ಆಂತರಿಕ ದೂರು ಸಮಿತಿ ರಚನೆ ಕಡ್ಡಾಯ: ನಾಗಲಕ್ಷ್ಮೀ ಚೌಧರಿ

KannadaprabhaNewsNetwork |  
Published : Apr 18, 2026, 01:30 AM IST
೧೭ಕೆಎಂಎನ್‌ಡಿ-೧ಮಂಡ್ಯದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಚೌಧರಿ ಮಹಿಳೆಯರ ಕುಂದುಕೊರತೆ ವಿಚಾರಿಸಿದರು. | Kannada Prabha

ಸಾರಾಂಶ

ನೋಂದಾಯಿತ ಎಲ್ಲಾ ಸಂಸ್ಥೆಗಳು, ಸರ್ಕಾರಿ ಇಲಾಖೆಗಳಲ್ಲಿ ಆಂತರಿಕ ದೂರು ಸಮಿತಿ ಕಡ್ಡಾಯವಾಗಿ ರಚನೆಯಾಗಿರಬೇಕು. ಸಮಿತಿ ಕೇವಲ ಪುಸ್ತಕದ ಹಾಳೆಯಲ್ಲಿರದೆ ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಮಹಿಳೆಯರಿಗೆ ಏನಾದರೂ ಸಮಸ್ಯೆಗಳಿದ್ದರೆ ಪರಿಹಾರ ಸೂಚಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ನೋಂದಾಯಿತ ಎಲ್ಲಾ ಸಂಸ್ಥೆಗಳು, ಸರ್ಕಾರಿ ಇಲಾಖೆಗಳಲ್ಲಿ ಆಂತರಿಕ ದೂರು ಸಮಿತಿ ಕಡ್ಡಾಯವಾಗಿ ರಚನೆಯಾಗಿರಬೇಕು. ಸಮಿತಿ ಕೇವಲ ಪುಸ್ತಕದ ಹಾಳೆಯಲ್ಲಿರದೆ ಪ್ರತಿ 3 ತಿಂಗಳಿಗೊಮ್ಮೆ ಸಭೆ ನಡೆಸಬೇಕು. ಮಹಿಳೆಯರಿಗೆ ಏನಾದರೂ ಸಮಸ್ಯೆಗಳಿದ್ದರೆ ಪರಿಹಾರ ಸೂಚಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದರು.ಶುಕ್ರವಾರ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಜನ ಸುನ್ವಾಯಿ (ಸಾರ್ವಜನಿಕ ವಿಚಾರಣೆ) ನಿಮ್ಮ ಮನೆ ಬಾಗಿಲಿಗೆ ಮಹಿಳಾ ಆಯೋಗ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಎಷ್ಟೋ ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ನೌಕರರು, ಸಿಬ್ಬಂದಿಗೆ ಆಂತರಿಕ ದೂರು ಸಮಿತಿ ಅಸ್ತಿತ್ವದಲ್ಲಿರುವ ಅರಿವೇ ಇಲ್ಲ. ಅದರ ಬಗ್ಗೆ ಅರಿವು ಮೂಡಿಸಿ. ನಾಮಫಲಕಗಳನ್ನು ಅಳವಡಿಸಬೇಕು. ರೆಸಾರ್ಟ್, ಹೋಟೆಲ್, ಕ್ಲಬ್, ಶಾಲಾ-ಕಾಲೇಜು ಸೇರಿದಂತೆ ನೋಂದಾಯಿತ ಸಂಸ್ಥೆಗಳಲ್ಲೆಲ್ಲಾ ಕಡ್ಡಾಯವಾಗಿ ಸಮಿತಿ ರಚನೆಯಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರಬೇಕು. ಯಾರು ಸಮಿತಿ ರಚನೆ ಮಾಡದೆ ಬೇಜವಾಬ್ದಾರಿ ತೋರುವರೋ ಆ ಸಂಸ್ಥೆಗಳ ಲೈಸೆನ್ಸ್ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.ಆಂತರಿಕ ದೂರು ಸಮಿತಿ ಕಾರ್ಯನಿರ್ವಹಣೆ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿರಬೇಕು. ಇದರ ಬಗ್ಗೆ ಜಾಗೃತಿಯೇ ಇಲ್ಲದಿದ್ದರೆ ಆ ವ್ಯವಸ್ಥೆಯೇ ವಿಫಲವಾಗುತ್ತದೆ. ಅದಕ್ಕಾಗಿ ಸಮಿತಿ ರಚನೆಯಾಗಿರುವ ಮತ್ತು ಕಾರ್ಯನಿರ್ವಹಿಸುತ್ತಿರುವ ಕುರಿತಂತೆ ವರದಿ ಸಲ್ಲಿಸುವಂತೆ ತಿಳಿಸಿದರು.ಕ್ಯೂ ಆರ್ ಕೋಡ್ ಬಗ್ಗೆ ಅರಿವು ಮೂಡಿಸಿಮಹಿಳೆಯರು ಪೊಲೀಸ್ ಠಾಣೆಗಳಿಗೆ ತೆರಳಿದಾಗ ಪೊಲೀಸ್ ಅಧಿಕಾರಿಗಳ ನಡವಳಿಕೆ ಹೇಗಿರುತ್ತದೆ, ಮಹಿಳೆಯರೊಂದಿಗೆ ಸೌಜನ್ಯದಿಂದ ನಡೆದುಕೊಂಡು ದೂರು ಸ್ವೀಕರಿಸುವರೋ, ಇಲ್ಲವೇ ತಿರಸ್ಕರಿಸುವರೋ, ಅವರನ್ನು ಗದರಿ ಕಳುಹಿಸುವರೋ ಎಂಬುದನ್ನು ಮಹಿಳಾ ಅಧಿಕಾರಿಯಾಗಿ ಹೇಗೆ ಅರಿಯುವಿರಿ ಎಂದು ಜಿಲ್ಲಾ ಆರಕ್ಷಕ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ ಅವರನ್ನು ಪ್ರಶ್ನಿಸಿದರು.ಇದಕ್ಕೆ ಉತ್ತರಿಸಿದ ಡಾ.ವಿ.ಜೆ.ಶೋಭಾರಾಣಿ, ಎಲ್ಲಾ ಪೊಲೀಸ್ ಠಾಣೆಗಳಲ್ಲೂ ಇದಕ್ಕಾಗಿಯೇ ಕ್ಯೂಆರ್‌ಕೋಡ್‌ನ್ನು ಸೃಜಿಸಲಾಗಿದೆ ಎಂದಾಗ, ನಾಗಲಕ್ಷ್ಮೀ ಚೌಧರಿ ಅವರು ಮಧ್ಯಪ್ರವೇಶಿಸಿ ಕ್ಯೂಆರ್‌ಕೋಡ್ ಬಗ್ಗೆ ಎಷ್ಟು ಜನರಿಗೆ ಅರಿವಿದೆ. ಮಹಿಳೆಯರಿಗೆ ಈ ಕುರಿತು ಅರಿವು ಮೂಡಿಸಿದ್ದೀರಾ. ದೂರು ನೀಡಲು ಬಂದ ಮಹಿಳೆಯರನ್ನು ಪೊಲೀಸ್ ಅಧಿಕಾರಿಗಳು ದಬ್ಬಾಳಿಕೆ, ದೌರ್ಜನ್ಯ ನಡೆಸಿದಾಗ ಕ್ಯೂಆರ್ ಕೋಡ್‌ನಿಂದಲೇ ಅಧಿಕಾರಿ ವಿರುದ್ಧ ದೂರು ನೀಡಬಹುದೆಂಬ ಅರಿವು ಮಹಿಳೆಯರಿಗೆ ಬಂದಾಗ ಉದ್ದೇಶ ಸಾರ್ಥಕತೆ ಪಡೆಯುತ್ತದೆ ಎಂದರು. ಎಸ್‌ಪಿ ಡಾ.ವಿ.ಜೆ.ಶೋಭಾರಾಣಿ ಅವರು ಅಕ್ಕ ಪಡೆಯನ್ನು ರಚಿಸಿದ್ದು, ಬಸ್ ನಿಲ್ದಾಣ, ಉದ್ಯಾನವನಗಳಲ್ಲಿ ಕಾಲಹರಣ ಮಾಡುವ ಶಾಲಾ-ಕಾಲೇಜು ವಿದ್ಯಾರ್ಥಿನಿಯರಿಗೆ ತಿಳಿವಳಿಕೆ ಹೇಳಿ ಕಳುಹಿಸಲಾಗುವುದು. ಪೊಲೀಸರ ಮಾತಿಗೆ ಬಗ್ಗದಿದ್ದರೆ ಪೋಷಕರ ಗಮನಕ್ಕೆ ತರಲಾಗುವುದು ಎಂದು ಸಭೆಗೆ ತಿಳಿಸಿದರು.

