ಕತೆ : ''ಮತ್ತೆ ಮಳೆ ಹೊಯ್ಯುತಿದೆ , ಎಲ್ಲಾ ನೆನಪಾಗುತ್ತಿದೆ''

Published : Jul 26, 2026, 12:32 PM IST
Rain

ಸಾರಾಂಶ

‘ಬಾ ಗುಂಡಾ ಗುಂಡಾ ಗುಂಡಾ…’ ಧೋಗುಟ್ಟಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ತಲೆಗೊಂದು ಹಳೆಯ ಹ್ಯಾಟು ತೊಟ್ಟು ಕೈಯಲ್ಲಿ ಅಗಲ ಛತ್ರಿ ಹಿಡಿದ ಪದ್ಮಾವತಮ್ಮ ಹಿತ್ತಿಲು ಬಾಗಿಲು ತೆಗೆದು ಜೋರಾಗಿ ಕೂಗಿದರು.

ಕತೆ

- ನಂದಿನಿ ಹೆದ್ದುರ್ಗ

‘ಬಾ ಗುಂಡಾ ಗುಂಡಾ ಗುಂಡಾ…’ ಧೋಗುಟ್ಟಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೆ ತಲೆಗೊಂದು ಹಳೆಯ ಹ್ಯಾಟು ತೊಟ್ಟು ಕೈಯಲ್ಲಿ ಅಗಲ ಛತ್ರಿ ಹಿಡಿದ ಪದ್ಮಾವತಮ್ಮ ಹಿತ್ತಿಲು ಬಾಗಿಲು ತೆಗೆದು ಜೋರಾಗಿ ಕೂಗಿದರು.

ಏಕದೃಷ್ಟಿಯಿಂದ ನೋಡುತ್ತಾ, ಬಾಲ ಅಲ್ಲಾಡಿಸುತ್ತಾ ಕೂತಿದ್ದ ಗುಂಡಾ, ರಂಗು, ಕಾಳ ಪದ್ಮಾವತಮ್ಮನ ಕೂಗಿಗೆ ಬೆಚ್ಚಿದವರಂತೆ ಮಳೆಯನ್ನೂ ಲೆಕ್ಕಿಸದೆ ಮನೆಯ ಕಡೆಗೆ ಓಡುವುದಾ ಅಥವಾ ಇನ್ನೂ ಸ್ವಲ್ಪ ಹೊತ್ತು ಕಾಯುವುದಾ ಎನ್ನುವ ಗೊಂದಲಕ್ಕೊಳಗಾಗಿ ಬಾಲವನ್ನು ಇನ್ನೂ ವೇಗವಾಗಿ ಅಲ್ಲಾಡಿಸಹತ್ತಿದವು.

ಮನೆಯ ತಗ್ಗಿಗೆ ಅರ್ಧಫರ್ಲಾಂಗು ದೂರದಲ್ಲಿ ಸಾಲಾಗಿ ಹೊಗೆ ಹೊಮ್ಮಿಸುತ್ತಿರುವ ಲೈನಿನ ಕಿಳ್ಳಿನಲ್ಲಿ ಕೂತು ಸಂಜೆ ಹಿಡಿದಿದ್ದ ಕಲ್ಲೇಡಿಯನ್ನು ಕೆಂಡದಲ್ಲಿ ಸುಟ್ಟು ಕೊಂಬು ಮುರಿದು, ಒಳಗಿದ್ದ ತುಪ್ಪವನ್ನು ಸುರ್ರನೆ ಹೀರಿ ಎಸೆಯುತ್ತಿದ್ದ ಕಾಲಿನ ಆ ಒಂದೇ ಒಂದು ತುಂಡು ಸಿಕ್ಕಿದರೂ ಸಾಕಿತ್ತು ಅವಕ್ಕೆ.

ಸುರಿಯುವ ಆ ಮಳೆಯಲ್ಲಿ ಒಂದು ಕೈಯಲ್ಲಿ ಮಜ್ಜಿಗೆ ಕಲೆಸಿದ ಅನ್ನದ ಪಾತ್ರೆ ಹಿಡಿದು ಇನ್ನೊಂದು ಕೈಯಲ್ಲಿ ನೆರಿಗೆ ಸಿಕ್ಕಿಸಿಕೊಳ್ತಾ ಛತ್ರಿ ಬ್ಯಾಲೆನ್ಸ್ ಮಾಡ್ತಿದ್ದ ಪದ್ಮಾವತಮ್ಮ ತಾಳ್ಮೆ ಕಳೆದವರಂತೆ ಮತ್ತೊಮ್ಮೆ ‘ಬಾ…ಗುಂಡಾ ಗುಂಡಾ…’ ಎಂದಿದ್ದೇ ತಡ, ಗುಂಡಾ ಮತ್ತವನ ಸಂಗಡಿಗರು ಒಂದೇ ನೆಗೆತಕ್ಕೆ ರಾಕೆಟ್ ವೇಗದಲ್ಲಿ ಮನೆಯ ಅಂಗಳದಲ್ಲಿದ್ದವು.

*‘ಅಸಲೆ ಮಳೆಗೆ ಸಸಲೆಲ್ಲ ಬೆಟ್ಟ ಏರಿದ್ವು’ ಅನ್ನೋ ಗಾದೆನಾ ನಿಜ ಮಾಡೊ ಹಂಗೆ ಆಶ್ಲೇಷ ಮಳೆ ಮೆಟ್ಟಿದ ಮೊದಲ ದಿನದಿಂದಲೇ ಧೋಗುಟ್ಟಿ ಸುರಿಯುತ್ತಿತ್ತು.

ತೋಟದ ತಗ್ಗಿನಲ್ಲಿರುವ ಕೆರೆಗಳು ಎರಡೇ ದಿನಕ್ಕೆ ಕೋಡಿ ಬಿದ್ದು ಹರಿಯುತ್ತಿವೆ. ರಸ್ತೆಯ ನೀರು ತೋಟದೊಳಕ್ಕೆ ನುಗ್ಗಿ ತಗ್ಗಿನ ಗಿಡಗಳಲ್ಲಿ ಕೊಳೆ ರೋಗ ಕಾಣಿಸಿಕೊಂಡಾಗಿದೆ. ಆಮೆ ಮುರ್ಕಾಟಿ ಸಣ್ಣೇಡಿ ನೀರು ಹಾವುಗಳಂತವು ತೋಟದ ರಸ್ತೆಯಲ್ಲಿ ಎಲ್ಲೆಂದರಲ್ಲಿ ಅಡ್ಡಾಡುತ್ತಿವೆ.

ಶಿವೇಗೌಡರ ತೋಟ ಅಂದರೆ ‘ದೊಡ್ಡ ಮಂಟಿ ಪಟ್ಟೆ’ಮನೆಯವರು ಅಂತಲೇ ಸುತ್ತಲೂ ಹೆಸರುವಾಸಿ. ಹೈ ಎಲಿವೇಷನ್ ಇರುವ ಈ ತೋಟದಲ್ಲಿ ಕಾಫಿಯ ಇಳುವರಿ ಅತ್ಯುತ್ತಮವಾಗಿದ್ದರೂ ಮಳೆಗಾಲದಲ್ಲಿ ಒಂದಕ್ಕೆ ಐದು ಪಟ್ಟು ಹೆಚ್ಚು ಆಳು ಖರ್ಚು. ಶಿವೇಗೌಡರ ಮಕ್ಕಳೋ ಓದು ಮುಗಿಯುತ್ತಿದ್ದಂತೆ ದೂರದ ದೇಶಗಳಲ್ಲಿ ದುಡಿಯಲು ಹೋಗಿ ಆ ದೇಶದವರೇ ಆಗಿಹೋಗಿದ್ದಾರೆ.

