ಬೆಂಗಳೂರು : ತಂತ್ರಜ್ಞಾನ ಕ್ಷೇತ್ರದಲ್ಲಿ ಲಿಂಗ ಅಸಮಾನತೆ ಹೋಗಲಾಡಿಸಲು ಮತ್ತು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿನಿಯರಿಗೆ ಉತ್ತೇಜನ ನೀಡಲು ಅಮೆಜಾನ್ ಇಂಡಿಯಾ ಮಹತ್ವದ ಹೆಜ್ಜೆ ಇಟ್ಟಿದೆ. ತನ್ನ ಮಹತ್ವದ ಅಮೆಜಾನ್ ಫ್ಯೂಚರ್ ಎಂಜಿನಿಯರ್ ಯೋಜನೆ ಅಡಿಯಲ್ಲಿ ವಾರ್ಷಿಕ ವಿದ್ಯಾರ್ಥಿವೇತನಗಳ ಸಂಖ್ಯೆಯನ್ನು 500 ಹೊಸ ಸ್ಥಾನಗಳ ಸೇರ್ಪಡೆಯೊಂದಿಗೆ ಒಟ್ಟು 2,200ಕ್ಕೆ ವಿಸ್ತರಿಸುವುದಾಗಿ ಕಂಪನಿ ಪ್ರಕಟಿಸಿದೆ.
ಕಡಿಮೆ ಆದಾಯದ ಕುಟುಂಬಗಳ ಎಂಜಿನಿಯರಿಂಗ್ ವಿದ್ಯಾರ್ಥಿನಿಯರಿಗೆ ಈ ಯೋಜನೆಯು ನಾಲ್ಕು ವರ್ಷಗಳ ಅವಧಿಗೆ ತಲಾ ₹2 ಲಕ್ಷ ಹಣಕಾಸು ನೆರವು ನೀಡುತ್ತದೆ. ಕೇವಲ ಹಣಕಾಸಿನ ನೆರವಷ್ಟೇ ಅಲ್ಲದೆ, ವಿದ್ಯಾರ್ಥಿನಿಯರ ಸಮಗ್ರ ಬೆಳವಣಿಗೆಗೆ ಪೂರಕವಾಗಿ ಕೆಳಗಿನ ಸೌಲಭ್ಯಗಳನ್ನು ಒದಗಿಸಲಾಗುತ್ತದೆ:
- ವೃತ್ತಿ ಅವಕಾಶ: ಎರಡನೇ ವರ್ಷದ ನಂತರ 8 ವಾರಗಳ ಕಾಲ ಪಾವತಿಸಿದ ಇಂಟರ್ನ್‌ಶಿಪ್ ಅವಕಾಶ.
ಈ ಕುರಿತು ಅಮೆಜಾನ್ ಉಪಾಧ್ಯಕ್ಷೆ ಕ್ಯಾಂಡಿ ಕ್ಯಾಸಲ್ ಬೆರ್ರಿ ಅವರು ಮಾತನಾಡಿ, ‘ಪ್ರತಿ ವಿದ್ಯಾರ್ಥಿಗೂ ಅವರ ಸಾಮರ್ಥ್ಯ ಕಂಡುಕೊಳ್ಳುವ ಅವಕಾಶವಿರಬೇಕು. ಈ ಶಿಷ್ಯವೇತನಗಳ ಮೂಲಕ ನಾವು ಭಾರತದ ಭವಿಷ್ಯದ ನಾಯಕರ ಮೇಲೆ ಹೂಡಿಕೆ ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
2022ರಲ್ಲಿ ಆರಂಭವಾದ ಈ ಯೋಜನೆ ಇಂದು ಬೃಹತ್ ಮಟ್ಟಕ್ಕೆ ಬೆಳೆದಿದೆ. 2025ರಲ್ಲಿ ಪದವಿ ಪಡೆದ ಮೊದಲ ಸಮೂಹದ ವಿದ್ಯಾರ್ಥಿನಿಯರು ಅತ್ಯುತ್ತಮ ಸಾಧನೆ ಮಾಡಿದ್ದಾರೆ.ಮೊದಲ ಬ್ಯಾಚ್‌ನ ವಿದ್ಯಾರ್ಥಿನಿಯರು ಅಮೆಜಾನ್ ಸೇರಿದಂತೆ ಪ್ರಮುಖ ಫಾರ್ಚೂನ್ 500 ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದಾರೆ.
ಟೈಯರ್-2 ಮತ್ತು ಟೈಯರ್-4 ನಗರಗಳ ಮೊದಲ ತಲೆಮಾರಿನ ಪದವೀಧರರಿಗೆ ಈ ಯೋಜನೆ ವರದಾನವಾಗಿದೆ.ತೆಲಂಗಾಣದ ಶ್ರೇಯ ಮೂಲ ಮತ್ತು ಮಹಾರಾಷ್ಟ್ರದ ಅಂಜಲಿ ಅಷ್ಟಕೆ ಅಂತಹ ವಿದ್ಯಾರ್ಥಿನಿಯರು ಇಂದು ಸಾಫ್ಟ್‌ವೇರ್ ಎಂಜಿನಿಯರ್ ಹಾಗೂ ಅನಾಲಿಟಿಕ್ಸ್ ವಿಭಾಗದಲ್ಲಿ ವೃತ್ತಿ ಆರಂಭಿಸಿ ಮಾದರಿಯಾಗಿದ್ದಾರೆ.ಅಮೆಜಾನ್ 2022ರಿಂದ ಎ.ಎಫ್.ಇ ಕಾರ್ಯಕ್ರಮಕ್ಕಾಗಿ ಸುಮಾರು ₹50 ಕೋಟಿ (6 ಮಿಲಿಯನ್ ಡಾಲರ್) ಹೂಡಿಕೆ ಮಾಡಿದೆ.
ಈ ಯೋಜನೆಯು ಕೇವಲ ವಿದ್ಯಾರ್ಥಿವೇತನಕ್ಕೆ ಸೀಮಿತವಾಗದೆ, ದೇಶದ 50,000 ಸರ್ಕಾರಿ ಶಾಲೆಗಳ 4.8 ಮಿಲಿಯನ್ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಸೈನ್ಸ್ ಮತ್ತು ಎಐ ಶಿಕ್ಷಣವನ್ನು ತಲುಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಫೌಂಡೇಷನ್ ಫಾರ್ ಎಕ್ಸಲೆನ್ಸ್ ಮತ್ತು ನವ್ ಗುರುಕುಲ್ ಸಹಯೋಗದೊಂದಿಗೆ ಈ ಯೋಜನೆ ಕಾರ್ಯನಿರ್ವಹಿಸುತ್ತಿದ್ದು, ತಂತ್ರಜ್ಞಾನ ಲೋಕದಲ್ಲಿ ಭಾರತದ ಯುವತಿಯರು ಸಬಲರಾಗಲು ಹೊಸ ಹಾದಿ ನಿರ್ಮಿಸಿದೆ.