ವಿದ್ಯಾರ್ಥಿಗಳ ಪಾಲಿಗೆ ಸಿದ್ಧಗಂಗಾ ಶ್ರೀ ಆಶಾಕಿರಣ: ಸ್ವಾಮೀಜಿ

KannadaprabhaNewsNetwork |  
Published : Apr 08, 2026, 03:15 AM IST
6ಎಚ್ಎಸ್ಎನ್14 :  | Kannada Prabha

ಸಾರಾಂಶ

ನಡೆದಾಡುವ ದೇವರೆಂದೇ ಪ್ರಸಿದ್ಧವಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಅನ್ನ, ಅಕ್ಷರ ಮತ್ತು ಆಶ್ರಯ ಎಂಬ ತ್ರಿವಿಧ ದಾಸೋಹದ ಮೂಲಕ ವಿದ್ಯಾರ್ಥಿಗಳ ಪಾಲಿಗೆ ಸಿದ್ಧಗಂಗಾ ಸ್ವಾಮೀಜಿಗಳು ಆಶಾಕಿರಣವಾಗಿದ್ದಾರೆ ಎಂದು ತಣ್ಣೀರುಹಳ್ಳ ಮಠದ ಮಠಾಧೀಶರಾದ ವಿಜಯಕುಮಾರ ಸ್ವಾಮಿಗಳು ತಿಳಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ನಡೆದಾಡುವ ದೇವರೆಂದೇ ಪ್ರಸಿದ್ಧವಾಗಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಅನ್ನ, ಅಕ್ಷರ ಮತ್ತು ಆಶ್ರಯ ಎಂಬ ತ್ರಿವಿಧ ದಾಸೋಹದ ಮೂಲಕ ವಿದ್ಯಾರ್ಥಿಗಳ ಪಾಲಿಗೆ ಸಿದ್ಧಗಂಗಾ ಸ್ವಾಮೀಜಿಗಳು ಆಶಾಕಿರಣವಾಗಿದ್ದಾರೆ ಎಂದು ತಣ್ಣೀರುಹಳ್ಳ ಮಠದ ಮಠಾಧೀಶರಾದ ವಿಜಯಕುಮಾರ ಸ್ವಾಮಿಗಳು ತಿಳಿಸಿದರು.ನಗರದ ತಣ್ಣೀರುಹಳ್ಳ ಶ್ರೀಮಠದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ೧೧೯ನೇ ಜಯಂತಿಯನ್ನು ಅತ್ಯಂತ ಭಕ್ತಿಭಾವದಿಂದ ಹಾಗೂ ವೈಭವಯುತವಾಗಿ ಆಚರಿಸಿದ ವೇಳೆ ಸಾನ್ನಿಧ್ಯ ವಹಿಸಿ ಮಾತನಾಡಿದ ಸ್ವಾಮೀಜಿಯವರು, ವಿವಿಧ ಭಾಗಗಳಿಂದ ಭಕ್ತರು, ಸಾಹಿತ್ಯಾಸಕ್ತರು ಮತ್ತು ಸಮಾಜ ಸೇವಕರು ಭಾಗವಹಿಸಿ ಶ್ರೀಗಳ ಸೇವಾ ಸಾಧನೆಗಳನ್ನು ಸ್ಮರಿಸಿದರು. ಸಿದ್ದಗಂಗಾ ಶ್ರೀಗಳು “ನಡೆದಾಡುವ ದೇವರು” ಎಂದೇ ಪ್ರಸಿದ್ಧರಾಗಿದ್ದು, ಅನ್ನ, ಅಕ್ಷರ ಮತ್ತು ಆಶ್ರಯ ಎಂಬ ತ್ರಿವಿಧ ದಾಸೋಹದ ಮೂಲಕ ಲಕ್ಷಾಂತರ ಬಡ ಹಾಗೂ ಅನಾಥ ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಿದ್ದಾರೆ ಎಂದು ಹೇಳಿದರು. ಜಾತಿ-ಮತ ಭೇದವಿಲ್ಲದೆ ಎಲ್ಲ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ, ವಸತಿ ಹಾಗೂ ಊಟ ಒದಗಿಸುವ ಮೂಲಕ ಅವರು ಮಾನವೀಯ ಮೌಲ್ಯಗಳನ್ನು ಜೀವಂತಗೊಳಿಸಿದ್ದಾರೆ ಎಂದು ವಿವರಿಸಿದರು. ಮಠದ ಆರ್ಥಿಕ ಸ್ಥಿತಿ ದುರ್ಬಲವಾಗಿದ್ದ ಸಮಯದಲ್ಲೂ ಶ್ರೀಗಳು ಅಚಲ ಧೈರ್ಯದಿಂದ ಕಾರ್ಯನಿರ್ವಹಿಸಿ, ಭಕ್ತರ ಮನೆ ಮನೆಗೆ ತೆರಳಿ ದವಸ-ಧಾನ್ಯ ಸಂಗ್ರಹಿಸಿ ವಿದ್ಯಾರ್ಥಿ ನಿಲಯಗಳು, ಪ್ರಸಾದ ನಿಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಯಶಸ್ವಿಯಾಗಿ ನಡೆಸಿದ ವಿಚಾರವನ್ನು ಅವರು ಸ್ಮರಿಸಿದರು. ಗ್ರಾಮೀಣ ಭಾಗದ ಮಕ್ಕಳಿಗೆ ಶಿಕ್ಷಣದ ದೀಪ ಹಚ್ಚಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಶ್ರೀಗಳ ಪಾತ್ರ ಅನನ್ಯವಾಗಿದೆ ಎಂದು ಹೇಳಿದರು.ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಂ. ಎನ್. ಕುಮಾರಸ್ವಾಮಿ ಮಾತನಾಡಿ, ಸಿದ್ದಗಂಗಾ ಶ್ರೀಗಳು ಬಡ, ದೀನ, ದಲಿತ ಹಾಗೂ ಹಿಂದುಳಿದ ವರ್ಗದ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದಲ್ಲಿ ಸಮಾನತೆಯ ಸಂದೇಶ ಸಾರಿದರು. ಅವರ ಆದರ್ಶಗಳು ಇಂದಿನ ಯುವಜನತೆಗೆ ಮಾರ್ಗದರ್ಶಕವಾಗಿವೆ ಎಂದು ಹೇಳಿದರು.ಪರಿಷತ್ತು ಪ್ರಧಾನ ಕಾರ್ಯದರ್ಶಿ ಕಟ್ಟಾಯ ಶಿವಕುಮಾರ ಮಾತನಾಡಿ, ೧೨ನೇ ಶತಮಾನದ ಶಿವಶರಣರ ಕಾಯಕ ಮತ್ತು ದಾಸೋಹ ತತ್ವವನ್ನು ಆಧುನಿಕ ಕಾಲದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ ಮಹಾನ್ ವ್ಯಕ್ತಿತ್ವ ಸಿದ್ಧಗಂಗಾ ಶ್ರೀಗಳು. ಅವರ ನಿಸ್ವಾರ್ಥ ಸೇವೆಗೆ ಇಡೀ ಜಗತ್ತೇ ತಲೆಬಾಗಿದ್ದು, ಇಂತಹ ಮಹಾನ್ ಗುರುಗಳ ಕಾಲದಲ್ಲಿ ಬದುಕಿರುವುದು ನಮ್ಮ ಸೌಭಾಗ್ಯ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ಕೋಶಾಧಿಕಾರಿ ರುದ್ರಸ್ವಾಮಿ, ಸಂಘಟನಾ ಕಾರ್ಯದರ್ಶಿ ಅನಂದ್ ಪಟೇಲ್, ಬೇಲೂರು ತಾಲ್ಲೂಕು ಅಧ್ಯಕ್ಷ ಹೆಬ್ಬಾಳು ಹಾಲಪ್ಪ, ಅರಕಲಗೂಡು ಅಧ್ಯಕ್ಷ ಅಮೃತೇಶ್, ಚನ್ನರಾಯಪಟ್ಟಣದ ಕಲ್ಪನಾ ಸಿದ್ದುರಾಜು, ಬೇಲೂರು ಪ್ರಧಾನ ಕಾರ್ಯದರ್ಶಿ ರಾಜಕುಮಾರ, ಖಜಾಂಚಿ ಧನಂಜಯ, ಸಕಲೇಶಪುರ ಕದಳಿ ಮಹಿಳಾ ವೇದಿಕೆಯ ಮೀನಾಕ್ಷಿ ಖಾದರ್, ಶಾರದ ಗುರುಮೂರ್ತಿ, ಭಾವನಾ, ಕಲಾವತಿ, ಪೂಜಾ, ರತ್ನಮ್ಮ, ಅನ್ನಪೂರ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆಯ 1 ಕೊಠಡಿಯಲ್ಲಿ 5 ತರಗತಿಯ ಮಕ್ಕಳಿಗೆ ಬೋಧನೆ
ವೀರಭದ್ರೇಶ್ವರಸ್ವಾಮಿ ಜಾತ್ರಾ ಮಹೋತ್ಸವ