿ ಕೈ ಕೊಟ್ಟಿದೆ. ಎಲ್ಲೆಲ್ಲಿ ಮಳೆ ಬರಬೇಕಿತ್ತೋ ಅಲ್ಲಿ ಮಳೆ ಬರುತ್ತಿಲ್ಲ. ಎಷ್ಟು ಬರಬೇಕಿತ್ತೋ ಅಷ್ಟು ಮಳೆಯೂ ಬರುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮಳೆಯ ವಿತರಣೆ ವಿಪರೀತ ಎನ್ನುವಷ್ಟು ಬದಲಾಗಿದೆ.

ಈ ಬಾರಿ ಮುಂಗಾರು ತೀವ್ರ ಪ್ರಮಾಣದಲ್ಲಿ ಕೈ ಕೊಟ್ಟಿದೆ. ಎಲ್ಲೆಲ್ಲಿ ಮಳೆ ಬರಬೇಕಿತ್ತೋ ಅಲ್ಲಿ ಮಳೆ ಬರುತ್ತಿಲ್ಲ. ಎಷ್ಟು ಬರಬೇಕಿತ್ತೋ ಅಷ್ಟು ಮಳೆಯೂ ಬರುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮಳೆಯ ವಿತರಣೆ ವಿಪರೀತ ಎನ್ನುವಷ್ಟು ಬದಲಾಗಿದೆ. ಮಳೆಗಾಲದಲ್ಲಿ ವಿಪರೀತ ಸೆಕೆ. ಚಳಿಗಾಲ ಹೇಗಿರಲಿದೆಯೋ ಗೊತ್ತಿಲ್ಲ. ಬೇಸಿಗೆ ಮಾತ್ರ ಖಂಡಿತವಾಗಿಯೂ ಬೆಂಕಿ ಕೆಂಡದಂತಿರುತ್ತದೆ ಎನ್ನಲಾಗಿದೆ.

ಹವಾಮಾನ ಬದಲಾವಣೆ ಅದೆಷ್ಟು ಭೀಕರವಾಗಿದೆ ಎಂದರೆ ಜನರು, ಜನಜೀವನ, ಕೃಷಿ, ಜಾನುವಾರುಗಳ ಮೇಲೆ ತೀವ್ರ ಪರಿಣಾಮ ಉಂಟು ಮಾಡುತ್ತಿದೆ. ಆದರೆ, ಅತ್ಯಂತ ಸೂಕ್ಷ್ಮವಾದ ಪರಿಸರ, ಜೀವವೈವಿಧ್ಯದ ಮೇಲೆ ಇದರ ಪರಿಣಾಮಗಳು ಏನು ಎನ್ನುವುದು ಇನ್ನಷ್ಟೇ ನಿಖರವಾಗಿ ತಿಳಿಯಬೇಕಿದೆ. ಗಿಡಮರಗಳ ಮೇಲೆ, ಅವುಗಳು ಬಿಡುವ ಹಣ್ಣು, ಕಾಯಿ, ಹೂವುಗಳ ಮೇಲೆ, ಆ ಹೂವುಗಳ ಮೇಲೆ ಅವಲಂಬಿತವಾಗಿರುವ ಕೀಟಗಳ ಮೇಲೆ ಸಾಕಷ್ಟು ಗಂಭೀರ ಪರಿಣಾಮ ಉಂಟು ಮಾಡುತ್ತಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಇವೆಲ್ಲವೂ ಮನುಷ್ಯನ ಅನುಭವಕ್ಕೆ ಬರುವಷ್ಟರಲ್ಲಿ ಬಹಳ ವಿಳಂಬವಾಗುವ ಅಪಾಯಗಳಿವೆ.

