ವಧುವೇ ಡ್ಯಾನ್ಸ್ ಮಾಡಿಕೊಂಡು ಹಸೆಮಣೆಗೆ ಬರುತ್ತಾಳೆ!!!

Published : Sep 28, 2026, 11:20 AM IST
Dance

ಸಾರಾಂಶ

ಈಗ ಟ್ರೆಂಡ್‌ ಬದಲಾಗಿದೆ. ವಧುವೇ ಡ್ಯಾನ್ಸ್ ಮಾಡಿಕೊಂಡು ಹಸೆಮಣೆ ಬರುತ್ತಾಳೆ. ವಧುವಿನ ಜೊತೆಗೆ ಅವರಮ್ಮ ಕೂಡಾ ಡ್ಯಾನ್ಸ್‌ ಮಾಡುತ್ತಾಳೆ. ಕೊನೆಗೆ ಅವರಮ್ಮನನ್ನೇ ವರ ಮೆಚ್ಚಿಕೊಳ್ಳುತ್ತಾನೆ. ಮದುವೆ ನಂತರ ದಂಪತಿ ಜಗಳ ಮಾಡಿಕೊಂಡು ಎಲ್ಲಿ ನಮ್ಮ ಮೇಲೆ ಕೇಸುಹಾಕುತ್ತಾರೆ ಎಂದು ಭಯಬಿದ್ದು ವಧು-ವರನ ಸೋದರ ಮಾವ ಮದುವೆಗೇ ಬರುವುದಿಲ್ಲ.

ಒಂದು ಕಾಲದಲ್ಲಿ ಮನೆ ಮುಂದೆ ಚಪ್ಪರ ಹಾಕಿ ವಾರಗಟ್ಟಲೇ ಹತ್ತು ಹಲವಾರು ಶಾಸ್ತ್ರ, ಸಂಪ್ರದಾಯಗಳಿಂದ ನಡೆಯುತ್ತಿದ್ದ ಮದುವೆ ಸಂಭ್ರಮಗಳು ಮರೆಯಾಗುತ್ತಿರುವ ಬಗ್ಗೆ ಸೂಚ್ಯವಾಗಿ ನ್ಯಾಯಾಧೀಶರು ಈ ರೀತಿ ಹೇಳಿದ ಘಟನೆ ಇತ್ತೀಚೆಗೆ ನಡೆಯಿತು.

ಪತ್ನಿಯೊಬ್ಬರು ಪತಿಯ ಕುಟುಂಬದ ಎಲ್ಲ ಸದಸ್ಯರ ಮೇಲೆ ದಾಖಲಿಸಿದ್ದ ವರದಕ್ಷಿಣಿ ಕಿರುಕುಳ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಾಧೀಶರು, ದೇಶದಲ್ಲಿ ಅತಿ ಹೆಚ್ಚು ದುರುಪಯೋಗ ಆಗಿರುವ ಸೆಕ್ಷನ್‌ ಯಾವುದಾದರೂ ಇದ್ದರೆ ಅದು ಐಪಿಸಿ 498ಎ. ಈ ಸೆಕ್ಷನ್‌ಗೆ ಭಯಬಿದ್ದು ಮದುವೆಗೆ ಗಂಡು-ಹೆಣ್ಣಿನ ಸಹೋದರ ಮಾವ ಮದುವೆಗೆ ಬರುವುದನ್ನೇ ಬಿಟ್ಟಿದ್ದಾರೆ. ಹಿಂದೆಲ್ಲಾ ಸೋದರ ಮಾವ ಮದುವೆಯನ್ನು ವಧುವನ್ನು ದಿಬ್ಬಣದಲ್ಲಿ ಕೂರಿಸಿಕೊಂಡು ಹಸೆಮಣೆಗೆ ಕರೆತರುತ್ತಿದ್ದರು. ಈಗ ಟ್ರೆಂಡ್‌ ಬದಲಾಗಿದೆ. ವಧುವೇ ಡ್ಯಾನ್ಸ್ ಮಾಡಿಕೊಂಡು ಹಸೆಮಣೆ ಬರುತ್ತಾಳೆ. ವಧುವಿನ ಜೊತೆಗೆ ಅವರಮ್ಮ ಕೂಡಾ ಡ್ಯಾನ್ಸ್‌ ಮಾಡುತ್ತಾಳೆ. ಕೊನೆಗೆ ಅವರಮ್ಮನನ್ನೇ ವರ ಮೆಚ್ಚಿಕೊಳ್ಳುತ್ತಾನೆ. ಮದುವೆ ನಂತರ ದಂಪತಿ ಜಗಳ ಮಾಡಿಕೊಂಡು ಎಲ್ಲಿ ನಮ್ಮ ಮೇಲೆ ಕೇಸುಹಾಕುತ್ತಾರೆ ಎಂದು ಭಯಬಿದ್ದು ವಧು-ವರನ ಸೋದರ ಮಾವ ಮದುವೆಗೇ ಬರುವುದಿಲ್ಲ ಎಂದು ಹೇಳುತ್ತಿದ್ದಂತೆ ವಕೀಲರಾದಿಯಾಗಿ ಎಲ್ಲರೂ ಜೋರಾಗಿ ನಗತೊಡಗಿದರು.

