ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಪಾಸ್ ನೀಡಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ
ದೆಹಲಿಯ ಸಂಸತ್ ಭವನಕ್ಕೆ ನುಗ್ಗಿ ದಾಂಧಲೆ ನಡೆಸಲು ಕಾರಣರಾದ ಇಬ್ಬರಿಗೆ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಪಾಸ್ ನೀಡಿರುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ, ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಘಟನೆ ಬುಧವಾರ ಸಂಜೆ ನಡೆದಿದೆ.
ಪ್ರತಾಪ ಸಿಂಹ ಕಚೇರಿಗೆ ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಈ ವೇಳೆ ಜಟಾಪಟಿ ನಡೆದಿದೆ. ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ಸ್ಫೋಟಕ ವಸ್ತು ಮತ್ತು ಕೆಲವು ಧಂಗೆ ಎಬ್ಬಿಸುವ ದಾಖಲೆಗಳು ಇವೆ ಎಂದು ಆರೋಪಿಸಿ ಹಾಗೂ ಅವುಗಳನ್ನು ಕೂಡಲೇ ವಶಕ್ಕೆ ಪಡೆಯಬೇಕು ಎಂದು ಸಂಸದರ ಕಚೇರಿಗೆ ನುಗ್ಗಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದರು.ಕಾಂಗ್ರೆಸ್ ಕಾರ್ಯಕರ್ತರು ಆಗಮಿಸುತ್ತಿದ್ದಂತೆಯೇ ಪೊಲೀಸರು ಇಡೀ ಜಲದರ್ಶಿನಿ ಅತಿಥಿಗೃಹಕ್ಕೆ ಬೀಗ ಜಡಿದು ಪೊಲೀಸ್ ಸರ್ಪಗವಾಲು ಹಾಕಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಮುಖಂಡರು ಸಂಸದ ಪ್ರತಾಪ್ ಸಿಂಹ ಅವರ ಕಚೇರಿಯಲ್ಲಿ ಸಂಸತ್ ಭವನಕ್ಕೆ ನುಗ್ಗಿದ ಯುವಕರ ಸಿಸಿಟಿವಿ ಫೂಟೇಜ್ ಇದೆ. ಆ ಯುವಕರ ಜೊತೆ ಸಂಸದ ಪ್ರತಾಪ್ ಸಿಂಹ ಮಾತುಕತೆ ನಡೆಸಿರುವ ದಾಖಲೆಗಳಿವೆ. ಜೊತೆಗೆ ದೇಶದಲ್ಲಿ ಅಶಾಂತಿ ಎಬ್ಬಿಸಲು ಇದನ್ನು ಲ್ಯಾಬ್ ಮಾಡಿಕೊಳ್ಳಲಾಗಿದೆ. ಹಾಗಾಗಿ ಅವರ ಕಚೇರಿಯನ್ನು ಸೀಜ್ ಮಾಡಬೇಕು ಎಂದು ಪೊಲೀಸರಿಗೆ ಐದು ನಿಮಿಷ ಕಾಲಾವಕಾಶ ನೀಡಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರನ್ನು ತಡೆದಿದ್ದರಿಂದ ರೊಚ್ಚಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗೆ ತೆರಳಿ ರಸ್ತೆ ತಡೆ ನಡೆಸಿದರು. ಇದರಿಂದ ಇಕ್ಕಟ್ಟಿಗೆ ಸಿಲುಕಿದ ಪೊಲೀಸರು ರಸ್ತೆಯಲ್ಲಿ ಪ್ರತಿಭಟಿಸದಂತೆ ಮನವಿ ಮಾಡಿ ಅಲ್ಲಿಂದ ಜಲದರ್ಶಿನಿ ಗೇಟ್ ಬಳಿಗೆ ಕರೆದುಕೊಂಡು ಬಂದರು.
ಈ ವೇಳೆ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್. ಮೂರ್ತಿ, ಮಾಜಿ ಮೇಯರ್ ಅಯೂಬ್ ಖಾನ್, ಕಾಂಗ್ರೆಸ್ ಮುಖಂಡರಾದ ಬಿ.ಎಂ. ರಾಮು, ಪ್ರೀತಂ ಗೌಡ ಪೊಲೀಸರ ಜೊತೆ ವಾಗ್ವಾದಕ್ಕಿಳಿದರು.
ಇದಕ್ಕೆ ಅವಕಾಶ ಕೊಡದ ಪೊಲೀಸರ ನಡೆ ಖಂಡಿಸಿ ಗೇಟಿನ ಮುಂದೆಯೇ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮುಂದುವರೆಸಿದರು.