ಕೃಷಿ ಜೀವಾಳವಾದ ಮಣ್ಣು ಮುಂದಿನ ಪೀಳಿಗೆಗೂ ಅಗತ್ಯವಿದೆ. ಮಣ್ಣಿನ ಸಂರಕ್ಷಣೆ ಕೃಷಿ ಉಳಿವಿಗೆ ಅತ್ಯಗತ್ಯವಾಗಿದೆ. ಮಣ್ಣಿನ ಆರೋಗ್ಯ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗುತ್ತಿರುವ ತೊಂದರೆಗಳು, ಸಮಗ್ರ ಹಾಗೂ ಸಾವಯವ ಕೃಷಿ ಸಾವಯವ ಇಂಗಾಲದ ಎಲ್ಲಾ ವಿಷಯಗಳನ್ನು ರೈತರು ಅರಿಯಬೇಕು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಹವಾಮಾನ ಬದಲಾವಣೆ ಪರಿಣಾಮಗಳನ್ನು ತಡೆಗಟ್ಟುವಲ್ಲಿ ಮಣ್ಣಿನ ಸಂರಕ್ಷಣೆ ಬಹುಮುಖ್ಯವಾಗಿದೆ. ರೈತರು ಮೊದಲು ಮಣ್ಣಿನ ಸಂರಕ್ಷಣೆ ಆದ್ಯತೆ ನೀಡುವಂತೆ ಮಂಡ್ಯ ಕೃಷಿ ವಿವಿ ಸಹಾಯಕ ಪ್ರಾಧ್ಯಾಪಕಿ ಆತಿಫಾ ಮುನಾವರ್ ಹೇಳಿದರು.ತಾಲೂಕಿನ ಕಾಪನಹಳ್ಳಿ ಗವಿಮಠದಲ್ಲಿ ಆಸರೆ ಸಂಸ್ಥೆ ಹಾಗೂ ಗ್ರಾಮ ವಿಕಾಸ ಸಂಸ್ಥೆಯ ಮಾರ್ಗದರ್ಶನದಲ್ಲಿ ಕಲ್ಪವೃಕ್ಷ ಹವಾಮಾನ ಕ್ರಿಯಾ ಸಮಿತಿಗಳ ಒಕ್ಕೂಟದಿಂದ ಆಯೋಜಿಸಿದ್ದ ಹವಾಮಾನ ಕ್ರಿಯೆಯಲ್ಲಿ ಮಣ್ಣು ಸಂರಕ್ಷಣೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.
ಕೃಷಿ ಜೀವಾಳವಾದ ಮಣ್ಣು ಮುಂದಿನ ಪೀಳಿಗೆಗೂ ಅಗತ್ಯವಿದೆ. ಮಣ್ಣಿನ ಸಂರಕ್ಷಣೆ ಕೃಷಿ ಉಳಿವಿಗೆ ಅತ್ಯಗತ್ಯವಾಗಿದೆ. ಮಣ್ಣಿನ ಆರೋಗ್ಯ, ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗುತ್ತಿರುವ ತೊಂದರೆಗಳು, ಸಮಗ್ರ ಹಾಗೂ ಸಾವಯವ ಕೃಷಿ ಸಾವಯವ ಇಂಗಾಲದ ಎಲ್ಲಾ ವಿಷಯಗಳನ್ನು ರೈತರು ಅರಿಯಬೇಕು ಎಂದರು.ನಮ್ಮ ಪೂರ್ವಿಕರು ಮಣ್ಣನ್ನು ದೇವರೆಂದು ಪೂಜಿಸುತ್ತಿದ್ದರು. ಮನೆ ಗೊಬ್ಬರವನ್ನು ಮಾತ್ರ ಬಳಕೆ ಮಾಡಿ ಬೆಳೆಗಳನ್ನು ಬೆಳೆಯುತ್ತಿದ್ದರು. ಅತಿ ಅವಶ್ಯಕತೆ ಎನಿಸಿದರೆ ಮಾತ್ರ ಸ್ವಲ್ಪ ಪ್ರಮಾಣದ ರಸಗೊಬ್ಬ ಬಳಸುತ್ತಿದ್ದರು. ಆದರೆ, ಪ್ರಸ್ತುತ ದಿನಗಳಲ್ಲಿ ಮಣ್ಣಿಗೆ ನಾವು ವಿಷವನ್ನು ಉಣಿಸುತ್ತಿದ್ದೇವೆ. ಇದರಿಂದ ಹೊರಬರಬೇಕು ಎಂದರು.
