ನಮಗೀಗ ರೈಲ್ವೆ ವಿಭಾಗ ಉಳಿಸಿಕೊಳ್ಳುವ ಹೊಣೆ!

Published : Aug 30, 2026, 11:47 AM IST
mangaluru railway Station

ಸಾರಾಂಶ

ಪ್ರತ್ಯೇಕ ರೈಲು ವಿಭಾಗದ ನಮ್ಮ ಆಸೆಗೆ ಫಲ ಸಿಗಲಿಲ್ಲವಾದರೂ ವಿವಿಧ ವಲಯ, ವಿಭಾಗದ ನಡುವೆ ಸಂವಹನ ಮಾಡಿ ಮುಂದಿನ ದಿನಗಳಲ್ಲಿ ಮಂಗಳೂರು ರೈಲ್ವೆ ನಿಲ್ದಾಣಗಳಿಗೆ ಏನೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವುದಾಗಿ ಪಿಯೂಶ್ ಗೋಯಲ್ ಭರವಸೆ ನೀಡಿದ್ದರು.

ಪ್ರತ್ಯೇಕ ರೈಲು ವಿಭಾಗದ ನಮ್ಮ ಆಸೆಗೆ ಫಲ ಸಿಗಲಿಲ್ಲವಾದರೂ ವಿವಿಧ ವಲಯ, ವಿಭಾಗದ ನಡುವೆ ಸಂವಹನ ಮಾಡಿ ಮುಂದಿನ ದಿನಗಳಲ್ಲಿ ಮಂಗಳೂರು ರೈಲ್ವೆ ನಿಲ್ದಾಣಗಳಿಗೆ ಏನೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವುದಾಗಿ ಪಿಯೂಶ್ ಗೋಯಲ್ ಭರವಸೆ ನೀಡಿದ್ದರು. ಬಹುಶಃ ಆವತ್ತು ಅವರು ನೀಡಿದ ವಾಗ್ದಾನವನ್ನು ಪ್ರಸ್ತುತ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರೊಂದಿಗೆ ನಮ್ಮದೇ ರಾಜ್ಯದವರಾದ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಈಡೇರಿಸುವ ಮೂಲಕ ಹೊಸ ಭರವಸೆಯ ಬೆಳಕನ್ನು ಹರಿಸಿದ್ದಾರೆ.

-ನಳಿನ್‌ ಕುಮಾರ್‌ ಕಟೀಲ್‌,

ಮಾಜಿ ಸಂಸದರು,

ದಕ್ಷಿಣ ಕನ್ನಡ.

‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ..’ ಮಹಾಭಾರತದಲ್ಲಿ ಭಗವಂತ ಶ್ರೀ ಕೃಷ್ಣ ಬೋಧಿಸಿದ ತತ್ವಗಳು ಯುಗಯುಗಗಳಿಗೂ ನೀಡಿದ ಸಂದೇಶವಾಗಿವೆ. ನಿರಂತರ ಪ್ರಯತ್ನ, ಸತತ ಸಂವಹನಗಳು ಇಂದಲ್ಲ, ನಾಳೆ ಫಲಪ್ರದವಾಗುತ್ತದೆ ಎನ್ನುವ ನಂಬಿಕೆ ನಮ್ಮಲ್ಲಿ ಶಾಶ್ವತವಾಗಿರಬೇಕು. ಇಲ್ಲದೇ ಹೋದರೆ ‘ಮನೆಯೊಂದು ಮೂರು ಬಾಗಿಲು’ ಎನ್ನುವಂತೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಪ್ರಮುಖ ರೈಲು ನಿಲ್ದಾಣಗಳಿವೆ.