ಬಸ್ ನಿಲ್ದಾಣಗಳಲ್ಲಿ ಮಕ್ಕಳ ಪಾಲನಾ ಕೇಂದ್ರಗಳಿಲ್ಲಮಕ್ಕಳ ಪಾಲನಾ ಕೇಂದ್ರಗಳನ್ನು ಬಸ್ ನಿಲ್ದಾಣಗಳಲ್ಲಿ ತೆರೆಯುವುದು ಕಡ್ಡಾಯ. ತಾಯಿ ಮಗುವಿಗೆ ಹಾಲುಣಿಸುವ ಕೊಠಡಿ, ತೊಟ್ಟಿಲು ಕೇಂದ್ರದಲ್ಲಿರಬೇಕು. ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು, ಶೌಚಾಲಯ, ಸಿಸಿ ಕ್ಯಾಮೆರಾ ಕಡ್ಡಾಯವಾಗಿರಬೇಕು. ಸಿಸಿ ಕ್ಯಾಮರಾಗಳ ಸಂಗ್ರಹ ಸಾಮರ್ಥ್ಯವನ್ನು ೧೫ ದಿನಗಳಿಂದ ೩ ತಿಂಗಳಿಗೆ ಹೆಚ್ಚಿಸುವಂತೆ ಸೂಚಿಸಿದರು.ತಾಯಿ -ಮಗುವಿನ ಆಸ್ಪತ್ರೆ ಆರಂಭಕ್ಕೆ ಸರ್ಕಾರದೊಂದಿಗೆ ಚರ್ಚೆಮಂಡ್ಯದ ಹೊರವಲಯದ ಬಿ.ಹೊಸೂರು ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ತಾಯಿ-ಮಗುವಿನ ಆಸ್ಪತ್ರೆಯ ಸಿವಿಲ್ ಕಾಮಗಾರಿ ಪೂರ್ಣಗೊಂಡಿದೆ. ಹಲವು ವರ್ಷದಿಂದ ಸತತ ಪ್ರಯತ್ನ ನಡೆಸಿ ಅಂತಿಮ ಹಂತಕ್ಕೆ ತಂದಿದ್ದೇವೆ. ಆಸ್ಪತ್ರೆಗೆ ಸಂಬಂಧಿಸಿದ ಕೆಲವೊಂದು ಉಪಕರಣಗಳು ಬರಬೇಕಿದೆ. ರಾಜ್ಯಸರ್ಕಾರ ಒಂದಷ್ಟು ಅನುದಾನವನ್ನು ಬಿಡುಗಡೆ ಮಾಡಬೇಕಿದೆ. ತಾಂತ್ರಿಕ ಯಂತ್ರೋಪಕರಣಗಳು ಬಂದ ಕೂಡಲೇ ಸಾರ್ವಜನಿಕ ಉಪಯೋಗಕ್ಕೆ ದೊರಕಿಸಲಾಗುವುದು. ಈ ಸಂಬಂಧ ಸರ್ಕಾರಕ್ಕೂ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಸಿದ ನಾಗಲಕ್ಷ್ಮೀಚೌಧರಿ ಅವರು ನೀವು ಸರ್ಕಾರಕ್ಕೆ ಬರೆದಿರುವ ಪತ್ರವನ್ನು ನನಗೂ ನೀಡಿದರೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಬೇಗ ಅನುದಾನ ಬಿಡುಗಡೆ ಮಾಡಿಸುವ ಭರವಸೆ ನೀಡಿದರು.

