ಆಷಾಢಮಾಸ- ಗ್ರಾಮೀಣ ಸೊಗಡು, ಚಾಮರಾಜನಗರ ಭಾಷಾ ಶೈಲಿಯ ಕಥೆಗಳ ಸಂಕಲನ

KannadaprabhaNewsNetwork |  
Published : Sep 01, 2026, 01:15 AM ISTUpdated : Sep 01, 2026, 04:44 AM IST
Book

ಸಾರಾಂಶ

ಗುಂಡ್ಲುಪೇಟೆ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಶಿಕ್ಷಕ ಪ್ರಸನ್ನಮೂರ್ತಿ ಗುರುವಿನಪುರ ಅವರ ‘ಆಷಾಢಮಾಸ’ ಎಂಬ ಮತ್ತೊಂದು ಕಥಾಸಂಕಲನವನ್ನು ಹೊರತಂದಿದ್ದಾರೆ. ಎಲ್ಲಾ ಕಥೆಗಳಲ್ಲೂ ಗ್ರಾಮೀಣ ಸೊಗಡು, ಚಾಮರಾಜನಗರ ಪ್ರಾದೇಶಿಕ ಭಾಷಾ ಶೈಲಿ ಎದ್ದು ಕಾಣಿಸುತ್ತದೆ.

 ಮೈಸೂರು : ಗುಂಡ್ಲುಪೇಟೆ ಸರ್ಕಾರಿ ಬಾಲಿಕಾ ಪ್ರೌಢಶಾಲೆಯ ಶಿಕ್ಷಕ ಪ್ರಸನ್ನಮೂರ್ತಿ ಗುರುವಿನಪುರ ಅವರ ‘ಆಷಾಢಮಾಸ’ ಎಂಬ ಮತ್ತೊಂದು ಕಥಾಸಂಕಲನವನ್ನು ಹೊರತಂದಿದ್ದಾರೆ. ಎಲ್ಲಾ ಕಥೆಗಳಲ್ಲೂ ಗ್ರಾಮೀಣ ಸೊಗಡು, ಚಾಮರಾಜನಗರ ಪ್ರಾದೇಶಿಕ ಭಾಷಾ ಶೈಲಿ ಎದ್ದು ಕಾಣಿಸುತ್ತದೆ.

ಅಪಾರ ಸಾಹಿತ್ಯಾಸಕ್ತಿಯ ಇವರು ಈಗಾಗಲೇ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಮಡುಗಟ್ಟಿದ ಗ್ರಾಮೀಣ ಭಾಗದ ಅಗಾಧ ಅನುಭವವನ್ನು ಕರಗಿಸಿ, ಸಾಹಿತ್ಯ ರಚಿಸುವ ಕಲೆ ಇವರಿಗೆ ಕರಗತ.

ಆರು ನೀಳ್ಗತೆಗಳು ಈ ಸಂಕಲನದಲ್ಲಿವೆ

ಅವಸ್ಥೆ, ಆಷಾಢಮಾಸ, ಆಟೋ ರಾಜ, ಅವನು, ಅವಳಿ- ಜವಳಿ, ಅಜ್ಜಮ್ಮ- ಈ ಆರು ನೀಳ್ಗತೆಗಳು ಈ ಸಂಕಲನದಲ್ಲಿವೆ. ಈ ಪೈಕಿ ಮೊದಲ ನಾಲ್ಕು ತುಂಬಾ ದೊಡ್ಡವು.

ಅವಸ್ಥೆ ಅಂಗನವಾಡಿ ಕಾರ್ಯಕರ್ತೆ ರಾಧಾಳ ಕೊಲೆ ಸುತ್ತಮುತ್ತ ಇರುವ ಕಥೆ

ಅವಸ್ಥೆಯು ಅಂಗನವಾಡಿ ಕಾರ್ಯಕರ್ತೆ ರಾಧಾಳ ಕೊಲೆಯ ಸುತ್ತಮುತ್ತ ಇರುವ ಕಥೆ. ರಾಧಾಳ ಕೊಲೆ, ಅನಾರೋಗ್ಯದಿಂದ ಮಗ ಸಾವು, ನೆರವು ಕೇಳಿಕೊಂಡು ಕೇರಳಕ್ಕೆ ಹೋದಾಗ ಗಂಡ ರಂಗಸ್ವಾಮಿ ಸಾವು, ಅಲ್ಲಿನ ಚರ್ಚಿನ ಪಾದ್ರಿಗಳು ಬಂದು ಆಶ್ರಯ ನೀಡುವುದಾಗಿ ಹೇಳಿ ಆಕೆ ಪುತ್ರಿ ಸುಮತಿಯನ್ನು ಕರೆದುಕೊಂಡು ಹೋಗುವುದರೊಂದಿಗೆ ಕಥೆ ಅಂತ್ಯವಾಗುತ್ತದೆ.