ಮೂರು ಮೂರು ಕಡೆಯಿಂದ ಆಡಳಿತ ಶಕ್ತಿಗಳ ನಿಯಂತ್ರಣಗಳು ಮೂಗಿನ ದಾರದಂತೆ ಗಂಟುಬಿದ್ದಿದ್ದಾಗ ಆ ರೈಲು ನಿಲ್ದಾಣಗಳ ಪರಿಸ್ಥಿತಿ ಅಂದು ಯೋಚಿಸುವಾಗಲೇ ದೊಡ್ಡ ಸವಾಲಿನಂತೆ ಕಾಣುತ್ತಿತ್ತು. ಏಕೆಂದರೆ ಮಂಗಳೂರಿನ ತೋಕೂರು - ಪಡೀಲ್ - ಉಳ್ಳಾಲ್ ಈ 34 ಕಿಲೋ ಮೀಟರ್ ವ್ಯಾಪ್ತಿಯ ಪ್ರದೇಶ ದಕ್ಷಿಣ ಪಶ್ಚಿಮ ರೈಲ್ವೆ, ದಕ್ಷಿಣ ರೈಲ್ವೆ ಎಂಬ ಎರಡು ವಲಯ ರೈಲ್ವೆಗಳ ಅಡಿಯಲ್ಲಿ ವಿಭಜನೆಯಾಗಿತ್ತು. ಇದರ ಜೊತೆಗೆ ಕೊಂಕಣ ರೈಲ್ವೆ ಕಾರ್ಪೋರೇಶನ್ ಲಿಮಿಟೆಡ್ ಮತ್ತು ಹಾಸನ - ಮಂಗಳೂರು ರೈಲು ಅಭಿವೃದ್ಧಿ ಕಂಪನಿ ಲಿಮಿಟೆಡ್ ಇದರಲ್ಲಿ ಒಳಗೊಂಡಿದ್ದವು. ಈ ಎಲ್ಲ ವಿಭಾಗಗಳ ನಡುವೆ ಸಂವಹನ ಕೊರತೆ ಇತ್ತು.

ರೈಲ್ವೆ ನಿಲ್ದಾಣಗಳಲ್ಲಿ ಯಾವ ಸಣ್ಣ ಅಭಿವೃದ್ಧಿ ಕಾರ್ಯ ನಡೆಯಬೇಕಾದರೂ ಈ ಎಲ್ಲ ವಲಯಗಳ ಅಧಿಕಾರಿಗಳು ದೊಡ್ಡ ಮನಸ್ಸು ಮಾಡಬೇಕಿತ್ತು. ಆದರೆ ಸಮನ್ವಯತೆಯ ಕೊರತೆಯಿಂದ ಒಂದು ಶೌಚಾಲಯ ರಿಪೇರಿ ಮಾಡುವುದು ಅಷ್ಟು ಸುಲಭದ ಕಾರ್ಯ ಆಗಿರಲಿಲ್ಲ. ಪ್ರತಿ ಅಭಿವೃದ್ಧಿಯ ಕಾರ್ಯವೂ ಅನೇಕ ಗೊಂದಲಗಳ ನಡುವೆ ಸಿಕ್ಕಿ ಒದ್ದಾಡಬೇಕಾಗಿತ್ತು. ಅದಕ್ಕಾಗಿ ನಾನು ಸಂಸದನಾಗಿದ್ದಾಗ ಮೊದಲು ಆರಂಭಿಸಿದ್ದು ಈ ವಲಯ, ವಿಭಾಗ, ಝೋನ್‌ಗಳ ಅಧಿಕಾರಿಗಳ ನಡುವೆ

ಏಕೀಕೃತ ವ್ಯವಸ್ಥೆ ಬರಬೇಕಾದರೆ ಇವರನ್ನು ಒಗ್ಗೂಡಿಸುವುದು. ಅದಕ್ಕಾಗಿ ಪ್ರತಿ ಮೂರು ತಿಂಗಳಿಗೊಮ್ಮೆ ಎಲ್ಲರನ್ನೂ ಕರೆದು ಕಡ್ಡಾಯ ಸಭೆ ಮಾಡುವ ನಿರ್ಧಾರ ಮಾಡಬೇಕಾಯಿತು. ಇದನ್ನು ಹತ್ತು ವರ್ಷಗಳ ನಿರಂತರವಾಗಿ ಒಂದು ತಪಸ್ಸಿನಂತೆ ಮಾಡಿದರ ಪರಿಣಾಮ ನಂತರ ಒಂದೊಂದೇ ಜಟಿಲ ತಂತುಗಳನ್ನು ಬಿಡಿಸಲ್ಪಟ್ಟವು ಎನ್ನುವುದು ನೆಮ್ಮದಿಯ ವಿಚಾರ.