ಶಿವೇಗೌಡರು ಅಪ್ಪ ಕೊಟ್ಟಿದ್ದ ಅಂಗೈಅಗಲದ ಭೂಮಿಯಲ್ಲಿ ಬೆವರು ಸುರಿಸಿ ಸುತ್ತಿನ ಹತ್ತೂರಲ್ಲಿ ಹೆಸರುವಾಸಿಯಾದ ಬೆಳೆಗಾರರು. ಹಾಗೆ ನೋಡ್ಲಿಕ್ಕೆ ಹೋದರೆ ಶಿವೇಗೌಡರು ದುಡಿಮೆಯಲ್ಲಿ ಗಟ್ಟಿ ಇರಬಹುದು. ಸಮಸ್ಯೆಗಳಿಗೆ ಆಳಲ್ಲ. ಪದ್ಮಾವತಮ್ಮ ಗಂಡನನ್ನು ಹೆಬಗಜೀವ ಅಂತಿರ್ತಾರೆ. ಪದ್ಮಾವತಮ್ಮ ಹಾಗಲ್ಲ. ಗಟ್ಟಿಗಿತ್ತಿ.

ಕಾಣದ ಊರಿನ ಭಾಷೆ ಬಾರದ ಎಂತಹ ಆಳುಗಳಾದ್ರೂ‌ ಸೈ. ಎಪ್ಪತ್ತೈದರ ಪದ್ಮಾವತಮ್ಮ ತೋಟಕ್ಕೆ ಒಗ್ಗಿಸಿ ಬಗ್ಗಿಸುತ್ತಾರೆ.

ಮಂಟಿಪಟ್ಟೆಯಲ್ಲಿ ಕಳೆ ಕೊಚ್ಚುವ, ಕಸಿ ತೆಗೆಯುವ, ಗೊಬ್ಬರ ಹಾಕುವ ಯಾವ ಕೆಲಸಕ್ಕೂ ಪದ್ಮಾವತಮ್ಮ ಗುತ್ತಿಗೆ ನಿಗದಿ ಮಾಡಿದ್ರು ಅಂದರೆ ಸೈ.

‘ತೊಂಬತ್ತೈದು ಗಿಡ ಅಂದರೆ ಮೂರು ಸಾಲು ಮತ್ಲಬ್ ತೀನ್‌ಸಾಲ್ ಭರ್ತಿ ಕಸಿ ಮಾಡ್ಕಂಡು ಮನೆಗೆ ಬರ್ಬೆಕು. ಮೈಗಳ್ತನ ನಹಿ ಕರ್ನಾ’ ಅಂತ ಕಡ್ಡಿತುಂಡು ಮಾಡುವಂತೆ ಹೇಳಿದ್ರೆ ಎರಡೋಮೂರೋ ಗಿಡಗಳಿಗೆ ಹೆಣ್ಣಾಳು ಕಳ್ಳಾಟ ಆಡಬಹುದು ಅಷ್ಟೇ.

ಅದೇ ಶಿವೇಗೌಡರೋ ಮೇಸ್ತ್ರಿಯೋ ಗುತ್ತಿಗೆ ಹೇಳಿದ್ರೆ ಇಪ್ಪತ್ತು ಗಿಡವೋ, ಅರ್ಧಸಾಲೋ ಉಳಿಸಿ ಅದಕ್ಕೆ ಬೇಕಾದ ನೆಪವನ್ನೂ ತಯಾರಿಟ್ಕೊಂಡು…

*ಉಟ್ಟಿದ್ದ ಸೀರೆ ಸುರಿಯುವ ಮಳೆಯಲ್ಲಿ ನೆನೆಯದಂತೆ ಮಂಡಿಯವರೆಗೂ ಸಿಕ್ಕಿಸಿ ಮೂರೂ ತಟ್ಟೆಗೂ‌ ಸಮವಾಗಿ ಗಂಜಿ ಸುರಿದು ಸಣ್ಣ ಸಣಿಕೆಯಲ್ಲಿ ಮೂರಕ್ಕೂ ಕಚ್ಚಾಡದಂತೆ ಮುಂಗಡ ಒಂದೊಂದು ಏಟು ಕೊಟ್ಟ ಪದ್ಮಾವತಮ್ಮ ಗೇಟು ಹಾಕಿ ಶೆಡ್ಡಿನ ಬಾಗಿಲು ಸರಿಸಿ, ಚೇಂಬರ್ ಸೇರುತ್ತಿದ್ದ ನೀರಿನ ಹರಿವಿನಲ್ಲಿ ಕಟ್ಟಿದ್ದ ಕಸಕಡ್ಡಿ ಕಾಲಲ್ಲಿ ಅರುಗು ಮಾಡಿ ಬರುವಷ್ಟರಲ್ಲಿ ನಾಯಿಗಳು ತಮ್ಮ ಪಾಲಿನದ್ದು ತಿಂದು ಇನ್ನೊಂದು ತಟ್ಟೆಯಲ್ಲಿ ಏನಿದೆ‌ ಅಂತ‌ ನೋಡುತ್ತಿದ್ದವು.

ಬೀಸುತ್ತಿದ್ದ ಗಾಳಿಗೆ ನೆಲ ಮುಟ್ಟಿ ಮೇಲಕ್ಕೆ ಪುಟಿಯುತ್ತಿದ್ದ ತೆಂಗು ಅಡಿಕೆ ಸಿಲ್ವರ್ ಮರಗಳು, ಒಂದೇ ಸಮನೆ ಜಿಯ್ಯೋ ಅಂತ‌ ಜೀಗುಡುತ್ತಿದ್ದ ಜೀರುಂಡೆ ಸಮೂಹ, ಶೆಡ್ಡಿನ ತಗಡಿಗೆ ಬಡಿಯುತ್ತಿದ್ದ ಮಳೆಹನಿಗಳ ತಾಳಮದ್ದಲೆ, ಇಡೀ ಬ್ರಹ್ಮಾಂಡವೇ ಪ್ರಳಯದಲ್ಲಿ ಮುಳುಗುತ್ತಿದೆಯೇನೊ ಎನ್ನುವಂತೆ ಎಂಟು ದಿಕ್ಕುಗಳಿಂದಲೂ ಕೇಳುತ್ತಿದ್ದ ಮಳೆಸದ್ದು..

ಪದ್ಮಾವತಮ್ಮ ತಮ್ಮ ಚಪ್ಪಲಿಯನ್ನು ಜಾರದಂತೆ ಮೆಟ್ಟಿ ನಡೆಯುತ್ತಾ ಸೇದೊ ಬಾವಿಯನ್ನೊಮ್ಮೆ ಬಗ್ಗಿನೋಡಿ ವಿಚಿತ್ರ ಆತಂಕದಿಂದ ಒಳಕ್ಕೆ ಬಂದಿದ್ದನ್ನು ಶಿವೇಗೌಡರು ಕೋಣೆಯ ಕಿಟಕಿಯಿಂದಲೇ ನೋಡಿ ಏನಾಗಿರಬಹುದೆಂದು ಊಹಿಸಿದರು.

*ಮೂರು ಮಂಚ ಜೋಡಿಸಿದ್ದ ಆ ಕೋಣೆಯಲ್ಲಿ ಕಿಟಕಿಯ ಎದುರಿಗೆ ಇದ್ದಿದ್ದು ಶಿವೇಗೌಡರ ಮಂಚ. ಕುತ್ತಿಗೆಯವರೆಗೂ ರಗ್ಗು ಹೊದ್ದು ಮಂಕಿಕ್ಯಾಪ್ ತೊಟ್ಟು ಸುರಿಯುವ ಮಳೆಯನ್ನೇ ನೋಡುತ್ತಿದ್ದ ಅವರ ಸಣ್ಣಕಣ್ಣು ಹೊರಗಿನ ಕತ್ತಲೆಗೆ ಒಗ್ಗಿಕೊಳ್ಳುತ್ತ ಮತ್ತಷ್ಟು ಸಣ್ಣದಾಯಿತು. ಒಳಗೆ ಬರುತ್ತಿದ್ದ ಹೆಂಡತಿಗೆ ಕೇಳುವಂತೆ ‘ಆಯ್ತೆನೆ ಪದ್ಮಾ’ ಅಂದರು.