ಆದ್ದರಿಂದಲೇ ವಿಶ್ವಸಂಸ್ಥೆಯ ಉಸ್ತುವಾರಿಯಲ್ಲಿ ಹವಾಮಾನ ಬದಲಾವಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಗತ್ತಿನ ಎಲ್ಲ ದೇಶಗಳೂ ಸಮಾನವಾಗಿ ತಮ್ಮ ಪಾಲಿನ ಕೊಡುಗೆಗಳನ್ನು ನೀಡಬೇಕೆಂದು ಸೂಚಿಸಲಾಗಿದೆ. ಭಾರತ ಸೇರಿದಂತೆ ಬಹುತೇಕ ಎಲ್ಲ ದೇಶಗಳೂ ಸಹ ಹವಾಮಾನ ಒಪ್ಪಂದಕ್ಕೆ ಸಹಿ ಹಾಕಿವೆ. ಅದರ ಪರಿಣಾಮವಾಗಿ ಈಗ ಹವಾಮಾನ ವೈಪರೀತ್ಯದ ಸವಾಲುಗಳನ್ನು ನಿಯಂತ್ರಿಸಲು ಅನೇಕ ಹೊಸ ಹೊಸ ಮಾರ್ಗಸೂಚಿಗಳ ಜೊತೆಗೆ ಕೆಲಸಗಳೂ ಶುರುವಾಗಿವೆ. ರಾಜ್ಯದಲ್ಲಿಯೂ ಅರಣ್ಯ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳು ತಮ್ಮ ಕಾರ್ಯಾಚರಣೆ ಶುರು ಮಾಡಿವೆ.

ಅರಣ್ಯ ಇಲಾಖೆ ಸಕಲ ಸಜ್ಜು

ಕರ್ನಾಟಕದಲ್ಲಿ ಇಂಧನ, ಸಾರಿಗೆ, ಕೈಗಾರಿಕೆ, ಕಟ್ಟಡಗಳು, ಕೃಷಿ-ಹೈನುಗಾರಿಕೆ ಮತ್ತು ಅರಣ್ಯ ಹೀಗೆ ಆರು ಅತ್ಯಂತ ಪ್ರಮುಖ ಕ್ಷೇತ್ರಗಳನ್ನು ಗುರುತಿಸಲಾಗಿದೆ. ಈ ಕ್ಷೇತ್ರಗಳಲ್ಲಿ ತರುವ ಎಲ್ಲಾ ರೀತಿಯ ಸುಧಾರಣಾ ಕ್ರಮಗಳು ನಮ್ಮ ರಾಜ್ಯದ ಹವಾಮಾನ ಏರುಪೇರುಗಳನ್ನು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ತರಬಹುದು ಎನ್ನುವ ವಿಶ್ವಾಸ ವಿಜ್ಞಾನಿಗಳು ಮತ್ತು ಸರ್ಕಾರಕ್ಕೆ ಇದೆ. ಈ ಪೈಕಿ ಅರಣ್ಯ ಇಲಾಖೆ ಸಹ ಕ್ಲೈಮೇಟ್‌ ಚೇಂಜ್‌ ಸವಾಲುಗಳನ್ನು ಎದುರಿಸಲು ತನ್ನದೇ ಆದ ರೀತಿಯಲ್ಲಿ ಸಜ್ಜಾಗಿದೆ.

ಹವಾಮಾನ ವೈಪರೀತ್ಯ ನಿರೋಧಕ ಹಸಿರೀಕರಣ

ಈ ಯೋಜನೆಯಡಿ, ಅರಣ್ಯ ಇಲಾಖೆ ಆದಷ್ಟು ನೈಸರ್ಗಿಕ ಪುನರುತ್ಥಾನಕ್ಕೆ ಆದ್ಯತೆ ನೀಡಲಾರಂಭಿಸಿದೆ. ಹಸಿರೀಕರಣ ಯೋಜನೆಗಳಲ್ಲಿ ಸ್ಥಳೀಯ ಜಾತಿಯ ಸಸಿಗಳನ್ನು ಬೆಳೆಸುವುದರ ಜೊತೆಗೆ ಮಿಶ್ರತಳಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತಿದೆ. ಇದರಿಂದಾಗಿ ತಳಿ ವೈವಿಧ್ಯತೆ ಹೆಚ್ಚಾಗಲಿದೆ. ಯಾವ ಜಿಲ್ಲೆಗಳಲ್ಲಿ ಉಷ್ಣಾಂಶ ಹೆಚ್ಚಾಗಿರುತ್ತದೆಯೋ ಅಂತಹ ಜಿಲ್ಲೆಗಳ ಕೆಲ ಸಸ್ಯ ತಳಿಗಳನ್ನು ಗುರುತಿಸಿ, ಅವುಗಳನ್ನು ಪೋಷಣೆ ಮಾಡಿ ಉಷ್ಣಾಂಶ ಮುಂದಿನ ದಿನಗಳಲ್ಲಿ ಹೆಚ್ಚಾಗಬಹುದಾದ ಜಿಲ್ಲೆಗಳಲ್ಲಿ ನೆಡಲಾಗುತ್ತಿದೆ. ಪ್ರಾಣಿಗಳ ವಲಸೆಯಲ್ಲಿ ಏರುಪೇರು ಆಗದಂತೆ ಹಾಗೂ ವಲಸೆ ಕಾರಿಡಾರ್‌ಗಳ ಉತ್ತಮ ನಿರ್ವಹಣೆಗಾಗಿ ಮಾನವ ನೆರವಿನ ವಲಸೆ ಪ್ರಕ್ರಿಯೆ ನಡೆಸಲು ಚಿಂತನೆ ನಡೆದಿದೆ. ಮುಂದಿನ ದಿನಗಳಲ್ಲಿ ಆಗಬಹುದಾದ ಹವಾಮಾನ ವೈಪರೀತ್ಯವನ್ನು ಮನಗಂಡು ಕೆಲ ಜೀವಿಗಳನ್ನು ಪೂರಕ ವಾತಾವರಣ ಸೃಷ್ಟಿ ಮಾಡಿ ಅಲ್ಲಿಗೆ ಸ್ಥಳಾಂತರ ಮಾಡುವ ಯೋಚನೆ ಹೊಂದಲಾಗಿದೆ.

