ಜಿಲ್ಲೆಗೆ ಹೇಮಾವತಿ ನೀರು ಹರಿಸಿ: ಸೊಗಡು ಶಿವಣ್ಣ

KannadaprabhaNewsNetwork | Published : Oct 10, 2023 1:00 AM

ಸಾರಾಂಶ

ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸುವಂತೆ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಆಗ್ರಹಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರು ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಸುವಂತೆ ಮಾಜಿ ಸಚಿವ ಸೊಗಡು ಶಿವಣ್ಣ ಅವರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೊರೂರು ಹೇಮಾವತಿ ಜಲಾಶಯದಿಂದ ತಮಿಳುನಾಡಿಗೆ ನೀರು ಹರಿಸುವುದರ ಬದಲು, ತುಮಕೂರು ಜಿಲ್ಲೆಗೆ ಹರಿಸಿ ಎಂದರು. ಹೇಮಾವತಿ ಜಲಾಶಯದಿಂದ 2023-24ನೇ ಸಾಲಿಗೆ ಹರಿಸಬೇಕಾದ ನಮ್ಮ ಪಾಲಿನ 25 ಟಿ.ಎಂ.ಸಿ ನೀರನ್ನು ಜನರಿಗೆ ಕುಡಿಯಲು, ರೈತರಿಗೆ ಕೃಷಿ ಕಾರ್ಯಕ್ಕೆ ಬಳಸಲು ಹಾಗೂ ಅಂತರ್ಜಲವೃದ್ಧಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ತಕ್ಷಣವೇ ಬಿಡುಗಡೆಗೊಳಿಸಬೇಕೆಂದು ಸರ್ಕಾರಕ್ಕೆ ಶಿವಣ್ಣ ಒತ್ತಾಯಿಸಿದ್ದಾರೆ. ಗೊರೂರು ಹೇಮಾವತಿ ಜಲಾಶಯದಲ್ಲಿ ಕಳೆದ 2-3 ತಿಂಗಳ ಹಿಂದೆ 26 ಟಿಎಂಸಿ ನೀರು ಸಂಗ್ರಹವಿತ್ತು. ಸದ್ಯ 18 ಟಿಎಂಸಿ ನೀರು ಗೊರೂರು ಜಲಾಶಯದಲ್ಲಿದ್ದು, 4 ಟಿಎಂಸಿ. ಡೆಡ್ ಸ್ಟೊರೇಜ್ ಕಳೆದು 14. ಟಿ.ಎಂ.ಸಿ ನೀರು ಲಭ್ಯವಿರುತ್ತದೆ ಎಂದರು. ಪ್ರಸ್ತುತ ತುಮಕೂರು ಜಿಲ್ಲೆಯ ಎಲ್ಲ ತಾಲೂಕುಗಳು ಬರಪೀಡಿತವೆಂದು ಸರ್ಕಾರವೇ ಘೋಷಿಸಿದೆ ಎಂದರು. ತುಮಕೂರು ಜಿಲ್ಲೆಯ ತಿಪಟೂರು, ತುರುವೇಕೆರೆ, ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ, ಮಧುಗಿರಿ, ಕೊರಟಗೆರೆ, ಕುಣಿಗಲ್ ಹಾಗೂ ತುಮಕೂರು ಗ್ರಾಮಾಂತರದ 158 ಕೆರೆಗಳ ಒಟ್ಟು ಸಾಮರ್ಥ್ಯದ 547.65 ಎಂಸಿ.ಎಫ್ ಟಿ ಇದ್ದು, ಈ ಸಾಲಿನಲ್ಲಿ 1490.16 ಎಂಸಿಎಫ್ ಟಿ ಯಷ್ಟು ಪ್ರಮಾಣದ ನೀರನ್ನು ಹೇಮಾವತಿ ನಾಲೆಯ ಮೂಲಕ ಹರಿಸಲಾಗಿರುತ್ತದೆ ಎಂದು ಮಾಹಿತಿ ನೀಡಿ, ಈ ಬಾರಿ ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದೆ. ಆದ್ದರಿಂದ ಜಿಲ್ಲೆಗೆ ಹಂಚಿಕೆಯಾಗಿರುವ ಹೇಮಾವತಿ ನೀರನ್ನು ಬಿಡುಗಡೆಗೊಳಿಸಬೇಕು. ಇದರಿಂದ ಕೆರೆಗಳಲ್ಲಿ ನೀರು ಸಂಗ್ರಹವಾದರೆ ಕುಡಿಯುವ ನೀರು, ಅಂತರ್ಜಲ ವೃದ್ಧಿ, ಪ್ರಾಣಿ-ಪಕ್ಷಿಗಳು-ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ತುಮಕೂರು ಜಿಲ್ಲೆ ಬಾರೀ ಸಮಸ್ಯೆಯಲ್ಲಿ ಸಿಲುಕಿಗೊಳ್ಳಲಿದೆ ಎಂದರು. ಈ ಮೂಲಕ ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರ, ತುಮಕೂರು ಹಾಗೂ ಹಾಸನ ಉಸ್ತುವಾರಿ ಸಚಿವರು ಮತ್ತು ತುಮಕೂರು ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಹಾ ನಗರಪಾಲಿಕೆ ಮಾಜಿ ಸದಸ್ಯ ಕೆ.ಪಿ.ಮಹೇಶ, ಸಾಮಾಜಿಕ ಹೋರಾಟಗಾರರಾದ ಆಟೋ ನವೀನ್ ಮತ್ತು ಪಂಚಾಕ್ಷರಯ್ಯ ಉಪಸ್ಥಿತರಿದ್ದರು.

Share this article