ಅರ್ಥಪೂರ್ಣವಾಗಿ ಅಂಬೇಡ್ಕರ್ ಜಯಂತಿ ಆಚರಿಸಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : Apr 09, 2026, 01:15 AM IST
೮ಕೆಎಲ್‌ಆರ್-೮ಕೋಲಾರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವ ಸಿದ್ಧತಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾತನಾಡುತ್ತಿರುವುದು. | Kannada Prabha

ಸಾರಾಂಶ

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ 135ನೇ ಜನ್ಮದಿನಾಚರಣೆಯನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ, ಶಿಸ್ತುಬದ್ಧವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ 135ನೇ ಜನ್ಮದಿನಾಚರಣೆಯನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ, ಶಿಸ್ತುಬದ್ಧವಾಗಿ ಮತ್ತು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಳೆದ ಬಾರಿ ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳ ಗೈರುಹಾಜರಿಯ ಬಗ್ಗೆ ಸಮಾಜದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಠಿಣ ಸೂಚನೆ ನೀಡಿದರು.

ಅಂಬೇಡ್ಕರ್ ಜಯಂತಿ ರಾಷ್ಟ್ರೀಯ ಹಬ್ಬ. ಅಂದು ಬೆಳಿಗ್ಗೆಯಿಂದ ಸಂಜೆಯ ಕಾರ್ಯಕ್ರಮದ ಮುಕ್ತಾಯದವರೆಗೆ ಎಲ್ಲಾ ಇಲಾಖಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಗೈರಾಗುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಜಯಂತಿಯ ಅಂಗವಾಗಿ ಇಡೀ ಕೋಲಾರ ನಗರವನ್ನು 1 ತಿಂಗಳ ಕಾಲ ನೀಲಿ ಬಣ್ಣದ ಧ್ವಜಗಳು ಮತ್ತು ವಿದ್ಯುತ್ ದೀಪಗಳಿಂದ ಅಲಂಕರಿಸಲು ತೀರ್ಮಾನಿಸಿದರು. ಏ.14ರಂದು ಬೆಳಗ್ಗೆ 10:30ಕ್ಕೆ ಮೆರವಣಿಗೆ ಆರಂಭವಾಗಲಿದ್ದು, ವಿವಿಧ ಇಲಾಖೆಗಳಿಂದ ಸರ್ಕಾರದ ಯೋಜನೆಗಳನ್ನು ಬಿಂಬಿಸುವ ಸ್ತಬ್ಧ ಚಿತ್ರಗಳು ಪಾಲ್ಗೊಳ್ಳಲಿವೆ.

ಮುಖಂಡರ ಬೇಡಿಕೆಯಂತೆ ಅಂಬೇಡ್ಕರ್ ಭವನಕ್ಕೆ ಜಾಗ ಮೀಸಲಿಡುವುದು ಹಾಗೂ ನಗರದ ಪ್ರಮುಖ ವೃತ್ತಗಳಲ್ಲಿ ಅಂಬೇಡ್ಕರ್ ಅವರ ಜೀವನ ಸಂದೇಶ ಸಾರುವ ಎಲ್‌ಇಡಿ ಡಿಸ್‌ಪ್ಲೇ ಅಳವಡಿಸಲು ಜಿಲ್ಲಾಧಿಕಾರಿಗಳು ಸಮ್ಮತಿ ಸೂಚಿಸಿದರು. ಎಸ್ಎಸ್ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಜಿಲ್ಲೆಯ 10 ವಿದ್ಯಾರ್ಥಿಗಳಿಗೆ ಸನ್ಮಾನಿಸಲು ನಿರ್ಧರಿಸಿದರು.ಸಂವಿಧಾನವೇ ಬೆಳಕು ಎಂಬ ಶೀರ್ಷಿಕೆಯಡಿ ಅಂಬೇಡ್ಕರ್ ಅವರ ವಿಚಾರಧಾರೆ ಒಳಗೊಂಡ ಕಿರುಹೊತ್ತಿಗೆ ಹೊರತರಲು ಸಭೆಯಲ್ಲಿ ನಿರ್ಧರಿಸಲಾಯಿತು. ಕಾರ್ಯಕ್ರಮದ ಯಶಸ್ವಿ ನಿರ್ವಹಣೆಗಾಗಿ ವೇದಿಕೆ ಸಮಿತಿ, ಸಾಂಸ್ಕೃತಿಕ ಸಮಿತಿ ಮತ್ತು ಆಹಾರ ಸಮಿತಿ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಪ್ರತಿ ಸಮಿತಿಗೆ ಜವಾಬ್ದಾರಿಯುತ ಅಧಿಕಾರಿಗಳನ್ನು ನೇಮಿಸಿ, ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಸೂಚಿಸಲಾಯಿತು.