ಅರಣ್ಯ ಕೃಷಿ ಮಾಡಲು ಪ್ರೋತ್ಸಾಹ

ಗ್ರಾಮೀಣ ಪರಿಸರದಲ್ಲಿ ಮತ್ತು ರೈತರಲ್ಲಿ ಪ್ರತಿರೋಧ ಸಾಮರ್ಥ್ಯ ಹೆಚ್ಚಿಸಲು ಅರಣ್ಯ ಕೃಷಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ವೈವಿಧ್ಯಮಯ ಆರ್ಥಿಕ ಸಂಪನ್ಮೂಲಗಳನ್ನು ಸೃಷ್ಟಿಸುವ ಸಲುವಾಗಿ ರೈತರಿಗೆ ಆದಾಯ ತರುವ ಹಾಗೂ ಕೃಷಿ ಭೂಮಿಗಳಲ್ಲಿ ಜೀವವೈವಿಧ್ಯತೆ ಕಾಯ್ದುಕೊಳ್ಳಲು ಈ ಕ್ರಮ ಕೈಗೊಳ್ಳಲಾಗುತ್ತದೆ. ಮರಮುಟ್ಟುಗಳು ಹಾಗೂ ಉರುವಲಿಗೆ ಅರಣ್ಯದ ಮೇಲೆ ಅವಲಂಬನೆ ಕಡಿಮೆ ಮಾಡಲು ಅಡುಗೆ ಅನಿಲ ವಿತರಣೆಯ ವೇಗವನ್ನು ಇಲಾಖೆ ತೀವ್ರಗೊಳಿಸಿದೆ. ಕಾಡಂಚಿನ ಗ್ರಾಮಗಳಲ್ಲಿ ಅಡುಗೆ ಅನಿಲ ವಿತರಣೆ ವ್ಯವಸ್ಥೆಯನ್ನು ಅತಿ ಹೆಚ್ಚು ಪ್ರಮಾಣದಲ್ಲಿ ವಿಸ್ತರಿಸಲಾಗಿದೆ.

ಛಿದ್ರಗೊಂಡಿರುವ ಅರಣ್ಯ ಪ್ರದೇಶಗಳ ಸಂಪರ್ಕ

ಹವಾಮಾನ ವೈಪರೀತ್ಯದ ಈ ದಿನಗಳಲ್ಲಿ ವನ್ಯಜೀವಿಗಳ ವಲಸೆಗೆ ಅನುಕೂಲವಾಗುವಂತೆ ಹಾಗೂ ಜೀವವೈವಿಧ್ಯತೆಯ ಪೋಷಣೆಗೂ ಅನುಕೂಲವಾಗುವಂತೆ ಈಗಾಗಲೇ ಛಿದ್ರಗೊಂಡಿರುವ ಅರಣ್ಯ ಮತ್ತು ಸಂರಕ್ಷಿತ ಪ್ರದೇಶಗಳನ್ನು ಒಂದಕ್ಕೊಂದು ಬೆಸೆಯುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯದಲ್ಲಿ ಸಾಕಷ್ಟು ಕೆಲಸ ಆಗಿದೆ. ಬನ್ನೇರುಘಟ್ಟದಿಂದ ಬೆಳಗಾವಿಯ ಭೀಮಗಢದವರೆಗೆ ಅರಣ್ಯ ಸಂಪರ್ಕ ಸಾಧಿಸಲಾಗಿದೆ.

