ಕನ್ನಡಪ್ರಭವಾರ್ತೆ ಬೆಂಗಳೂರು:
ಈ ಬೃಹತ್ ನೇಮಕಾತಿಯು ದೇಶದ ಮೆಟ್ರೋಪಾಲಿಟನ್ ಮಹಾನಗರಗಳ ಜತೆಗೆ ವಾರಣಾಸಿ, ಕೊಚ್ಚಿ, ಜಲಂಧರ್, ಗಾಜಿಯಾಬಾದ್, ರಾಂಚಿ, ಸೇಲಂ, ಗೋರಖ್‌ಪುರ ಸೇರಿದಂತೆ ಒಟ್ಟಾರೆಯಾಗಿ 400ಕ್ಕೂ ಅಧಿಕ ನಗರಗಳಲ್ಲಿ ವಿಸ್ತರಿಸಿದೆ. ತನ್ನ ಕಾರ್ಯಜಾಲದಲ್ಲಿ ಎಲ್ಲರನ್ನೂ ಒಳಗೊಳ್ಳುವ ನಿಟ್ಟಿನಲ್ಲಿ ಸಾವಿರಾರು ಮಹಿಳಾ ಸಹವರ್ತಿಗಳಿಗೆ ಹಾಗೂ ವಿಶೇಷಚೇತನರಿಗೆ ಸೂಕ್ತ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ. ನೂತನವಾಗಿ ಸೇರ್ಪಡೆಗೊಂಡಿರುವ ಸಿಬ್ಬಂದಿ ಹಾಲಿ ಕಾರ್ಯಪಡೆಯೊಂದಿಗೆ ಕೈಜೋಡಿಸಲಿದ್ದು, ಹಬ್ಬದ ದಿನಗಳಲ್ಲಿ ಹೆಚ್ಚಾಗುವ ಆರ್ಡರ್‌ಗಳ ಪಿಕಿಂಗ್, ಪ್ಯಾಕಿಂಗ್, ಸುರಕ್ಷಿತ ಸಾಗಾಣಿಕೆ ಹಾಗೂ ಅಂತಿಮ ವಿಳಾಸಕ್ಕೆ ವಿತರಿಸುವ ಕಾರ್ಯಗಳಲ್ಲಿ ನೆರವಾಗಲಿದ್ದಾರೆ. ಈಗಾಗಲೇ ಬಹುತೇಕರಿಗೆ ಅಗತ್ಯ ವೃತ್ತಿಪರ ತರಬೇತಿಯನ್ನು ನೀಡಲು ಸಂಸ್ಥೆ ಆರಂಭಿಸಿದೆ.
ಕಾಯಂ ನೌಕರರಿಗೆ ನೀಡುವಂತೆಯೇ ತಾತ್ಕಾಲಿಕ ನೌಕರರಿಗೂ ಎಲ್ಲಾ ಬಗೆಯ ಸುರಕ್ಷತೆ ಮತ್ತು ಕಲ್ಯಾಣ ಸೌಲಭ್ಯಗಳನ್ನು ವಿಸ್ತರಿಸಲಾಗಿದೆ. ಹಬ್ಬದ ಸೀಸನ್‌ನ ಕಾರ್ಯಾಚರಣೆಗೆ ಹೊಸದಾಗಿ ಸೇರ್ಪಡೆಗೊಳ್ಳುವ ಸಿಬ್ಬಂದಿಗೆ ಕಂಪನಿಯ ‘ಸಮೃದ್ಧಿ’ ಯೋಜನೆಯ ಮೂಲಕ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸಿ, ಸರ್ಕಾರದ ನಾನಾ ಸಮಾಜ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳ ಪ್ರಯೋಜನಗಳನ್ನು ತಲುಪಿಸಲು ಪೂರ್ಣ ಬೆಂಬಲ ನೀಡಲಾಗುತ್ತಿದೆ.ಈ ಕುರಿತು ಮಾತನಾಡಿದ ಅಮೆಜಾನ್ ಇಂಡಿಯಾದ ಆಪರೇಷನ್ಸ್ ಉಪಾಧ್ಯಕ್ಷ ಅಭಿನವ್ ಸಿಂಗ್, ‘ದೇಶದ ಪ್ರತಿಯೊಂದು ಪಿನ್-ಕೋಡ್ ವ್ಯಾಪ್ತಿಯ ಗ್ರಾಹಕರಿಗೂ ಕ್ಷಿಪ್ರ ಹಾಗೂ ವಿಶ್ವಾಸಾರ್ಹ ಸೇವೆ ನೀಡಲು 1.6 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಸಲಾಗಿದೆ’ ಎಂದಿದ್ದಾರೆ. ಅಲ್ಲದೆ ಇಲ್ಲಿ ಕೆಲಸ ಮಾಡುವ ಅನೇಕ ಸಹವರ್ತಿಗಳು ಹಬ್ಬದ ಅವಧಿ ಮುಗಿದ ನಂತರವೂ ಸಂಸ್ಥೆಯೊಂದಿಗೆ ಪಯಣ ಮುಂದುವರಿಸುತ್ತಾರೆ ಎಂದು ತಿಳಿಸಿದ್ದಾರೆ.
ಸಂಸ್ಥೆಯು ತನ್ನ ಕಾರ್ಯಜಾಲದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿಗೂ ಶಾಸನಬದ್ಧ ಭವಿಷ್ಯ ನಿಧಿ (ಪಿಎಫ್), ಇಎಸ್‌ಐಸಿ ಹಾಗೂ ಗ್ರಾಚ್ಯುಟಿ ಸವಲತ್ತುಗಳನ್ನು ಖಾತರಿಪಡಿಸಿದೆ. ಕಟ್ಟಡಗಳ ಒಳಾಂಗಣದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಾಗಿ ಶುದ್ಧ ಕುಡಿಯುವ ನೀರು, ಹವಾನಿಯಂತ್ರಿತ ವಿಶಾಲ ಕ್ಯಾಂಟೀನ್, ಸ್ವಯಂಚಾಲಿತ ವೆಂಡಿಂಗ್ ಯಂತ್ರಗಳು ಹಾಗೂ ಎಎಂ ಕೇರ್ ಆನ್-ಸೈಟ್ ಪ್ರಥಮ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಮೀಪದ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆಯೂ ಇದೆ. ಸಿಬ್ಬಂದಿಗೆ ವಾರಕ್ಕೆ ಐದು ದಿನಗಳ ಕೆಲಸ ಹಾಗೂ ಎರಡು ದಿನಗಳ ಕಡ್ಡಾಯ ವಿಶ್ರಾಂತಿ ರಜೆ ನೀಡಲಾಗುತ್ತಿದ್ದು, ಗಳಿಸಿದ ವೇತನದ ಶೇಕಡಾ 80ರವರೆಗಿನ ಮೊತ್ತವನ್ನು ಮುಂಗಡವಾಗಿ ಪಡೆಯಲು ಅರ್ಲಿ ಆಕ್ಸೆಸ್ ಟು ಪೇ ಸೌಲಭ್ಯ ಕಲ್ಪಿಸಲಾಗಿದೆ.