ಗ್ರಾಹಕರ ವ್ಯಾಜ್ಯಗಳ ಬಗ್ಗೆ ಅರಿವು ಅಗತ್ಯ: ಶ್ರೀನಿಧಿ

KannadaprabhaNewsNetwork |  
Published : Apr 18, 2026, 01:45 AM IST
ಗ್ರಾಹಕರ ವ್ಯಾಜ್ಯಗಳ ಬಗ್ಗೆ - ಶ್ರೀನಿಧಿ | Kannada Prabha

ಸಾರಾಂಶ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಗ್ರಾಹಕರು ಖರೀದಿಸಿದ ವಸ್ತು ಅಥವಾ ಸೇವೆಯಲ್ಲಿನ ದೋಷಗಳ ಬಗ್ಗೆ ₹೫೦ ಲಕ್ಷವರೆಗಿನ ಮೌಲ್ಯದ ದೂರುಗಳನ್ನು ಪರಿಶೀಲಿಸಿ, ತ್ವರಿತವಾಗಿ ಹಾಗೂ ಉಚಿತವಾಗಿ ನ್ಯಾಯ ಒದಗಿಸುವ ಜಿಲ್ಲಾ ಮಟ್ಟದ ನ್ಯಾಯಾಂಗ ಸಂಸ್ಥೆಯಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು ಶ್ರೀನಿಧಿ ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಗ್ರಾಹಕರು ಖರೀದಿಸಿದ ವಸ್ತು ಅಥವಾ ಸೇವೆಯಲ್ಲಿನ ದೋಷಗಳ ಬಗ್ಗೆ ₹೫೦ ಲಕ್ಷವರೆಗಿನ ಮೌಲ್ಯದ ದೂರುಗಳನ್ನು ಪರಿಶೀಲಿಸಿ, ತ್ವರಿತವಾಗಿ ಹಾಗೂ ಉಚಿತವಾಗಿ ನ್ಯಾಯ ಒದಗಿಸುವ ಜಿಲ್ಲಾ ಮಟ್ಟದ ನ್ಯಾಯಾಂಗ ಸಂಸ್ಥೆಯಾಗಿದೆ ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು ಶ್ರೀನಿಧಿ ಹೇಳಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರತಿನಿತ್ಯ ಏನಾದರೂ ವಸ್ತುಗಳನ್ನು ಖರೀದಿಸುತ್ತಲೇ ಇರುತ್ತೇವೆ. ಸಂಸ್ಥೆಗಳಿಂದ ಸೇವೆಗಳನ್ನು ಪಡೆಯುತ್ತೇವೆ. ಈ ಪೈಕಿ ಬಹಳಷ್ಟು ಸಂದರ್ಭದಲ್ಲಿ ಗ್ರಾಹಕರಿಗೆ ಮೋಸಗಳಾಗುತ್ತವೆ. ಗ್ರಾಹಕ ವೇದಿಕೆ ಬಳಸಿಕೊಂಡು, ಮೋಸ ಎಸಗಿದವರ ವಿರುದ್ಧ ಹೋರಾಡುವ ಬಗ್ಗೆ ಯಾರೂ ಆಲೋಚಿಸುವುದಿಲ್ಲ. ಒಂದು ವೇಳೆ ಹೋರಾಡಿದ್ದೇ ಆದಲ್ಲಿ ನ್ಯಾಯ ಎಂದಿಗೂ ಗ್ರಾಹಕನ ಪರ ನಿಲ್ಲುತ್ತದೆ ಎಂದರು.

ಜಿಲ್ಲೆಯಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯವು ಪ್ರಾರಂಭವಾಗಿದ್ದರಿಂದ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಇತ್ಯರ್ಥ ಪಡಿಸಿದ್ದು, ಈಗ ೧೩೬ ಪ್ರಕರಣಗಳು ಬಾಕಿ ಇವೆ, ಆದರೂ ಗ್ರಾಹಕರಿಗೆ ಇನ್ನೂ ಹೆಚ್ಚು ಅರಿವಿನ ಅಗತ್ಯತೆ ಇದೆ ಎಂದರು.

ಗ್ರಾಹಕರು ಯಾವುದೇ ವಕೀಲರಿಲ್ಲದೆ ನೇರವಾಗಿ ಅಥವಾ ಪ್ರತಿನಿಧಿಯ ಮೂಲಕ ಈ ವೇದಿಕೆಯಲ್ಲಿ ದೂರು ದಾಖಲಿಸಬಹುದು, ಸೇವಾ ನ್ಯೂನತೆ, ವಿಮೆ ನಿರಾಕರಣೆ ಮತ್ತು ದೋಷಪೂರಿತ ವಸ್ತುಗಳ ಮಾರಾಟದ ಪ್ರಕರಣಗಳಲ್ಲಿ ಗ್ರಾಹಕರಿಗೆ ಪರಿಹಾರ ಒದಗಿಸುತ್ತಿವೆ ಎಂದರು.