ಹವಾಮಾನ ವೈಪರೀತ್ಯ ನಿರೋಧಕ ಸಸ್ಯ ಸಂಪತ್ತು

ಸಮರ್ಪಕ ಉಷ್ಣಾಂಶ, ಕೀಟಬಾಧೆ ಮತ್ತು ಬೆಂಕಿ ನಿರೋಧಕ ಸಸ್ಯ ಸಂಪತ್ತನ್ನು ಗುರುತಿಸಿ, ಅಭಿವೃದ್ಧಿಪಡಿಸುವ ಅಗತ್ಯವಿದೆ. ಇವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನರ್ಸರಿಯಲ್ಲಿ ಬೆಳೆಸಿ, ಎಲ್ಲಾ ಕಡೆ ವಿಶೇಷವಾಗಿ ಬಯಲು ಸೀಮೆ ಪ್ರದೇಶಗಳಲ್ಲಿ ತುರ್ತಾಗಿ ಹಸಿರೀಕರಣ ಮಾಡುವ ಅಗತ್ಯವಿದೆ. ಅರಣ್ಯ ಇಲಾಖೆ ಹಸಿರೀಕರಣ ಯೋಜನೆ ಇದೇ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಉತ್ತರ ಕರ್ನಾಟಕದ ಅನೇಕ ಕಡೆ ಹಸಿರೀಕರಣ ಭರದಿಂದ ಸಾಗಿದೆ. ವಿಜಯಪುರ ಜಿಲ್ಲೆ ಅದಕ್ಕೊಂದು ತಾಜಾ ಉದಾಹರಣೆ. ಇವೆಲ್ಲದರ ನಡುವೆ ಕೃಷಿ ಅರಣ್ಯ ಯೋಜನೆ ಕುಂಟುತ್ತಾ ಸಾಗಿದೆ. ಇದಕ್ಕೆ ರೈತರಲ್ಲಿ ಇಲಾಖೆ ಸರಿಯಾದ ಪ್ರಮಾಣದಲ್ಲಿ ಜಾಗೃತಿ ಮೂಡಿಸದಿರುವುದೇ ಕಾರಣ.

ಅರಣ್ಯ ಇಲಾಖೆಯಿಂದ ಹಲವು ಯೋಜನೆ

ಇವುಗಳ ಜೊತೆಗೆ ಅರಣ್ಯ ಒತ್ತುವರಿ ತೆರವುಗೊಳಿಸುವುದು, ಕಾಡಿಗೆ ಬೆಂಕಿ ಬೀಳುವುದನ್ನು ತಪ್ಪಿಸುವುದು ಹಾಗೂ ಕಾಂಡ್ಲಾ (ಮ್ಯಾಂಗ್ರೂವ್‌ ಕಾಡು)ಗಳ ನೆಡುತೋಪುಗಳನ್ನು ಹೆಚ್ಚಿಸುವ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಈಗಾಗಲೇ 43341 ಚದರ ಕಿಲೋ ಮೀಟರ್‌ ಹಸಿರೀಕರಣವಿದ್ದು, ಅದನ್ನು ಇನ್ನೈದು ವರ್ಷಗಳಲ್ಲಿ 48341 ಚ.ಕಿ.ಮೀ.ಗೆ ಹೆಚ್ಚಿಸಲು ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ಅರಣ್ಯ ಇಲಾಖೆಯು ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳ ನೆರವನ್ನೂ ಪಡೆಯಲಿದೆ. ೧೦೦೦ ಗ್ರಾಮ ಅರಣ್ಯ ಸಮಿತಿಗಳು ಕೆಲಸ ಮಾಡುತ್ತಿದ್ದು, ಅವುಗಳ ಸಂಖ್ಯೆಯನ್ನು ೧೫೦೦ಕ್ಕೆ ಹೆಚ್ಚಿಸಲಾಗುತ್ತದೆ. ಕಾಡಂಚಿನ ಗ್ರಾಮಗಳ ೧,೧೮,೦೦೦ ಕುಟುಂಬಗಳಿಗೆ ಎಲ್‌ಪಿಜಿ ವಿತರಣೆ ಮಾಡಿ ಕಾಡಿನ ಮೇಲೆ ಉರುವಲಿಗಾಗಿ ಅವಲಂಬನೆಯಾಗುವುದನ್ನು ತಗ್ಗಿಸಲಾಗಿದೆ. ಇದನ್ನು ಇನ್ನೈದು ವರ್ಷದಲ್ಲಿ ೨,೬೮,೦೦೦ ಕುಟುಂಬಗಳಿಗೆ ವಿಸ್ತರಿಸಲಾಗುವುದು.

