ಇಂಧನ ಭದ್ರತೆಯೇ ಹೊಸ ಸ್ವಾವಲಂಬನೆ

Published : May 12, 2026, 12:27 PM IST
Goutham adani

ಸಾರಾಂಶ

ಇಂದಿನ ಜಗತ್ತಿನಲ್ಲಿ ಇಂಧನವನ್ನು ನಿಯಂತ್ರಿಸುವ ದೇಶವೇ ಕೈಗಾರಿಕೆಯನ್ನು ನಡೆಸುತ್ತದೆ. ಕಂಪ್ಯೂಟರ್‌ ಸಾಮರ್ಥ್ಯವನ್ನು ನಿಯಂತ್ರಿಸುವ ದೇಶವೇ ಬುದ್ಧಿಮತ್ತೆಯನ್ನು ನಿಯಂತ್ರಿಸುತ್ತದೆ. ಎರಡನ್ನೂ ಹೊಂದಿರುವ ದೇಶ ಮಾತ್ರ ಮುಂದಿನ ಶತಮಾನವನ್ನು ರೂಪಿಸುತ್ತದೆ. -ಗೌತಮ್‌ ಅದಾನಿ, ಅದಾನಿ ಗ್ರೂಪ್‌ ಅಧ್ಯಕ್ಷ

ಈ ವರ್ಷವು ಜಾಗತಿಕ ಆರ್ಥಿಕತೆ, ಉದ್ಯಮ ಮತ್ತು ಸಮಾಜದ ಭವಿಷ್ಯದ ಚರ್ಚೆಯಲ್ಲಿ ಕೇಂದ್ರೀಕರಿಸಿದೆ. ಆದರೆ ಭವಿಷ್ಯವನ್ನು ಅರ್ಥ ಮಾಡಿಕೊಳ್ಳುವ ಮೊದಲ ಹಳೆಯ ನಂಬಿಕೆಗಳನ್ನು ಅವಲೋಕಿಸಬೇಕು. ಕಳೆದ 30 ವರ್ಷಗಳಿಂದ ನಾವು ಜಗತ್ತು ಚಪ್ಪಟೆಯಾಗಿದೆ ಎಂದು ನಂಬಿದ್ದೆವು. ಪೂರೈಕೆ ಸರಪಳಿಗಳು ಯಾವಾಗಲೂ ತೆರೆದಿರುತ್ತವೆ, ಇಂಧನ ಸುಲಭವಾಗಿ ಲಭ್ಯವಾಗುತ್ತದೆ, ತಂತ್ರಜ್ಞಾನ ಗಡಿಗಳನ್ನು ಮೀರಿ ಹರಿಯುತ್ತದೆ ಎಂದು ಭಾವಿಸಿದ್ದೆವು. ಆದರೆ ನಮ್ಮ ನಂಬಿಕೆ ತಪ್ಪಾಗಿತ್ತು.

ಈಗ ಜಗತ್ತು ಛಿದ್ರವಾಗಿದೆ. ಪ್ರತಿ ರಾಷ್ಟ್ರವೂ ತನ್ನ ಸ್ವಂತ ಹಿತಾಸಕ್ತಿಗಳಿಗೆ ತಕ್ಕಂತೆ ಪೂರೈಕೆ ವ್ಯವಸ್ಥೆಯನ್ನು ಬದಲಾಯಿಸುತ್ತಿದೆ. ಇಂಧನ ಮತ್ತು ಡಿಜಿಟಲ್ ಭದ್ರತೆ ಈಗ ರಾಷ್ಟ್ರಗಳ ಮುಖ್ಯ ಅಡಿಪಾಯಗಳಾಗಿವೆ. ಈಗಿನ ಜಗತ್ತಿನಲ್ಲಿ ಇಂಧನವನ್ನು ನಿಯಂತ್ರಿಸುವ ದೇಶವೇ ಕೈಗಾರಿಕೆಯನ್ನು ನಡೆಸುತ್ತದೆ. ಕಂಪ್ಯೂಟರ್‌ ಸಾಮರ್ಥ್ಯವನ್ನು ನಿಯಂತ್ರಿಸುವ ದೇಶವೇ ಬುದ್ಧಿಮತ್ತೆಯನ್ನು ನಿಯಂತ್ರಿಸುತ್ತದೆ. ಎರಡನ್ನೂ ಹೊಂದಿರುವ ದೇಶವೇ ಶತಮಾನವನ್ನು ರೂಪಿಸಲಿದೆ. ಇದು ಹೊಸ ಸಮೀಕರಣ.

