ಹೊಸ್ತೋಟ ಭಾಗವತರ ಬದುಕಿನ ಚಿತ್ರ

KannadaprabhaNewsNetwork | Updated : Apr 28 2024, 05:50 AM IST

ಸಾರಾಂಶ

ಹಿರಿಯ ಯಕ್ಷಗಾನ ಭಾಗವತ ಹೊಸ್ತೋಟ ಮಂಜುನಾಥ ಭಾಗವತರ ಕುರಿತಾದ ಕೃತಿ ಯಕ್ಷ ಹಂಸ. ಏ.30ಕ್ಕೆ ಶಿರಸಿಯಲ್ಲಿ ಬಿಡುಗಡೆಯಾಗಲಿದೆ.

ಎಂಬತ್ತು ವರ್ಷಗಳ ಬದುಕನ್ನೇ ಯಕ್ಷಗಾನಕ್ಕಾಗಿ ಮೀಸಲಿರಿಸಿ ಮರೆಯಾದ ಹೊಸ್ತೋಟ ಮಂಜುನಾಥ ಭಾಗವತರು ಬಿಟ್ಟುಹೋದ ಜ್ಞಾನರಾಶಿಯೂ ಮರೆಯಾಗಬಾರದೆಂದು ಅವರ ಸಾಧನೆ, ಶೋಧನೆ, ರಚಿಸಿದ ಗ್ರಂಥಭಂಡಾರ, ದಾಖಲೆ ಸಂಖ್ಯೆಯ ಪ್ರಸಂಗರಾಶಿ ಮುಂದಿನ ಪೀಳಿಗೆಗೆ, ಯಕ್ಷಲೋಕಕ್ಕೆ ಸಿಗುವಂತೆ ಮಾಡುವ ಪ್ರಯತ್ನ ಯಕ್ಷಹಂಸ. 4 ವಿಭಾಗಗಳಲ್ಲಿ 76 ಲೇಖನಗಳು 520 ಪುಟಗಳಲ್ಲಿ ಅಡಕವಾಗಿರುವ ಕೃತಿ ಇದು. ಇವೆಲ್ಲದರ ಜತೆಗೆ ಭಾಗವತರ ಕೆಲವು ವಿಶೇಷ ವರ್ಣಮಯ ಭಾವಚಿತ್ರಗಳಿವೆ.

ಎಂ. ಪ್ರಭಾಕರ ಜೋಶಿಯವರ ಮಾರ್ಗದರ್ಶನ, ಡಾ. ವಿಜಯನಳಿನಿ ರಮೇಶ ಸಂಪಾದಕತ್ವದಲ್ಲಿ ಹೊರಬಂದಿರುವ ಯಕ್ಷಹಂಸವನ್ನು ವಿಕಿ ಬುಕ್ಸ್, ಶಿರಸಿ ಪ್ರಕಾಶನದಿಂದ ಕಿರಣ್ ಉಪಾಧ್ಯಾಯ ಪ್ರಕಟಿಸಿದ್ದಾರೆ. ಅದರಿಂದ ಆಯ್ದ ಬರಹ ಇಲ್ಲಿದೆ.*

