;Resize=(412,232))
ಎಜಿಐ ಕೇವಲ ಕೆಲವೇ ವರ್ಷಗಳಲ್ಲಿ ಬರುತ್ತಿದೆ. ಇದು ವಿದ್ಯುತ್ ಅಥವಾ ಬೆಂಕಿಯ ಕಂಡುಹಿಡಿಯುವಿಕೆಗೆ ಸಮಾನವಾದ ಮಾನವ ಇತಿಹಾಸದ ಅತ್ಯಂತ ದೊಡ್ಡ ಬದಲಾವಣೆಯಾಗಲಿದೆ. ಔಷಧಿ, ಇಂಧನ, ವಸ್ತುಗಳ ಸಮಸ್ಯೆಗಳನ್ನು ಪರಿಹರಿಸಿ ಸಮೃದ್ಧಿಯ ನೂತನ ಯುಗಕ್ಕೆ ಕಾಲಿಡುವ ಸಾಧ್ಯತೆ ಇದೆ. ಆದರೆ ಇದಕ್ಕೆ ತುರ್ತು ಕ್ರಮ ಬೇಕು. ವಿಶ್ವಮಟ್ಟದ ನಿಯಂತ್ರಕ ಸಂಸ್ಥೆ ಬೇಕು. ಭವಿಷ್ಯ ಇನ್ನೂ ಬರೆಯಲಾಗಿಲ್ಲ, ಈ ಅಮೂಲ್ಯ ಕ್ಷಣವನ್ನು ಸರಿಯಾಗಿ ಬಳಸೋಣ.
ನಾವಿಂದು ಮಾನವ ಇತಿಹಾಸದ ನಿರ್ಣಾಯಕ ಕ್ಷಣದಲ್ಲಿದ್ದೇವೆ. ಕೃತಕ ಸಾಮಾನ್ಯ ಬುದ್ಧಿಮತ್ತೆಯ (ಎಜಿಐ) ಅಭಿವೃದ್ಧಿಗಾಗಿ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟಿರುವ ನನಗೆ, ಮಾನವಕುಲ ಎಂದಿಗೂ ಕಾಣದ ಅತ್ಯಂತ ಗಣನೀಯ ಬದಲಾವಣೆಯ ಅಂಚಿನಲ್ಲಿದೆ ಎನಿಸುತ್ತಿದೆ.
ನನ್ನ ಅಭಿಪ್ರಾಯದಲ್ಲಿ, ಎಜಿಐ- ಅಂದರೆ ಮಾನವನ ಮೆದುಳು ಹೊಂದಿರುವ ಎಲ್ಲಾ ಅರಿವಿನ ಸಾಮರ್ಥ್ಯಗಳನ್ನು ಹೊಂದಿರುವ ವ್ಯವಸ್ಥೆ- ಇನ್ನೇನು ಕೆಲವೇ ಕೆಲವು ವರ್ಷಗಳಲ್ಲಿ ಬರುತ್ತದೆ. ಜೂನ್‌ನಲ್ಲಿ ನಾನು 3-4 ವರ್ಷಗಳಲ್ಲಿ ಬರಬಹುದು ಎಂದು ಹೇಳಿದ್ದೆ. ಇವತ್ತೂ ಆ ಅಂದಾಜು ಸರಿಯಾಗಿದೆ ಎನ್ನುತ್ತೇನೆ. ಇದರ ಪರಿಣಾಮಗಳು ಅಪಾರವಾಗಿವೆ. ಜವಾಬ್ದಾರಿಯುತವಾಗಿ ಅಭಿವೃದ್ಧಿಪಡಿಸಿ ಬಳಸಿದರೆ, ಎಜಿಐ ಮಾನವ ಇತಿಹಾಸದ ಅತ್ಯಂತ ಪ್ರಯೋಜನಕಾರಿ ಮತ್ತು ಪರಿವರ್ತನಾತ್ಮಕ ತಂತ್ರಜ್ಞಾನಗಳಲ್ಲಿ ಒಂದಾಗುತ್ತದೆ. ಇದನ್ನು ಇಂಟರ್ನೆಟ್ ಅಥವಾ ಮೊಬೈಲ್‌ಗೆ ಹೋಲಿಸಲು ಸಾಧ್ಯವಿಲ್ಲ. ಇದು ವಿದ್ಯುತ್ ಅಥವಾ ಬೆಂಕಿಯ ಕಂಡುಹಿಡಿಯುವಿಕೆಗೆ ಹೆಚ್ಚು ಹತ್ತಿರವಾಗಿದೆ. ಇದು ನಿಜವಾಗಿಯೂ ಅದ್ಭುತವಾಗಿದೆ.
