ನಿಯಮ ಪಾಲಿಸದ ಪೇಯಿಂಗ್‌ ಗೆಸ್ಟ್‌ ಬಂದ್‌ ಮಾಡಲು ಬಿಬಿಎಂಪಿ ಚರ್ಚೆ

KannadaprabhaNewsNetwork | Updated : May 04 2025, 06:40 AM IST

ಸಾರಾಂಶ

 ಬೆಂಗಳೂರಿನ ವಸತಿ ಪ್ರದೇಶದಲ್ಲಿರುವ ಪೇಯಿಂಗ್‌ ಗೆಸ್ಟ್‌ (ಪಿಜಿ) ಕಡ್ಡಾಯವಾಗಿ ವಾಹನ ನಿಲುಗಡೆ ಸೇರಿ ವಿವಿಧ ಸೌಲಭ್ಯ ಹೊಂದಿರಬೇಕು. ಇಲ್ಲವಾದರೆ, ಪಿಜಿ ಬಂದ್‌ 

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ರಾಜಧಾನಿ ಬೆಂಗಳೂರಿನ ವಸತಿ ಪ್ರದೇಶದಲ್ಲಿರುವ ಪೇಯಿಂಗ್‌ ಗೆಸ್ಟ್‌ (ಪಿಜಿ) ಕಡ್ಡಾಯವಾಗಿ ವಾಹನ ನಿಲುಗಡೆ ಸೇರಿ ವಿವಿಧ ಸೌಲಭ್ಯ ಹೊಂದಿರಬೇಕು. ಇಲ್ಲವಾದರೆ, ಪಿಜಿ ಬಂದ್‌ ಮಾಡುವ ಬಗ್ಗೆ ಬಿಬಿಎಂಪಿ ಚರ್ಚೆ ನಡೆಸುತ್ತಿದೆ.

ಸಣ್ಣ- ಸಣ್ಣ ರಸ್ತೆಗಳಲ್ಲಿರುವ ಪಿಜಿ ಮುಂಭಾಗದ ರಸ್ತೆ ಬದಿ ಭಾರೀ ಸಂಖ್ಯೆಯ ವಾಹನಗಳನ್ನು ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳಿಗೆ ಹಾಗೂ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಜತೆಗೆ ಪಿಜಿಯಲ್ಲಿ ಮಿತಿ ಮೀರಿ ಅವಕಾಶ ನೀಡಲಾಗುತ್ತಿದೆ. ಇದರಿಂದ ಸುತ್ತಮುತ್ತಲ ನಿವಾಸಿಗಳಿಂದಲೂ ಪಿಜಿಗಳ ವಿರುದ್ಧ ದೂರು ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ವಾಹನ ನಿಲುಗಡೆ ಸ್ಥಳ ಒದಗಿಸುವುದನ್ನು ಕಡ್ಡಾಯಗೊಳಿಸಲು ಚಿಂತನೆ ನಡೆಸಿದ್ದಾರೆ.

ವಲಯ ವರ್ಗೀಕರಣ ನಿಯಮದ ಪ್ರಕಾರ 40 ಅಡಿ ರಸ್ತೆಗಿಂತ ಕಡಿಮೆ ವಿಸ್ತೀರ್ಣದ ರಸ್ತೆಯಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶ ಇರುವುದಿಲ್ಲ. ಬಿಬಿಎಂಪಿಗೆ ಉದ್ದಿಮೆ ಪರವಾನಗಿ ನೀಡಲು ಅವಕಾಶ ಇರುವುದಿಲ್ಲ. ಆದರೂ ನಗರದ ವಸತಿ ಪ್ರದೇಶದಲ್ಲಿ 40 ಅಡಿಗಿಂತ ಕಡಿಮೆ ವಿಸ್ತೀರ್ಣದ ರಸ್ತೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಲಾಗುತ್ತಿದೆ. ಅದೇ ರೀತಿ ನಗರದಲ್ಲಿ ಸುಮಾರು 1,800 ಅನಧಿಕೃತವಾಗಿ ಪಿಜಿಗಳನ್ನು ನಡೆಸಲಾಗುತ್ತಿದೆ.

ಈ ರೀತಿಯ ಉದ್ದಿಮೆ ನಡೆಸಿದರೂ ಬಿಬಿಎಂಪಿಗೆ ಯಾವುದೇ ಆದಾಯ ಬರುತ್ತಿಲ್ಲ. ಆದರೆ ರಸ್ತೆ, ಕಸ ವಿಲೇವಾರಿ ಮತ್ತಿತರ ಸೌಲಭ್ಯಗಳನ್ನು ಪಾಲಿಕೆ ನೀಡುತ್ತಿದೆ. ಜತೆಗೆ, ಅನಧಿಕೃತ ಪಿಜಿಗಳ ನಿಯಂತ್ರಣಕ್ಕೆ ಪಾಲಿಕೆ ಅಧಿಕಾರಿಗಳಿಗೆ ಕಷ್ಟವಾಗಿದೆ. ಈ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಪ್ರಾಥಮಿಕ ಹಂತದಲ್ಲಿ ಚರ್ಚೆ ನಡೆಸಿದ್ದಾರೆ.