ನನ್ನ ಕಣ್ಣಳವಿಯಲ್ಲಿ ಭಾಗವತರು

-ಡಾ.ಎನ್. ಆರ್. ನಾಯಕ

*

ನಿರಂತರ ಹರಿವತೊರೆ ಯಕ್ಷಗಾನ ಸಂಸ್ಕೃತಿಯ ಅವ್ವಲ ಫಲ ಮಂಜುನಾಥ ಭಾಗವತರು. ಯಕ್ಷಗಾನ ಸಂಸ್ಕೃತಿಯನ್ನೇ ಹಾಸಿ, ಹೊದ್ದು, ಮೆದ್ದ ಸಾಕ್ಷಿ ಪ್ರಜ್ಞೆ. ಕನ್ನಡ ಬಯಲಾಟ ಪರಂಪರೆಯ ಪ್ರಯೋಗ ಶೀಲ ಪರಿಪೂತ ಪ್ರಸಾದ ಮನಸ್ಸು ಮಂಜುನಾಥ ಭಾಗವತರದ್ದು. ಇಡಗುಂಜಿ ಮೇಳದ ಜೊತೆಗೆ ಸಾಹಚರವನ್ನು ಹೊಂದಿದ ಮಂಜುನಾಥ ಭಾಗವತರು ತಮ್ಮತನವನ್ನು ಮಾತ್ರ ಎಂದೂ ಕಳೆದುಕೊಳ್ಳಲಿಲ್ಲ, ಬಯಲಾಟ ಸಮೂಹ ಸಂಸ್ಕೃತಿ ಗುಣಲಕ್ಷಣಗಳೆಲ್ಲವನ್ನು ತಮ್ಮ ಪ್ರಸಂಗ ಪಠ್ಯಗಳಲ್ಲಿ ಅಳವಡಿಸಿಕೊಂಡು ರಾಮಾಯಣ ಭಾಗವತ ಹಾಗೂ ಬೃಹತ್ ಕಥಾಗುಚ್ಛದ ಕಥಾ ವಸ್ತುಗಳಿಗೆ ಇವರು ಹೊಸ ಭಾಷ್ಯ ಬರೆದರು. 

ಹೀಗಾಗಿ ಇವರ ಪ್ರಸಂಗ ಕೃತಿಗಳೆಲ್ಲ ಪರಂಪರಾಗತ ಪುರಾಣ ಪ್ರಜ್ಞೆಗೆ ಹೊಸ ಪಕ್ಕ ಮೂಡಿಸಿದವು.ಅವಧೂತ ಪರಂಪರೆಗೆ ಸೇರಿದ ಮಂಜುನಾಥ ಭಾಗವತರು ಚಾರಣ ಪ್ರಿಯರು. ಚಾರು ಚಾರಣ ಪ್ರಿಯರಾದ ಇವರು ನಾಟ್ಯಾಚಾರ್ಯರೂ ಹೌದು. ನಾಟ್ಯಾಭಿನಯಕುಶಲಿ ಗಳಾದ ಇವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಊರೂರು ಸುತ್ತಿ ಬಯಲಾಟ ಪ್ರಿಯರಿಗೆ ನಾಟ್ಯ ಗುರುವಾಗಿ ಬಯಲು ರಂಗ ಭೂಮಿಯ ಹೆಚ್ಚುಗಾರಿಕೆಯನ್ನು ಅಗ್ಗಳಿಕೆಯನ್ನು ಲೋಕ ವಿಖ್ಯಾತಗೊಳಿಸಿದ್ದನ್ನು ಯಾರೂ ಮರೆಯುವಂತಿಲ್ಲ. 

ಹೊಸ್ತೋಟದ ಮಂಜುನಾಥ ಭಾಗವತರು ಅಂಕೋಲಾ ತಾಲೂಕಿನ ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ವಿದ್ಯಾಲಯದಲ್ಲಿ ತಿಂಗಳುಗಟ್ಟಲೆ ನೆಲೆ ನಿಂತು ಶಾಲೆಯ ಬಾಲಕ ಬಾಲಕಿಯರಿಗೆ ಬಯಲಾಟ ನೃತ್ಯ ತರಬೇತಿ ನೀಡಿದ್ದನ್ನು, ಅಂಧ ಬಾಲರಿಗೆ ಬಯಲಾಟ ಕುಣಿಸಿ ಖುಷಿ ಪಟ್ಟದ್ದನ್ನು ನಾನು ಗಮನಿಸಿದ್ದೇನೆ. ಹಲವಾರು ತಿಟ್ಟುಗಳನ್ನು ತನ್ನಲ್ಲಿ ಹುದುಗಿಸಿಕೊಂಡ ಯಕ್ಷಗಾನ ಬಯಲಾಟ ಇನ್ನೂ ಅಭಿಜಾತ ಕಲೆಯಾಗದೆ ಜಾನಪದ ಕಲೆಯಾಗಿಯೇ ಉಳಿದಿರುವುದು ಕನ್ನಡಿಗರ ಭಾಗ್ಯವಿಶೇಷ ಎಂದುಕೊಂಡವರು ಮಂಜುನಾಥ ಭಾಗವತರು ಎಂಬುದನ್ನು ನಾನು ಚೆನ್ನಾಗಿ ಬಲ್ಲೆ.

Share this article