ಪ್ರಿಯಾ ಕೆರ್ವಾಶೆ
ಡಾ. ಸರಜೂ ಕಾಟ್ಕರ್ ಉತ್ತರ ಕರ್ನಾಟಕದ ಮಹತ್ವದ ಸಾಹಿತಿಗಳಲ್ಲೊಬ್ಬರು. ಸ್ವತಂತ್ರ ರಚನೆಯ ಜೊತೆಗೆ ಅನುವಾದ ಸಾಹಿತ್ಯದಲ್ಲೂ ಸಾಕಷ್ಟು ಕೆಲಸ ಮಾಡಿದವರು. ಹಿರಿಯ ಪತ್ರಕರ್ತರೂ ಹೌದು. ಇತ್ತೀಚೆಗೆ ಕನ್ನಡ ಸಾಹಿತ್ಯ ಪರಿಷತ್‌ನ ನೃಪತುಂಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಹಿತ್ಯಯಾನ ಮತ್ತು ಸಮಕಾಲೀನ ಪ್ರಜ್ಞೆ ಕುರಿತು ಅವರ ಮಾತುಗಳು.
1. ನೃಪತುಂಗ ಸಾಹಿತ್ಯ ಪ್ರಶಸ್ತಿ ನಿಮಗೆ ಬಂದಿರುವ ಈ ಸಂದರ್ಭದಲ್ಲಿ, ನಿಮ್ಮ ಇಡೀ ಸಾಹಿತ್ಯಯಾನದ ಕಡೆಗೆ ಹಿಂದಿರುಗಿ ನೋಡಿದಾಗ ನಿಮಗೆ ಅತ್ಯಂತ ತೃಪ್ತಿ ನೀಡುವ ಕೃತಿ ಯಾವುದು? ಏಕೆ?
ಕಳೆದ 55 ವರ್ಷಗಳಿಂದ ಸಾಹಿತ್ಯ ಜಗತ್ತಿನಲ್ಲಿದ್ದೇನೆ. 1972ರಲ್ಲಿ ಸಾಹಿತ್ಯ ಕೃಷಿ ಆರಂಭಿಸಿದಾಗ ನನಗೆ 19ರ ಹರೆಯ. ‘ಬೆಂಕಿಬೇರು’ ಮೊದಲ ಸಂಕಲನ. ‘ಪೆಗಾಸಸ್’, ‘ಗಾಂಧಿ ಟು ಗೋದ್ರಾ’, ‘ಹೊಕ್ಕಳು ಮತ್ತು ಹೂವು’ ಸೇರಿ ಅನೇಕ ಕವನ ಸಂಕಲನಗಳು ಹೊರಬಂದಿವೆ. ‘ಮರಾಠಿ ದಲಿತ ಕಾವ್ಯ’, ‘ಅಟಲ್ ಬಿಹಾರಿ ವಾಜಪೇಯಿ ಕವಿತೆಗಳು’, ‘ಬಾಂಬ್ ವಿರೋಧಿ ಪಾಕಿಸ್ತಾನಿ ಕವಿತೆಗಳು’, ‘ತಸ್ಲಿಮಾ ನಜ್ರಿನ್ ಕವಿತೆಗಳು’ ಬೇರೆ ಭಾಷೆಯಿಂದ ಅನುವಾದಿಸಿದ ಕಾವ್ಯಗಳು. ಪಾಟೀಲ ಪುಟ್ಟಪ್ಪ ಅವರ ಆತ್ಮಕಥೆಯನ್ನು ಎರಡು ಭಾಗಗಳಲ್ಲಿ ನಿರೂಪಣೆ ಮಾಡಿದ್ದೇನೆ. ಭೀಮರಾವ್ ಗಸ್ತಿ ಅವರ ಆತ್ಮಕಥೆ ‘ವಾಲ್ಮೀಕಿ’ ಸೇರಿ ಬೇರೆ ಬೇರೆ ಭಾಷೆಗಳ ಆತ್ಮಕಥೆಗಳ ಅನುವಾದ ಮಾಡಿದ್ದೇನೆ. ವ್ಯಕ್ತಿಚಿತ್ರ, ಸಂಪಾದನೆ ಸೇರಿ ಸಾಹಿತ್ಯಜಗತ್ತಿನಲ್ಲಿ ಈವರೆಗೆ 80 ಕೃತಿಗಳು ಹೊರಬಂದಿವೆ. ಅಂದಿನ ನವ್ಯ ಸಾಹಿತ್ಯದಲ್ಲಿ ಅಡ್ಡಾಡಿದ್ದೇನೆ. ಹೊಸ ಹೊಸ ಸಾಹಿತ್ಯಿಕ ಪಲ್ಲಟಗಳಿಗೆ ತೆರೆದುಕೊಳ್ಳುತ್ತ ಸ್ಪಂದಿಸುತ್ತ ಬಂದಿದ್ದೇನೆ. ದಲಿತ ಚಳವಳಿಯ ಗಾಳಿಗೆ ತೆರೆದುಕೊಂಡು ಸ್ಪಂದನೆ ನೀಡುತ್ತ ಪುಸ್ತಕ ಬರೆದಿದ್ದೇನೆ. ಈ ಸಾಹಿತ್ಯಯಾನದಲ್ಲಿ ನಾನು ರಚಿಸಿದ ಪ್ರತೀ ಪುಸ್ತಕವೂ ನನಗೆ ಪ್ರಿಯವೇ. ಎಲ್ಲ ಕೃತಿಗಳೂ ಒಂದಿಲ್ಲೊಂದು ಬಗೆಯಲ್ಲಿ ತೃಪ್ತಿ ನೀಡಿವೆ. ಅದರಲ್ಲಿ ಒಂದನ್ನು ಆರಿಸುವುದು ಕಷ್ಟ.
2. ಬೆಳಗಾವಿ ನಿಮ್ಮ ಬರವಣಿಗೆಯನ್ನು ಎಷ್ಟು ಪ್ರಭಾವಿಸಿದೆ? ಬೆಳಗಾವಿಯ ನೆಲ, ಗಡಿ ಪ್ರದೇಶದ ಬದುಕು ಮತ್ತು ಅಲ್ಲಿನ ಬಹುಭಾಷಾ ವಾತಾವರಣ ನಿಮ್ಮ ಸಾಹಿತ್ಯದಲ್ಲಿ ಹೇಗೆ ಕಾಣಿಸಿಕೊಂಡಿದೆ?
ನನ್ನ ಹುಟ್ಟೂರು ಹುಬ್ಬಳ್ಳಿ. ಇಲ್ಲೇ ಓದಿ ಬೆಳೆದು ಪತ್ರಿಕೋದ್ಯಮ ಪ್ರವೇಶಿಸಿದ್ದೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಖಾದ್ರಿ ಶಾಮಣ್ಣ ವಲಯದಲ್ಲಿದ್ದೆ. ಮುಂದೆ ಬೆಳಗಾವಿಗೆ ಬಂದೆ. ಖಾದ್ರಿ ಶಾಮಣ್ಣ ಅವರು ‘ಕನ್ನಡಪ್ರಭ’ಕ್ಕೆ ಬಂದಾಗ ನಾನೂ ‘ಕನ್ನಡಪ್ರಭ’ ಪ್ರವೇಶಿಸಿದೆ. ಆದರೆ ಇಲ್ಲಿ ಸೇರಿದಾಗ ಅಪಾಯಿಂಟ್‌ಮೆಂಟ್ ಲೆಟರ್‌ನಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಸ್ಟಾಫ್ ಕರೆಸ್ಪಾಂಡೆಂಟ್ ಬೆಳಗಾವಿ ಅನ್ನುವ ಉಲ್ಲೇಖ ಇತ್ತು. ನಾನು ಗಾಬರಿಬಿದ್ದು ಇದನ್ನು ಖಾದ್ರಿ ಶಾಮಣ್ಣ ಅವರ ಗಮನಕ್ಕೆ ತಂದೆ. ನನಗೆ ಇಂಗ್ಲಿಷ್ ಬರವಣಿಗೆ ಅಭ್ಯಾಸ ಇರಲಿಲ್ಲ. ಶ್ಯಾಮಣ್ಣ ಅವರು, ‘ಅಭ್ಯಾಸ ಇಲ್ಲದಿದ್ದರೆ ಅಭ್ಯಾಸ ಮಾಡಿಕೊಳ್ಳಿ, ಬೆಳಗಾವಿಯಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಕನ್ನಡಪ್ರಭಕ್ಕೆ ವರದಿ ಮಾಡಬೇಕು’ ಅಂದರು. ಮೂರೇ ತಿಂಗಳಲ್ಲಿ ಇಂಗ್ಲಿಷ್ ಕಲಿತೆ. ವರದಿಗಾರನಾಗಿ, ಪ್ರಿನ್ಸಿಪಲ್ ಕರೆಸ್ಪಾಂಡೆಂಟ್ ಆಗಿ ಬೆಳಗಾವಿ ವಿಭಾಗದ ಮುಖ್ಯಸ್ಥನೂ ಆದೆ.