ರಾಜ್ಯದಲ್ಲಿ ಹಳೆ ಮೈಸೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳು ಹಾಗೂ ಪಶ್ಚಿಮ ಘಟ್ಟದ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳು ಹವಾಮಾನ ವೈಪರೀತ್ಯದ ಸವಾಲುಗಳಿಗೆ ಭಾರಿ ಪ್ರಮಾಣದಲ್ಲಿ ನಲುಗುವ ಸಾಧ್ಯತೆಗಳಿವೆ. ಈ ಜಿಲ್ಲೆಗಳಲ್ಲಿ ಗ್ರಾಮ ಅರಣ್ಯ ಸಮಿತಿಗಳ ರಚನೆ ಹಾಗೂ ಸ್ಥಳೀಯ ಮತ್ತು ಮಿಶ್ರತಳಿಯ ನೆಡುತೋಪುಗಳನ್ನು ಹೆಚ್ಚಳ ಮಾಡಬೇಕು. ರಾಜ್ಯದ ಅರಣ್ಯಗಳ ಗುಣಮಟ್ಟ ಸುಧಾರಿಸಬೇಕಿದೆ. ಈ ಅರಣ್ಯಗಳೇ ವಾತಾವರಣದಲ್ಲಿ ಇಂಗಾಲವನ್ನು ಹೀರುವ ಸಾಮರ್ಥ್ಯವನ್ನು ಕ್ರಮೇಣ ಹೆಚ್ಚಳ ಮಾಡಿಕೊಳ್ಳುತ್ತವೆ. ಅಷ್ಟೇ ಅಲ್ಲ, ಇದು ಮಣ್ಣಿನಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಳ್ಳುತ್ತವೆ. ಜೊತೆಗೆ ಅರಣ್ಯ ಮತ್ತು ಅರಣ್ಯ ಉತ್ಪನ್ನಗಳ ಮೇಲೆ ಅವಲಂಬಿತರು ಅಂದರೆ, ಆದಿವಾಸಿಗಳು ಮತ್ತು ಕಾಡಂಚಿನ ಜನರಿಗೆ ಆರ್ಥಿಕ ಸಂಪನ್ಮೂಲ ಹೆಚ್ಚಿಸುವ ಸುಸ್ಥಿರ ಮಾದರಿಗಳನ್ನು ನೀಡಬೇಕು. ಇಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಪಾಳು ಭೂಮಿ ಲಭ್ಯವಿದೆ. ಅಷ್ಟೇ ಅಲ್ಲ, ಅರಣ್ಯ ಭೂಮಿಯಲ್ಲಿಯೂ ಸಾಕಷ್ಟು ಹಸಿರೀಕರಣಕ್ಕೆ ಅವಕಾಶಗಳಿವೆ. ಇಲ್ಲೆಲ್ಲಾ ಅರಣ್ಯ ಇಲಾಖೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಿ ಕೆಲಸ ಮಾಡಿದಲ್ಲಿ, ಅಂತರ್ಜಲದ ಮಟ್ಟ ಹೆಚ್ಚಳದ ಜೊತೆಗೆ, ಭೂಮಿಯ ಶಾಖ ಹೆಚ್ಚಾಗದಂತೆ ಸ್ವಲ್ಪಮಟ್ಟಿಗೆ ತಡೆಯಬಹುದು. ಹವಾಮಾನ ವೈಪರೀತ್ಯದ ಅನೇಕ ಸವಾಲುಗಳನ್ನು ಎದುರಿಸಬಹುದಾಗಿದೆ.