1947ರಲ್ಲಿ ನಮಗೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿತು. ಆದರೆ 21ನೇ ಶತಮಾನದ ನಿಜವಾದ ಸ್ವಾತಂತ್ರ್ಯವೆಂದರೆ ನಮ್ಮ ಮನೆಗಳನ್ನು ಬೆಳಗುವ ಇಂಧನ ಮತ್ತು ನಮ್ಮ ಭವಿಷ್ಯವನ್ನು ರೂಪಿಸುವ ಬುದ್ಧಿಮತ್ತೆಯನ್ನು ನಾವೇ ಹೊಂದುವುದು. ಅಮೆರಿಕ ಮತ್ತು ಚೀನಾ ಈ ಸತ್ಯವನ್ನು ಚೆನ್ನಾಗಿ ಅರ್ಥಮಾಡಿಕೊಂಡಿವೆ. ಎರಡೂ ದೇಶಗಳು ತಮ್ಮದೇ ರೀತಿಯಲ್ಲಿ ಇಂಧನ ಮತ್ತು ತಂತ್ರಜ್ಞಾನದಲ್ಲಿ ಸ್ವಾವಲಂಬಿಯಾಗುವತ್ತ ಸಾಗುತ್ತಿವೆ.

ಅಮೆರಿಕ ಸ್ವಾವಲಂಬನೆಯ ಪಾಠ:

1973-74ರಲ್ಲಿ ಅಮೆರಿಕದ ಮೇಲೆ ವಿಧಿಸಲಾದ ತೈಲ ನಿರ್ಬಂಧವು ಕೇವಲ ಇಂಧನ ಅಭಾವವಲ್ಲ, ಅದೊಂದು ದೊಡ್ಡ ಜಾಗತಿಕ ಎಚ್ಚರಿಕೆಯಾಗಿತ್ತು. ತೈಲ ಬೆಲೆಗಳು ಶೇ.300ರಷ್ಟು ಏರಿದವು. ವಿಶ್ವದ ಅತ್ಯಂತ ಶಕ್ತಿಶಾಲಿ ಆರ್ಥಿಕತೆಯೂ ತನ್ನ ಇಂಧನ ಸರಬರಾಜು ಇತರರ ಕೈಯಲ್ಲಿದ್ದಾಗ ಎಷ್ಟು ದುರ್ಬಲಗೊಳ್ಳಬಹುದು ಎಂದು ಅರಿತುಕೊಂಡಿತು. ಅಮೆರಿಕ ಈ ಸವಾಲನ್ನು ಎದುರಿಸಲು ದಶಕಗಳ ಕಾಲ ಶ್ರಮಿಸಿತು. ಸಂಶೋಧನೆ, ತಂತ್ರಜ್ಞಾನ ಮತ್ತು ರಾಷ್ಟ್ರೀಯ ಹಠದಿಂದ ಮುಂದುವರಿಯಿತು. ಇದರ ಫಲಿತಾಂಶವೇ ಶೇಲ್ ತೈಲ ಮತ್ತು ಗ್ಯಾಸ್ ಕ್ರಾಂತಿ. ಅಮೆರಿಕ ತೈಲ ಆಮದಿನ ಮೇಲೆ ಅವಲಂಬಿತವಾಗಿದ್ದ ದೇಶದಿಂದ ತೈಲ ರಫ್ತು ಮಾಡುವ ದೇಶವಾಗಿ ಬದಲಾಯಿತು. ಇಂದು ಅದು ಪ್ರತಿದಿನ ಸುಮಾರು 1.4 ಕೋಟಿ ಬ್ಯಾರೆಲ್ ಕಚ್ಚಾತೈಲ ಉತ್ಪಾದಿಸುತ್ತಿದೆ. ಇದು ವಿಶ್ವದ ಎಲ್ಲ ದೇಶಕ್ಕಿಂತ ಹೆಚ್ಚು. ಜೊತೆಗೆ ನೈಸರ್ಗಿಕ ಅನಿಲವು ಅಮೆರಿಕದ ಶೇ.40ಕ್ಕಿಂತ ಹೆಚ್ಚು ವಿದ್ಯುತ್ ಉತ್ಪಾದಿಸುತ್ತಿದೆ.