ಬೆಳಗಾವಿ ಅನ್ನೋದು ವರ್ಜಿನ್ ಲ್ಯಾಂಡ್
ಬೆಳಗಾವಿ ಅನ್ನೋದು ವರ್ಜಿನ್ ಲ್ಯಾಂಡ್. ಸಮೃದ್ಧ ಸಾಹಿತ್ಯಿಕ ಪರಿಸರದ ನಾಡು. ಕನ್ನಡ ಸಾಹಿತ್ಯ, ಮರಾಠಿ ಸಾಹಿತ್ಯಗಳೆರಡರ ಸಮ್ಮಿಲನ ಇಲ್ಲಾಗಿದೆ. ನಾನು ಯಾವಾಗಲೂ ಹೇಳೋದಿದೆ, ಕರ್ನಾಟಕ ಮಹಾರಾಷ್ಟ್ರ ಅಂದರೆ ವೈರುಧ್ಯ. ಅದೇ ಕನ್ನಡ ಮರಾಠಿ ಅಂದರೆ ಬಾಂಧವ್ಯ . ಅಷ್ಟಕ್ಕೂ ನನ್ನ ಮಾತೃಭಾಷೆ ಮರಾಠಿ. ನಾನು ಓದಿದ್ದು ಬರೆದದ್ದು ಕನ್ನಡದಲ್ಲಿ. ಒಮ್ಮೆ ಜಿ.ಎಸ್.ಶಿವರುದ್ರಪ್ಪ ಹಾಗೂ ಮರಾಠಿಯ ಕವಿ ಇಂದಿರಾ ಸಂತ್ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಕನ್ನಡಕ್ಕೆ ಎರಡು ಪ್ರಶಸ್ತಿ ಬಂದವು ಎಂದು ನಾವೆಲ್ಲ ಸಂಭ್ರಮಿಸಿದ್ದೆವು. ಕಾರಣ ಇಂದಿರಾ ಸಂತ್ ಅವರು ಮರಾಠಿಯಲ್ಲಿ ಬರೆಯುತ್ತಿದ್ದರೂ ಅವರಿದ್ದದ್ದು ಬೆಳಗಾವಿಯಲ್ಲಿ. ಲತಾ ಮಂಗೇಶ್ಕರ್ ಅವರು ಬೆಳಗಾವಿ ಹಾದಿಯಾಗಿ ಓಡಾಡುತ್ತಿದ್ದರು. ಈ ಮಣ್ಣಲ್ಲಿ ಸಂಗೀತದ ಘಮವೂ ಇದೆ. ಎಲ್ಲಕ್ಕಿಂತ ಛತ್ರಪತಿ ಶಿವಾಜಿ ಅವರ ಮೂಲವೇ ಕರ್ನಾಟಕ. ಮಹಾರಾಷ್ಟ್ರದ ಪಂಡರಾಪುರದಲ್ಲಿರುವುದು ನಮ್ಮ ಹಂಪಿಯ ವಿಜಯ ವಿಠಲ ದೇವಾಲಯದ ಮೂರ್ತಿ. ನಮ್ಮ ಸವದತ್ತಿ ಎಲ್ಲಮ್ಮ ದೇವಿ ಜಾತ್ರೆಗೆ ಮಹಾರಾಷ್ಟ್ರದವರೇ ಅಧಿಕ ಸಂಖ್ಯೆಯಲ್ಲಿ ಬರುತ್ತಾರೆ. ಹೀಗಿರುವಾಗ ಸಂಘರ್ಷ ಎಲ್ಲಿಂದ ಬಂತು.