ನಾಯಿಗಳಿಗೆ ಊಟ ಹಾಕಿ ಮುಖ ತೊಳೆದು ದೇವರ ದೀಪ ಹಚ್ಚಿ ಒಳಕ್ಕೆ ಬಂದ ಪದ್ಮಾವತಮ್ಮ ‘ತುದಿಕಲ್ಲು ತುಂಬಿ ಕೋಡಿ ಹರೀತಿದೆ ಬಾವಿ’ ಅಂದರು.

ವಾರದಿಂದ ಸುರಿಯುತ್ತಿರುವ ಮಳೆಗೆ ಅದು ನಿರೀಕ್ಷಿತವೇ. ಆದರೆ ಕೋಡಿ ಹರಿಯುವ ವೇಗ‌ ಬಾವಿಗೆ ಒಳನುಗ್ಗುತ್ತಿರುವ ನೀರಿನ ವೇಗದ ಮೇಲೆ ನಿರ್ಧಾರವಾಗುತ್ತೆ. ನಿಂತ ಸೆಲೆಯ ನೀರಿನ ಬಾವಿಗಳಾದ್ರೆ ಅಪಾಯ ಕಡಿಮೆ. ಹರಿಯುವ ಜಲದ ಬಾವಿಗಳಾದ್ರೆ ಒಮ್ಮೆಗೆ ನೀರು ತುಂಬಿ ಕೋಡಿಯ ವೇಗ ವಿಪರೀತ ಆಗುವುದೂ ಉಂಟು. ಈ ಬಾವಿಗೆ ಹರಿಯುವ ಸೆಲೆಯೇ ಜಲ. ಹಾಗಾಗಿ ಯಾವ ಸಮಯದಲ್ಲಿ ಏನಾಗಬಹುದೆಂದು ತಿಳಿಯುವುದಿಲ್ಲ.

‘ಮೆಣಸಿನ ಮೂಟೆ ಹತ್ರ ಸಿಬುರು ಹೊಡೆದು ಚೀಲ ನೆನಿತಿದ್ವು. ಟಾರ್ಪಲ್ ಮುಚ್ಚಿ ಬಂದೆ’ ಅಂದ ಹೆಂಡತಿಯನ್ನು ನೋಡುತ್ತ ‘ಎಂಟು ಹೊಳವಾಗಬೇಕಿತ್ತು ಅಲ್ವಾ’ ಅಂದರು ಸಣ್ಣ ಧ್ವನಿಯಲ್ಲಿ.

ಹದಿನೈದು ದಿನದ ಮಳೆ ನಕ್ಷತ್ರದಲ್ಲಿ ಎಂಟು ದಿನ ಜೋರು ಸುರಿದರೆ, ಎಂಟುದಿನ ಬಿಡುವು ಎನ್ನುವುದಕ್ಕೆ ಎಂಟು ಹೊಳವು ಅಂತಾರೆ. ಅವರ ಆತಂಕ ಯಾವುದಕ್ಕೆ ಎನ್ನುವುದು ‌ಪದ್ಮಾವತಮ್ಮನಿಗೆ ಗೊತ್ತಾಗ್ತಿದೆ. ಮಕ್ಕಳು ಎಷ್ಟೇ ಬೇಡವೆಂದರೂ ಕೇಳದೆ ಕಳೆದ ಎರಡೂ ವರ್ಷದ ಕಾಳುಮೆಣಸನ್ನು ಅಟ್ಟದ ಮೇಲೆ ಒಟ್ಟಿಸಿಕೊಂಡಿದ್ದಾರೆ ಶಿವೇಗೌಡರು.

ರೇಟ್ ಪ್ರಿಡಿಕ್ಷನ್‌ನವರು ಮುಂದಿನ ವರ್ಷದಲ್ಲಿ ಕಾಳುಮೆಣಸಿಗೆ ಚಿನ್ನದ ಬೆಲೆ ಎಂದಿದ್ದೇ ಯಾರು ಎಷ್ಟು ಹೇಳಿದ್ರೂ ಕೇಳದೆ ಅಟ್ಟದಲ್ಲಿ ಒಟ್ಟಿದ್ದು ಒಟ್ಟು ಒಂಬತ್ತು ಟನ್ ಕಾಳುಮೆಣಸು. ಹದಿನೈದು ಟನ್‌ವರೆಗೂ ಕೊಯ್ಲು ಮಾಡ್ತಿದ್ದವರಿಗೆ ಇದೇನು ದೊಡ್ಡ ಬೆಳೆಯಲ್ಲ.

ಆದರೆ ಒಂಬತ್ತು ಟನ್ ತೂಕವನ್ನು ತಳಪಾಯ ಅಷ್ಟೇನೂ ಗಟ್ಟಿಯಿಲ್ಲದ ಆ ಹಳೆಮನೆಯ ಮಣ್ಣಿನ ಗೋಡೆ ತಡೆಯುತ್ತದೆಯೇ ಎನ್ನುವ ಭಯ ಮಳೆಯ ವೇಗದಷ್ಟೇ ವೇಗವಾಗಿ ಅವರನ್ನು ಆವರಿಸಿಕೊಳ್ಳಲು ಶುರುವಿಟ್ಟಿತು. ಐವತ್ತು ಮಂದಿ ಮಲಗುವಷ್ಟು ವಿಶಾಲವಾದ ಅಟ್ಟದ ಸುತ್ತಕ್ಕೂ ಸಮವಾಗಿ ತೂಕ ಬೀಳುವಂತೆ ಚೀಲಗಳನ್ನು ಒಟ್ಟಿದ್ದರೂ ಹುಚ್ಚು ಮಳೆಯಲ್ಲಿ ಏನಾಗುತ್ತದೆ ಎನ್ನುವ ಆತಂಕ ಎಂತಹ ಗಟ್ಟಿ ಎದೆಯವರನ್ನೂ ತಂಡಿ ಹೊಡೆಸುತ್ತದೆ.

ಕಳೆದ ವರ್ಷ ಯಾರದೊ ಗೋಡೌನ್‌ನಲ್ಲಿದ್ದ ಕಾಳುಮೆಣಸು ಕಳ್ಳತನವಾಯಿತು ಎನ್ನುವ ಸುದ್ದಿ ಬಂದಿದ್ದೇ ಸೈ, ಇವರು ಕಣಜದಲ್ಲಿದ್ದ ಬೆಳೆಯನ್ನು ಅಟ್ಟಕ್ಕೆ ಒಟ್ಟಿಕೊಂಡರು.

ಬಾವಿಯ ಕೋಡಿ ನೀರು ಅಟ್ಟದ ಅದೇ ಹಳೆಯ ದೊಡ್ಡ ಗೋಡೆಯನ್ನು ಕೊರೆದಂತೆ ಹರಿದೇ ಮುಂದೆ ಸಾಗಬೇಕಿತ್ತು. ಕಳೆದ ವರ್ಷವೇ ಗೋಡೆಯಲ್ಲಿ ಒಂದು ಸಣ್ಣ ಬಿರುಕೂ ಕಾಣಿಸಿಕೊಂಡಿತ್ತಾದರೂ ಗೌಡರು ಅದನ್ನು ನಿರ್ಲಕ್ಷ್ಯ ಮಾಡಿದ್ದರು. ಮನೆಯಿಂದ ಕೆಳಗೆ ಲೈನಿನ ಹತ್ತಿರ ಸಣ್ಣಪುಟ್ಟ ಹಳ್ಳಗಳು ತುಂಬಿ ಕೆರೆಗೆ ಹರಿದು ಕೆರೆಯ ಕೋಡಿ ಒಡೆದು ಹರಿಯುತ್ತಿರುವ ಸದ್ದು ಭಯವಾಗುವಷ್ಟು ಜೋರಾಗಿ ಕೇಳುತ್ತಿದೆ.

