ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ತಾಲೀಮು

KannadaprabhaNewsNetwork |  
Published : Oct 10, 2023, 01:00 AM IST
12 | Kannada Prabha

ಸಾರಾಂಶ

ಅಭಿಮನ್ಯುಗೆ ಮರದ ಅಂಬಾರಿ ಹೊರಿಸಿ ತಾಲೀಮು

- ರಾಜಮಾರ್ಗದಲ್ಲಿ ಮಳೆಯಲ್ಲಿ ಸಾಗಿದ ದಸರಾ ಗಜಪಡೆ ಫೋಟೋ- 9ಎಂವೈಎಸ್12 ಅಭಿಮನ್ಯು ಆನೆ ಮೈಮೇಲೆ ಕ್ರೇನ್ ಬಳಸಿ ಮರದ ಅಂಬಾರಿ ಕಟ್ಟುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ. 9ಎಂವೈಎಸ್13, 14 ಮೈಸೂರು ಅರಮನೆ ಮುಂಭಾಗದಲ್ಲಿ ಮರದ ಅಂಬಾರಿ ಹೊತ್ತು ಸಾಗುತ್ತಿರುವ ಅಭಿಮನ್ಯು ಆನೆ. ಚಿತ್ರ- ಅನುರಾಗ್ ಬಸವರಾಜ್ ---- ಬಿ. ಶೇಖರ್ ಗೋಪಿನಾಥಂ ಕನ್ನಡಪ್ರಭ ವಾರ್ತೆ ಮೈಸೂರು ವಿಶ್ವವಿಖ್ಯಾತ ದಸರಾ ಮಹೋತ್ಸವದ ಜಂಬೂಸವಾರಿಗೆ ಸಿದ್ಧವಾಗುತ್ತಿರುವ ಗಜಪಡೆಯ ಕ್ಯಾಪ್ಟನ್ ಅಭಿಮನ್ಯು ಆನೆಗೆ ಸೋಮವಾರ ಸಂಜೆ ಮಳೆಯ ನಡುವೆ ಮರದ ಅಂಬಾರಿ ತಾಲೀಮು ನಡೆಸಲಾಯಿತು. ಮೊದಲು ಅಭಿಮನ್ಯು ಸೇರಿದಂತೆ 14 ಆನೆಗಳಿಗೂ ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ವಾಸವಾಗಿರುವ ಖಾಸ್ ಅರಮನೆ ಬಳಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಖಾಸ್ ಅರಮನೆ ಮುಂಭಾಗದಲ್ಲಿ ಕ್ರೇನ್ ಅಳವಡಿಸಿ ಅಭಿಮನ್ಯು ಆನೆ ಮೈಮೇಲೆ ಮರ ಅಂಬಾರಿ ಕೂರಿಸಿ ನಂತರ ಹಗ್ಗದ ಸಹಾಯದಿಂದ ಬಿಗಿಯಾಗಿ ಕಟ್ಟಲಾಯಿತು. ಮರದ ಅಂಬಾರಿಯೊಳಗೆ ಮರಳು ಮೂಟೆಗಳನ್ನು ಇರಿಸಲಾಯಿತು. 280 ಕೆ.ಜಿ ತೂಕದ ಮರದ ಅಂಬಾರಿ, ಗಾದಿ, ನಮ್ದಾ, ಮರಳು ಮೂಟೆಗಳು ಸೇರಿದಂತೆ ಸುಮಾರು 1000 ಕೆ.ಜಿ ಬಾರವನ್ನು ಹೊತ್ತು ಅಭಿಮನ್ಯು ಆನೆಯು ಗಜ ಗಾಂಭೀರ್ಯದ ಹೆಜ್ಜೆ ಹಾಕಿತು. ಜಂಬೂಸವಾರಿ ಸಾಗುವ ಮಾರ್ಗದಲ್ಲೇ ಮರದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು ಆನೆಯೊಂದಿಗೆ ಕುಮ್ಕಿ ಆನೆಗಳಾಗಿ ವರಲಕ್ಷ್ಮಿ, ವಿಜಯ ಸಾಗಿದವು. ಅರ್ಜುನ, ಭೀಮ, ಮಹೇಂದ್ರ, ಧನಂಜಯ, ಗೋಪಿ, ಕಂಜನ್, ಸುಗ್ರೀವ, ಪ್ರಶಾಂತ, ರೋಹಿತ, ಲಕ್ಷ್ಮಿ ಮತ್ತು ಹಿರಣ್ಯಾ ಸಾಲಾನೆಗಳಾಗಿ ಸಾಗಿದವು. ಅರಮನೆ ಆವರಣದಿಂದ ಹೊರಟ ಗಜಪಡೆಯು ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದ ವೃತ್ತ, ಆರ್ ಎಂಸಿ ವೃತ್ತ, ಹೈವೇ ವೃತ್ತದ ಮೂಲಕ ಬನ್ನಿಮಂಟಪಕ್ಕೆ ತಲುಪಿದವು. ಮಳೆಯ ನಡುವೆಯೂ ದಸರಾ ಆನೆಗಳು ಯಶಸ್ವಿಯಾಗಿ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದವು. ಸಂಜೆ ಹೊತ್ತು - ಮಳೆ ಬಂತು ದಸರಾ ಆನೆಗಳಿಗೆ ಸೋಮವಾರ ಸಂಜೆ 5ಕ್ಕೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, 4 ಗಂಟೆಯಿಂದಲೇ ಶುರುವಾದ ಮಳೆ 6 ಗಂಟೆಯಾದರೂ ಸುರಿಯುತ್ತಿತ್ತು. ಹೀಗಾಗಿ, ಮಳೆ ಪ್ರಮಾಣ ಸ್ವಲ್ಪ ಕಡಿಮೆ ಆಗುತ್ತಿದ್ದಂತೆ ಖಾಸ್ ಅರಮನೆ ಬಳಿ ಆನೆಗಳಿಗೆ ಪೂಜೆ ಸಲ್ಲಿಸಲಾಯಿತು. ಮಳೆಯ ನಡುವೆ ಅಭಿಮನ್ಯು ಮೇಲೆ ಮರದ ಅಂಬಾರಿ ಹೊರಿಸಿ, ರಾಜಮಾರ್ಗದಲ್ಲಿ ತಾಲೀಮು ನಡೆಸಲಾಯಿತು. ಆನೆ ಮಾವುತರು, ಕಾವಾಡಿಗಳು ಜರ್ಕಿನ್ ಧರಿಸಿ ಮಳೆಯಲ್ಲೇ ಆನೆಗಳನ್ನು ಮುನ್ನಡೆಸಿದರು. ಈ ವೇಳೆ ಸಿಸಿಎಪ್ ಡಾ.ಎಂ. ಮಾಲತಿಪ್ರಿಯಾ, ಡಿಸಿಎಫ್ ಸೌರಭಕುಮಾರ್, ಪಶುವೈದ್ಯ ಡಾ. ಮುಜೀಬ್ ಉರ್ ರೆಹಮಾನ್ ಮೊದಲಾದವರು ಇದ್ದರು.

PREV

Recommended Stories

ಡಿಮ್ಯಾಂಡಿಗೆ ತಕ್ಕ ಸರಬರಾಜಿಲ್ಲದ್ದೇ ಗೋಧಿ ಹಿಟ್ಟಿನ ಉದ್ಯಮಕ್ಕೆ ಪ್ರೇರಣೆಯಾಯ್ತು
ಅತ್ಯಂತ ಮನಮೋಹಕ ಬೈಕ್‌ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 650