ಬಿಜೆಪಿ ಜತೆ ವಿಲೀನ/ಮೈತ್ರಿಗೆ ಬಿಆರ್‌ಎಸ್ ಚಿಂತನೆ?

KannadaprabhaNewsNetwork |  
Published : Jul 12, 2024, 01:39 AM ISTUpdated : Jul 12, 2024, 05:53 AM IST
ಬಿಆರ್‌ಎಸ್ | Kannada Prabha

ಸಾರಾಂಶ

ಇತ್ತೀಚಿನ ತೆಲಂಗಾಣ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋಲಿನಿಂದ ಕಂಗೆಟ್ಟರುವ ಕೆ. ಚಂದ್ರಶೇಖರ ರಾವ್‌ ಅವರ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌), ತನ್ನ ಬದ್ಧವೈರಿ ಬಿಜೆಪಿ ಜತೆ ಮೈತ್ರಿ ಅಥವಾ ವಿಲೀನ ಮಾತುಕತೆಗೆ ಮುಂದಾಗಿದೆ ಎಂಬ ಕುತೂಹಲಕರ ಮಾಹಿತಿ ಹೊರಬಿದ್ದಿದೆ.

ಹೈದರಾಬಾದ್‌: ಇತ್ತೀಚಿನ ತೆಲಂಗಾಣ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಸೋಲಿನಿಂದ ಕಂಗೆಟ್ಟರುವ ಕೆ. ಚಂದ್ರಶೇಖರ ರಾವ್‌ ಅವರ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್‌), ತನ್ನ ಬದ್ಧವೈರಿ ಬಿಜೆಪಿ ಜತೆ ಮೈತ್ರಿ ಅಥವಾ ವಿಲೀನ ಮಾತುಕತೆಗೆ ಮುಂದಾಗಿದೆ ಎಂಬ ಕುತೂಹಲಕರ ಮಾಹಿತಿ ಹೊರಬಿದ್ದಿದೆ.

ಇದೇ ಕಾರಣಕ್ಕೆ ಕಳೆದ ವಾರ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಲು ಕೆಸಿಆರ್‌ ಅವರ ಪುತ್ರ ಹಾಗೂ ಪಕ್ಷದ ನಂ.2 ನಾಯಕ ಕೆ.ಟಿ. ರಾಮರಾವ್‌ ದಿಲ್ಲಿಗೆ ಬಂದಿದ್ದರು ಎಂದು ಮೂಲಗಳು ಹೇಳಿವೆ.

ಇತ್ತೀಚಿನ ಚುನಾವಣೆಯಲ್ಲಿ ಪಕ್ಷ ಸೋತಿದೆ. ಅಲ್ಲದೆ, ಪಕ್ಷದ 7 ವಿಧಾನಸಭಾ ಸದಸ್ಯರು ಹಾಗೂ 7 ವಿಧಾನಪರಿಷತ್‌ ಸದಸ್ಯರು ಕಾಂಗ್ರೆಸ್‌ ಸೇರಿದ್ದಾರೆ. ಹೀಗಾಗಿ ಪಕ್ಷದ ಉಳಿವಿಗೆ ಬಿಜೆಪಿ ಜತೆ ಮೈತ್ರಿ ಅಥವಾ ವಿಲೀನಕ್ಕೆ ಬಿಆರ್‌ಎಸ್‌ನಲ್ಲಿ ಚಿಂತನೆ ನಡೆದಿದೆ ಎಂದು ಅವು ಹೇಳಿವೆ.

ಮೈತ್ರಿ ಬಗ್ಗೆ ಬಿಜೆಪಿ 2 ನಿಲುವು:

ಮೈತ್ರಿಗೆ ಕೆಲವು ತೆಲಂಗಾಣ ಬಿಜೆಪಿ ನಾಯಕರೂ ಸಹಮತ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನು ಕೆಲವರು ಅಸಮ್ಮತಿ ಸೂಚಿಸಿದ್ದರೆ. ‘ದಿಲ್ಲಿ ಅಬಕಾರಿ ಹಗರಣದಲ್ಲಿ ಕೆಸಿಆರ್‌ ಪುತ್ರಿ ಕೆ. ಕವಿತಾ ಬಂಧಿತರಾಗಿದ್ದಾರೆ. ಇಂಥ ಭ್ರಷ್ಟ ಹಣೆಪಟ್ಟಿ ಹೊತ್ತವರ ಜತೆ ಮೈತ್ರಿಯು ಬಿಜೆಪಿಗೆ ಅಪಾಯಕಾರಿ’ ಎಂದಿರುವ ಅವರು, ‘ರಾಜ್ಯದಲ್ಲಿ 8 ಲೋಕಸಭೆ ಕ್ಷೇತ್ರಗಳನ್ನು ಬಿಜೆಪಿ ಸ್ವಂತ ಬಲದ ಮೇಲೆ ಗೆದ್ದಿದೆ. ಹೀಗಾಗಿ ಪಕ್ಷಕ್ಕೆ ಬಿಆರ್‌ಎಸ್‌ ಅಗತ್ಯವಿಲ್ಲ’ ಎಂದು ವಾದಿಸಿದ್ದಾರೆ.

ಏನು ಬೇಕಾದರೂ ಆಗಬಹುದು- ಬಿಆರ್‌ಎಸ್‌ ಸಂಸದ:

ಈ ನಡುವೆ, ಬಿಆರ್‌ಎಸ್‌ ಸಂಸದ ಬಿ. ವಿನೋದ್‌ ಕುಮಾರ್‌ ಮಾತನಾಡಿ, ‘ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು’ ಎಂದು ಮೈತ್ರಿ ಸಾಧ್ಯತೆಯ ಸುಳಿವು ನೀಡಿದ್ದಾರೆ. ಆದರೆ, ‘ಕಾಂಗ್ರೆಸ್‌ 5 ವರ್ಷದ ಹಿಂದೆ ತೆಲಂಗಾಣದಲ್ಲಿ ಅಧಃಪತನ ಹೊಂದಿತ್ತು. ಈಗ ಅಧಿಕಾರಕ್ಕೆ ಬಂದಿದೆ. ಅದೇ ರೀತಿ ಬಿಆರ್‌ಎಸ್‌ಗೆ ಈಗ ಹಿನ್ನಡೆ ಆಗಿರಬಹುದು. ಆದರೆ ರಾಜ್ಯಾದ್ಯಂತ ಕಾರ್ಯಕರ್ತರನ್ನು ಹೊಂದಿರುವ ಪಕ್ಷ ಇನ್ನು 5 ವರ್ಷ ಬಳಿಕ ಫೀನಿಕ್ಸ್‌ನಂತೆ ಪುಟಿದೇಳುವ ಸಾಧ್ಯತೆಯೂ ಇದೆ. ಹೀಗಾಗಿ ಚುನಾವಣೆ ದೂರ ಇರುವಾಗ ಮೈತ್ರಿಯ ಬಗ್ಗೆ ಮಾತಾಡುವುದು ತರವಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

PREV

Recommended Stories

ಅಲ್ಬೇನಿಯಾದಲ್ಲಿ ವಿಶ್ವದ ಮೊದಲ ಎಐ ಸಚಿವೆ ನೇಮಕ!
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