ಈ ಮಧ್ಯಾಹ್ನಕ್ಕೆ ಆಶ್ಲೇಷ ಮಳೆ ಎರಡನೇ ಪಾದವನ್ನು ಮೆಟ್ಟಿದೆ.

ಪದ್ದತಿಯ ಪ್ರಕಾರ ಇಷ್ಟರಲ್ಲಿ ಮಳೆಯ ರಭಸ ಇಳಿಯಬೇಕಿತ್ತು.

*

ಮಕ್ಕಳಿಬ್ರೂ ದೊಡ್ಡ ನೌಕರಿಯಲ್ಲಿದ್ದಾರೆ. ಈ ಮುದುಕ ಮುದುಕಿ ಹೀಗೆ ಈ ಒಂಟಿ ಮನೆಯ ಹಳ್ಳಿಯಲ್ಲಿದ್ದುಕೊಂಡು ಕಷ್ಟ ಪಡಬೇಕಾ. ಹತ್ತಿರದ ಪೇಟೆಯಲ್ಲಿ ಒಂದು ಮನೆ ಖರೀದಿ ಮಾಡಿ ಆರಾಮವಾಗಿರಬಾರದೆ ಎನ್ನುವುದು ನೆಂಟರಿಷ್ಟರ ಮಾತಾದರೂ ಇದೆಲ್ಲಾ ಈ ಹರೆಯದ(?) ಗಂಡ ಹೆಂಡತಿಗೆ ಎಂದೂ ಕಷ್ಟ ಅನಿಸಿಯೇ ಇಲ್ಲ.

ಸಂಜೆಗೆ ದೀಪ ಹಚ್ಚಿ ‘ಮಳೆ ಇಳಿಲಿ’ ಅಂತ ಐದು ಊದುಬತ್ತಿ ಬೆಳಗಿದ ಪದ್ಮಾವತಮ್ಮ ಕೋಣೆಗೆ ಬಂದರೂ ಮಳೆಯ ಸದ್ದಿಗೆ ಶಿವೇಗೌಡರಿಗೆ ತಿಳಿಯಲಿಲ್ಲ.

‘ಮಾಡಿ ಮ್ಯಾಲೆ ಒಂದು ಸರ್ತಿ‌ನೋಡಿ ಬಂದಿದ್ರೆ ಆಗಿತ್ತು. ಬೇಡಾಂದ್ರೂ ಕುಣ್ಕಂಡು ಒಟ್ಕೊ ಬಿಟ್ರಿ. ಈಗ ನೋಡಿದ್ರೆ ಬೆಚ್ಚಗೆ ರಗ್ಗು ಹೊದ್ಕಂಡು ಕುತ್ಗಂಡಿದೀರಾ’

ಆಕ್ಷೇಪಿಸುವ ಧ್ವನಿಯಲ್ಲಿ ಪದ್ಮಾವತಮ್ಮ ಹೇಳಿದರೂ ಗಂಡ ಎಲ್ಲಿ ಇನ್ನಷ್ಟು ಹೆದರುತ್ತರೊ ಎನ್ನುವುದು ಅವರ ಆತಂಕ. ಬಾವಿ ನೀರಿನ ಕೋಡಿಯ ಸದ್ದು, ಹೊರಗಡೆ ಗೇಟಿನಿಂದ ನುಗ್ಗುತ್ತಿದ್ದ ನೀರು ಎರಡನ್ನೂ ಕಿಟಿಕಿಯಲ್ಲಿ ನೋಡುತ್ತಾ ನೋಡುತ್ತಾ ಅವರ ಹಣೆಗೆರೆಗಳು ಇನ್ನೂ ಆಳಕ್ಕಿಳಿದವು.

*

ಐವತ್ತು ವರ್ಷದ ಹಿಂದೆ ಪಾಲು ಪಡೆದು ಬಂದಾಗ ಕೈಲಿದ್ದ ಕಾಸಿಗೆ ತಕ್ಕ ಹಾಗೆ ಕಟ್ಟಿದ ಮನೆ ಅದು.

ತಳಕ್ಕೆ ಎರಡು ಕಲ್ಲಿನ ಪಾಯ. ಮೇಲಕ್ಕೆರಡು ಕಲ್ಲು. ಹಗಲು ರಾತ್ರಿ ಇಟ್ಟಿಗೆ ಹುಯ್ದು, ಮಣ್ಣು ತುಳಿದು ಕಟ್ಟುವಾಗ ಇಬ್ಬರಿಗೂ ನಿಗಿನಿಗಿ ಪ್ರಾಯ.

ಮನೆ ಕಟ್ಟಿ ಹತ್ತು ವರ್ಷವಾದ ಮೇಲೆ ಗೋಡೆಗೆ ಸಿಮೆಂಟ್ ಸಾರಣೆ. ಹಿಂದುಗಡೆಯ ಒಪ್ಪಾರು ಕೂಡ ರೇಷ್ಮೆ ಬೆಳೆಯುವಾಗ ಕಟ್ಟಿದ ತಾತ್ಕಾಲಿಕ ಸಾಕಣೆ ಮನೆ.

ಇಡೀ ಮನೆ ಮತ್ತು ಕಾಫಿ ಕಣ ಇರುವ ಅರ್ಧ ಕಿಮೀ ಹಿಂದಕ್ಕೆ ಸಾಲಾಗಿ ಬೆಟ್ಟಗಳ ಸಾಲು ಹಬ್ಬಿ ನಿಂತಿದೆ. ಸಣ್ಣ ಮಳೆಗೂ ಮನೆಯ ಸುತ್ತ ನೀರಿನ ಒರತೆ ಎದ್ದು ಕೆರೆ ಬಾವಿಗಳು ಉಕ್ಕಿ ಹರಿಯುತ್ತವೆ. ಇನ್ನು ಎಂಟು ದಿವಸದಿಂದ ಸುರಿಯುತ್ತಿರುವ ಈ ರಣ ಮಳೆಗೆ ಇಡೀ ಅಂಗಳ ಹಿತ್ತಿಲು ಎಲ್ಲೆಂದರಲ್ಲಿ ನೀರಿನ ಒರತೆ ಉಕ್ಕುತ್ತಿದೆ.

ಆರುತಿಂಗಳಲ್ಲಿ ಎಂತಹ ಮನೆ ಬೇಕಾದರೂ ಕಟ್ಟುವಷ್ಟು ಆರ್ಥಿಕವಾಗಿ ಬಲಾಢ್ಯರು ಈ ಶಿವೇಗೌಡರು. ಆದರೆ ಈಗಿರುವ ಮನೆ ಅವರು ನಡೆದು ಬಂದ ಬೆವರಿನ ಹಾದಿಯ ನೆನಪುಗಳಿರುವ ಮನೆ. ಮನೆ ಕಟ್ಟಿಸ್ತಿವಿ ಅಂತ ಮಕ್ಕಳು ಹೇಳಿದಾಗೆಲ್ಲ ನಾವಿರೋವರೆಗೂ ಇದರಲ್ಲೇ ಇರ್ತಿವಿ ಎನ್ನುತ್ತಾ ಮಾತು ಮರೆಸುತ್ತಾರೆ. ಮಕ್ಕಳೂ ಕೂಡ ಅದರ ಹಿಂದಿನ ಭಾವನೆ ಅರ್ಥ ಮಾಡಿಕೊಂಡು ಸುಮ್ಮನಾಗಿದ್ದಾರೆ.