ಸರ್ಕಾರಕ್ಕೆ ಪ್ರಸ್ತಾವನೆ:

ಹೊರ ರಾಜ್ಯ, ಜಿಲ್ಲೆಗಳ ಜನ ಸಾಕಷ್ಟು ಸಂಖ್ಯೆಯಲ್ಲಿ ಪಿಜಿಗಳನ್ನೇ ಅವಲಂಬಿಸಿಕೊಂಡಿದ್ದಾರೆ. ಹೀಗಾಗಿ, ಪಿಜಿಗಳು ಅವಶ್ಯಕ. ಏಕಾಏಕಿ ಪಿಜಿಗಳನ್ನು ಬಂದ್‌ ಮಾಡಲು ಸಾಧ್ಯವಿಲ್ಲ. ಪಿಜಿಗಳು ವಸತಿಯುತ ಉದ್ದಿಮೆ ಆಗಿರುವುದರಿಂದ ವಲಯ ವರ್ಗೀಕರಣ ನಿಯಮ ಸಡಿಲಿಕೆಗೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಲಾಗಿದೆ. ಆರೋಗ್ಯ ವಿಭಾಗದ ವಿಶೇಷ ಆಯುಕ್ತರು ಹಾಗೂ ಸಾರ್ವಜನಿಕ ಆರೋಗ್ಯಾಧಿಕಾರಿ ವಿವರಣೆ ನೀಡಿ ಮುಖ್ಯ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲು ಚಿಂತನೆ ನಡೆಸಿದ್ದಾರೆ. ಆಯುಕ್ತರು ಒಪ್ಪಿಗೆ ಸೂಚಿಸಿದರೆ ನಂತರ ಸರ್ಕಾರಕ್ಕೆ ಹಾಸ್ಟೆಲ್‌ ನಡೆಸಲು ಅವಕಾಶ ನೀಡಿದ ಮಾದರಿಯಲ್ಲಿ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ.

94 ಪಿಜಿ ಬಂದ್‌:

ನಗರದಲ್ಲಿ 2,504 ಅಧಿಕೃತ, 1,799 ಅನಧಿಕೃತ ಸೇರಿ ಒಟ್ಟು 4,456 ಪಿಜಿಗಳಿವೆ. ಎಲ್ಲ ಪಿಜಿಗಳನ್ನು ಪರಿಶೀಲಿಸಲಾಗಿದೆ. 221 ಅಧಿಕೃತ ಹಾಗೂ 312 ಅನಧಿಕೃತ ಪಿಜಿಗಳು ಬಿಬಿಎಂಪಿ ಹಾಗೂ ಸರ್ಕಾರದ ಮಾರ್ಗಸೂಚಿ ಪಾಲನೆ ಮಾಡುತ್ತಿಲ್ಲ. ಈ ಎಲ್ಲ ಪಿಜಿಗಳಿಗೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ನೋಟಿಸ್‌ ಜಾರಿ ಮಾಡಿದ್ದಾರೆ. ಈ ಪೈಕಿ 2 ಅಧಿಕೃತ ಪಿಜಿ ಹಾಗೂ 92 ಅನಧಿಕೃತ ಪಿಜಿ ಬಂದ್ ಮಾಡಿಸಲಾಗಿದೆ. ಸ್ವಚ್ಛತೆ ಸೇರಿ ಬಿಬಿಎಂಪಿ ನಿಯಮ ಪಾಲಿಸದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬೀಗ ಹಾಕಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಸತಿ ಪ್ರದೇಶದಲ್ಲಿರುವ ಪಿಜಿಗಳನ್ನು ನಡೆಸಲು ಅವಕಾಶ ಇಲ್ಲ. ಹಾಗೆಂದು ಏಕಾಏಕಿ ಬಂದ್‌ ಮಾಡಿದರೆ ಸಾಕಷ್ಟು ಸಮಸ್ಯೆ ಉಂಟಾಗಲಿದೆ. ಪರವಾನಗಿ ಪಡೆದು ನಡೆಸುವ ಪಿಜಿ ಮಾಲೀಕರು ದುಬಾರಿ ಶುಲ್ಕ ವಿಧಿಸಿ ಸುಲಿಗೆ ಆರಂಭಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಿಯಮ ಸಡಿಲಿಸಿ ವಸತಿ ಪ್ರದೇಶದಲ್ಲಿರುವ ಪಿಜಿಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ.

- ಸೂರಲ್ಕರ್‌ ವಿಕಾಸ್‌ ಕಿಶೋರ್‌, ವಿಶೇಷ ಆಯುಕ್ತ, ಆರೋಗ್ಯ ವಿಭಾಗ

Share this article