ಕೃಷ್ಣ ಎನ್. ಲಮಾಣಿ ಕನ್ನಡಪ್ರಭ ವಾರ್ತೆ ಹೊಸಪೇಟೆ ವಿಜಯನಗರ ಜಿಲ್ಲೆಯ ಅನ್ನದಾತರು ಬರಗಾಲದ ಹೊಡೆತಕ್ಕೆ ತತ್ತರಿಸಿದ್ದು, ಶನಿವಾರ ಕೇಂದ್ರ ಬರ ಅಧ್ಯಯನ ತಂಡವೇ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರೈತರ ಗೋಳಿಗೆ ಪರಿಹಾರ ಸಿಗಲಿದೆಯೇ ಎಂಬ ನಿರೀಕ್ಷೆಯಲ್ಲಿದ್ದಾರೆ. ಜಿಲ್ಲೆಯ ಆರು ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ಎಂದು ಘೋಷಣೆ ಮಾಡಿದೆ. ಜಿಲ್ಲೆಯಲ್ಲಿ ತೀವ್ರ ಬರಗಾಲದಿಂದ ರೈತರು ತತ್ತರಿಸಿದ್ದು, ಮೇವಿಗೂ ಬರ ಆವರಿಸಿದೆ. ಜಿಲ್ಲೆಯಲ್ಲಿ ಮಳೆ ಅಭಾವದಿಂದ ಭಾರಿ ತೊಂದರೆ ಉಂಟಾಗಿದೆ. ಈ ಬಾರಿ ತುಂಗಭದ್ರಾ ಜಲಾಶಯ ಕೂಡ ಸಂಪೂರ್ಣ ಭರ್ತಿಯಾಗಿಲ್ಲ. ಹಾಗಾಗಿ ಹೊಸಪೇಟೆ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ ಮತ್ತು ಹರಪನಹಳ್ಳಿ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ರೈತರ ಗೋಳಾಟ: ಬರಗಾಲದಿಂದ ರೈತರು ಬೆಳೆಗಳನ್ನು ಬೆಳೆದಿಲ್ಲ. ಸಾಲಗಾರರ ಕಾಟದಿಂದ ರೈತರು ತತ್ತರಿಸಿದ್ದಾರೆ. ಹೂವಿನಹಡಗಲಿ ತಾಲೂಕಿನಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಬೆಳೆದ ಬೆಳೆಗಳು ಸಂಪೂರ್ಣ ಒಣಗಿವೆ. ದನಕರುಗಳಿಗೂ ಮೇವಿಲ್ಲದೇ ತತ್ತರಿಸಿದ್ದಾರೆ. ರೈತರು ಬೇರೆ ದಾರಿ ಕಾಣದೇ ಬೆಂಗಳೂರು, ಮಂಗಳೂರು ಕಡೆಗೆ ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ. ಶೇ.73ರಷ್ಟು ಮಳೆ ಕೊರತೆ: ಈ ಬಾರಿ ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಶೇ. 73ರಷ್ಟು ಮಳೆ ಕೊರತೆ ಉಂಟಾಗಿದೆ. ವಾಡಿಕೆಗಿಂತ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಆಗಸ್ಟ್‌ನಲ್ಲಿ ಮಳೆ ಬಿದ್ದಿದ್ದರೆ, ಫಸಲು ಬರುತ್ತಿತ್ತು. ಸೆಪ್ಟೆಂಬರ್ ಹಾಗೂ ಅಕ್ಟೋಬರ್‌ನಲ್ಲೂ ಮಳೆ ಬಿದ್ದಿಲ್ಲ. ಈ ಪ್ರಮುಖ ತಿಂಗಳಿನಲ್ಲೇ ಮಳೆ ಕೈಕೊಟ್ಟಿದೆ. ಜಿಲ್ಲೆಯಲ್ಲಿ ಶೇ. 99ರಷ್ಟು ಬಿತ್ತನೆಯಾಗಿದ್ದು, 2,93,453 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಮೆಕ್ಕೆಜೋಳ, ಸೂರ್ಯಕಾಂತಿ ಸೇರಿದಂತೆ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಿದ್ದ ರೈತರು ಬೆಳೆಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ 2,93,453 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಬಿತ್ತನೆ ಮಾಡಿದರೂ ಬೆಳೆಗಳು