2014ರಿಂದ ಪ್ರಯತ್ನಕ್ಕೆ ವೇಗ:

2014ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಮ್ಮ ಚಿಂತನೆಗೆ ಮತ್ತಷ್ಟು ವೇಗ ಸಿಕ್ಕಿತು. ಆಗ ಕೇಂದ್ರ ರೈಲ್ವೆ ಸಚಿವರಾಗಿದ್ದ ಡಿ.ವಿ.ಸದಾನಂದ ಗೌಡರನ್ನು ಅವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಭೇಟಿ ಮಾಡಿ ಕರಾವಳಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಶಕ್ತಿ ತುಂಬುವಂತೆ ವಿನಂತಿಸಿಕೊಳ್ಳಲಾಯಿತು. ಅದರಲ್ಲಿ ಒಂದು ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಮತ್ತು ಇನ್ನೊಂದು ಮಂಗಳೂರು - ಬೆಂಗಳೂರು ನಡುವೆ ಹೆಚ್ಚುವರಿ ರೈಲುಗಳನ್ನು ಓಡಿಸಬೇಕಾದ ಮನವಿ ಪ್ರಮುಖವಾಗಿತ್ತು. ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಸಿಕ್ಕಿದರೆ ಆಗ ಅದು ದಕ್ಷಿಣ -ನೈಋತ್ಯ ವಿಭಾಗದ ಅಡಿಯಲ್ಲಿ ಬರುತ್ತದೆ. ಆಗ ಅದರ ಮುಖ್ಯ ಕಚೇರಿ ನಮ್ಮ ರಾಜ್ಯದ ಹುಬ್ಬಳ್ಳಿಯಲ್ಲಿತ್ತು. ಆದರೆ ಮಂಗಳೂರಿನ ರೈಲ್ವೆ ನಿಲ್ದಾಣಗಳಾದ ಸೆಂಟ್ರಲ್, ಜಂಕ್ಷನ್, ತೋಕೂರು, ಉಳ್ಳಾಲ, ಪಡೀಲ್ ಎಲ್ಲವೂ ದಕ್ಷಿಣ ವಲಯದ ಪಾಲಕ್ಕಾಡ್ ಡಿವಿಜನ್‌ಗೆ ಸೇರಿತ್ತು. ಅದರ ಮುಖ್ಯ ಕಚೇರಿ ಆಗ ತಮಿಳುನಾಡಿನ ಚೆನ್ನೈನಲ್ಲಿತ್ತು. ಮಂಗಳೂರು ಬಂದರಿನ ಜೀವನಾಡಿಗಳಾಗಿದ್ದ ತೋಕೂರು -ಪಡೀಲ್ -ಉಳ್ಳಾಲ ಭಾಗದ ಅಷ್ಟು ಪ್ರದೇಶಗಳು ಪಾಲಕ್ಕಾಡ್ ಡಿವಿಜನ್‌ಗೆ ದೊಡ್ಡ ಗಾತ್ರದ ಆದಾಯವನ್ನು ಸುರಿಯುತ್ತಿದ್ದವು. ಅದನ್ನು ತಪ್ಪಿಸಬೇಕಾದರೆ ಈ ಪ್ರದೇಶಗಳನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಬೇಕಾಗಿತ್ತು. ಆದ್ದರಿಂದ ಸದಾನಂದ ಗೌಡರಿಗೆ ಮನವಿಯನ್ನು ಮಾಡಿ ಈ ಕಾರ್ಯವನ್ನು ಶೀಘ್ರ ಮಾಡಿಕೊಡುವಂತೆ ಬೇಡಿಕೆ ಇಡಲಾಗಿತ್ತು.