ಸಾಮರ್ಥ್ಯದ ಜತೆಗಿದೆ ಜವಾಬ್ದಾರಿ:
ಎಜಿಐನಲ್ಲಿ ಭಾರೀ ಅವಕಾಶಗಳಿವೆ. ಎಜಿಐ ಔಷಧಿ ಸಂಶೋಧನೆಯನ್ನು ವೇಗಗೊಳಿಸುತ್ತದೆ, ಹೊಸ ಶುದ್ಧ ಇಂಧನ ಮೂಲಗಳನ್ನು ಕಂಡುಹಿಡಿಯುತ್ತದೆ, ಹೊಸ ವಸ್ತುಗಳನ್ನು ಸೃಷ್ಟಿಸುತ್ತದೆ ಮತ್ತು ಸಮಾಜದ ದೊಡ್ಡ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಸಂಪನ್ಮೂಲಗಳು ಮಾನವ ಪ್ರಗತಿಗೆ ಮಿತಿಯಾಗದಿರುವ ‘ಸಮೃದ್ಧಿಯ ನೂತನ ಯುಗ’ಕ್ಕೆ ನಾವು ಬರಬಹುದು. ಇದು ವೈಜ್ಞಾನಿಕ ಆವಿಷ್ಕಾರಗಳ ಹೊಸ ಸುವರ್ಣ ಯುಗ ಮತ್ತು ಮಾನವ ಸಮೃದ್ಧಿಯ ಪ್ರಕಾಶಮಾನ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ.
ಆದರೆ ಈ ಅಪಾರ ಸಾಮರ್ಥ್ಯದ ಜತೆಗೆ ತುಂಬಾ ಗಂಭೀರ ಜವಾಬ್ದಾರಿಯೂ ಇದೆ. ಮುಂದಿನ ದಾರಿಯು ಉತ್ಸಾಹ ಮತ್ತು ಅನಿಶ್ಚಿತತೆ ಎರಡನ್ನೂ ಒಳಗೊಂಡಿದೆ. ಈಗಾಗಲೇ ಫ್ರಂಟಿಯರ್ ಮಾಡೆಲ್‌ಗಳು ಸೈಬರ್ ಸುರಕ್ಷತೆಗೆ ಸವಾಲುಗಳನ್ನು ಒಡ್ಡುತ್ತಿವೆ. ಸಾಮರ್ಥ್ಯಗಳು ಮುಂದುವರಿದಂತೆ ಪರಮಾಣು ಮತ್ತು ಜೈವಿಕ ಅಪಾಯಗಳು ಉದ್ಭವವಾಗಬಹುದು. ಎಐ ವ್ಯವಸ್ಥೆಗಳು ಹೆಚ್ಚು ಸ್ವಯಂಚಾಲಿತವಾಗುತ್ತಿವೆ ಮತ್ತು ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂ ಸುಧಾರಿಸುತ್ತಿವೆ. ನಾವು ಇನ್ನೂ ತಿಳಿಯದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ತುರ್ತು ಕ್ರಮ ಅಗತ್ಯವಿದೆ.