ಇಷ್ಟಕ್ಕೆ ಸುಮ್ಮನಾಗದ ನ್ಯಾಯಾಧೀಶರು, ಅರ್ಜಿ ಮತ್ತು ದೂರು, ಎಫ್‌ಐಆರ್‌ ಮತ್ತು ಪೊಲೀಸರ ದೋಷಾರೋಪ ಪಟ್ಟಿ ನೋಡಿ, ದೂರುದಾರೆಯ ಪರ ವಕೀಲರನ್ನು ಉದ್ದೇಶಿಸಿ, ಏನ್ರಿ ವಕೀಲರೇ... ದೂರನ್ನು ಒಮ್ಮೆ ನೋಡಿ, ನಿಮ್ಮ ಕಕ್ಷಿದಾರರು ನಾಯಿಯೊಂದನ್ನು ಬಿಟ್ಟು ಮನೆಯಲ್ಲಿ ಇರುವವರೆಲ್ಲರ ಮೇಲೆ ಕೇಸ್‌ ಹಾಕಿದ್ದಾರೆ. ಪತಿ ವಿರುದ್ಧ ದೂರು ದಾಖಲಿಸಿದರೆ ಏನೋ ಪರಿಶೀಲಿಸಬಹುದು. ಮನೆ ಮಂದಿಯ ಮೇಲೆಲ್ಲಾ ಕೇಸು ಹಾಕಿ ಅವರನ್ನು ಕೋರ್ಟ್‌ಗೆ ಎಳೆಯುವುದೇ ಎಂದು ಪ್ರಶ್ನಿಸಿದರು.

ನಮ್ಮ ಕಚೇರಿ ಗ್ರೀನ್‌ ಟೀ ಕುಡಿದರೆ, ಮತ್ತೆ ಕೇಳುವುದೇ ಇಲ್ಲ...

ನ್ಯಾಯಾಧೀಶರ ಕಚೇರಿಗೆ ಹೋದರೆ ಒಳ್ಳೆಯ ಕಾಫಿ, ಟೀ, ಅಥವಾ ಗ್ರೀನ್‌ ಟೀ ಸಿಗುತ್ತದೆ ಎಂದು ಭಾವಿಸಿದ್ದರೆ ಅದು ನಿಮ್ಮ ತಪ್ಪು, ಅದರಲ್ಲೂ ಗ್ರೀನ್‌ ಟೀ ಕುಡಿದರೆ ಮತ್ತೇ ಕೇಳುವುದೇ ಇಲ್ಲ, ಅಷ್ಟೊಂದು ಕೆಟ್ಟದಾಗಿರುತ್ತದೆ...

ಹೀಗಂತ ಸಾಮಾನ್ಯ ಜನ ಹೇಳಿದ ಮಾತಲ್ಲ. ಖುದ್ದು ಗ್ರೀನ್‌ ಟೀ ಕುಡಿದ ನ್ಯಾಯಾಧೀಶರ ಅನುಭವದ ಮಾತು. ಇಂತಹ ಅನುಭವವನ್ನು ಪ್ರಕರಣವೊಂದರ ವಿಚಾರಣೆ ವೇಳೆ ಅವರೇ ಹಂಚಿಕೊಂಡ ಪ್ರಸಂಗ ನಡೆಯಿತು.