ಇನ್ನು ಆಗ ಮಂಗಳೂರು - ಬೆಂಗಳೂರು ನಡುವೆ ರಾತ್ರಿ ಒಂದು ರೈಲು ಓಡಾಡುತ್ತಿತ್ತು. ಇದರಲ್ಲಿ ಪ್ರಯಾಣ ಮಾಡಿದರೆ ಮಂಗಳೂರಿನಿಂದ ಬೆಂಗಳೂರಿಗೆ ಹೋಗಲು 12 ಗಂಟೆಗಳ ಕಾಲಾವಧಿ ಹಿಡಿಯುತ್ತಿತ್ತು. ಶಿರಾಡಿ ಘಾಟ್ ಸೆಕ್ಷನ್‌ನಲ್ಲಿ ಗಂಟೆಗೆ 30 ಕಿಲೋ ಮೀಟರ್‌ ವೇಗದಲ್ಲಿ ಮಾತ್ರ ಸಾಗಲು ಸಾಧ್ಯವಾಗುವುದರಿಂದ ಶ್ರವಣಬೆಳಗೊಳ - ನೆಲಮಂಗಲ ರೈಲ್ವೆ ಹಳಿಗಳ ಕೆಲಸವನ್ನು ಚುರುಕುಗೊಳಿಸಿದರೆ ಬೆಂಗಳೂರಿಗೆ ಹಾಸನ ಮಾರ್ಗವಾಗಿ ಒಂದಿಷ್ಟು ಕಡಿಮೆ ಅಂತರದಲ್ಲಿ ತಲುಪಲು ಸಾಧ್ಯವಾಗುತ್ತದೆ ಎನ್ನುವ ಕಾರಣದಿಂದ ಆ ವಿಷಯದಲ್ಲಿಯೂ ನಮ್ಮ ಪ್ರಯತ್ನ ನಿರಂತರವಾಗಿತ್ತು. ಇದರೊಂದಿಗೆ ಕೇರಳದಿಂದ ಕೊಂಕಣ ರೈಲ್ವೆ ಮಾರ್ಗವಾಗಿ ಮುಂಬೈಗೆ ಕಡೆಗೆ ರೈಲುಗಳು ಸುರತ್ಕಲ್, ಉಡುಪಿ, ಕುಂದಾಪುರ, ಬೈಂದೂರು, ಭಟ್ಕಳ, ಕುಮಟಾ, ಕಾರವಾರದಿಂದ ನಿಲುಗಡೆ ನೀಡಲೇಬೇಕು ಎನ್ನುವ ಒತ್ತಾಯವನ್ನು ಸಚಿವರಿಗೆ ಮಾಡಲಾಯಿತು. ಇನ್ನು ಕೇರಳದಿಂದ ಬರುವ ರೈಲುಗಳು ಉಳ್ಳಾಲದಿಂದ ಸೆಂಟ್ರಲ್‌ಗೆ ಬರಲು ಹಾಗೂ ಸುರತ್ಕಲ್ ಕಡೆಯಿಂದ ಮಂಗಳೂರು ಜಂಕ್ಷನ್ ಹಾಗೂ ಮಂಗಳೂರು ಸೆಂಟ್ರಲ್‌ಗೆ ಬರಲು ಸಿಂಗಲ್ ಟ್ರ್ಯಾಕ್‌ ಇದ್ದ ಕಾರಣ ತುಂಬಾ ಸಮಯ ಹಿಡಿಯುತ್ತಿದ್ದ ಕಾರಣ ಆ ಬಗ್ಗೆಯೂ ನಿರಂತರ ಕೆಲಸ ಮಾಡಲಾಯಿತು.