ಜಾಗತಿಕ ಎಐ ವಾಚ್‌ಡಾಗ್ ಅಗತ್ಯ:
ಪ್ರಸ್ತುತ ನಾವು ಕಾರ್ಪೊರೆಟ್‌ಗಳು ಮತ್ತು ದೇಶಗಳ ನಡುವಿನ ಎಐ ಶಸ್ತ್ರ ಸ್ಪರ್ಧೆಯತ್ತ ಹೆಚ್ಚು ಗಮನ ಹರಿಸುತ್ತಿದ್ದೇವೆ, ಆದರೆ ನಿಜವಾದ ಅಪಾಯಗಳನ್ನು ನಿರ್ಲಕ್ಷಿಸುತ್ತಿದ್ದೇವೆ. ಎಜಿಐ ಬರುವ ಮುನ್ನ ನಮಗೆ ಇರುವ ಚಿಕ್ಕ ಆದರೆ ಅಮೂಲ್ಯ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಾನು ವಿಶ್ವಮಟ್ಟದ ಎಐ ವಾಚ್‌ಡಾಗ್ ರಚಿಸುವುದಕ್ಕೆ ತುರ್ತು ಕರೆ ನೀಡುತ್ತಿದ್ದೇನೆ. ಅಮೆರಿಕದ ನೇತೃತ್ವದಲ್ಲಿ ಇದು ಆರಂಭವಾಗಬೇಕು. ವಾಲ್ ಸ್ಟ್ರೀಟ್ ನಿಯಂತ್ರಕ ಸಂಸ್ಥೆ ಹಣಕಾಸು ಉದ್ಯಮ ನಿಯಂತ್ರಣ ಪ್ರಾಧಿಕಾರ (ಎಫ್‌ಐಎನ್‌ಆರ್‌ಎ) ಮಾದರಿಯಲ್ಲಿ ಇದನ್ನು ರೂಪಿಸಬಹುದು. ಪ್ರಮುಖ ತಾಂತ್ರಿಕ ತಜ್ಞರಿಂದ ಕೂಡಿರುವ, ಎಐ ಉದ್ಯಮದಿಂದ ಧನಸಹಾಯ ಪಡೆಯುವ ಮತ್ತು ಫ್ರಂಟಿಯರ್ ಮಾಡೆಲ್‌ಗಳಿಗೆ ಸುರಕ್ಷತಾ ಮಾನದಂಡಗಳನ್ನು ನಿರ್ಧರಿಸುವ ಸಂಸ್ಥೆ ಇದಾಗಿರಬೇಕು.
ಈ ಚೌಕಟ್ಟಿನೊಳಗೆ, ಮೊದಲು ಡೆವಲಪರ್‌ಗಳು ತಮ್ಮ ಶಕ್ತಿಶಾಲಿ ಮಾಡೆಲ್‌ಗಳನ್ನು ಬಿಡುಗಡೆಗೆ 30 ದಿನಗಳ ಮುಂಚಿತವಾಗಿ ಸ್ವಯಂಪ್ರೇರಿತವಾಗಿ ಸಲ್ಲಿಸಬೇಕು. ಪರೀಕ್ಷಾ ವ್ಯವಸ್ಥೆ ವಿಶ್ವಾಸಾರ್ಹವಾದ ನಂತರ ಅದು ಕಡ್ಡಾಯವಾಗುತ್ತದೆ. ಯಾರಿಗೂ ಭವಿಷ್ಯ ಖಚಿತವಾಗಿ ತಿಳಿದಿಲ್ಲ. ತಜ್ಞರೂ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಆದರೆ ಅನಿಶ್ಚಿತತೆ ಹೆಚ್ಚಾಗಿದ್ದಾಗ, ಎಚ್ಚರಿಕೆಯಿಂದ ಆಶಾವಾದದೊಂದಿಗೆ ಮುಂದುವರಿಯುವುದೇ ಸರಿಯಾದ ಮಾರ್ಗ. ಅಮೆರಿಕ ಪ್ರಾರಂಭಿಸುವ ಈ ಪ್ರಯತ್ನವು ಫ್ರಂಟಿಯರ್ ಎಐ ಬಗ್ಗೆ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಬಲವಾದ ಬುನಾದಿ ಹಾಕುತ್ತದೆ. ಈ ತಂತ್ರಜ್ಞಾನವು ಇಡೀ ಗ್ರಹವನ್ನು ಪ್ರಭಾವಿಸುವುದರಿಂದ, ಗಂಭೀರ ಅಪಾಯಗಳನ್ನು ನಿರ್ವಹಿಸುತ್ತಾ ಎಲ್ಲರೂ ಎಐಯ ಅವಕಾಶಗಳನ್ನು ಪಡೆಯುವ ಜಾಗತಿಕ ಒಮ್ಮತವನ್ನು ಸಾಧಿಸಬೇಕು.