ಈ ಎಲ್ಲ ಅಂಶಗಳೂ ನನ್ನ ಸಾಹಿತ್ಯದೊಳಗೆ ಹಾಸುಹೊಕ್ಕಾಗಿದೆ. ಇಲ್ಲಿನ ಭಾಷೆ, ಪರಿಸರ, ಸಂಸ್ಕೃತಿ ನನ್ನ ಮೇಲೆ, ನನ್ನ ಸಾಹಿತ್ಯ ರಚನೆಯ ಮೇಲೆ ಬೀರಿರುವ ಪ್ರಭಾವ ದೊಡ್ಡದು. 2011ರಲ್ಲಿ ಇಲ್ಲಿ ವಿಶ್ವ ಕನ್ನಡ ಸಮ್ಮೇಳನ ನಡೆದಾಗ ನನ್ನ ‘ಬೆಳಗಾವಿ ಸಂಸ್ಕೃತಿ’ ಕೃತಿಯನ್ನು ಐಶ್ವರ್ಯಾ ರೈ ಬಿಡುಗಡೆ ಮಾಡಿದ್ದರು. ಸುಮಾರು 500 ಪುಟಗಳ ಈ ಪುಸ್ತಕದಲ್ಲಿ ಬೆಳಗಾವಿಯ ಸಾಂಸ್ಕೃತಿಕ ವೈವಿಧ್ಯ, ಮಠಮಾನ್ಯಗಳು, ಪ್ರೇಕ್ಷಣೀಯ ಸ್ಥಳಗಳು ಸೇರಿ ಅನೇಕ ವಿವರಗಳನ್ನು ದಾಖಲಿಸಿದ್ದೆ.
3.ನೀವು ಪತ್ರಕರ್ತರಾಗಿಯೂ, ಸಾಹಿತಿಯಾಗಿಯೂ ದೀರ್ಘಕಾಲ ಕೆಲಸ ಮಾಡಿದ್ದೀರಿ. ಪತ್ರಿಕೋದ್ಯಮ ನಿಮ್ಮ ಸಾಹಿತ್ಯವನ್ನು ಬದಲಾಯಿಸಿತೇ? ಅಥವಾ ಸಾಹಿತ್ಯ ನಿಮ್ಮ ಪತ್ರಿಕೋದ್ಯಮವನ್ನು ಬದಲಾಯಿಸಿತೇ?
ಇಲ್ಲ. ಇವೆರಡರ ನಡುವೆ ಸ್ಪಷ್ಟ ಗೆರೆ ಎಳೆದುಬಿಟ್ಟಿದ್ದೇನೆ. ಆಫೀಸ್‌ನಲ್ಲಿದ್ದಾಗ ನಾನು ಪರ್ಫೆಕ್ಟ್ ಜರ್ನಲಿಸ್ಟ್. ಸಾಹಿತ್ಯ ರಚನೆಯಲ್ಲಿ ತೊಡಗಿದಾಗ ಪರಿಪೂರ್ಣ ಸಾಹಿತಿ. ಒಂದರ ಮೇಲೆ ಇನ್ನೊಂದರ ಪ್ರಭಾವ ಬರದಂತೆ ಎಚ್ಚರ ವಹಿಸಿದ್ದೇನೆ. ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷತೆಗೆ ಕರೆ ಬಂದಾಗ ಸ್ಪಷ್ಟವಾಗಿ ನಿರಾಕರಿಸಿದ್ದೆ. ಕಾರಣ ನಾನಿಲ್ಲಿ ಪತ್ರಿಕೋದ್ಯಮದ ಕೆಲಸ ಮಾಡುತ್ತಿರುವಾಗ ಅದನ್ನು ಬಿಟ್ಟು ಅಕಾಡೆಮಿ ಅಧ್ಯಕ್ಷ ಕೆಲಸ ಮಾಡುವುದು ಸಾಧ್ಯವಿಲ್ಲ ಎಂಬ ಕಾರಣಕ್ಕೆ. ಏನೇ ಆದರೂ ಪತ್ರಿಕೋದ್ಯಮಕ್ಕೆ ನನ್ನ ಮೊದಲ ಪ್ರಾಶಸ್ತ್ಯ. ಮೂರು ಸಲ ಸಾಹಿತ್ಯ ಅಕಾಡೆಮಿ ಸದಸ್ಯನಾಗಿ ಸೇವೆ ಸಲ್ಲಿಸಿದ್ದೇನೆ. ಕೇಂದ್ರ ಸಾಹಿತ್ಯ ಅಕಾಡೆಮಿಗೆ ಸಂಚಾಲಕನಾಗಿದ್ದೆ.
4. ಅನುವಾದವನ್ನು ನೀವು ಕೇವಲ ಒಂದು ಭಾಷೆಯ ಕೃತಿಯನ್ನು ಮತ್ತೊಂದು ಭಾಷೆಗೆ ತರುವ ಕೆಲಸವಾಗಿ ನೋಡುತ್ತೀರಾ, ಅಥವಾ ಅದು ಎರಡು ಸಂಸ್ಕೃತಿಗಳ ನಡುವಿನ ಸಂವಾದವೆಂದು ಭಾವಿಸುತ್ತೀರಾ?