ಅದೊಂದು ಹಣಕಾಸು ವಂಚನೆ ಪ್ರಕರಣದ ವಿಚಾರಣೆ. ಸರ್ಕಾರಿ ಅಭಿಯೋಜಕರು ಅರ್ಜಿದಾರರು ಮೊದಲನೇ ಆರೋಪಿಯೊಂದಿಗೆ ಕೂಡಿಕೊಂಡು (ಕೊಲ್ಯೂಡ್‌) ಅಪರಾಧ ಒಳಸಂಚು ರೂಪಿಸಿದ್ದಾರೆ ಎಂದು ಹೇಳಿದಾಗ, ನ್ಯಾಯಮೂರ್ತಿಗಳು ಅಭಿಯೋಜಕರೇ.. ಕ್ರಿಮಿನಲ್‌ ನ್ಯಾಯಶಾಸ್ತ್ರದಲ್ಲಿ ಕೊಲ್ಯೂಡೆಡ್‌ ಎಂದರೆ ಏನರ್ಥ ಅಂತ ನಿಮಗೆ ಗೊತ್ತಾ? 10 ಮಂದಿ ಸರ್ಕಾರಿ ವಕೀಲರೆಲ್ಲರೂ ಸೇರಿಕೊಂಡು ಊಟ ಮಾಡಿದರೆ, ನನ್ನ ಮಾತನಾಡಲು ನೀವು ನನ್ನ ಕಚೇರಿಗೆ ಬಂದರೆ ಅದು ಕೊಲ್ಯೂಡೆಡ್‌ ಆಗುವುದಿಲ್ಲ ಎಂದರು.

ಮುಂದುವರಿದು, ನೀವು ನಮ್ಮ ಕಚೇರಿಗೆ ಬನ್ನಿ ತೊಂದರೆ ಇಲ್ಲ. ಬಂದರೆ ನಿಮಗೆ ಒಂದೊಳ್ಳೆ ಕಾಫಿ ಕೊಟ್ಟು ಕಳಿಸುತ್ತೇನೆ ಅಷ್ಟೇ ಎಂದು ಹೇಳಿದ ನ್ಯಾಯಾಧೀಶರು, ಇತ್ತೀಚೆಗೆ ಕಾಫಿ ಕೊಡುವುದನ್ನೇ ಬಿಟ್ಟಿದ್ದೇನೆ. ಕಾರಣ, ಕಾಫಿ ತರಲು ಸಿಬ್ಬಂದಿಗೆ ಹೇಳಿದರೆ, ಅವರು ಕ್ಯಾಂಟೀನ್‌ಗೆ ಹೋಗಿ ಕಾಫಿ ತರಲು ಅರ್ಧ ಗಂಟೆ ಸಮಯ ಹಿಡಿಯುತ್ತದೆ. ಆ ಅರ್ಧಗಂಟೆ ನಿಮ್ಮೊಂದಿಗೆ ಮಾತನಾಡಿ ಕೂರಬೇಕಾಗುತ್ತದೆ. ಅದಕ್ಕೆ ಈಗೆಲ್ಲಾ ಗ್ರೀನ್‌ ಟೀ ಕೊಡುತ್ತೇನೆ. ಅದು ಬೇಗ ರೆಡಿ ಆಗುತ್ತದೆ. ಆದರೆ, ಒಮೊಮ್ಮೆ ನಮ್ಮ ಕಚೇರಿಯಲ್ಲಿ ಗ್ರೀನ್‌ ಟೀ ಕುಡಿದರೆ, ಮತ್ತೊಮ್ಮೆ ಗ್ರೀನ್‌ ಟೀ ಕೇಳುವುದಿಲ್ಲ. ಕೊಟ್ಟರೂ ಕುಡಿಯುವುದಿಲ್ಲ. ಅಷ್ಟು ಕೆಟ್ಟದಾಗಿರುತ್ತದೆ ಎಂದು ಜೋರಾಗಿ ನಕ್ಕರು. ನ್ಯಾಯಾಧೀಶರ ಈ ಮಾತು ಕೇಳಿ ಕೋರ್ಟ್‌ ಹಾಲ್‌ನಲ್ಲಿ ಇದ್ದವರು ಗೊಳ್‌ ಎಂದು ನಕ್ಕರು.

‘ಶರವಣ ನಿಂಗೆ ಬೆಳ್ಳುಳ್ಳಿ ಗೊತ್ತಾ’ ಅಂದಿದ್ಯಾಕೆ ಪರಮೇಶ್ವರ್‌

ವಿಶೇಷ ಅಧಿವೇಶನದ ಕೊನೆಯ ದಿನ ವಿಧಾನ ಪರಿಷತ್‌ನಲ್ಲಿ ಬರದ ಮೇಲಿನ ಚರ್ಚೆಗೆ ಉತ್ತರ ನೀಡುತ್ತಿದ್ದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಅವರು ಇದ್ದಕ್ಕಿದ್ದಂತೆ ಜೆಡಿಎಸ್‌ ಸದಸ್ಯ ಶರವಣ ಅವರನ್ನು ಉದ್ದೇಶಿಸಿ ‘ಶರವಣ ನಿಂಗೆ ಬೆಳ್ಳುಳ್ಳಿ ಗೊತ್ತಾ’ ಅಂತ ಪ್ರಶ್ನೆ ಮಾಡಿದರು.