‘ಆಷಾಢಮಾಸ’ ಕಥೆಯಲ್ಲಿ ಪೂರ್ವಿಕರು ಯಾಕೆ ಈ ಮಾಸದಲ್ಲಿ ಹೊಸದಾಗಿ ಮದುವೆಯಾದ ಪತಿ- ಪತ್ನಿ ಒಂದೆಡೆ ಇರಬಾರದು ಎಂಬ ನಿರ್ಬಂಧದಿಂದ ಹಿಡಿದು, ಚಾಮರಾಜನಗರದ ಚಾಮರಾಜೇಶ್ವರ ರಥೋತ್ಸವದಲ್ಲಿ ಹೊಸದಾಗಿ ಮದುವೆಯಾದ ಜೋಡಿಗಳು ಯಾಕೆ ಬರುತ್ತಾರೆ ಎಂಬುದರವರೆಗೆ ಮಾಹಿತಿ ಇದೆ. ಜೊತೆಗೆ ಗ್ರಾಮೀಣ ಭಾಗಗಳಲ್ಲಿ ನಾಟಕ ಕಲಿಯುವುದು, ಹೆಂಡತಿ ತೌರಿಗೆ ಹೋದಾಗ ಗಂಡ ದಾರಿ ತಪ್ಪು ತೊಂದರೆಗೆ ಸಿಲುಕುವುದು, ನಂತರ ಮತ್ತೆ ಒಂದಾಗುತ್ತಾರೆ.

ಆಟೋರಾಜ ಕಥೆಯಂತೂ ಕಣ್ಣೀರು ತರಿಸುತ್ತದೆ. ಈ ಕಥೆಯ ನಾಯಕ ಶಿಕ್ಷಕ. ಆತನಿಗೆ ತಾಯಿ ಜೊತೆ ಇರುವಾಸೆ. ಆದರೆ ಪತ್ನಿಗೆ ಬೇರೆ ಮನೆ ಮಾಡುವಾಸೆ. ಇದನ್ನು ಆತ ಒಪ್ಪದಿದ್ದಾಗ ಆಕೆ ಪುಟ್ಟ ಮಗುವನ್ನು ಬಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಕೊಲೆ ಆರೋಪದ ಮೇಲೆ ಜೈಲು ಸೇರುವ ಶಿಕ್ಷಕ ಬಿಡುಗಡೆಯಾದ ನಂತರ ಆಟೋ ಚಾಲಕನಾಗಿ ಕೆಲಸ ಮಾಡುತಿರುತ್ತಾನೆ. ಅಜ್ಜಿಯ ಆಶ್ರಯದಲ್ಲಿ ಬೆಳೆದ ಆತನ ಮಗು ಒಳ್ಳೆಯ ವಿದ್ಯಾವಂತೆಯಾಗಿ, ಸುಖ ಜೀವನ ನಡೆಸುತ್ತಿರುತ್ತಾಳೆ. ಸ್ನೇಹಿತನೊಬ್ಬರ ಸಹಾಯದಿಂದ ಮತ್ತೆ ಮಗಳನ್ನು ಸೇರುವುದರೊಂದಿಗೆ ಕಥೆ ಮುಕ್ತಾಯವಾಗುತ್ತದೆ.

ಅವನು-ಹಳ್ಳಿಯಲ್ಲಿ ನಡೆಯುವ ನಿಗೂಢ ಕೊಲೆಗಳ ಸುತ್ತ ಬೆಸೆಯಲಾಗಿದೆ. ಅವಳಿ- ಜವಳಿಯು ಮಕ್ಕಳಾಗದ ಸೊಸೆಗೆ ಮಗುವಾಗಲೆಂದು ಅತ್ತೆ ಮಾದಪ್ಪನ ಮೊರೆ ಹೋಗುವುದು, ಕೊನೆಗೆ ವೈದ್ಯರಿಂದ ಚಿಕಿತ್ಸೆ ಪಡೆದ ನಂತರ ಮಕ್ಕಳಾಗುವ ಕಥೆ. ಅಜ್ಜಮ್ಮ ಕಥೆಯು ಹಳ್ಳಿಯ ವಾಸ್ತವ ಚಿತ್ರಣವನ್ನು ತೆರೆದಿಡುತ್ತದೆ.

ವಸ್ತು ವಿಷಯ, ನಿರೂಪಣೆ, ಭಾಷೆ ಸೇರಿದಂತೆ ಎಲ್ಲಾ ವಿಷಯಗಳಲ್ಲೂ ಇಲ್ಲಿನ ಕಥೆಗಳು ಉತ್ತಮವಾಗಿವೆ. ಅನಿರೀಕ್ಷಿತ ತಿರುವುಗಳು ಓದುಗರಿಗೆ ಇಷ್ಟವಾಗಿ ಓದಿಸಿಕೊಂಡು ಹೋಗುತ್ತವೆ. ಚಾಮರಾಜನಗರ ಪ್ರಾದೇಶಿಕ ಭಾಷಾ ಶೈಲಿಯ ಬಳಕೆ ಕಥೆಗಳಿಗೆ ಪೂರಕವಾಗಿದ್ದು, ಓದುಗರನ್ನು ಆಕರ್ಷಿಸುತ್ತದೆ.

ಮೈಸೂರಿನ ರಚನಾ ಪ್ರಕಾಶನ ಈ ಕಥಾ ಸಂಕಲನವನ್ನು ಪ್ರಕಟಿಸಿದ್ದು, ಆಸಕ್ತರು ಪ್ರಸನ್ನಮೂರ್ತಿ ಗುರುವಿನಪುರ, ಮೊ. 89711 55548 ಸಂಪರ್ಕಿಸಬಹುದು.

PREV
Read more Articles on

Recommended Stories

ನನ್ನ ಊರಿನಲ್ಲಿ ದೆವ್ವಗಳು ಕಾಣೆಯಾಗಿದ್ದಾವೆ!
ನಮಗೀಗ ರೈಲ್ವೆ ವಿಭಾಗ ಉಳಿಸಿಕೊಳ್ಳುವ ಹೊಣೆ!