ಅನುವಾದಕ್ಕೆ ಕೃತಿಯೊಂದನ್ನು ಆರಿಸುವ ಮೊದಲು ಅದನ್ನು ಸಂಪೂರ್ಣವಾಗಿ ಓದುತ್ತೇನೆ. ಈ ಥರದ ಮತ್ತೊಂದು ಕೃತಿ ಕನ್ನಡದಲ್ಲಿದೆಯಾ ಅಂತ ಪರಿಶೀಲಿಸುತ್ತೇನೆ. ಹೊಸತು ಅನಿಸಿದ್ದು, ಇದು ಕನ್ನಡಕ್ಕೆ ಮೌಲಿಕವಾದುದು ಅನಿಸಿದ್ದನ್ನು ಮಾತ್ರ ಅನುವಾದ ಮಾಡುತ್ತೇನೆ.
ಕನ್ನಡಪ್ರಭದಲ್ಲಿ ಹಿಂದೆ ‘ವರ್ಷದ ವ್ಯಕ್ತಿ’ ಎಂಬ ಅಪರೂಪದ ಪುರಸ್ಕಾರವನ್ನು 1 ಲಕ್ಷ ರು. ಮೊತ್ತದೊಂದಿಗೆ ನೀಡುತ್ತಿದ್ದರು. ಬೇಡ ಸಮುದಾಯ ಹಾಗೂ ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾದ ಸಮುದಾಯಗಳ ಕಲ್ಯಾಣಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಡಾ. ಭೀಮರಾವ್ ಗಸ್ತಿ ಅವರಿಗೆ ‘ಕನ್ನಡಪ್ರಭ ವರ್ಷದ ವ್ಯಕ್ತಿ ಪುರಸ್ಕಾರ’ ಲಭಿಸಿತ್ತು. ಅವರ ಆತ್ಮಕಥೆಯನ್ನು ‘ವಾಲ್ಮೀಕಿ’ ಅನ್ನುವ ಹೆಸರಿನಲ್ಲಿ ಕನ್ನಡಕ್ಕೆ ತಂದೆ. ಅದು ಕನ್ನಡಪ್ರಭದಲ್ಲಿ ಧಾರಾವಾಹಿಯಾಗಿ ಪ್ರಕಟವಾಗುತ್ತಿತ್ತು. ಮುಂದೆ ಭೀಮರಾವ್ ಅವರಿಗೆ ವರ್ಷದ ಕನ್ನಡಿಗ ಪ್ರಶಸ್ತಿ ಪ್ರದಾನ ಮಾಡಿದ ವೇದಿಕೆಯಲ್ಲೇ ಈ ಕೃತಿಯೂ ಬಿಡುಗಡೆಯಾಯಿತು.
ಉತ್ತಮ್ ಕಾಂಬ್ಲೆ ಅಂತ ಮಹಾರಾಷ್ಟ್ರದ ದಲಿತ ಲೇಖಕರು. ತಾಯಿಯನ್ನು ಕೇಂದ್ರವಾಗಿಟ್ಟು ಅವರು ಆತ್ಮಕಥೆ ಬರೆದರು. ಈ ಥರದ ಬರಹ ಕನ್ನಡಕ್ಕೆ ಹೊಸತು. ಅದನ್ನು ಕನ್ನಡಕ್ಕೆ ಅನುವಾದ ಮಾಡಿದೆ.
ಉತ್ತಮ ಕಾಂಬ್ಲೆ ಬೆಳಗಾವಿ ಗಡಿಯಲ್ಲಿ ಹುಟ್ಟಿದವರು. ಅವರ ಮಾತೃಭಾಷೆ ಕನ್ನಡ, ಕಲಿತಿದ್ದೆಲ್ಲ ಮರಾಠಿ. ಮಹಾರಾಷ್ಟ್ರಕ್ಕೆ ಹೋಗಿ ಅಲ್ಲಿ ಸಾಹಿತ್ಯದಲ್ಲಿ ದೊಡ್ಡ ಹೆಸರು ಮಾಡಿದವರು. ಅವರ ಕೃತಿಯನ್ನು ಕನ್ನಡಕ್ಕೆ ತಂದಾಗ ಇಲ್ಲಿನವರಿಗೆ ಶಾಕ್‌ನ ಥರ ಇತ್ತು. ಆ ಥರದ ಬರವಣಿಗೆ ಇಲ್ಲಿಗೆ ಹೊಸಬಗೆಯದಾಗಿತ್ತು.