ಚೀನಾ ಆತ್ಮನಿರ್ಭರತೆ ಹೆಜ್ಜೆ:

ಚೀನಾ ಬೇರೆ ಮಾರ್ಗದಲ್ಲಿ ಇದೇ ತೀರ್ಮಾನಕ್ಕೆ ಬಂದಿತು. ಅದಕ್ಕೆ ಅಮೆರಿಕದಂತೆ ಶೇಲ್ ತೈಲ ಮತ್ತು ಗ್ಯಾಸ್‌ನಂತಹ ಸಹಜ ಅನುಕೂಲವಿರಲಿಲ್ಲ. ಆದ್ದರಿಂದ ಅದು ತನ್ನದೇ ರೀತಿಯ ಸ್ವಾವಲಂಬನೆಯ ವ್ಯವಸ್ಥೆಯನ್ನು ಕಟ್ಟಿಕೊಂಡಿತು. ಕಲ್ಲಿದ್ದಲು ಅದರ ಮುಖ್ಯ ಬೆನ್ನೆಲುಬಾಯಿತು. ವಿದ್ಯುತ್ ಉತ್ಪಾದನೆ, ರಾಸಾಯನಿಕಗಳು, ಕೈಗಾರಿಕಾ ಅಗತ್ಯಗಳು ಮತ್ತು ಆಮದು ಕಡಿಮೆ ಮಾಡುವುದಕ್ಕಾಗಿ ಕಲ್ಲಿದ್ದಲನ್ನು ಬಳಸಿಕೊಂಡಿತು. ಅದೇ ಸಮಯದಲ್ಲಿ ಚೀನಾ ಮಾನವ ಇತಿಹಾಸದಲ್ಲೇ ಅತ್ಯಂತ ಆಕ್ರಮಣಕಾರಿ ರೀತಿಯಲ್ಲಿ ನವೀಕರಣೀಯ ಶಕ್ತಿ (ಸೌರ ಮತ್ತು ವಾಯು) ನಿರ್ಮಾಣ ಮಾಡಿತು. ಇಂದಿಗೂ ಕಲ್ಲಿದ್ದಲು ಚೀನಾದ ಒಟ್ಟು ವಿದ್ಯುತ್ ಉತ್ಪಾದನೆಯ ಸುಮಾರು ಶೇ.60 ಅನ್ನು ಒದಗಿಸುತ್ತಿದೆ. 2025ರಲ್ಲಿ ಚೀನಾ ಒಂದೇ ವರ್ಷದಲ್ಲಿ 440 ಗಿಗಾವ್ಯಾಟ್ ಸೌರ ಮತ್ತು ವಾಯುಶಕ್ತಿ ಉತ್ಪಾದಿಸಿತು. ಇದು ಆ ವರ್ಷದ ಪ್ರಪಂಚದ ಒಟ್ಟು ಹೊಸ ಸೇರ್ಪಡೆಯ ಶೇ.64 ಆಗಿತ್ತು. ಇದು ಅದ್ಭುತ ಸಾಧನೆ.