ಸುರಕ್ಷಿತ ಎಜಿಐ ಹೊಸ ಯುಗಕ್ಕೆ ನಾಂದಿ:
ಭವಿಷ್ಯ ಹೀಗೆಯೇ ಇರುತ್ತದೆ ಎಂದು ಇದುವರೆಗೂ ಯಾರೂ ಬರೆದಿಲ್ಲ. ನಾವು ಈಗ ಏನು ಮಾಡುತ್ತೇವೆ ಎಂಬುದು ನಾಗರಿಕತೆಯ ಮುಂದಿನ ಅಧ್ಯಾಯವನ್ನು ನಿರ್ಧರಿಸುತ್ತದೆ. ನಾವು ಈಗ ತೆಗೆದುಕೊಳ್ಳುವ ನಿರ್ಧಾರಗಳು ಮಾನವ ಭವಿಷ್ಯದ ಮುಂದಿನ ಹಂತವನ್ನು ನಿರ್ಧರಿಸುತ್ತವೆ. ಎಜಿಐ ಅನ್ನು ಸುರಕ್ಷಿತವಾಗಿ ನಿರ್ವಹಿಸಿ ಜಗತ್ತಿಗೆ ಪರಿಚಯಿಸಿದರೆ, ವೈಜ್ಞಾನಿಕ ಪ್ರಗತಿ ಮತ್ತು ಮಾನವ ಸಮೃದ್ಧಿಯ ಹೊಸ ಯುಗಕ್ಕೆ ಕಾಲಿಡುವ ಸಾಧ್ಯತೆ ಇದೆ. ಇದನ್ನು ಜವಾಬ್ದಾರಿಯುತವಾಗಿ ಅಭಿವೃದ್ಧಿಪಡಿಸಿದರೆ, ಅದು ಮಾನವಕುಲಕ್ಕೆ ಎಂದಿಗೂ ದೊರೆತ ಅತ್ಯಂತ ಪ್ರಯೋಜನಕಾರಿ ಮತ್ತು ಪರಿವರ್ತನಾತ್ಮಕ ತಂತ್ರಜ್ಞಾನವಾಗುತ್ತದೆ ಎಂಬುದು ನನ್ನ ಬಲವಾದ ನಂಬಿಕೆ. ಇದು ಮಾನವಕುಲಕ್ಕೆ ಹೊಸ ಯುಗದ ಉದಯ. ಎಜಿಐ ಬರುವ ಮುನ್ನ ಈ ಅಮೂಲ್ಯ ಕ್ಷಣವನ್ನು ಬಳಸಿ, ಈ ತಂತ್ರಜ್ಞಾನವನ್ನು ಸಕಲ ಮಾನವಕುಲದ ಪ್ರಯೋಜನಕ್ಕಾಗಿ ರೂಪಿಸುವುದು ನಮ್ಮೆಲ್ಲರ ಜವಾಬ್ದಾರಿ. ನಾವು ಈ ಸವಾಲನ್ನು ಯಶಸ್ವಿಯಾಗಿ ಎದುರಿಸೋಣ.