ಸದಸ್ಯರೆಲ್ಲಾ ಇದ್ಯಾಕಪ್ಪಾ ಪರಮೇಶ್ವರ್‌ ಹೋಗಿ ಶರವಣ ಅವರ ಬಳಿ ಬೆಳ್ಳುಳ್ಳಿ ಗೊತ್ತಾ ಅಂತ ಕೇಳುತ್ತಿದ್ದಾರಲ್ಲಾ ಎಂದು ಒಂದು ನಿಮಿಷ ಯೋಚಿಸುತ್ತಿದ್ದರು. ಬರಕ್ಕೂ, ಬೆಳ್ಳುಳ್ಳಿಗೂ, ಶರವಣ ಅವರಿಗೂ ಏನು ಸಂಬಂಧ ಎನ್ನುತ್ತಿರುವಷ್ಟರಲ್ಲಿ ಪರಮೇಶ್ವರ್‌ ಅವರು ಒಂದೆರಡೆ ರಾಜ್ಯದಲ್ಲಿ 150 ವರ್ಷಗಳಲ್ಲೇ ದೊಡ್ಡ ಬರ ಬಂದಿದ್ದರೆ, ಚಾಮರಾಜನಗರ ಜಿಲ್ಲೆಯಲ್ಲಿ ಬಹುಶಃ ಇತಿಹಾಸಲ್ಲೇ ಕಂಡು ಕೇಳರಿಯದ ಬರ ಅನಿಸುತ್ತದೆ. ಆ ಜಿಲ್ಲೆಗೆ ಹೋಗಿ ಪರಿಶೀಲಿಸಿದಾಗ ಎಲ್ಲೂ ಎರಡು ಹಸಿರೆಲೆ ಕೂಡ ಕಾಣಲಿಲ್ಲ. ಸಾವಿರಾರು ಎಕರೆಯಲ್ಲಿ ಹಾಕಿದ್ದ ಬೆಳ್ಳುಳ್ಳಿ ಬೆಳೆ ಒಣಗಿಹೋಗಿದೆ. ಅದಕ್ಕೆ ಕೇಳಿದೆ ಎಂದು ಹೇಳಿದರು.

ಅತ್ತ ಶರವಣ ಬೆಳ್ಳುಳ್ಳಿ ಗೊತ್ತು ಸರ್‌... ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ಕೇಶವಪ್ರಸಾದ್‌ ಅವರು, ಸರ್‌, ಶರವಣ ಅವರಿಗೆ ‘ಬೆಳ್ಳುಳ್ಳಿ ಗೊತ್ತು ಆದರೆ ಬೆಳ್ಳುಳ್ಳಿ ಕಬಾಬ್‌ ಗೊತ್ತಿಲ್ಲ’ ಅಂದ್ರು. ಅವರಿಗೇನೋ ಗೊತ್ತಿಲ್ಲ ಬಿಡಿ. ನಿಮಗೆ ಗೊತ್ತಾ ಅಂತ ಕೇಶವಪ್ರಸಾದ್‌ಗೂ ಪರಮೇಶ್ವರ್‌ ಕಾಲೆಳೆದರು. ಅವರು ನನಗೂ ಗೊತ್ತಿಲ್ಲ. ನಿಮಗೆ ಗೊತ್ತಿರಬೇಕು ಎಂದರು. ಅಷ್ಟರಲ್ಲಿ ಕಾಂಗ್ರೆಸ್ ಸದಸ್ಯ ಐವನ್‌ ಡಿಸೋಜಾ ಅವರು ಹೋಗಲಿ ಬಿಡಿ ಸರ್‌... ಅಂತ ವಿಷಯದ ಚರ್ಚೆಗೆ ಫುಲ್‌ಸ್ಟಾಪ್‌ ಇಟ್ಟರು.

-ವೆಂಕಟೇಶ್‌ ಕಲಿಪಿ

-ಲಿಂಗರಾಜು ಕೋರಾ

PREV
Read more Articles on

Recommended Stories

ರಾಷ್ಟ್ರ ನಿರ್ಮಾಣಕ್ಕೆ ಬದ್ಧವಾದ ಶ್ರೇಷ್ಠ ವ್ಯಕ್ತಿತ್ವ ಸಿಂಘಲ್‌
ಹಿಂದೂ ಹೃದಯ ಸಾಮ್ರಾಟ ಅಶೋಕ್‌ ಸಿಂಘಾಲ್