ಭಾರತದ ಪಥ:

ಭಾರತ ಅಮೆರಿಕ ಅಥವಾ ಚೀನಾದಂತೆಯೇ ಆಗಬೇಕಿಲ್ಲ. ನಮ್ಮದೇ ರೀತಿಯಲ್ಲಿ ಮುಂದುವರಿಯಬೇಕು. ಭಾರತಕ್ಕಿರುವ ಒಂದು ದೊಡ್ಡ ಲಾಭವೆಂದರೆ, ನಾವು ನಿರ್ಮಿಸುವ ಪ್ರತಿಯೊಂದಕ್ಕೂ ಈಗಾಗಲೇ ಜಗತ್ತಿನಲ್ಲಿ ದೊಡ್ಡ ಬೇಡಿಕೆ ಇದೆ. ಮಾರ್ಚ್ 2026ರ ಹೊತ್ತಿಗೆ ಭಾರತ 500 ಗಿಗಾವ್ಯಾಟ್‌ಗಿಂತ ಹೆಚ್ಚು ವಿದ್ಯುತ್ ಉತ್ಪಾದನಾ ಸಾಮರ್ಥ್ಯವನ್ನು ಸಾಧಿಸಿದೆ. ಇದರಲ್ಲಿ ಅದ್ಭುತವೆನಿಸುವ ಶೇ.53 ಸಾಮರ್ಥ್ಯವು ಕೇವಲ ಕಳೆದ 10 ವರ್ಷಗಳಲ್ಲಿ ಸೇರ್ಪಡೆಯಾಗಿದೆ. ಮುಂದಿನ 20 ವರ್ಷಗಳಲ್ಲಿ ಭಾರತ ಇನ್ನೂ 4 ಪಟ್ಟು ಹೆಚ್ಚು ಸಾಮರ್ಥ್ಯವನ್ನು ಸೇರಿಸಿ, 2047ರ ವೇಳೆಗೆ ಒಟ್ಟು 2,000 ಗಿಗಾವ್ಯಾಟ್‌ಗೆ ತಲುಪುವತ್ತ ಭರದಿಂದ ಸಾಗುತ್ತಿದೆ. ನಮ್ಮ ಆರ್ಥಿಕ ಬೆಳವಣಿಗೆಯ ಅತ್ಯುತ್ತಮ ಉದಾಹರಣೆಯೇ ಜಿಡಿಪಿ ಪಥ. ಸ್ವಾತಂತ್ರ್ಯದ ನಂತರ ಭಾರತ 2 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಲು 67 ವರ್ಷಗಳು ಬೇಕಾದವು. ಆದರೆ ಮುಂದಿನ 2 ಟ್ರಿಲಿಯನ್ ಡಾಲರ್ ಸೇರಿಸಲು ಕೇವಲ 12 ವರ್ಷಗಳು ಸಾಕಾಯಿತು. ಇದು ಭಾರತ ವೇಗವಾಗಿ ಬೆಳೆಯುತ್ತಿರುವುದಕ್ಕೆ ಉದಾಹರಣೆ.

ಭಾರತ ಈಗ ಸಣ್ಣ ಸಣ್ಣ ಬದಲಾವಣೆಗಳ ಮೂಲಕ ಬೆಳೆಯುತ್ತಿಲ್ಲ. ಬೃಹತ್‌ ಮಟ್ಟದಲ್ಲಿ ವೇಗವಾಗಿ ಬೆಳೆಯುತ್ತಿದೆ. ಪ್ರತಿ ಹೊಸ ರಸ್ತೆ, ಬಂದರು, ವಿಮಾನ ನಿಲ್ದಾಣ, ಕಾರ್ಖಾನೆ, ಇಂಧನ ಯೋಜನೆ ಮತ್ತು ಡೇಟಾ ಸೆಂಟರ್ ದೇಶದ ಬೆಳವಣಿಗೆಯನ್ನು ಬಲಪಡಿಸುತ್ತಿವೆ. ಈ ವೇಗವನ್ನು ನೋಡಿದರೆ, ಭಾರತ ಪ್ರತಿ ದಶಕಕ್ಕೊಮ್ಮೆ ಒಂದು ಸಂಪೂರ್ಣ ಯುರೋಪಿಯನ್ ಆರ್ಥಿಕತೆಯಷ್ಟು ತನ್ನ ಜಿಡಿಪಿಗೆ ಸೇರಿಸಿಕೊಳ್ಳುತ್ತದೆ. ಇದು ಸಾಮಾನ್ಯ ಬೆಳವಣಿಗೆಯಲ್ಲ. ಇದು ನಿಜವಾದ ರಾಷ್ಟ್ರೀಯ ಶಕ್ತಿ. ಒಂದು ದಶಕದ ಹಿಂದೆ ಸ್ಮಾರ್ಟ್‌ಫೋನ್‌ಗಳು ಸುಲಭವಾಗಿ ದೊರಕಿದಾಗ ಮತ್ತು ಡೇಟಾ ಬೆಲೆ ಕುಸಿದಾಗ ಮೊಬೈಲ್ ಡೇಟಾ ಬಳಕೆಯು ಅಪಾರವಾಗಿ ಹೆಚ್ಚಿತು. ಎಐ ಕೂಡ ಅದೇ ರೀತಿಯ ದೊಡ್ಡ ಸ್ಥಿತ್ಯಂತರವನ್ನು ತರಲಿದೆ. ಆದ್ದರಿಂದ ಭಾರತ ಈಗಲೇ ತಯಾರಾಗಬೇಕು.