ಇಷ್ಟು ವರ್ಷದ ಅವರ ಅನುಭವದಲ್ಲಿ ಮಳೆಯ ಪ್ರಮಾಣ ಇಷ್ಟೇ ಇದ್ದರೂ‌ ತೀವ್ರತೆ ಮಾತ್ರ ಈ ಬಾರಿ ವಿಚಿತ್ರ. ಯಾಕಿಂತಹ ಹುಚ್ಚು ಮಳೆ ಎನ್ನುವುದು ಯಾರ ತರ್ಕಕ್ಕೂ ಸಿಗುತ್ತಿಲ್ಲವಾದರೂ ಮಕ್ಕಳು ಮಾತನಾಡುವಾಗ ಪಶ್ಚಿಮ ಘಟ್ಟಗಳ ಪೈಪಲೈನ್ ಯೋಜನೆ ಇದಕ್ಕೆ ಕಾರಣ ಅಂತಿರ್ತಾರೆ.

ಘಟ್ಟದ ಮಧ್ಯದಲ್ಲಿ ಅಚಾನಕ್ಕು ತೆರವಾದ ಅರಣ್ಯ ಮೋಡ ಹೊತ್ತು ತರುತ್ತಿದ್ದ ಗಾಳಿಯನ್ನು ದಿಕ್ಕೆಡಿಸುತ್ತಿದೆ.

ಇದು‌ ಈ‌ ವಿಚಿತ್ರ ಮಳೆಗೆ ಕಾರಣ ಅಂತ ಮಾತಾಡ್ತಿರ್ತಾರೆ. ಕಾರಣಗಳು ಏನೇ ಇದ್ರೂ ಅನುಭವಿಸುವುದು ಮಾತ್ರ ಭೀಕರ.

*ಮೂರು ದಿನ ಹಾಜರಿ ರಜೆ ಕೊಟ್ಟು ಕೆಲಸಕ್ಕೆ ಬರಬೇಡಿ ಅಂತ ಪದ್ಮಾವತಮ್ಮ ಮೊನ್ನೆಯೇ ಲೈನ್ ಆಳುಗಳಾಗಿ ಹೇಳಿದ್ದರು. ಮಂಟಿಪಟ್ಟೆಯಲ್ಲಿ ಮಳೆ ಗಾಳಿಗೆ ಹತ್ತಾರು ಮರಗಳು‌ ಈಗಾಗಲೆ ಬುಡಮೇಲಾಗಿವೆ. ಮೊನ್ನೆ ರಾತ್ರಿ ಅಷ್ಟಗಲಕ್ಕೂ ವ್ಯಾಪಿಸಿದ ಆ ಭೀಕರ ಸದ್ದು ನೂರು ವರ್ಷದ ಹಳೆಯ ಮಾವಿನ ಮರದ ಬಲಿಷ್ಠ ಹರೆ ಮುರಿದಿದ್ದು‌ ಅಂತ ಆಳುಗಳು ಹೇಳಿದ್ರು. ಇಂತಾ ಹೊತ್ತಲ್ಲಿ ತೋಟದಲ್ಲಿ ಕೆಲಸ ಮಾಡುವುದು ಅಪಾಯವನ್ನು ಮೈಮೇಲೆ ಎಳೆದುಕೊಂಡಂತೆಯೇ ಸರಿ.

ರಾತ್ರಿ ಎಂಟರ ಹೊತ್ತಿಗೆ ಗಾಳಿ ಮತ್ತೊಂದು ಸುತ್ತು ವೇಗ ಹೆಚ್ಚಿಸಿಕೊಂಡ ಪರಿಗೆ ಮನೆಯ ಎದುರುಗಡೆ ಪುಷ್ಟವಾಗಿ ಬೆಳೆದಿದ್ದ ಸಪೋಟ ಮರದ ಹಿರಿಯ ರೆಂಬೆ ಮುರಿದು ಅದರ ತುದಿರೆಕ್ಕೆ ಮೇಲುಗಡೆ ಕರೆಂಟ್ ತಂತಿಗೆ ಹೊಡೆದು ಅದು ಕತ್ತರಿಸಿ ಕೆಳಕ್ಕೆ ಬಿತ್ತು.

ಮನೆಯ ಪಕ್ಕದಲ್ಲೇ ಆದ ಈ‌ ಸದ್ದಿಗೆ‌ ಗೌಡರು ಮತ್ತಷ್ಟು ಭೀತರಾಗಿ ಹೊದ್ದ ರಗ್ಗನ್ನು ಜಾಡಿಸಿ ಹೊರಬಾಗಿಲು ತೆಗೆಯುತ್ತಿದ್ದಾಗ ಪದ್ಮಾವತಮ್ಮ ಗಂಡನನ್ನು ತಡೆದರು.

‘ಬಿದ್ದಿರೋದು ಕರೆಂಟು ತಂತಿ ಕಣಿ. ಏನೋ ಎಂತೊ ತಿಳಿದೆ‌ ಹೊರಕ್ಕೆ ‌ನೆಗಿಬೇಡಿ. ಮಳೆ‌ ಕಡಿಮೆಯಾದ ಮೇಲೇ ನೋಡಬಹುದು’ ಪದ್ಮಾವತಮ್ಮ ಹೇಳಿದ್ದು ಕೇಳಿ ಗೌಡರು ಮತ್ತೂ ಧಿಗ್ಮೂಡರಾದರು. ಆಳುಕಾಳು ಓಡಾಡುವ ಜಾಗ ಎನ್ನುವುದು ಸದ್ಯದ ಚಿಂತೆ.

ಕಿಟಿಕಿ ತೆಗೆದು ಅಪಾಯದ ಸಾಧ್ಯತೆಗಳನ್ನು ನೋಡ್ತಿದ್ದ ಪದ್ಮಾವತಮ್ಮ ಇರಿ ನೋಡಾಣಾ ಅಂತ ಗಂಡನಿಗೆ ಸಮಾಧಾನಿಸಿ ಕೊನೆಯ ಜೀವ ಇಟ್ಕೊಂಡಿದ್ದ ಫೋನ್ ಹಚ್ಚಿ ಕೆಳಗಿನ ಲೈನಿಗೆ ಕರೆ ಮಾಡಿ ಮಳೆ ನಿಲ್ಲೊವರೆಗೂ ಯಾರೂ ಮನೆ ಹತ್ರ ಬರಬೇಡಿ. ತಂತಿ ಬಿದ್ದಿದೆ, ನಾಯಿಗಳನ್ನು ಅಲ್ಲೇ ಕೂಡಿಕೊಳ್ಳಿ ಅಂತ ಹೇಳಿ ಕಿಟಕಿಯಿಂದ ಆಚೆ ನೋಡಿದ್ರು.

ಕೋಡಿನೀರಿಗೆ ಹುಚ್ಚು ಆವೇಶ ಬಂದಿದೆ.

ಗೋಡೆಯ ಬಿರುಕು‌ ಈಗ ಇನ್ನೂ ಸ್ಪಷ್ಟವಾಗಿ ಕಾಣಿಸ್ತಿದೆ.

ಅಷ್ಟರಲ್ಲಿ..

ಸುರಿವ ಆ ಮಳೆಯ ಸದ್ದು, ಹರಿವ ಕೋಡಿ ನೀರಿನ ಸದ್ದು, ಗಾಳಿಯ ಸದ್ದು, ಜೀರುಂಡೆ ಸದ್ದುಗಳನ್ನು ಮೀರಿ ಮೂರು ಫರ್ಲಾಂಗ್ ದೂರದಲ್ಲಿದ್ದ ಕೊಡವರ ಮನೆಯಿಂದ ಕೋವಿ ಸಿಡಿದ ಸದ್ದು ಕೇಳಿಸಿತು. ಗೌಡರು ಮತ್ತೂ ವಿಷಣ್ಣರಾದರು.