ನೇಮಕಾತಿ ಮಾಡಿದರೆ ಆರಂಭಅದೇ ರೀತಿ ಕ್ಯಾನ್ಸರ್ ಆಸ್ಪತ್ರೆ ಬಗ್ಗೆ ಜಿಲ್ಲಾಧಿಕಾರಿ ವಿವರಣೆ ನೀಡಿ, ಕ್ಯಾನ್ಸರ್ ಆಸ್ಪತ್ರೆ ಕೇಂದ್ರ ಮತ್ತು ರಾಜ್ಯಸರ್ಕಾರದ ಶೇ.೬೦:೪೦ ಅನುಪಾತದಲ್ಲಿ ನಿರ್ಮಾಣವಾಗುತ್ತಿದೆ. ಅಲ್ಲಿಯೂ ಸಿವಿಲ್ ಕಾಮಗಾರಿಪೂರ್ಣಗೊಂಡಿದೆ. ಕ್ಯಾನ್ಸರ್ ಆಸ್ಪತ್ರೆ ಯಂತ್ರೋಪಕರಣಗಳಿಗೆ ಟೆಂಡರ್ ಆಗಿ ಅದನ್ನು ಅಳವಡಿಸಲಾಗಿದೆ. ಬಂಕರ್ ಅಳವಡಿಸಲು ೩ ತಿಂಗಳ ಕಾಲಾವಕಾಶ ಬೇಕಿದೆ. ಅದೂ ಈಗ ಮುಗಿಯುವ ಹಂತಕ್ಕೆ ಬಂದಿದೆ. ಆಸ್ಪತ್ರೆ ಮುನ್ನಡೆಗೆ ೨೬೫ ಮಾನವ ಸಂಪನ್ಮೂಲ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿತ್ತು. ನಂತರದಲ್ಲಿ ಪ್ರಸ್ತಾವನೆಯಲ್ಲಿದ್ದ ಸಂಖ್ಯೆಯನ್ನು ಕಡಿಮೆ ಮಾಡುವಂತೆ ಸರ್ಕಾರ ಸೂಚಿಸಿತ್ತು ಎಂದರು.ಇದೀಗ ಕಿದ್ವಾಯಿ ಆಸ್ಪತ್ರೆಯ ಮಾನದಂಡ ಆಧರಿಸಿ ಸಮಿತಿ ರಚನೆ ಮಾಡಿ ಮಾನವ ಸಂಪನ್ಮೂಲ ಕಡಿತಗೊಳಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರ ವೈದ್ಯಾಧಿಕಾರಿ, ಸಿಬ್ಬಂದಿಯನ್ನು ಕೊಡುವವರೆಗೂ ಗುತ್ತಿಗೆ-ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡುವಂತೆ ಸರ್ಕಾರಕ್ಕೆ ತಿಳಿಸಿರುವುದಾಗಿ ಹೇಳಿದರು.ಸಾರ್ವಜನಿಕ ಶೌಚಾಲಯಗಳ ಅವ್ಯವಸ್ಥೆನಗರ ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಸ್ವಚ್ಛತೆ ಸಂಪೂರ್ಣ ಮಾಯವಾಗಿದೆ. ಜಿಲ್ಲಾಧಿಕಾರಿ, ತಾಲೂಕು ಕಚೇರಿ, ಎಸ್‌ಪಿ ಕಚೇರಿ ಸಮೀಪದಲ್ಲಿರುವ ಶೌಚಾಲಯಗಳೇ ನರಕಮಯವಾಗಿವೆ. ಲಕ್ಷಾಂತರ ರು. ಖರ್ಚು ಮಾಡಿ ನಿರ್ಮಿಸಿದ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಶೌಚಾಲಯಗಳ ಕೊರತೆ ಇನ್ನೂ ಇದೆ. ಇದರಿಂದ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಭೆಯಲ್ಲಿದ್ದವರು ಅಧ್ಯಕ್ಷೆ ನಾಗಲಕ್ಷ್ಮೀ ಗಮನಕ್ಕೆ ತಂದರು.ಆಗ ನಗರಸಭೆ ವ್ಯವಸ್ಥಾಪಕಿ ಕಲ್ಪ ಅವರು, ನಿತ್ಯವೂ ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು ಶೌಚಾಲಯಗಳ ಸ್ಥಿತಿ-ಗತಿಗಳ ಬಗ್ಗೆ ವೀಕ್ಷಿಸಿಕೊಂಡು ಬರುತ್ತಿದ್ದಾರೆ ಎಂದಾಗ, ಗಬ್ಬೆದ್ದು ನಾರುತ್ತಿರುವುದು, ಬೀಗ ಹಾಕಿರುವ ಶೌಚಾಲಯಗಳನ್ನು ನೋಡಿಕೊಂಡು ಬರುತ್ತಿದ್ದಾರೆಯೇ ಎಂದು ಖಾರವಾಗಿ ಹೇಳಿದರು. ಇದನ್ನು ಕೇಳಿ ವ್ಯವಸ್ಥಾಪಕಿ ಕಲ್ಪ ನಕ್ಕರು. ಇದು ನಗುವ ವಿಷಯವೇನಮ್ಮ. ಗಂಭೀರವಾದ ವಿಷಯ. ಕೂಡಲೇ ಶೌಚಾಲಯಗಳನ್ನು ಸುಸ್ಥಿತಿಯಲ್ಲಿಡುವ ಕಡೆ ಗಮನಹರಿಸುವಂತೆ ಸೂಚಿಸಿದರು.ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಆರಕ್ಷಕ ಅಧೀಕ್ಷಕಿ ಡಾ.ವಿ.ಜೆ.ಶೋಭಾರಾಣಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಆಶಾ ಇತರರಿದ್ದರು.

PREV

Recommended Stories

ಕಬ್ಬಿಗೆ 4500 ರು. ಎಫ್‌ಆರ್‌ಪಿ ನಿಗದಿಗೆ ಆಗ್ರಹ
ಕನ್ನಡಿಗರ ಪಾಲೇ ಕಡಿಮೆ ಆಗುತ್ತೆ, ಅದನ್ನೇಕೆ ಹೇಳ್ತಿಲ್ಲ?