ಕನ್ನಡಪ್ರಭ ವಾರ್ತೆ ಮೈಸೂರು
ಮಂಡ್ಯ, ನಾಗಮಂಗಲ, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕುಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಪ್ರಸ್ತುತ ನಗರದ ನಜರಬಾದ್ ಸರ್ಕಾರಿ ವಿಭಜಿತ ಮಹಾರಾಜ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಅಧ್ಯಾಪಕರಾಗಿರುವ ಎಡೆಯೂರು ಸಮೀಉಲ್ಲಾ ಅವರು ‘ನೆನಪಿನ ಚಿತ್ತಾರಗಳು’ ಹಾಗೂ ‘ನೆನಪಿನ ಮಳೆಬಿಲ್ಲು’ ಎಂಬ ಎರಡು ಕೃತಿಗಳನ್ನು ಹೊರತಂದಿದ್ದಾರೆ. ಇವು ಅವರ ವೃತ್ತಿಯಲ್ಲಿ ಕಂಡುಂಡ ನೆನಪುಗಳ ಮೆರವಣಿಗೆ!.ಸಮೀಉಲ್ಲಾ ಮೂಲತಃ ತುಮಕೂರು ಜಿಲ್ಲೆ ಎಡೆಯೂರಿನವರು. ಇಬ್ರಾಹಿಂ ಖಾನ್ ಹಾಗೂ ಮಬಬೂಬ್ ಬೀ ಅವರ ಪುತ್ರ. ಅವರ ಹುಟ್ಟೂರು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗಡಿಯಲ್ಲಿದೆ. ರಂಗಭೂಮಿ, ಸಾಹಿತ್ಯ ಮತ್ತು ನಿರೂಪಣೆ ಮತ್ತಿತರ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸಮೀಉಲ್ಲಾ ಅದ್ಭುತ ವಾಗ್ಮಿ. ನಾಗಮಂಗಲದ ಕನ್ನಡ ಸಂಘದೊಂದಿಗೆ ದಶಕಗಳ ಕಾಲ ಒಡನಾಟ.
ಸಮೀವುಲ್ಲಾ ಅವರ ಅಣ್ಣ ಹಬೀಬ್ ಉಲ್ಲಾ ಖಾನ್ ಆಂಗ್ಲ ಮಾಧ್ಯಮ ಶಾಲೆ ನಡೆಸುತ್ತಿದ್ದರು ಹೀಗಾಗಿ ಇವರು ಕೂಡ ಅದೇ ಶಾಲೆಯಲ್ಲಿ ಕೆಲಸ ಮುಂದುವರಿಸಬೇಕು ಎಂದುಕೊಂಡಿದ್ದರು. ಆದರೆ ಸರ್ಕಾರಿ ಶಾಲೆಯ ಶಿಕ್ಷಕ ಹುದ್ದೆ ಸಿಕ್ಕಾಗ ಹೋದರು. ಸ್ವಲ್ಪ ದಿನಗಳ ನಂತರ ರಾಜೀನಾಮೆಯ ಪತ್ರವನ್ನು ಮುಖ್ಯಶಿಕ್ಷಕರಿಗೆ ನೀಡಿ, ಊರಿಗೆ ಮರಳಿದ್ದರು. ಆದರೆ ಆ ಮುಖ್ಯ ಶಿಕ್ಷಕ ಮಾಯಿಗಯ್ಯ ಅವರು ಮನೆಗೆ ಬಂದು ಸಮೀಉಲ್ಲಾರ ಮನವೊಲಿಸಿ, ವಾಪಸ್ ಶಾಲೆಗೆ ಕರೆದುಕೊಂಡು ಹೋದರು. ನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ತಾನು ಕೆಲಸ ಮಾಡುವ ಕಡೆ ಎಲ್ಲಾ .ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೆಜ್ಜೆಗುರುತು ಬಿಟ್ಟುಬಂದಿದ್ದಾರೆ.ಆರಂಭದಲ್ಲಿ ಕರಿಬಸವಯ್ಯ, ಮಂಡ್ಯ ರಮೇಶ್ ಅವರನ್ನು ತಾವು ಕೆಲಸ ಮಾಡುತ್ತಿದ್ದ ಗ್ರಾಮದ ಶಾಲಾ ವಾರ್ಷಿಕೋತ್ಸವಕ್ಕೆ ಕರೆಸಿದ್ದ ಸಮೀಉಲ್ಲಾ ಈಗ ನಾಡಿನ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರ ಪರಮಾಪ್ತರು. ಖ್ಯಾತ ನಟರಾದ ಶ್ರೀನಾಥ್, ಪ್ರಕಾಶ್ ರಾಜ್, ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಂ ಮೊದಲಾದವರ ಒಡನಾಟದಲ್ಲಿದ್ದಾರೆ. ದತ್ತುಸಾ ರಜೋಲಿ, ಡಾ.ಗುಬ್ಬಿಗೂಡು ರಮೇಶ್, ಡಾ.ವೈ.ಡಿ. ರಾಜಣ್ಣ ಅವರ ಮೂಲಕ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿಯೂ ಗುರುತಿಸಿಕೊಂಡಿದ್ದಾರೆ.
ಶಾಲೆ ಬಿಟ್ಟು ಟೀ ಮಾರುತ್ತಿದ್ದ ಮಣಿಕಂಠ ಎಂಬ ಹುಡುಗನನ್ನು ಮತ್ತೆ ಶಾಲೆಗೆ ಸೇರಿಸಿ, ಪದವೀಧರನನ್ನಾಗಿ ಮಾಡಿದ್ದು, ಮನೆ ಬಿಟ್ಟು ಬೆಂಗಳೂರು ಸೇರಿದ್ದ ಅಭಿ ಎಂಬ ಹುಡುಗನನ್ನು ವಾಪಸ್ ಊರಿಗೆ ಕರೆಸಿ, ಈಗ ಆತ ಬಿ.ಕಾಂಗೆ ಮುಗಿಸಿ, ಎಂ.ಕಾಂ ಓದುತ್ತಿರುವುದು, ತಾನು ವಿಜಯಾ ಬ್ಯಾಂಕಿಗೆ ಹೋದಾಗ ತನ್ನ ವಿದ್ಯಾರ್ಥಿ ಭವ್ಯಾ ಅಲ್ಲಿನ ಮ್ಯಾನೇಜರ್ ಆಗಿದ್ದು, ಬಾಬು ಎಂಬ ಸಮಾಜ ಸೇವಕರೊಬ್ಬರು ಸದಾ ತನ್ನ ಪತ್ನಿ ಗಾಯತ್ರಿ ಹೆಸರಿನಲ್ಲಿ ಶಾಲಾ ಮಕ್ಕಳಿಗೆ ಕೊಡುಗೆ ನೀಡುತ್ತಿದ್ದುದು, ನಂಜನಗೂಡು ದೇವಸ್ಥಾನಕ್ಕೆ ಹೋದಾಗ ಅವರ ಪತ್ನಿ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಅವರ ನೆನಪಿನಲ್ಲಿ ನೀಡುತ್ತಿದ್ದಾರೆ ಎಂದು ನಂತರ ಗೊತ್ತಾಗಿದ್ದು, ವಿಧಾನಸೌಧದ ಸ್ವೀಕರ್ ಕಚೇರಿಯಲ್ಲಿ ಕೆಲಸ ಮಾಡುವ ತನ್ನ ವಿದ್ಯಾರ್ಥಿ ಬೋರೇಗೌಡನಿಂದಾಗಿ ವಿಧಾನಸೌಧಕ್ಕೆ ಸುಲಭವಾಗಿ ಪ್ರವೇಶ ಸಿಗುವುದು. ಜಿಲ್ಲಾಧಿಕಾರಿ, ಬಿಇಒ, ಡಿಡಿಪಿಐಗಳ ಮನಗೆದ್ದು, ಊರಿನ ಶಾಲೆಗೆ ಸವಲತ್ತು ಒದಗಿಸಿದ್ದು, ಶಾಲೆಗೆ ಜಾಗ ದಾನ ಮಾಡಿದ್ದ ವ್ಯಕ್ತಿ ನಿಧನರಾಗಿದ್ದು, ಅವರ ಮಕ್ಕಳು ಹಿಂದೇಟು ಹಾಕಿದಾಗ ಅವರ ಮನವೊಲಿಸಿದ್ದು, ಶಾಲೆಗೆ ನೀರಿನ ಸಂಪರ್ಕ ಕಲ್ಪಿಸಿದ್ದು, ಭೂಮಿಗೂ ಸೂರ್ಯಂಗೂ ಇರುವ ವ್ಯತ್ಯಾಸದ ಬಗ್ಗೆ ಪ್ರಶ್ನೇ ಕೇಳಿದಾಗ ಉತ್ತರಿಸಲು ಪೇಚಾಡಿದ್ದು, ನಂತರ ಗಾಳಿ ಪಟ ತೆಗೆದುಕೊಂಡು ಹೋಗಿ ಅದನ್ನು ಹಾರಿಸುವ ಮೂಲಕ ದೂರದ ವಸ್ತುಗಳು ಚಿಕ್ಕದಾಗಿ ಕಾಣಿಸುತ್ತವೆ, ಅದೇ ರೀತಿ ಸೂರ್ಯ ಎಂದು ಮನವರಿಕೆ ಮಾಡಿಕೊಟ್ಟಿದ್ದು!- ಹೀಗೆ ಹತ್ತಾರು ಪ್ರಸಂಗಗಳನ್ನು ದಾಖಲಿಸಿದ್ದಾರೆ.
ಎಇಒ ಕೆಂಪೇಗೌಡರ ಶಿಸ್ತು, ಅದರಲ್ಲಿ ಪಿಟಿ ಟೀಚರ್ ಆಗಿ ಕರ್ತವ್ಯಕ್ಕೆ ಹಾಜರಾಗಲು ಬಂದ ಮಹಿಳೆಯನ್ನು ಯಾರೋ ಪತ್ರಿಕೆಯವರೆಂದು ತಿಳಿದು, ‘ಎಸ್ ಮೇಡಂ ವಾಟ್ ಕ್ಯಾನ್ ಐ ಡೂ ಫಾರ್ ಯೂ’ ಎಂದು ಕೇಳಿದ್ದು, ನಂತರ ವಾಸ್ತವ ಸಂಗತಿ ಗೊತ್ತಾಗಿ, ‘ಮೇಡಂ ಕುಲಾನ ಇದು, ಮೇಡಂ ತರ ಡ್ರೆಸ್ ಮಾಡಿಕೊಂಡು ಬಂದ್ರೆ ಮಾತ್ರ ಡ್ಯೂಟಿ ರಿಪೋರ್ಟ್ ಮಾಡಿಸ್ತಿನಿ’ ಎಂದು ‘ಗೇಟ್ ಔಟ್’ ಎಂದೇಳಿ ಓಡಿಸಿದ್ದು ಗಾಂಧಿ ಜಯಂತಿಯಂದು ಊರಿನ ಮುಖಂಡನೊಬ್ಬ ‘ಗಾಂಧಿಯವರ್ನ ನಾನಂತೂ ನೋಡಿಲ್ಲ. ಆದ್ರೆ ಜಯಂತಿ ನೋಡೀವ್ನಿ?’ ಎಂದು ಭಾಷಣ ಮಾಡಿದ ಪ್ರಸಂಗವಂತೂ ನಗು ತರಿಸುತ್ತದೆ.