ಸಭೆಯಲ್ಲಿ ಜಿಪಂ ಸಿಇಒ ಡಾ.ಪ್ರವೀಣ್ ಪಿ.ಬಾಗೇವಾಡಿ, ಎಡಿಸಿ ಎಸ್.ಎಂ.ಮಂಗಳ, ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ನಟೇಶ್, ಎಎಸ್ಪಿ ರವಿಶಂಕರ್, ಸಮಾಜ ಕಲ್ಯಾಣ ಇಲಾಖೆಯ ಶ್ರೀನಿವಾಸನ್, ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಾಥ್, ಡಿಎಚ್‌ಒ ಜಿ.ಶ್ರೀನಿವಾಸ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಾವೀದಾ ನಸೀಮಾ ಖಾನಂ, ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪ ನಿರ್ದೇಶಕ ಎಂ.ನಾರಾಯಣಸ್ವಾಮಿ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಗದೀಶ್, ಮುಂಖಡರಾದ ಡಾ.ಎಂ.ಚಂದ್ರಶೇಖರ್, ಟಿ.ವಿಜಯಕುಮಾರ್, ಡಿಪಿಎಸ್ ಮುನಿರಾಜು, ಪಂಡಿತ್ ಮುನಿವೆಂಕಟಪ್ಪ, ಕೆ.ಜಯದೇವ್, ದಲಿತ್ ನಾರಾಯಣಸ್ವಾಮಿ, ಹಾರೋಹಳ್ಳಿ ರವಿ, ಚಂದ್ರಮೌಳಿ, ರಾಜಕುಮಾರ್, ರೈತ ಮುಖಂಡ ಅಬ್ಬಣಿ ಶಿವಪ್ಪ, ಬಿ. ಶ್ರೀರಂಗ, ಕುವೆಂಪು ನಗರ ಆನಂದ್, ವಾಲ್ಮೀಕಿ ನರಸಿಂಹಯ್ಯ, ವೆಂಕಟಾಚಲಪತಿ, ಆಲೇರಿ ಮುನಿರಾಜು, ರವಿಕುಮಾರ್, ಕೋಟೆ ಶ್ರೀನಿವಾಸ್, ಡಿಎಸ್‌ಎಸ್ ಮಂಜುಳ, ನಾಗೇಶ್, ಮತ್ತಿಕುಂಟೆ ಕೃಷ್ಣಪ್ಪ, ಗಾಂಧಿನಗರ ಲಕ್ಷ್ಮಣ, ವಾಲ್ಮೀಕಿ ಮಂಜುಳ, ಮತ್ತಿಕುಂಟೆ ನಾರಾಯಣಸ್ವಾಮಿ, ನಾಗನಾಳ ಶಂಕರ್ ಇದ್ದರು.

PREV

Recommended Stories

ವಿದ್ಯಾರ್ಥಿಗಳ ಪಾಲಿಗೆ ಸಿದ್ಧಗಂಗಾ ಶ್ರೀ ಆಶಾಕಿರಣ: ಸ್ವಾಮೀಜಿ
ಸರ್ಕಾರಿ ಶಾಲೆಯ 1 ಕೊಠಡಿಯಲ್ಲಿ 5 ತರಗತಿಯ ಮಕ್ಕಳಿಗೆ ಬೋಧನೆ