ಪ್ರತಿ ಬಾರಿಯೂ ಕೇರಳ ಲಾಬಿ ಅಡ್ಡಿ:

ಯಾವುದೇ ಅಭಿವೃದ್ಧಿ ಕೆಲಸ ಆಗುವಾಗ ನಮ್ಮ ದೂರದೃಷ್ಟಿ ವಿಶಾಲವಾದಷ್ಟು ಅದು ಜನರಿಗೆ ಹೆಚ್ಚು ಉಪಯೋಗವಾಗುತ್ತದೆ. ಮಂಗಳೂರಿಗೆ ಪ್ರತ್ಯೇಕ ರೈಲು ವಿಭಾಗದ ಬಗ್ಗೆ ನಮ್ಮ ಪ್ರಯತ್ನ ನಿರಂತರ ಮುಂದುವರೆದಿತ್ತು. ಒಂದು ವೇಳೆ ಪ್ರತ್ಯೇಕ ರೈಲು ವಿಭಾಗ ಸಾಧ್ಯವಾಗದೇ ಹೋದರೆ ಕನಿಷ್ಠ ಪಾಲಕ್ಕಾಡ್ ತೆಕ್ಕೆಯಲ್ಲಿರುವ ನಮ್ಮ ಜಿಲ್ಲೆಯ ರೈಲು ನಿಲ್ದಾಣಗಳನ್ನು ಅಲ್ಲಿಂದ ಕರ್ನಾಟಕಕ್ಕೆ ಸೇರಿಸಬೇಕು. ಇಲ್ಲಿನ ಅಭಿವೃದ್ಧಿಗೂ ವೇಗ ಸಿಕ್ಕಿ, ನಮ್ಮ ಆಶಯಗಳು ಈಡೇರಬೇಕು ಎನ್ನುವುದು ನಮ್ಮ ದೂರದೃಷ್ಟಿಯಾಗಿತ್ತು. ಪ್ರತಿ ಬಾರಿ ನಾವು ನಮ್ಮ ಜಿಲ್ಲೆಯ ಬಗ್ಗೆ ಕಾರ್ಯಪ್ರವೃತ್ತರಾಗುವಾಗ ಕೇರಳದ ಲಾಬಿಗಳು ಕೂಡ ತಮ್ಮದೇ ತಂತ್ರ ನಡೆಸಿ ನಮಗೆ ಗೆಲುವು ಸುಲಭವಾಗಿ ಸಿಗದಂತೆ ಮಾಡಲು ಪ್ರಯತ್ನ ಮಾಡುತ್ತಲೇ ಇದ್ದವು. ಕೇಂದ್ರದಲ್ಲಿ ಪಿಯೂಶ್ ಗೋಯಲ್ ರೈಲ್ವೆ ಸಚಿವರಾದಾಗಲೂ ಅವರೊಂದಿಗೆ ಸಂವಹನ ಮಾಡಿ, ಅವರಿಂದ ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ನಮ್ಮ ಬೇಡಿಕೆಗಳು ಈಡೇರುವಂತೆ ರಾಜ್ಯದಲ್ಲಿರುವ ನಮ್ಮ ಪಕ್ಷದ ನಾಯಕರ ಮೂಲಕವೂ ಪ್ರಯತ್ನ ನಡೆಸಲಾಗಿತ್ತು. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೊಸ ಸುಸಜ್ಜಿತ ಕಟ್ಟಡ ನಿರ್ಮಾಣ, ಮೂಲ ಸೌಕರ್ಯ ಅಭಿವೃದ್ಧಿ, ಮೂರನೇ ಹಾಗೂ ನಾಲ್ಕನೇ ಫ್ಲಾಟ್ ಫಾರಂ ನಿರ್ಮಾಣ ಕಾರ್ಯ