ಎಐ ಭಯ ಬೇಡ:

ಜಗತ್ತಿನ ಬೋರ್ಡ್ ರೂಮ್‌ಗಳಲ್ಲಿ ಎಐ ಉದ್ಯೋಗಗಳನ್ನು ಕಳೆದುಹಾಕುತ್ತದೆ ಎಂಬ ಭಯ ಹರಡುತ್ತಿದೆ. ನಾನು ಈ ಭಯವನ್ನು ಒಪ್ಪುವುದಿಲ್ಲ. ಭಾರತವು ಪಶ್ಚಿಮದ ಭಯವನ್ನು ಆಮದು ಮಾಡಿಕೊಳ್ಳಬಾರದು. ಎಐ ಅನ್ನು ಉದ್ಯೋಗಗಳನ್ನು ಕಳೆಯುವ ಶಕ್ತಿಯಾಗಿ ಅಲ್ಲ, ಹೊಸ ಉದ್ಯೋಗಗಳನ್ನು ಸೃಷ್ಟಿಸುವ, ಉತ್ಪಾದಕತೆ ಹೆಚ್ಚಿಸುವ ಮತ್ತು ಸಣ್ಣ ವ್ಯವಹಾರಗಳನ್ನು ಬಲಪಡಿಸುವ ಶಕ್ತಿಯಾಗಿ ಬಳಸಬೇಕು. ಯುಪಿಐ ಬಂದಾಗ ಅದು ಕೇವಲ ಹಣ ಪಾವತಿ ಸಾಧನ ಎಂದು ತಿಳಿದಿದ್ದರು. ಆದರೆ ಅದು ಸಾಮಾನ್ಯ ಜನರ ಕೈಗೆ ನಂಬಿಕೆಯನ್ನು ಕೊಟ್ಟಿತು. ಅದರಿಂದ ಹೊಸ ಕಂಪನಿಗಳು, ಹೊಸ ಮಾರುಕಟ್ಟೆಗಳು ಹುಟ್ಟಿದವು. ಎಐ ಇದಕ್ಕಿಂತಲೂ ದೊಡ್ಡ ಬದಲಾವಣೆ ತರುತ್ತದೆ. ಅದು ನಾವು ಇನ್ನೂ ಊಹಿಸದ ಕಂಪನಿಗಳು, ವ್ಯವಹಾರ ಮಾದರಿಗಳು ಮತ್ತು ಮಾರುಕಟ್ಟೆಗಳನ್ನು ಸೃಷ್ಟಿಸುತ್ತದೆ.

PREV
Read more Articles on

Recommended Stories

ಟಾಟಾ ಛೋಟಾ ಹಾಥಿಗೆ 21ರ ಸಂಭ್ರಮ: ಹೊಸ ಏಸ್ ಗೋಲ್ಡ್+ ಎಕ್ಸ್ಎಲ್ ಮಾರುಕಟ್ಟೆಗೆ ಬಿಡುಗಡೆ
₹99,999ಕ್ಕೆ ಒಬೆನ್ ರೋರ್ ಇವೋ ಎಲೆಕ್ಟ್ರಿಕ್ ಬೈಕ್ ಬಿಡುಗಡೆ