‘ಕೊಡಗರ ಅಮ್ಮ ಹೋಯ್ತು ಅಂತ ಕಾಣುತ್ತೆ’ ಧ್ವನಿ ಎಲ್ಲೋ ಆಳದಿಂದ ಬಂದಂತಿತ್ತು.

‘ಸಾಯೋ ವಯಸ್ಸೂ ಮೀರಿತ್ತು ತಗಳಿ. ಅದ್ಕೆ ಯಾಕೆ ನೀವು ಹಿಂಗೆ ಕಲ್ಲು ಕಂಬದಂಗೆ ನಿಂತ್ರಿ’ ಗದರಿದ ಪದ್ಮಾವತಮ್ಮ ಅಟ್ಟದ ಮೆಟ್ಟಿಲುಗಳನ್ನು ಹತ್ತಲಾರಂಭಿಸಿದರು.

*

ಶಿವೇಗೌಡರು ಬಾಲ್ಯದಿಂದಲೂ ಕೊಡವರ ಅಮ್ಮನ ಜೊತೆಗೆ ಒಡನಾಡಿದವರು. ಅವರ ಆರು ಮಕ್ಕಳೊಂದಿಗೆ ಗೌಡರನ್ನೂ ಸ್ವಂತ ಮಗನಂತೇ ಪ್ರೀತಿಸಿದ ಆ ಜೀವ ಇಂತಹ‌ ರಣ ಮಳೆಯ ದಿನ ತೀರಿಕೊಂಡಿದೆ. ಕೊನೆಯ ಕಾರ್ಯಕ್ಕೂ ತೊಂದರೆ ಆಯ್ತೇನೊ. ಶಿವೇಗೌಡರು ‌ಹೊರಗೆ ರಾಚಿಕೊಂಡಿದ್ದ ಕತ್ತಲನ್ನು ಮತ್ತೊಮ್ಮೆ ದೃಷ್ಟಿ ಇಟ್ಟು ನೋಡಿದರು.

ಅಗತ್ಯಕ್ಕಿಂತಲೂ ವೇಗವಾಗಿ ಗಾಢವಾಗಿ ಕತ್ತಲು ವ್ಯಾಪಿಸುತ್ತಿದೆ. ಅದಕ್ಕಿಂತ ವೇಗವಾಗಿ ಬೀಸುವ ಗಾಳಿ.

ದಬ್ಬಳದಂತಹ ಹನಿಗಳು ಗಾಳಿಯ ವೇಗಕ್ಕೆ ಚೆಲ್ಲಾಪಿಲ್ಲಿಯಾಗಿ ಕಿಟಿಕಿ ಬಾಗಿಲುಗಳ ಸಣ್ಣ ಸಂದಿನಲ್ಲಿ ತೂರಿ ಮನೆಯೊಳಗನ್ನೂ ಒದ್ದೆಯಾಗಿಸಿದೆ..

‘ಒಂಚೂರು ಇಲ್ ಬರ್ತಿರೇನಿ…?’

ಪದ್ಮಾವತಮ್ಮನ ಸ್ವರದಲ್ಲಿದ್ದ ಆತಂಕ ಶಿವೇಗೌಡರ ಎದೆಗೆ ತಾಕಿ ನಡುಗುತ್ತಲೇ ಮೆಟ್ಟಿಲು ಹತ್ತಲಾರಂಭಿಸಿದರು. ತಾನೇ ಕೈಯಾರೆ ತಂದುಕೊಂಡ ಸಂಕಟ ಇದು. ಏನಾದರೂ ಹೆಚ್ಚು ಕಮ್ಮಿ ಆದರೆ..

ಇವಳಿಗೇನಾದರೂ ಆದರೆ..?

ಪದ್ಮಾ…ಕೂಗಲೂ ಶಿವೇಗೌಡರ ಕೊರಳು ಸಹಕರಿಸುತ್ತಿಲ್ಲ. ನಡುಗುತ್ತಲೇ ಮೇಲೆ ಹತ್ತಿ ಹೆಂಡತಿ ನಿಂತಿದ್ದ ಕಡೆ ನಡೆದರು. ಮೊದಲೇ ಹೇಳಿದಂತೆ ಐವತ್ತು ಮಂದಿ ಮಲಗಬಹುದಾದ ವಿಶಾಲವಾದ ಮಹಡಿ ಅದು.

ಪದ್ಮಾವತಮ್ಮ ಮೂಲೆಯಲ್ಲಿ ಸೂರಿಗೆ ಟಾರ್ಚು ಹಿಡಿದು ‘ಇಲ್ ಬನ್ನಿ ಇಲ್ಲಿ’ ಅಂದರು.

ಒಂದೊಂದು ಹೆಜ್ಜೆ ಕೀಳುವುದು ಮಣಭಾರದಂತಾಗಿ ಗೌಡರು‌ ನಡೆಯಲಾರದೇ ನಡೆದು ಹೆಂಡತಿ ತೋರಿದ ಕಡೆಗೆ ನೋಡುತ್ತಾರೆ!!

ನೋಡುತ್ತಲೇ ಗಿರ್ ಎಂದ ತಲೆಯನ್ನು ಸಂಭಾಳಿಸಲಾಗದೆ ಅಲ್ಲೇ‌ ಒಟ್ಟಿದ್ದ ಮೆಣಸಿನ ಚೀಲಗಳಿಗೆ ಬಳಲಿದವರಂತೆ ಒರಗಿ ಕೊಂಡರು. ವಿಶಾಲವಾದ ಸೂರಿನ ಕೊನೆಯ ಮೂಲೆಯ ಭಾಗ ತುಸುವೇ ಕೆಳಕ್ಕೆ ಕುಸಿದಿದೆ!!

ಅಂದರೆ..

ಈಗ… ಇನ್ನೇನು… ಈ ಇಡೀ ಮಹಡಿಯ ಗೋಡೆ ಕುಸಿಯುತ್ತದೆ. ಆಮೇಲೆ ಈ ಸೂರು, ಅದಕ್ಕೆ ಸೇರಿಸಿರುವ ದೊಡ್ಡ ಬೀಮೂ ಕುಸಿಯುತ್ತದೆ.

ಅದರಡಿಯಲ್ಲಿ ನಾವಿಬ್ಬರೂ ಸೇರಿಕೊಳ್ಳುತ್ತೇವೆ.

ಇದು ನಮ್ಮ ಕೊನೆಯ ಕ್ಷಣಗಳಿರಬಹುದು. ಶಿವೇಗೌಡರು ಮನಸ್ಸಿನಲ್ಲೇ ಹೇಳಿಕೊಂಡರು. ಇಲ್ಲಿಂದ ‌ಕೆಳಕ್ಕೆ ಇಳಿಯುವಷ್ಟು ಸಮಯವನ್ನಾದರೂ ದೇವರು ಕರುಣಿಸಬಹುದೇ

‘ಪದ್ಮಾ….’

ಯಾಕೋ ಗೊತ್ತಿಲ್ಲ.. ಹೆಂಡತಿಯನ್ನು ಬಾಯಿ ತುಂಬಾ ಕೊನೆಯ ಬಾರಿಗೆ ಕರೆಯಬೇಕೆನಿಸಿತು.

ಸ್ವರ ಹೊರಡಲಿಲ್ಲ. ಬಾವಿಯ ಕೋಡಿ ನೀರು ಘಳಿಗೆಯಿಂದ ಘಳಿಗೆಗೆ ಸದ್ದು‌ ಏರಿಸಿಕೊಳ್ಳುತ್ತಿದೆ.

ಶಿವೇಗೌಡರು ಸುತ್ತಲೂ ಒಮ್ಮೆ ನೋಡಿದರು. ನಿನ್ನೆಯವರೆಗೂ ಚಿನ್ನದ ಊಟೆಗಳಂತೆ ಕಾಣ್ತಿದ್ದ ಕಾಳುಮೆಣಸಿನ ಚೀಲಗಳು ಈ ಕ್ಷಣ ಯಮದೂತರಂತೆ ಕಾಣಿಸುತ್ತಿವೆ.

ಪದ್ಮಾ… ಅವಳಿಗೇನಾದರೂ ಆಗಿ ತಾನು ಉಳಿದರೆ…ನನಗೆ ಕ್ಷಮೆ ಇದೆಯಾ?

ಮಕ್ಕಳು ಕ್ಷಮಿಸುತ್ತಾರಾ..?? ಆಮೇಲೇನು ಮಾಡಲಿ?

ಜೀವ ನಡುಗುತ್ತಿದ್ದರೂ ಅದನ್ನು ತೋರಿಸಿಕೊಳ್ಳದ ಪದ್ಮಾವತಮ್ಮ ಮೆಲ್ಲಗೆ ಮಹಡಿಯ ಕಿಟಿಕಿಯ ಕಡೆಗೆ ನಡೆದು ಆಚೆ ನೋಡುವುದಕ್ಕೂ ‘ಧೊಪ್‌’ ಎನ್ನುವ ಸದ್ದಾಗುವುದಕ್ಕೂ ಸರಿ ಹೋಗಿ ಶಿವೇಗೌಡರು ಹೆದರಿ ಬವಳಿಬಿದ್ದರು.

ಕಾಲಕೆಳಗಿನ ಮಹಡಿಯ ನೆಲ, ದೊಡ್ಡ ಗೋಡೆ ನಿಧಾನವಾಗಿ ವಿಚಿತ್ರವಾದ ಸದ್ದಿನೊಂದಿಗೆ ಕುಸಿಯುತ್ತಿವೆ. ಸುತ್ತಲೂ ಒಟ್ಟಿದ್ದ ಕಾಳು ಮೆಣಸಿನ ಚೀಲಗಳು ಒಂದರ ಮೇಲೊಂದು ಬಿದ್ದು ಶಿವೇಗೌಡರು ಅದರಡಿಯಲ್ಲಿ ಮುಚ್ಚಿ ಹೋಗುತ್ತಿದ್ದಾರೆ..

‘ಪದ್ಮಾ…ಪ…’ ಪದ್ಮಾವತಮ್ಮನ ಕೈ ಬೆರಳು ಸಿಕ್ಕಿದರೂ ಸಾಕೆನ್ನುವಂತೆ ಗೌಡರು ಆ ಮೂಟೆಗಳ ಭಾರ ತಳ್ಳುತ್ತಾ ಹೆಂಡತಿಯೆಡೆಗೆ ಕೈ ಚಾಚುತ್ತಿದ್ದಾರೆ.

‘ನೆಲ ಕುಸಿಯೆ ಪದವಿಹುದು’

‘ಗೇಟು ಮುರಿದು ಭೀಮ ಒಳಗ್ ಬರ್ತಿದೆ’

‘ಕೇಳಿ ಇಲ್ಲಿ.. ಭೀಮ ಗೇಟು ಮುರಿತು..’

ಪದ್ಮಾವತಮ್ಮ ಕಿಟಿಕಿಯ ಬಳಿಯಿಂದ ಜೋರಾಗಿ ಕೂಗಿ ಹೇಳಿದ್ರು.

ಅಂದರೆ…ಇದೆಲ್ಲವೂ ಕನಸು.. ಗೋಡೆ ಕುಸಿದಿಲ್ಲ. ಸೂರು ಕಳಚಿಲ್ಲ, ಮೂಟೆ ಉರುಳಿಲ್ಲ. ಉಸಿರು ನಿಂತಿಲ್ಲ.

ಮುಖ್ಯವಾಗಿ ಪದ್ಮಾವತಮ್ಮ ಇಲ್ಲೇ ಎದುರಿಗೇ ನಿಂತಿದ್ದಾರೆ. ಶಿವೇಗೌಡರು ತತ್ತರಿಸುತ್ತಾ ಮೇಲಕ್ಕೆ ಎದ್ದು ಕಿಟಕಿಯ ಬಳಿ ಬಂದರು. ಪದ್ಮಾವತಮ್ಮ ಕೈಯಲ್ಲಿದ್ದ ಟಾರ್ಚ್ ಬೆಳಕನ್ನು ದೂರದಲ್ಲಿದ್ದ ಗೇಟಿನ ಕಡೆಗೆ ಹಿಡಿದರು. ಭೀಮ ಸಾವಕಾಶವಾಗಿ ಮುರಿದ ಗೇಟನ್ನು ದಾಟಿಕೊಂಡು ಒಳಬರುತ್ತಿದ್ದಾನೆ. ಸುರಿಯುತ್ತಿರುವ ಘೋರ ಮಳೆ, ಬೀಸುತ್ತಿರುವ ಪ್ರಳಯದ ಗಾಳಿ, ಕೋಡಿಯ ಹರಿವು, ಮುರಿದು ಬೀಳುತ್ತಿರುವ ಮರಗಳ ಸದ್ದು ಇದಾವುದೂ ಭೀಮನ ಶಾಂತಿಗೆ ಭಂಗ ತರುವುದಿಲ್ಲ ಎಂಬಂತೆ ಮತ್ತೂ ನಿಧಾನವಾಗಿ.. ಒಂದು ಹೆಜ್ಜೆ ಇಟ್ಟು ಎಷ್ಟೋ ಹೊತ್ತಿನ ನಂತರ ಮುಂದಿನ ಹೆಜ್ಜೆ ತೆಗೆಯುತ್ತಿದ್ದಾನೆ.

‘ಭೀಮಾ..ನಮ್ಮಪ್ಪ…’

ಶಿವೇಗೌಡರ ಧ್ವನಿ ಎಂದೂ ಇಷ್ಟೊಂದು ಕ್ಷೀಣಿಸಿದ್ದನ್ನು ಪದ್ಮಾವತಮ್ಮ ಕೇಳಿರಲಿಲ್ಲ.

‘ಏನಾದರೂ ಆಗಬೇಕುಂತಿದ್ರೆ ಪಾತಾಳದಲ್ಲಿ ಅಡಗಿದ್ರೂ ಆಗುತ್ತೆ. ಬನ್ನಿ ಈಗ’ ಗದರಿದ ಹೆಂಡತಿಯನ್ನು ನೋಡುತ್ತಾ ಮೆಲ್ಲಗೆ

ಕೆಳಗಿಳಿಯತೊಡಗಿದರು ಗೌಡರು. ಕೊಡವರ ಮನೆಯ ತುಪಾಕಿಗಳ ಸದ್ದು ಈಗ ಮತ್ತೆರಡು ಬಾರಿ ಕೇಳಿಸಿತು.

*

ರೂಮಿಗೆ ಹೋಗಿ ಕಿಟಿಕಿ ತೆಗೆದು ಭೀಮಾ…ಅಂತ ಕೂಗಿದ ಪದ್ಮಾವತಮ್ಮ ‘ಬನ್ನಿ ಇಲ್ಲಿ’ ಅಂತ ಮತ್ತೊಮ್ಮೆ ಉದ್ವೇಗದಲ್ಲಿ ಕೂಗಿದರು.

ಆನೆಯೆನ್ನುವ ಜೀವವೇ ಹಾಗೆ.

ದಿಗಿಲಾಗುವ ಬೆನ್ನಿಗೇ ದರ್ಶನದ ಅನುಭವವನ್ನೂ ಕೊಡುತ್ತದೆ. ಭಯದ ಜೊತೆಗೇ ಭಕ್ತಿಯೂ ಮೂಡುತ್ತದೆ. ಆತಂಕದ ನೆರಳಲ್ಲಿ ಅಕ್ಕರೆಯೇ ಮೇಲುಗೈ ಸಾಧಿಸುತ್ತದೆ.