ತ್ವರಿತಗೊಳಿಸುವುದು, ಸುಬ್ರಹ್ಮಣ್ಯ - ಸಕಲೇಶಪುರ ಹಳಿ ದ್ವಿಪಥ ಕಾಮಗಾರಿ ಕೈಗೆತ್ತಿಕೊಳ್ಳುವುದು, ಮಂಗಳೂರು - ಮಡ್ಗಾವ್‌ ಡೆಮು ರೈಲನ್ನು ಪ್ರತಿನಿತ್ಯ ಓಡಿಸುವುದು, ಗೇಜ್ ಪರಿವರ್ತನೆಯ ಸಂದರ್ಭದಲ್ಲಿ ರದ್ದಾಗಿದ್ದ ಮಂಗಳೂರನ್ನು ಹಾಸನ - ಅರಸೀಕೆರೆ ಮೂಲಕ ಹುಬ್ಬಳ್ಳಿ ಮೀರಜ್ ಸಂಪರ್ಕಿಸುತ್ತಿದ್ದ ಮಹಾಲಕ್ಷ್ಮಿ ಎಕ್ಸ್‌ಪ್ರೆಸ್ ರೈಲನ್ನು ಪುನರಾರಂಭಿಸುವುದು, ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಮ್ಮ ನಿರಂತರ ಮನವಿ, ಪ್ರಯತ್ನಗಳನ್ನು ಕಂಡು ಪಿಯೂಶ್ ಗೋಯಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಏಕೆಂದರೆ ನಮ್ಮ ಮುಖ್ಯ ಬೇಡಿಕೆ ಇದ್ದದ್ದೇ ಪಾಲಕ್ಕಾಡ್ ಡಿವಿಜನ್‌ನಿಂದ ನಮ್ಮ ರೈಲ್ವೆ ನಿಲ್ದಾಣಗಳನ್ನು ರಕ್ಷಿಸುವುದಾಗಿತ್ತು. ಅದು ಈಡೇರುವ ತನಕ ಮಂಗಳೂರಿನಲ್ಲಿ ದಕ್ಷಿಣ ರೈಲ್ವೆ ವಲಯದ ಕನಿಷ್ಠ ಉಪಕಚೇರಿಯನ್ನಾದರೂ ಆರಂಭಿಸಬೇಕೆಂಬ ಬೇಡಿಕೆಯನ್ನು ಮುಂದಿಡಲಾಗಿತ್ತು.

ಪಿಯೂಶ್‌ ಗೋಯಲ್‌ರಿಂದ ಸೋಮಣ್ಣವರೆಗೆ:

ಈ ವಿಷಯದಲ್ಲಿ ಪಿಯೂಶ್ ಗೋಯಲ್ ಅವರು ಅಂದು ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಗೆ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೆಚ್ಚುವರಿ ಫ್ಲಾಟ್ ಫಾರಂ ನೀಡುವುದಾಗಿ ತಿಳಿಸಿದ್ದರು. ಅದರೊಂದಿಗೆ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲ್ವೆ ಕೋಚಿಂಗ್‌

ಡಿಪೋಗಾಗಿ ಟ್ರ್ಯಾಕ್‌ ನೀಡುವುದಾಗಿ ತಿಳಿಸಿದ್ದರು. ಪ್ರತ್ಯೇಕ ರೈಲು ವಿಭಾಗದ ನಮ್ಮ ಆಸೆಗೆ ಫಲ ಸಿಗಲಿಲ್ಲವಾದರೂ ವಿವಿಧ ವಲಯ, ವಿಭಾಗದ ನಡುವೆ ಸಂವಹನ ಮಾಡಿ ಮುಂದಿನ ದಿನಗಳಲ್ಲಿ ಮಂಗಳೂರು ರೈಲ್ವೆ ನಿಲ್ದಾಣಗಳಿಗೆ ಏನೂ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳುವುದಾಗಿ ಪಿಯೂಶ್ ಗೋಯಲ್ ಭರವಸೆ ನೀಡಿದ್ದರು. ಬಹುಶಃ ಆವತ್ತು ಅವರು ನೀಡಿದ ವಾಗ್ದಾನವನ್ನು ಪ್ರಸ್ತುತ ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರೊಂದಿಗೆ ನಮ್ಮದೇ ರಾಜ್ಯದವರಾದ ಕೇಂದ್ರ ರೈಲ್ವೆ ರಾಜ್ಯ ಸಚಿವರಾದ ವಿ.ಸೋಮಣ್ಣ ಅವರು ಈಡೇರಿಸುವ ಮೂಲಕ ಹೊಸ ಭರವಸೆಯ ಬೆಳಕನ್ನು ಹರಿಸಿದ್ದಾರೆ.