ಒಣಗಿವೆ. ಈಗ ಕೇಂದ್ರ ಬರ ಅಧ್ಯಯನ ತಂಡ ಸ್ವತಃ ಭೇಟಿ ನೀಡಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಿದೆ. ಹಾಗಾಗಿ ಪರಿಹಾರ ಸಿಗಲಿದೆಯೇ? ನಿರೀಕ್ಷೆಯಲ್ಲಿ ರೈತರಿದ್ದಾರೆ. ದನಕರುಗಳಿಗೂ ಮೇವು ಸಿಗದ ಸ್ಥಿತಿ ಇದೆ. ಕೆರೆಗಳು ಕೂಡ ಬತ್ತುತ್ತಿವೆ. ಹಾಗಾಗಿ ರೈತರು ದನಕರು, ಕುರಿ, ಮೇಕೆಗಳನ್ನು ಮಾರಾಟ ಮಾಡುವ ಸ್ಥಿತಿ ಇದೆ. ಬರ ಅಧ್ಯಯನ ತಂಡ ಕೇಂದ್ರಕ್ಕೆ ಸೂಕ್ತ ವರದಿ ಸಲ್ಲಿಕೆ ಮಾಡಿದರೆ, ಅನುಕೂಲವಾಗಲಿದೆ ಎಂಬುದು ರೈತರ ಅಭಿಪ್ರಾಯವಾಗಿದೆ. ಜಿಲ್ಲೆಯಲ್ಲಿ ಎಲ್ಲೆಲ್ಲಿ ಭೇಟಿ?: ಕೇಂದ್ರ ಬರ ಅಧ್ಯಯನದ ಎರಡನೇ ತಂಡವಾದ ಕೇಂದ್ರ ಕುಡಿಯುವ ನೀರು ಹಾಗು ಸ್ವಚ್ಛತಾ ಸಚಿವಾಲಯದ ಹೆಚ್ಚುವರಿ ಸಲಹೆಗಾರ ಡಿ. ರಾಜಶೇಖರ್ ನೇತೃತ್ವದಲ್ಲಿ ಪಶುಸಂಗೋಪನೆ ಇಲಾಖೆ ನಿರ್ದೇಶಕ ಆರ್.ಥಾಕರೆ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಹಾಯಕ ಆಯುಕ್ತ ಮೋತಿರಾಂ ,ರಾಜ್ಯದ ಪ್ರಕೃತಿ ವಿಕೋಪ ನಿರ್ವಹಣಾ ಕೇಂದ್ರದ ನಿರ್ದೇಶಕ ಕರೀಗೌಡ ಅವರ ನೇತೃತ್ವದ ತಂಡ ಜಿಲ್ಲೆಗೆ ಭೇಟಿ ನೀಡುತ್ತಿದೆ. ಜಿಲ್ಲೆಯ ಹೊಸಪೇಟೆ ತಾಲೂಕಿನ ನಂದಿಬಂಡಿ ಗ್ರಾಮ ಸೇರಿದಂತೆ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರಕೆರೆ, ಹಂಪಾಪಟ್ಟಣ, ರಾಯರಾಳ ತಾಂಡಾ, ಆನೆಕಲ್, ಮಾದೂರು, ಕೊಟ್ಟೂರು ತಾಲೂಕಿನ ತಿಮ್ಮಲಾಪುರ ನಂತರ ಕೂಡ್ಲಿಗಿ ತಾಲೂಕಿನ ಈಚಲುಬೊಮ್ಮನಹಳ್ಳಿ ಗ್ರಾಮದ ಬರ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಲಿದ್ದಾರೆ. ವಿಜಯನಗರ ಜಿಲ್ಲೆಯ ಪರಿಸ್ಥಿತಿ ಅಧ್ಯಯನಕ್ಕೆ ಐಎಎಸ್ ಅಧಿಕಾರಿಗಳನ್ನು ಒಳಗೊಂಡ ಕೇಂದ್ರದ ಎರಡನೇ ತಂಡ ಅ. 7ರಂದು ಜಿಲ್ಲೆಗೆ ಆಗಮಿಸಲಿದೆ. ಕೇಂದ್ರ ತಂಡ ಹತ್ತು ಸದಸ್ಯರನ್ನೊಗೊಂಡಿದ್ದು, ಸ್ಥಳೀಯ ಅಧಿಕಾರಿಗಳೊಂದಿಗೆ ಕೃಷಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ತಿಳಿಸಿದರು. ರೈತರಿಗೆ ಪರಿಹಾರ: ಜಿಲ್ಲೆಯಲ್ಲಿ ಮಳೆ ಇಲ್ಲದೇ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಬರಪೀಡಿತ ಎಂದು ಜಿಲ್ಲೆಯ ಆರು ತಾಲೂಕುಗಳನ್ನು ಘೋಷಣೆ ಮಾಡಿದೆ. ಈಗ ಕೇಂದ್ರ ಬರ ಅಧ್ಯಯನ ತಂಡ ಕೂಡ ಜಿಲ್ಲೆಗೆ ಭೇಟಿ ನೀಡುತ್ತಿದೆ. ರೈತರ ಪರಿಸ್ಥಿತಿ ಕುರಿತು ತಂಡ ವಾಸ್ತವ ವರದಿ ನೀಡಿದರೆ, ರೈತರಿಗೆ ಪರಿಹಾರ ದೊರೆಯಲಿದ್ದು, ರೈತರ ಸಮಸ್ಯೆ ಕೊಂಚ ನಿವಾರಣೆ ಆಗಲಿದೆ ನ್ನಾತ್ತಾರೆ ರೈತ ಸಂಘದ ಜಿಲ್ಲಾಧ್ಯಕ್ಷ ಗಾಳೆಪ್ಪ.