ಹವಾಮಾನ ಕ್ರಿಯಾ ಆಂದೋಲನದ ರಾಜ್ಯ ಸಂಯೋಜಕ ರಾಜಾ ಹುಣಸೂರು ಮಾತನಾಡಿ, ರಾಜ್ಯದ ಐದು ಜಿಲ್ಲೆಗಳಲ್ಲಿ ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಮ್ಮ ಹಳ್ಳಿಯನ್ನು ಉಳಿಸೋಣ ಅಭಿಯಾನವನ್ನು ಸಮಿತಿಗಳ ಮೂಲಕ ನಡೆಸಲಾಗುತ್ತಿದೆ ಎಂದರು.ನೆಲ, ಜಲ, ಅರಣ್ಯ, ಜೀವಸಂಪತ್ತು ಹಾಗೂ ಗ್ರಾಮೀಣ ಜೀವನೋಪಾಯ ಚಟುವಟಿಕೆಗಳನ್ನು ಸಂಘಟಿತವಾಗಿ ಕಾಪಾಡಿಕೊಳ್ಳಲು ತಾಲೂಕು ಮಟ್ಟದ ಒಕ್ಕೂಟ ರಚಿಸಲಾಗಿದೆ. ಹವಾಮಾನ ಕ್ರಿಯಾ ಚಟುವಟಿಕೆಗಳಾದ ಭಯೋಚಾರ್ ತಯಾರಿಕೆ, ಮರ ಗಿಡಗಳ ನೆಡುವುದು, ಸಾವಯವ ಕೃಷಿಕರ ಸಂಘಟನೆ, ಸ್ಥಳೀಯ ತಳಿಯ ಜಾನುವಾರು ಉಳಿಸುವುದು, ಬೀಜ ಬ್ಯಾಂಕ್‌ಗಳ ಸ್ಥಾಪನೆ ಸೇರಿದಂತೆ ಕೃಷಿ ಆಧಾರಿತ ಉದ್ಯಮಗಳ ಉತ್ತೇಜನಕ್ಕೆ ಶ್ರಮಿಸಲಾಗುತ್ತಿದೆ ಎಂದು ವಿವರಿಸಿದರು.
ಕಾಪನಹಳ್ಳಿ ಗವಿಮಠದ ಪೀಠಾಧ್ಯಕ್ಷ ಸ್ವತಂತ್ರ ಚನ್ನವೀರ ಸ್ವಾಮೀಜಿ ಕಾರ್ಯಗಾರವನ್ನು ಉದ್ಘಾಟಿಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೀಪಕ್, ಬೂಕನಕೆರೆ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ಸತೀಶ್, ಸಾಮಾಜಿಕ ಅರಣ್ಯ ಇಲಾಖೆ ಅರಣ್ಯ ಅಧಿಕಾರಿ ನೀಲಪ್ಪ ಲಮಾಣಿ, ದೊದ್ದನಕಟ್ಟೆ ಹವಾಮಾನ ಕ್ರಿಯಾ ಸಮಿತಿ ಅಧ್ಯಕ್ಷರಾಗ ನರಸಿಂಹೇಗೌಡ, ಪುಟ್ಟಣ್ಣಯ್ಯ ಫೌಂಡೇಶನ್‌ನ ಸಂಯೋಜಕ ಹನುಮಂತೆಗೌಡ, ಜಿಲ್ಲಾ ಸಂಯೋಜಕ ಬಳ್ಳೆಕೆರೆ ಪ್ರದೀಪ್, ತಾಲೂಕು ಸಂಯೋಜಕ ಶಿವರಾಜು, ಮೈಸೂರು ಜಿಲ್ಲಾ ಸಂಯೋಜಿಕಿ ಛಾಯಾ ನಾಗೇಗೌಡ, ತಾಲೂಕು ಸಮಿತಿ ಪದಾಧಿಕಾರಿಗಳಾದ ಮೆಲ್ಲಹಳ್ಳಿ ರವಿ, ರಘು ಚೌಡೇನಹಳ್ಳಿ, ಮೋದೂರು ಸವಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.