ಇದಕ್ಕಾಗಿ ನಾನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು, ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ ಅವರಿಗೆ ತುಂಬು ಹೃದಯದ ಧನ್ಯವಾದ ಅರ್ಪಿಸುತ್ತೇನೆ. ಅದರೊಂದಿಗೆ ಮೋದಿ ಸರ್ಕಾರ ಪ್ರಥಮ ಬಾರಿಗೆ ಕೇಂದ್ರದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಬಳಿಕ ರೈಲ್ವೆ ಸಚಿವರಾಗಿ, ನಮ್ಮ ಮನವಿಯನ್ನು ಆಲಿಸಿ, ಅಧಿಕಾರಿಗಳ ಸಭೆ ಕರೆದು, ಸೂಚನೆ, ನಿರ್ದೇಶನ ನೀಡಿ, ಅಧಿಕಾರಿಗಳು ತಾಂತ್ರಿಕ ಕಾರಣ ನೀಡಿದಾಗ ದಕ್ಷಿಣ ಕನ್ನಡ ಸೇರಿ ಕರಾವಳಿಯ ಹಿತದ ದೃಷ್ಟಿಯಿಂದ ಸಹಕರಿಸಿದ ಡಿವಿ ಸದಾನಂದ ಗೌಡ, ಸುರೇಶ್ ಪ್ರಭು, ಪಿಯೂಶ್ ಗೋಯಲ್ ಅವರಿಗೂ ಧನ್ಯವಾದಗಳು.

ಆದರೆ ಈಗ ಪಾಲಕ್ಕಾಡ್‌ನಿಂದ ಮೈಸೂರು ವಿಭಾಗಕ್ಕೆ ನಮ್ಮ ರೈಲ್ವೆ ನಿಲ್ದಾಣಗಳ ಆಡಳಿತ ವ್ಯಾಪ್ತಿ ಬದಲಾದ ತಕ್ಷಣ ಎಲ್ಲವೂ ಮುಂದೆ ಸುಸೂತ್ರವಾಗಿ ನಡೆಯಿತು ಎಂದಲ್ಲ. ಈಗ ಬಂದಿರುವ ಅವಕಾಶವನ್ನು ನಾವು ಹೀಗೆ ಬಿಟ್ಟರೆ ಇಲ್ಲಿಯ ತನಕ ನಾವು ಮಾಡಿದ ಎಲ್ಲ ಪ್ರಯತ್ನಗಳು ಕಲ್ಲಿನ ಮೇಲೆ ನೀರು ಹಾಕಿದಂತೆ ಆಗಲಿದೆ. ಈಗಾಗಲೇ ಕೇರಳದ ಸಂಸದರು ಈ ನಿರ್ಣಯವನ್ನು ತಕ್ಷಣ ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಅಲ್ಲಿ ಉಪವಾಸ ಸತ್ಯಾಗ್ರಹ

ನಡೆಯುತ್ತಿದೆ. ಕೇರಳದ ಕಾಂಗ್ರೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಸತೀಶನ್ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಈ ನಿರ್ಣಯವನ್ನು ಹಿಂತೆಗೆದುಕೊಳ್ಳಲು ಆಗ್ರಹಿಸುತ್ತಿದ್ದಾರೆ. ಮಲಯಾಳಿ ಸಂಘಟನೆಗಳು ತಮ್ಮ ಸ್ಥಳೀಯ ನಾಯಕರೊಂದಿಗೆ ಓಣಂ ಹಬ್ಬದ ದಿನಗಳಲ್ಲಿಯೂ ರೈಲು ನಿಲ್ದಾಣಗಳ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸರ್ಕಾರ ಇರುವುದರಿಂದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೇರಳ ಕಾಂಗ್ರೆಸ್ ಒತ್ತಡಕ್ಕೆ ಮಣಿದು ಏನಾದರೂ ವಿರುದ್ಧ ನಿರ್ಧಾರ ತೆಗೆದುಕೊಂಡರೂ ಅಚ್ಚರಿ ಪಡಬೇಕಾಗಿಲ್ಲ. ಇಂತಹ ವಿಷಯಗಳಲ್ಲಿ ಕೇರಳಿಗರು ತಮ್ಮ ರಾಜ್ಯದ ಹಿತಾಸಕ್ತಿಯನ್ನು ಒಂದು

