ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಬೆಂಗಳೂರುರಾಜಧಾನಿ ಬೆಂಗಳೂರಿನ ನಾಗರಿಕರಿಗೆ ಮೂಲಸೌಕರ್ಯ ಒದಗಿಸುವ ಮಹತ್ವದ ಜವಾಬ್ದಾರಿ ಹೊತ್ತಿರುವ ಬಿಬಿಎಂಪಿಯು ಇದೀಗ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮುಂದಾಗಿದ್ದು, ರಾಜ್ಯ ಸರ್ಕಾರದ ಬಜೆಟ್ ನಲ್ಲಿಯೇ ಘೋಷಣೆ ಸಾಧ್ಯತೆ ಇದೆ.
ಬಿಬಿಎಂಪಿ ಇದೀಗ ಆರು ರೆಫರಲ್ ಆಸ್ಪತ್ರೆ, 26 ಹೆರಿಗೆ ಆಸ್ಪತ್ರೆಗಳು, 135 ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಒಂದು ಸಾರ್ವಜನಿಕ ಆಸ್ಪತ್ರೆಯನ್ನು ನಿರ್ವಹಣೆ ಮಾಡುತ್ತಿದೆ. ಈ ಪೈಕಿ ಗೋವಿಂದರಾಜ ನಗರ ವ್ಯಾಪ್ತಿಯ ಎಂ.ಸಿ. ಲೇಔಟ್‌ನ ಬಿಬಿಎಂಪಿಯ 300 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಆವರಣದಲ್ಲಿ ಬಿಬಿಎಂಪಿಯಿಂದ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡುವುದಕ್ಕೆ ಈಗಾಗಲೇ ಚರ್ಚೆ ನಡೆಸಲಾಗಿದೆ. ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಬಿಬಿಎಂಪಿಯು ಪ್ರಸ್ತಾವನೆ ಸಲ್ಲಿಸುವುದಕ್ಕೆ ಸಿದ್ಧತೆ ನಡೆಸಿದೆ.ಪ್ರಸಕ್ತ ವರ್ಷ ₹500 ಕೋಟಿಗೆ ಬೇಡಿಕೆ:
ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಪ್ರಾಥಮಿಕ ಹಂತವಾಗಿ ರಾಜ್ಯ ಸರ್ಕಾರಕ್ಕೆ 500 ಕೋಟಿ ರು. ನೀಡುವಂತೆ ಕೋರಲಾಗುತ್ತಿದೆ. ಆ ಬಳಿಕ ಮುಂದಿನ ದಿನದಲ್ಲಿ ಮೂಲಸೌಕರ್ಯ, ಅಧಿಕಾರಿ ಸಿಬ್ಬಂದಿ ಸೇರಿದಂತೆ ಮೊದಲಾದವುಗಳಿಗೆ ಅನುದಾನ ಕೇಳುವುದಕ್ಕೆ ತೀರ್ಮಾನಿಸಲಾಗಿದೆ. ಜತೆಗೆ, ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪನೆಗೆ ಬಿಬಿಎಂಪಿ ಎಷ್ಟು ಪ್ರಮಾಣದ ಅನುದಾನ ಒದಗಿಸಬೇಕು. ರಾಜ್ಯ ಸರ್ಕಾರ ಎಷ್ಟು ಪ್ರಮಾಣ ಅನುದಾನ ಒದಗಿಸಲಿದೆ ಎಂಬ ಅಂಶಗಳು ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಲಿವೆ. ಎಲ್ಲವೂ ಸುಸೂತ್ರವಾದರೆ, ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.ಈ ವಾರ ಸಾಧ್ಯಾಸಾಧ್ಯತೆ ಪರಿಶೀಲನೆ:
ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡುವ ಸಂಬಂಧ ಬಿಬಿಎಂಪಿಯ ಕ್ಲಿನಿಕಲ್ ವಿಭಾಗದ ಮುಖ್ಯಸ್ಥರು ಹಾಗೂ ವೈದ್ಯಕೀಯ ಮಹಾವಿದ್ಯಾಲಯದ ಕುರಿತ ತಜ್ಞರು ಒಂದು ವಾರದಲ್ಲಿ ಸಾಧ್ಯಸಾಧ್ಯತೆ ವರದಿ ಸಿದ್ಧಪಡಿಸಿ ನೀಡುವುದಕ್ಕೆ ಸೂಚಿನೆ ನೀಡಲಾಗಿದೆ. ಈ ಅಧಿಕಾರಿಗಳು ಎಂ.ಸಿ. ಲೇಔಟ್‌ನ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ, ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆ ಮಾಡಿದರೆ ಆಡಳಿತಾತ್ಮಕ ಕಾರ್ಯಗಳಿಗೆ ಇರುವ ಸೌಲಭ್ಯಗಳು ಸೇರಿದಂತೆ ಮೊದಲಾದವುಗಳ ಅಧ್ಯಯ ನಡೆಸಿ ವರದಿ ನೀಡಲಿದ್ದಾರೆ. ಆ ಬಳಿಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗುವುದು ಎಂದು ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.ಹಾಸಿಗೆ ಸಂಖ್ಯೆ ಹೆಚ್ಚಳಕ್ಕೂ ಚಿಂತನೆ:
ಸದ್ಯ ಬಿಬಿಎಂಪಿಯ ಎಂ.ಸಿ.ಲೇಔಟ್‌ನ ಆಸ್ಪತ್ರೆಯಲ್ಲಿ 300 ಹಾಸಿಗೆ ಇದೆ. ವೈದ್ಯಕೀಯ ಮಹಾ ವಿದ್ಯಾಲಯ ಸ್ಥಾಪನೆ ಮಾಡುವುದಕ್ಕೆ ಕನಿಷ್ಠ 500 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಇರಬೇಕು. ರಾಜ್ಯ ಸರ್ಕಾರವು ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅನುಮೋದನೆ ನೀಡಿದರೆ, ಆಸ್ಪತ್ರೆಯ ಹಾಸಿಗೆ ಸಂಖ್ಯೆಯನ್ನು 600ಕ್ಕೆ ಹೆಚ್ಚಿಸುವುದಕ್ಕೆ ಬಿಬಿಎಂಪಿ ನಿರ್ಧರಿಸಿದೆ.ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಈ ಕುರಿತು ಸಾಧ್ಯಸಾಧ್ಯತೆ ಪರಿಶೀಲನೆ ನಡೆಸಲಾಗುತ್ತಿದೆ. ಒಂದು ವಾರದಲ್ಲಿ ಸರ್ಕಾರಕ್ಕೆ ಈ ಕುರಿತು ವರದಿ ಸಲ್ಲಿಕೆ ಮಾಡಲಾಗುವುದು.
- ಸೂರಳ್ಕರ್ ವಿಕಾಸ್ ಕಿಶೋರ್, ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತರು