ಜಾತಿ ಸೃಷ್ಟಿಸಿದ್ದು ಬ್ರಾಹ್ಮಣರಲ್ಲ: ಅಶೋಕ ಹಾರನಹಳ್ಳಿ

KannadaprabhaNewsNetwork |  
Published : Jan 07, 2024, 01:30 AM IST
ಅಶೋಕ ಹಾರನಹಳ್ಳಿ. | Kannada Prabha

ಸಾರಾಂಶ

ಬ್ರಾಹ್ಮಣರು ಎಂಬುದು ಜಾತಿಸೂಚಕ ಅಲ್ಲ. ಅದು ಕರ್ತವ್ಯವನ್ನು ತಿಳಿಸುತ್ತದೆ. ಸಮಾಜದ ಕಷ್ಟ ಕಾಲದಲ್ಲಿ ಮುಂಚೂಣಿಯಲ್ಲಿ ನಿಂತು ರಕ್ಷಣೆಗೆ ಮುಂದಾಗುವವರು ಬ್ರಾಹ್ಮಣರು. ಅಲ್ಲಿ ಹುಟ್ಟಿನ ಮೂಲ ಪರಿಗಣನೆಗೆ ಬರುವುದಿಲ್ಲ ಎಂದು ಅಶೋಕ ಹಾರನಹಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರುಸಮಾಜದಲ್ಲಿ ಜಾತಿ ಸೃಷ್ಟಿಯಾಗಲು ಬ್ರಾಹ್ಮಣರು ಕಾರಣ ಎಂಬುದು ವಿಚ್ಛಿದ್ರಕಾರಿ ಶಕ್ತಿಗಳ ಅಪಪ್ರಚಾರ. ಸನಾತನ ಧರ್ಮದ ಟೀಕೆ ಹೆಸರಿನಲ್ಲಿ ವಿಶ್ವಕ್ಕೆ ಒಳಿತನ್ನು ಬಯಸುವ ಬ್ರಾಹ್ಮಣರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರನಹಳ್ಳಿ ಹೇಳಿದರು.ಶನಿವಾರ ಶಂಕರಪುರಂ ಶೃಂಗೇರಿ ಶಂಕರ ಮಠದ ಆವರಣದ ‘ಉಭಯಭಾರತೀ’ ವೇದಿಕೆಯಲ್ಲಿ ನಡೆದ ‘ರಾಜ್ಯಮಟ್ಟದ ತೃತೀಯ ವಿಪ್ರ ಮಹಿಳಾ ಸಮ್ಮೇಳನ ಅಭಿಜಾತೆ-2024’ರಲ್ಲಿ ಪಾಲ್ಗೊಂಡು ಮಾತನಾಡಿದರು.ವಿಶ್ವದ ಎಲ್ಲ ಸಮುದಾಯಗಳಿಗೆ ಒಳ್ಳೆಯದಾಗಲಿ ಎಂಬುದು ಬ್ರಾಹ್ಮಣರ ಆಶಯ. ಬ್ರಾಹ್ಮಣರು ಸನಾತನ ಧರ್ಮದ ರಕ್ಷಣೆಗೆ ಕಟಿಬದ್ಧರಾಗಿರಬೇಕು. ಬ್ರಾಹ್ಮಣರನ್ನು ದ್ವೇಷಿಸಲ್ಲ. ಬ್ರಾಹ್ಮಣ್ಯವನ್ನು ದ್ವೇಷಿಸುತ್ತೇವೆ ಎಂಬುದು ಅರ್ಥವಿಲ್ಲದ ಮಾತು. ಸಮಾಜದಲ್ಲಿ ಜಾತಿ ಸೃಷ್ಟಿಯಾಗಲು ಬ್ರಾಹ್ಮಣರು ಕಾರಣ ಎಂಬುದು ಸುಳ್ಳು. ಕೆಲ ವಿಚ್ಛಿದ್ರಕಾರಕ ಶಕ್ತಿಗಳಿಂದ ಇಂತಹ ಪ್ರಚಾರದಲ್ಲಿ ತೊಡಗಿವೆ. ಬ್ರಾಹ್ಮಣರ ಬಗ್ಗೆ ಇರುವ ತಾತ್ಸಾರ ಮನೋಭಾವನೆಯನ್ನು ಬಿಡಬೇಕು ಎಂದು ಅವರು ಹೇಳಿದರು.ಅದಮ್ಯ ಚೇತನ ಫೌಂಡೇಷನ್ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಮಾತನಾಡಿ, ಬ್ರಾಹ್ಮಣ ಸಮುದಾಯ ಯಾರ ಬೆಂಬಲವಿಲ್ಲದೆ ಸ್ವಂತ ಸಾಮರ್ಥ್ಯದಿಂದ ಏಳಿಗೆ ಹೊಂದಿದೆ. ವಿದೇಶದಲ್ಲಿ ಸಮುದಾಯದ ಪ್ರತಿಭಾನ್ವಿತರು ಕೀರ್ತಿಪತಾಕೆ ಹಾರಿಸಿದ್ದಾರೆ. ಸೇವೆ ಮತ್ತು ತ್ಯಾಗ ವಿಪ್ರ ಮಹಿಳೆಯರ ಆದರ್ಶವಾಗಬೇಕು. ಮಹಿಳೆಯರ ದೊಡ್ಡ ಪ್ರಮಾಣದ ಜವಾಬ್ದಾರಿಯಿದೆ. ಮಹಿಳೆಯರು ತಮ್ಮಲ್ಲಿನ ಶಕ್ತಿಯನ್ನು, ಅಂತಸತ್ವವನ್ನು ಗುರುತಿಸಿಕೊಳ್ಳೋಣ. ಅದನ್ನು ಒಳ್ಳೆಯ ಕಾರ್ಯಗಳಿಗೆ ತೊಡಗಿಸೋಣ ಎಂದು ಹೇಳಿದರು.

ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅಲ್ಕಾ ಸುಧೀರ ಇನಾಮದಾರ್‌ ಮಾತನಾಡಿ, ಸಮಾಜದ ಮಹಿಳೆ ವೈದ್ಯೆ, ಎಂಜಿನಿಯರ್ ಸೇರಿ ಯಾವುದೇ ಹುದ್ದೆಯಲ್ಲಿದ್ದರೂ ಮಾತೃಧರ್ಮವನ್ನು ಪಾಲಿಸಿ. ನಡೆನುಡಿ, ಉಡುಗೆಗಳಲ್ಲಿ ಸಂಸ್ಕೃತಿ ಕಾಪಾಡಿ ಮುಂದಿನ ಪೀಳಿಗೆಗೆ ಮಾದರಿಯಾಬೇಕು. ಮನೆಯ ಆಚಾರ ವಿಚಾರಗಳಲ್ಲಿ ನಮ್ಮ ಧರ್ಮಕ್ಕೆ ಅನುಗುಣವಾಗಿ ವರ್ತಿಸುತ್ತಿದ್ದೇವಾ? ನಮ್ಮ ನಡತೆಯಿಂದ ಧರ್ಮ, ಕರ್ತವ್ಯದ ಮೇಲೆ ಏನು ಪರಿಣಾಮ ಬೀರುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು ಎಂದರು.

ಬ್ರಾಹ್ಮಣರು ಎಂಬುದು ಜಾತಿಸೂಚಕ ಅಲ್ಲ. ಅದು ಕರ್ತವ್ಯವನ್ನು ತಿಳಿಸುತ್ತದೆ. ಸಮಾಜದ ಕಷ್ಟ ಕಾಲದಲ್ಲಿ ಮುಂಚೂಣಿಯಲ್ಲಿ ನಿಂತು ರಕ್ಷಣೆಗೆ ಮುಂದಾಗುವವರು ಬ್ರಾಹ್ಮಣರು. ಅಲ್ಲಿ ಹುಟ್ಟಿನ ಮೂಲ ಪರಿಗಣನೆಗೆ ಬರುವುದಿಲ್ಲ ಎಂದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿದರು. ಈ ವೇಳೆ ಗಣ್ಯರು ಸಮ್ಮೇಳನದ ಸ್ಮರಣಗ್ರಂಥವನ್ನು ಬಿಡುಗಡೆ ಮಾಡಿದರು. ಮಧ್ಯಾಹ್ನದ ಬಳಿಕ ವಿವಿಧ ಗೋಷ್ಠಿಗಳು ನಡೆದವು. ಶಾಸಕರಾದ ರವಿ ಸುಬ್ರಮಣ್ಯ, ಸಿ.ಕೆ.ರಾಮಮೂರ್ತಿ, ಸಮ್ಮೇಳನದ ಕಾರ್ಯಾಧ್ಯಕ್ಷೆ ಮೇದಿನಿ ಉದಯ ಗರುಡಾಚಾರ್, ಸಮ್ಮೇಳನ ಸಂಚಾಲಕಿ ಡಾ.ಶುಭಮಂಗಳ ಸುನೀಲ್ ಹಾಗೂ ಇತರರು ಇದ್ದರು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಹಳದಿ ಮಾರ್ಗ ಮೆಟ್ರೋಗೆ ಆ.10ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