ಭೀಮಾ ಈಗ ಇವರ ಕಿಟಕಿಯಿಂದ ನೂರು ಹೆಜ್ಜೆ ದೂರದಲ್ಲಿ ನಿಂತು ಬಾವಿಯಿಂದ ಉಕ್ಕುತ್ತಿರುವ ಕೋಡಿ ಕಡೆಗೇ ನೋಡುತ್ತಿದ್ದಾನೆ.

‘ಅಪ್ಪಾ.. ಭೀಮಾ.. ಬರಬೇಡ ಕಣೋ ಮಗನೇ.. ಕರೆಂಟು ವೈರು ತುಂಡಾಗಿ ಬಿದ್ದಿತೆ’

ಆರ್ದ್ರತೆಯಿಂದ ಹೇಳಿದರು ಶಿವೇಗೌಡರು.

ಕಳೆದ ಬಾರಿ ಪಕ್ಕದ ತೋಟದಲ್ಲಿ ಕರೆಂಟ್ ಬೇಲಿ ದಾಟುವಾಗ ತೀರಿಕೊಂಡಿದ್ದ ಆನೆ, ಅದರ ಕುಟುಂಬದ ಗೋಳು, ಅದನ್ನು ಸಂಸ್ಕಾರ ಮಾಡಿದ ನೆನಪು ಇನ್ನೂ ಗೌಡರ ಎದೆಯಲ್ಲಿ ಹಸಿಯಾಗಿಯೇ ಇತ್ತು.

ಗೋಡೆ ಬಳಸಿ ರಣವೇಗದಲ್ಲಿ ಹರಿಯುತ್ತಿರುವ ಕೋಡಿ ನೀರು, ಸಣ್ಣಗೆ ಕುಸಿದ ಸೂರು, ಉರುಳಬಹುದಾದ ಅಟ್ಟ ಇವಾವೂ ಈಗ ನೆನಪಾಗುತ್ತಿಲ್ಲ. ಈ ಹೊತ್ತಿಗೆ ತಮ್ಮನ್ನು ಈ ಪ್ರಳಯರೂಪಿ ಮಳೆಯಿಂದ ಕಾಪಾಡುವ ಸಲುವಾಗಿಯೇ ಬಂದಂತಿದ್ದ ಭೀಮನನ್ನು ನೋಡುವ ಸಡಗರದಲ್ಲಿ ಈ ವೃದ್ಧ ದಂಪತಿಗಳು ಮುಳುಗಿದರು.

ಗಂಡನ ಸಂಭ್ರಮವನ್ನೊಮ್ಮೆ ಕಣ್ತುಂಬಿಕೊಂಡ ಪದ್ಮಾವತಮ್ಮ ‘ಹೋಗು ಭೀಮಾ..ಈ ಹುಯ್ಯಾ ಮಳೆಲಿ ನಿಂಗೇನ್ ಕೆಲ್ಸ? ಹೋಗಿ ಎಲ್ಲದ್ರೂ ದೊಡ್ಡ ಮರದಡಿ ನಿಂತ್ಕಾ. ಮೊದಲೇ ಹುಚ್ಮಳೆ ಇದು. ಇದರ ಮೇಲೆ ನಿಂದೊಂದು…''

ಅಕ್ಕರೆಯಿಂದ ಗದರಿದರು. ಆನೆಗಳ ಶ್ರವಣ ಸಾಮರ್ಥ್ಯ ಮನುಷ್ಯರಿಗಿಂತ ಹಲವು ಪಟ್ಟು ಹೆಚ್ಚು. ಗಾಳಿಯಲ್ಲಿ ಹರಿಯುವ ಶಬ್ದ ತರಂಗಗಳಲ್ಲದೆ ಭೂಮಿಯ ಕಂಪನಗಳಿಂದಲೂ ಅವು ಸದ್ದನ್ನು ಆಲಿಸುತ್ತವೆ. ಮಳೆಯ ಸದ್ದು ಇಳಿದಿದೆಯೋ ಅಥವಾ ಭೀಮನ ಆಗಮನದಿಂದ ಹಾಗನಿಸ್ತಿದೆಯೋ ಗೊತ್ತಾಗಲಿಲ್ಲ ಗೌಡರಿಗೆ.

‘ನಮ್ಮ ಕ್ಷೇಮ ನೋಡ್ಕೊಳಪ್ಪ.. ಸ್ವಾಮಿ ವಿನಾಯಕ…ನಾಳಿಕೆ ಒಂದ್ ನಾಕು ಹಲಸಿನಕಾಯಿ ಇಟ್ಟಿರ್ತಿನಿ. ತಿನ್ನುವಂತೆ’ ಕೈ ಮುಗಿದರು ಗೌಡರು.

ಕಿಟಿಕಿಯಿಂದ ಕಾಣುತ್ತಿದ್ದ ಆ ಹಿರಿಯ ದಂಪತಿಗಳನ್ನು ಒಂದೆರಡು ನಿಮಿಷ ಸುಮ್ಮನೆ ನೋಡಿದ ಭೀಮಾ.

‘ಕಾಪಾಡಪ್ಪ..ಗಣಪತಿ…’ ಶಿವೇಗೌಡರು ಮತ್ತೂ ದೈನ್ಯರಾಗಿದ್ದರು.

ತಿರುಗಿ ಒಂದು ಹೆಜ್ಜೆ ಮುಂದೆ ತೆಗೆದ ಭೀಮ, ಮತ್ತೆ ಎರಡು ಹೆಜ್ಜೆ ಹಿಂದಿಟ್ಟು ಮನೆಯ ಕಡೆಗೆ ನೋಡಿ ಸೊಂಡಿಲೆತ್ತಿ ಭೂಮಿ ಆಕಾಶ ಒಂದು ಮಾಡುವಂತೆ ಘೀಳಿಟ್ಟ.‌ ಕೆಳಗಡೆ ಲೈನ್ ಮನೆಯಲ್ಲಿ ಕೂಡಿ ಹಾಕಿದ್ದ ನಾಯಿಗಳು ಒಮ್ಮೆಗೆ ಬೊಗಳಲಾರಂಭಿಸಿದವು.

ನಂತರ ನಿಧಾನವಾಗಿ ತಾನೇ ಮುರಿದಿಟ್ಟಿದ್ದ ಗೇಟನ್ನು ತುಳಿಯದಂತೆ ದಾಟುತ್ತಾ ವಾಪಸು ಹೊರಟ ಭೀಮಾ. ಪದ್ಮಾವತಮ್ಮ ದೇವರ ಮನೆಗೆ ಹೋಗಿ ದೀಪಕ್ಕೆ ತುಪ್ಪ ಹಾಕಿ ಕೈ ಮುಗಿದು ಬಂದರು. ಐದಾರು ನಿಮಿಷದಲ್ಲಿ ಮಳೆ ತಗ್ಗಿದಂತಾಗಿ ಗೌಡರು ಹೊರಗಡೆ ಟಾರ್ಚ್ ಬಿಟ್ಟು ನೋಡಿದರೆ ತೋಟದ ಕೊನೆಯ ತಿರುವಿನಲ್ಲಿ ಮನೆಯ ಕಡೆಗೇ ನೋಡುತ್ತಾ ಭೀಮ ನಿಂತಿರುವುದು ಕಂಡಿತು.

PREV
Read more Articles on

Recommended Stories

ಡುಂಡಿ ಯಾತ್ರೆ ಪುಟಗಳು - ಹನಿಗವಿ ಡುಂಡಿರಾಜ್‌ ಆತ್ಮ ಕಾದಂಬರಿಯ ನಗೆ ಪ್ರಸಂಗಗಳು
ಪಾಕ್‌ನ ಕುತಂತ್ರಕ್ಕೆ ಭಾರತದ ‘ಕಾರ್ಗಿಲ್‌’ ಉತ್ತರ