ಇವರು ಬೇರೆ ಊರಿಗೆ ವರ್ಗಾವಣೆಯಾದಾಗ ವಿದ್ಯಾರ್ಥಿಗಳು ಮಾತ್ರವಲ್ಲದೇ ಸಹೋದ್ಯೋಗಿಗಳು ಕಣ್ಣೀರು ಹಾಕಿ, ಹೋಗಬೇಡಿ ಎಂದು ಬೇಡಿಕೊಂಡು ಬಾವನಾತ್ಮಕ ಸಂಗತಿಗಳು ಕೂಡ ಇವೆ.ಸಮೀಉಲ್ಲಾ ಹೋದಕಡೆಯಲ್ಲಾ ಸಿಹಿ ಪ್ರಸಂಗಗಳೇ ನಡೆದಿವೆ ಎಂದಿಲ್ಲ. ಒಂದೆರೆಡು ಕಡೆ ಕಹಿ ಅನುಭವಗಳು ಕೂಡ ಆಗಿವೆ.ಅದನ್ನು ಕೂಡ ದಾಖಲಿಸಿದ್ದಾರೆ. ‘ಎನ್ರೀ ಮೇಷ್ಟ್ರೇ, ನಾವೆಲ್ಲಾ ಯೂನಿಫಾರ್ಮ್ ಹಾಕ್ಕೊಂಡೇ ಓದುದ್ವೇನ್ರಿ?’, ‘ಟ್ರಾನ್ಸ್‌ಫರ್ ತಕೋಂಡ್ ಬೇರೆ ಕಡಿ ಬಾ‘, ‘ಯಾರಿಗೂ ಊರು ಬೇಕಾಗಿಲ್ಲ ಸಾರ್... ಹೊರಡಿ,, ನೀವು..’ ಲೇಖನಗಳು ಇದಕ್ಕೆ ನಿದರ್ಶನ. ಇದಲ್ಲದೇ ಮೈಸೂರಿನ ಸಾತಗಳ್ಳಿಗೆ ವಾಸ್ತವ್ಯವನ್ನು ಬದಲಿಸಿದ ನಂತರ ಆ ಬಡಾವಣೆಗೆ ಲೈಟು,. ಉದ್ಯಾನ, ಅಲ್ಲಿನ ಎಸ್‌ಬಿಎಂ ಶಾಖೆ ಉಳಿಸಿಕೊಳ್ಳಲು ಹೋರಾಟ ನಡೆಸಿ, ಯಶಸ್ಸು ಪಡೆದಿದ್ದು ಇವೆ. ಡಾ.ರಾಜ್‌ಕುಮಾರ್ ರಸ್ತೆಯ ಪ್ರಸ್ತಾಪವೂ ಇದೆ.
ಸಮೀಉಲ್ಲಾ ಅವರ ಕನ್ನಡವನ್ನು ಆಲಿಸುವುದೇ ಚೆಂದ. ಏಕೆಂದರೆ ಅಪ್ಪಟ ಕನ್ನಡಾಭಿಮಾನಿ. ಮಾತು ಸ್ಫುಟ, ಭಾಷೆ ಚೊಕ್ಕಟ. ಅವರ ಅನುಭವಗಳ ಲೇಖನಗಳು ಅಷ್ಟೇ. ಪ್ರತಿಯೊಂದು ಲೇಖನದ ಆರಂಭದಲ್ಲಿಯೂ ಕನ್ನಡದ ಗಣ್ಯಸಾಹಿತಿಗಳ ಮಾತುಗಳನ್ನು ಉಲ್ಲೇಖಿಸಿದ್ದಾರೆ. ಎರಡೂ ಕೃತಿಗಳು ಸ್ಪೂರ್ತಿದಾಯಕವಾಗಿವೆ. ಕೇವಲ ಶಿಕ್ಷಕರು ಮಾತ್ರವಲ್ಲದೇ ಎಲ್ಲರೂ ಓದಬಹುದಾದ, ತಾವು ತಮ್ಮ ವೃತ್ತಿ ಜೀವನದ ಸಂಗತಿಗಳನ್ನು ದಾಖಲಿಸಲು ಪ್ರೇರಣೆ ನೀಡುವ ಕೃತಿಗಳಾಗಿವೆ.‘ನೆನಪಿನ ಚಿತ್ತಾರಗಳು’ ಕೃತಿಗೆ ಹಂಸಲೇಖ, ‘ನೆನಪಿನ ಮಳೆಬಿಲ್ಲು’ ಕೃತಿಗೆ ಜಯಪ್ಪ ಹೊನ್ನಾಳಿ ಅವರ ಮುನ್ನುಡಿ, ಕ್ರಮವಾಗಿ ನಾ.ಸು. ನಾಗೇಶ ಹಾಗೂ ಡಾ.ವೈ.ಡಿ. ರಾಜಣ್ಣ ಅವರ ಬೆನ್ನುಡಿ ಇದೆ. ಇವರ ಪುಟ್ಟ ಪುಟ್ಟ ಬರಹಗಳನ್ನು ಖ್ಯಾತ ಅಂಕಣಕಾರ ಡಾ.ಗುರುರಾಜ ಕರಜಗಿ ಅವರು ಕೂಡ ಮೆಚ್ಚಿಕೊಂಡಿದ್ದಾರೆ. ಆಸಕ್ತರು ಎಡೆಯೂರು ಸಮೀಉಲ್ಲಾ, ಮೊ. 90083 80557 ಸಂಪರ್ಕಿಸಬಹುದು.