;Resize=(412,232))
ಬೆಂಗಳೂರು : ಶೃಂಗೇರಿ ಕ್ಷೇತ್ರದ ಶಾಸಕರಾಗಿ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಆಯ್ಕೆಯಾಗಿ ಐದು ದಿನಗಳ ಹಿಂದಷ್ಟೇ ಮಾಜಿ ಆಗಿದ್ದ ಟಿ.ಡಿ.ರಾಜೇಗೌಡ ಅವರು ಕಾನೂನು ಸಮರದ ಬಳಿಕ ಮತ್ತೆ ಶಾಸಕ ಸ್ಥಾನ ದಕ್ಕಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸದ್ಯದಲ್ಲೇ ವಿಧಾನಸಭೆ ಸಭಾಧ್ಯಕ್ಷರಿಂದ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ರಾಜ್ಯದಲ್ಲೇ ಮೊದಲ ಬಾರಿಗೆ ಶಾಸಕರೊಬ್ಬರು ಒಂದೇ ಅವಧಿಯಲ್ಲಿ ಎರಡು ಬಾರಿ ಪ್ರಮಾಣವಚನ ಸ್ವೀಕಾರ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ.
2023ರ ಸಾರ್ವತ್ರಿಕ ಚುನಾವಣೆಯಲ್ಲಿ ಶೃಂಗೇರಿ ಶಾಸಕರಾಗಿ ರಾಜೇಗೌಡ ಆಯ್ಕೆಯಾಗಿದ್ದರು. ಹೈಕೋರ್ಟ್ ಆದೇಶದ ಮೇಲೆ ನಡೆದ ಅಂಚೆಮತಗಳ ಮರು ಎಣಿಕೆ ವೇಳೆ ಚುನಾವಣಾಧಿಕಾರಿಗಳು ಬಿಜೆಪಿಯ ಡಿ.ಎನ್.ಜೀವರಾಜ್ ಅವರನ್ನು ವಿಜಯಿ ಎಂದು ಘೋಷಿಸಿದ್ದರು.
ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಟಿ.ಡಿ.ರಾಜೇಗೌಡ ಅವರ ಅರ್ಜಿ ಆಲಿಸಿದ ಸುಪ್ರೀಂ ಕೋರ್ಟ್, ಮರು ಎಣಿಕೆಯ ಹಿಂದಿನ ಸ್ಥಿತಿಯನ್ನೇ ಮುಂದುವರೆಸಲು ಮಧ್ಯಂತರ ಆದೇಶ ನೀಡಿದೆ. ಈ ಹಿನ್ನೆಲೆಯಲ್ಲಿ ಶಾಸಕ ಸ್ಥಾನದ ಹಾವು ಏಣಿ ಆಟದಲ್ಲಿ ರಾಜೇಗೌಡ ಅವರಿಗೆ ಮತ್ತೆ ಶಾಸಕರಾಗುವ ಯೋಗ ಲಭಿಸಿದೆ.
ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶದ ಬೆನ್ನಲ್ಲೇ ವಿಧಾನಸಭೆ ಸಚಿವಾಲಯದಲ್ಲಿ ಚರ್ಚೆಗಳು ಶುರುವಾಗಿದ್ದು, ಕೌಲ್ ಆ್ಯಂಡ್ ಶಕ್ಡೇರ್ ಪುಸ್ತಕದ ನಿಯಮದ ಪ್ರಕಾರ ಇಂತಹ ಸನ್ನಿವೇಶದಲ್ಲಿ ಎರಡನೇ ಬಾರಿಗೆ ಪ್ರಮಾಣವಚನ ಸ್ವೀಕರಿಸಬೇಕು ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.
ಸುಪ್ರೀಂ ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಮರು ಎಣಿಕೆ ಮೊದಲಿನ ಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದ್ದು, ಇದರಂತೆ ರಾಜೇಗೌಡ ಶಾಸಕರಾಗಿ ಮುಂದುವರೆಯಲಿದ್ದಾರೆ. ಇದರ ನಡುವೆ ಐದು ದಿನಗಳ ಹಿಂದೆ ಮರು ಎಣಿಕೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಜೀವರಾಜ್ ಅವರಿಗೆ ಪ್ರಮಾಣಪತ್ರ ನೀಡಿದ್ದರು. ಅದರ ಆಧಾರದ ಮೇಲೆ ಸಭಾಧ್ಯಕ್ಷರು ಪ್ರಮಾಣವಚನ ಬೋಧಿಸಿದ್ದರು.