ಜಿಲ್ಲಾ ಆಯೋಗ ₹೫೦ ಲಕ್ಷದವರೆಗಿನ ಮೌಲ್ಯದ ಸರಕು ಅಥವಾ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ವಿಚಾರಣೆ ನಡೆಸುತ್ತವೆ. ಗ್ರಾಹಕರು ದೈಹಿಕವಾಗಿ ನ್ಯಾಯಾಲಯಕ್ಕೆ ಹೋಗಬಹುದು ಅಥವಾ ಗ್ರಾಹಕ ಸಹಾಯವಾಣಿ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ದೂರು ದಾಖಲಿಸಬಹುದು ಎಂದರು.

ಖರೀದಿಸಿದ ವಸ್ತುಗಳ ಬಿಲ್, ವಾರಂಟಿ ಕಾರ್ಡ್ ಮತ್ತು ಮಾರಾಟಗಾರರಿಗೆ ನೀಡಿದ ನೋಟಿಸ್ ಪ್ರತಿಗಳು ದಾಖಲೆಗಳನ್ನು ಒದಗಿಸಬೇಕು, ಇಲ್ಲಿ ದಾಖಲೆಗಳೇ ಪ್ರಮುಖವಾಗಿರುತ್ತವೆ ಎಂದರು.

ಸರಕುಗಳ ಗುಣಮಟ್ಟ, ಬೆಲೆ, ಅಳತೆ, ಮತ್ತು ಶುದ್ಧತೆಯ ಬಗ್ಗೆ ಜಾಗರೂಕರಾಗಿರಬೇಕು. ಮಾಹಿತಿ ಪಡೆಯುವುದು, ಖರೀದಿಸುವ ಮುನ್ನ ಉತ್ಪನ್ನದ ಲೇಬಲ್, ಎಕ್ಸ್‌ಪೈರಿ ಡೇಟ್ ಮತ್ತು ಬಳಕೆಯ ಸೂಚನೆಗಳನ್ನು ಓದಿ ತಿಳಿದುಕೊಳ್ಳಬೇಕು ಎಂದರು.

ಗ್ರಾಹಕ ನ್ಯಾಯಾಲಯವು ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಮತ್ತು ವ್ಯಾಪಾರಿಗಳ ಶೋಷಣೆಯ ವಿರುದ್ಧ ತ್ವರಿತ ನ್ಯಾಯ ಒದಗಿಸಲು ಸ್ಥಾಪಿಸಲಾದ ವಿಶೇಷ ವೇದಿಕೆಯಾಗಿದೆ. ಇದು ಗ್ರಾಹಕ ಸಂರಕ್ಷಣಾ ಕಾಯ್ದೆ, ೨೦೧೯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದರು.

ದೂರು ಸಲ್ಲಿಸಿದ ದಿನಾಂಕದಿಂದ ೨ ವರ್ಷಗಳ ಒಳಗೆ ಪ್ರಕರಣ ದಾಖಲಿಸಬೇಕು. ನಂತರ ದಾಖಲಿಸಬೇಕಾದರೆ ಸೂಕ್ತವಾದ ಕಾರಣಗಳನ್ನು ದಾಖಲೆ ಸಮೇತ ನೀಡಬೇಕು ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್. ಎನ್. ಸಿದ್ದಲಿಂಗಸ್ವಾಮಿ, ಖಜಾಂಚಿ ಪುಟ್ಟರಾಜು ಉಪಸ್ಥಿತರಿದ್ದರು. ಹಿರಿಯ ಪತ್ರಕರ್ತ ಅಬ್ರಹಾಂ ಡಿ. ಸಿಲ್ವ ಸ್ವಾಗತಿಸಿ, ಫಾಲಲೋಚನಾ ಅರಾಧ್ಯ ವಂದಿಸಿದರು.

PREV

Recommended Stories

ಕಬ್ಬಿಗೆ 4500 ರು. ಎಫ್‌ಆರ್‌ಪಿ ನಿಗದಿಗೆ ಆಗ್ರಹ
ಆಂತರಿಕ ದೂರು ಸಮಿತಿ ರಚನೆ ಕಡ್ಡಾಯ: ನಾಗಲಕ್ಷ್ಮೀ ಚೌಧರಿ