ಕನ್ನಡದ ವರಕವಿ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ದ.ರಾ. ಬೇಂದ್ರೆ ಅವರು ಕನ್ನಡದ ಖ್ಯಾತ ಬರಹಗಾರರಾಗಿ ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧಿ ಹೊಂದಿದ್ದರು, ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ.
ನರಗುಂದ: ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲಿಯೂ ಸಾಹಿತ್ಯವನ್ನು ರಚಿಸಿದ ವರಕವಿ ಡಾ. ದ.ರಾ. ಬೇಂದ್ರೆ ಅವರು ಸಾಹಿತ್ಯಲೋಕದ ಧ್ರುವತಾರೆಯಾಗಿದ್ದರು. ಅಪ್ಪಟ ಜಾನಪದ ಶೈಲಿಯಲ್ಲಿ ರಚಿಸಿದ ಅವರ ಕಾವ್ಯಗಳು ಸೂರ್ಯ ಚಂದ್ರರಿರುವರೆಗೂ ಅಜರಾಮರವಾಗಿರುತ್ತವೆ ಎಂದು ಪ್ರಾಧ್ಯಾಪಕ ಡಾ. ಸತೀಶ ಶಿವಪ್ಪಯ್ಯನಮಠ ತಿಳಿಸಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಡೆದ ವರಕವಿ ಡಾ. ದ.ರಾ. ಬೇಂದ್ರೆಯವರ ಜಯಂತ್ಯುತ್ಸವ ಹಾಗೂ 379ನೇ ಮಾಸಿಕ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.ಕನ್ನಡದ ವರಕವಿ ಎಂದೇ ಜನಮಾನಸದಲ್ಲಿ ಗುರುತಿಸಿಕೊಂಡಿದ್ದ ದ.ರಾ. ಬೇಂದ್ರೆ ಅವರು ಕನ್ನಡದ ಖ್ಯಾತ ಬರಹಗಾರರಾಗಿ ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧಿ ಹೊಂದಿದ್ದರು, ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅವಿಸ್ಮರಣೀಯ ಎಂದರು.
ಶಾಂತಲಿಂಗ ಶ್ರೀಗಳು ಮಾತನಾಡಿ, ನರಗುಂದದ ಬಾಬಾಸಾಹೇಬರ ಮನೆತನಕ್ಕೆ ಹತ್ತಿರದ ಸಂಬಂಧವನ್ನು ಹೊಂದಿದ್ದ ಬೇಂದ್ರೆಯವರು ಕಷ್ಟಗಳನ್ನೇ ಕವಿತೆಯಾಗಿಸಿ ಕನ್ನಡ ಸಾಹಿತ್ಯ ರಂಗವನ್ನು ಶ್ರೀಮಂತಗೊಳಿಸಿದ್ದಾರೆ. ಎಲ್ಲ ಕಾಲಕ್ಕೂ ಜೀವಂತವಾಗಿರುವ ಕವನಗಳನ್ನು ರಚಿಸಿ ಎಲ್ಲರ ಮನಸ್ಸಿನಲ್ಲಿ ಶಾಶ್ವತ ಸ್ಥಾನವನ್ನು ಪಡೆದಿದ್ದಾರೆ ಎಂದರು.ಸಾಹಿತಿ ಡಾ. ಸಂಗಮೇಶ ತಮ್ಮನಗೌಡ್ರ ಮಾತನಾಡಿ, ದೇಶಪ್ರೇಮಿಗಳೂ, ದೇಶಭಕ್ತರೂ ಆಗಿದ್ದ ಬೇಂದ್ರೆ ತಾವೂ ಚಳವಳಿಯಲ್ಲಿ ಭಾಗವಹಿಸಿದ್ದರು. ಜತೆಗೆ ನರಬಲಿ ಎಂಬ ಕವನದ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಪುಷ್ಟಿ ಕೊಟ್ಟಿದ್ದರು. ಅದರ ಪರಿಣಾಮವಾಗಿ ಆಂಗ್ಲರ ಕೆಂಗಣ್ಣಿಗೆ ಗುರಿಯಾಗಿ ಕೆಲಕಾಲ ಸೆರೆಮನೆ ವಾಸ ಅನುಭವಿಸಿದರು. ಜಾನಪದ ಧಾಟಿಯ ಅವರ ಎಷ್ಟೋ ಕವಿತೆಗಳನ್ನು ಗಾಯಕರು ಸುಶ್ರಾವ್ಯವಾಗಿ ಹಾಡಿದ್ದಾರೆ. ಅವರ ಕವಿತೆಗಳಲ್ಲಿ ನಾದಮಾಧುರ್ಯ ಅಪಾರವಾಗಿದೆ ಎಂದು ತಿಳಿಸಿದರು.ಈ ವೇಳೆ ಡಾ. ಸಂಗಮೇಶ ತಮ್ಮನಗೌಡ್ರ ಹಾಗೂ ಡಾ. ಸತೀಶ ಶಿಪ್ಪಯ್ಯನಮಠ ಅವರನ್ನು ಶ್ರೀಮಠದಿಂದ ಸತ್ಕರಿಸಲಾಯಿತು. ಶಾಂತಲಿಂಗ ಶ್ರೀಗಳು, ಪ್ರೊ. ಆರ್.ಕೆ. ಐನಾಪೂರ, ಮಹಾಂತೇಶ ಹಿರೇಮಠ ಪ್ರಮುಖರು ಇದ್ದರು.