ಇದೀಗ ರಾಜೇಗೌಡ ಅವರಿಗೆ ಶಾಸಕ ಸ್ಥಾನ ವಾಪಸಾಗಿದ್ದು, ಆದರೆ ಶೃಂಗೇರಿ ಶಾಸಕರಾಗಿ ಜೀವರಾಜ್ ಅವರು ಪ್ರಮಾಣವಚನ ಸ್ವೀಕರಿಸಿರುವ ಹಿನ್ನೆಲೆಯಲ್ಲಿ ಕೌಲ್ ಆ್ಯಂಡ್ ಶಕ್ಡೇರ್ ಪುಸ್ತಕದಲ್ಲಿನ ನಿಯಮಗಳ ಪ್ರಕಾರ ರಾಜೇಗೌಡ ಅವರಿಗೆ ಪುನಃ ಪ್ರಮಾಣವಚನ ಬೋಧಿಸಬೇಕಿದೆ ಎಂದು ವಿಧಾನಸಭೆ ಸಚಿವಾಲಯದ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.
ಸುಪ್ರೀಂ ಕೋರ್ಟ್‌ನ ಮಧ್ಯಂತರ ಆದೇಶದ ಪ್ರತಿ ಇನ್ನೂ ನಮ್ಮ ಕೈ ಸೇರಿಲ್ಲ. ನ್ಯಾಯಾಲಯ ಆದೇಶದ ಆಧಾರದ ಮೇಲೆ ಚುನಾವಣಾ ಆಯೋಗ ನಮಗೆ ನಿರ್ದೇಶನ ನೀಡಬೇಕಾಗುತ್ತದೆ. ಆದರೆ ಈವರೆಗೆ ಚುನಾವಣಾ ಆಯೋಗಕ್ಕೂ ಮಧ್ಯಂತರ ಆದೇಶದ ಪ್ರತಿ ಲಭ್ಯವಾಗಿಲ್ಲ.
ಒಂದು ವೇಳೆ ಚುನಾವಣಾ ಆಯೋಗ ರಾಜೇಗೌಡರೇ ಶಾಸಕರಾಗಿ ಮುಂದುವರೆಯಬೇಕು ಎಂದು ನಿರ್ದೇಶನ ನೀಡಿದರೆ ಅವರು ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಬೇಕಾಗುತ್ತದೆ ಎಂದು ವಿಧಾನಸಭೆ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ರಾಜ್ಯದಲ್ಲಿ ಇದೇ ಮೊದಲು
ಒಂದೇ ಅವಧಿಗೆ ಶಾಸಕರಾಗಿ ಎರಡು ಬಾರಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸನ್ನಿವೇಶನ ಇದೇ ಮೊದಲ ಬಾರಿಗೆ ಎದುರಾಗಿದೆ. ಒಂದೊಮ್ಮೆ ರಾಜೇಗೌಡ ಅವರು ಪ್ರಮಾಣವಚನ ಸ್ವೀಕರಿಸಿದರೆ ಹೊಸ ಇತಿಹಾಸ ದಾಖಲಾಗಲಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿಗಳ ಸ್ಥಾನಕ್ಕೆ ಎರಡೆರಡು ಬಾರಿ ಪ್ರಮಾಣವಚನ ಸ್ವೀಕರಿಸಿದ ಸಂದರ್ಭಗಳು ಇವೆ. ಉದಾ: 2018ರ ಮೇ 17 ರಂದು ಪ್ರಮಾವಚನ ಸ್ವೀಕರಿಸಿ 2018ರ ಮೇ 19ರಂದು ವಿಶ್ವಾಸ ಮತ ಸಾಬೀತು ಮಾಡಲಾಗದೆ ರಾಜೀನಾಮೆ ನೀಡಿದ್ದರು. 2019ರ ಜುಲೈ 26 ರಂದು ಮತ್ತೆ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಶಾಸಕ ಸ್ಥಾನಕ್ಕಾಗಿಯೇ ಎರಡೆರಡು ಬಾರಿ ಪ್ರಮಾಣವಚನ ಸ್ವೀಕರಿಸಿದ ಉದಾಹರಣೆ ಇಲ್ಲ ಎನ್ನಲಾಗಿದೆ.