ಲವಶೇಷದಷ್ಟೂ ಕಡಿಮೆಯಾಗಲು ಬಿಡುವುದಿಲ್ಲ. ಅದಕ್ಕಾಗಿ ಅವರು ಪಕ್ಷ, ಹಬ್ಬ ಯಾವುದೋ ನೋಡದೇ ಒಂದೇ ಗುರಿ ಇಟ್ಟುಕೊಂಡು ಬಾಣ ಹೂಡುತ್ತಾರೆ. ಆದ್ದರಿಂದ ಕರ್ನಾಟಕದಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರತಿ ಸಂಸದರು, ಕಾಂಗ್ರೆಸ್ ಸರ್ಕಾರ ಕೇರಳದ ಲಾಬಿಗೆ ಮಣಿಯದಂತೆ ಎಚ್ಚರಿಕೆ ವಹಿಸಬೇಕಾಗಿದೆ.

ಮತ್ತೆ ಮೈಮರೆತರೆ ಈಗಿನ ಪ್ರಯತ್ನ ವ್ಯರ್ಥ:

ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮಗೆ ಸಿಕ್ಕಿರುವ ದೊಡ್ಡ ಭಾಗ್ಯವನ್ನು ಉಳಿಸಬೇಕಿದೆ. ನಾವು ನಮ್ಮ ಹೋರಾಟ ಈಡೇರಿತು ಎಂದು ಮೈಮರೆತು ಬಿಟ್ಟರೆ ಪರಿಸ್ಥಿತಿ ಮತ್ತೆ 10 ವರುಷ ಹಿಂದೆ ಹೋಗಬಹುದು. ಪ್ರಯತ್ನಗಳು ಮತ್ತೆ ಶೂನ್ಯದಿಂದ ಆರಂಭಿಸಬೇಕಾಗಬಹುದು. ಈ ರೈಲ್ವೆ ಹೋರಾಟದ ರಥವನ್ನು ಎಳೆಯಲು ನನ್ನೊಂದಿಗೆ ಆರಂಭದಿಂದಲೂ ಹಲವಾರು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಹಗಲಿರುಳು ಶ್ರಮಿಸಿದ್ದಾರೆ. ಅವರೆಲ್ಲರ ಪ್ರಯತ್ನದ ಫಲವಾಗಿ ಈಗ ಯಶಸ್ಸು ಸಿಕ್ಕಿದೆ. ಈಗ ಇದನ್ನು ಉಳಿಸುವ ಜವಾಬ್ದಾರಿಯೂ ನಮ್ಮೆಲ್ಲರ ಮೇಲಿದೆ. ಆ ಜವಾಬ್ದಾರಿಯನ್ನು ಅರಿತು ಮುನ್ನಡೆದರೆ ಜಿಲ್ಲೆಯ ರೈಲ್ವೆ ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯದು ಎನ್ನುವುದು ನನ್ನ ಹಾಗೂ ಅನೇಕ ಸಹೃದಯಿಗಳ ಭಾವನೆ. ಶುಭವಾಗಲಿ.

PREV
Read more Articles on

Recommended Stories

ಬ್ಲ್ಯಾಕ್‌ಬೆರಿ ಬೀಜಗಳ ರಹಸ್ಯ ಮತ್ತು ಅವುಗಳ ಅದ್ಭುತ ಆರೋಗ್ಯ ಪ್ರಯೋಜನಗಳು....
ರಕ್ಷಾ ಬಂಧನ: ಅಣ್ಣ-ತಂಗಿಯ ಶಾಶ್ವತ ಬಂಧ