ಭಾಲಚಂದ್ರ ಮುಣಗೇಕರ್ ಯೋಜನಾ ಆಯೋಗದ ಸದಸ್ಯರು. ಅವರ ಆತ್ಮಕಥೆ ಮರಾಠಿಯಲ್ಲಿತ್ತು. ‘ನಾನು ಹೀಗೆ ರೂಪುಗೊಂಡೆ’ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ತಂದಿದ್ದೆ. ಇದು ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಮಾಡಿದ ಕೆಲಸ. ದಲಿತ ಸಾಹಿತ್ಯದ ನೋವಿನ ತೀವ್ರತೆ ಇದರಲ್ಲಿದೆ.
ಮರಾಠಿ ದಲಿತ ಸಾಹಿತ್ಯದಲ್ಲಿ ತೀವ್ರತೆ ಹೆಚ್ಚು. ತಮ್ಮ ಅನುಭವ ಜಗತ್ತನ್ನು ಬಹಳ ತೀವ್ರವಾಗಿ ಅವರು ಜಗತ್ತಿನೆದುರು ಬಿಚ್ಚಿಡುತ್ತಾರೆ. ನಮ್ಮಲ್ಲಿ ಇನ್ನೂ ಮುಕ್ತವಾಗಿ ಹಂಚಿಕೊಳ್ಳಲು ಅಂಜಿಕೆ ಇದ್ದಂತೆ ಕಾಣುತ್ತದೆ. ಗಿರಡ್ಡಿ ಗೋವಿಂದ ರಾಜ್ ಅವರೂ ಇದನ್ನು ಬೊಟ್ಟು ಮಾಡಿದ್ದರು.
ನಾನು ದೆಹಲಿಗೆ ಹೋಗಿದ್ದಾಗ ಅಲ್ಲಿ ‘ಭಮ್ ಕೆ ಖಿಲಾಫ್ ಪಾಕಿಸ್ತಾನಿ ಕವಿತಾಯೇನ್’ ಪುಸ್ತಕ ಎಂಬ ಹಿಂದಿ ಕಣ್ಣಿಗೆ ಬಿತ್ತು. ನೋಡಿದರೆ ಪಾಕಿಸ್ತಾನಿ ಪ್ರಭುತ್ವದ ವಿರುದ್ಧ ಧ್ವನಿ ಎತ್ತಿದ್ದ 19 ಮಂದಿ ಕವಿಗಳ ಕವಿತೆಗಳಿದ್ದವು. ಆ ಧ್ವನಿ ಕನ್ನಡದಲ್ಲೂ ದಾಖಲಾಗಬೇಕು ಎಂದೆನಿಸಿ ‘ಬಾಂಬ್ ವಿರೋಧಿ ಪಾಕಿಸ್ತಾನಿ ಕವಿತೆಗಳು’ ಎಂಬುದಾಗಿ ಕನ್ನಡಕ್ಕೆ ತಂದೆ. ಅದರಲ್ಲಿ ಪ್ರಭುತ್ವವನ್ನು ನಡುಗಿಸುವ ಕವಿತೆಗಳಿದ್ದವು.
ಎಲ್ಲಕ್ಕಿಂತ ಹೆಚ್ಚಾಗಿ ಅಟಲ್ ಬಿಹಾರಿ ವಾಜಪೇಯಿ ಅವರ ಕವಿತೆಗಳನ್ನು ಕನ್ನಡಕ್ಕೆ ತಂದೆ. ಆಗ ಕೇಂದ್ರಸಚಿವರಾಗಿದ್ದ ಅನಂತ್ ಕುಮಾರ್ ಅವರು ವಾಜಪೇಯಿ ಅವರ ಮುಂದೆ ಇದನ್ನು ಓದಿದರಂತೆ. ಕನ್ನಡ ಬರದ ವಾಜಪೇಯಿ ಅವರಿಗೂ ಅದರ ಭಾವ ಅರ್ಥವಾಗಿದೆ. ವಾಜಪೇಯಿ ಅವರು ನನಗಾಗಿ 5 ಪ್ರತಿಗಳನ್ನು ಸೈನ್ ಮಾಡಿ ಕಳಿಸಿದ್ದರು.
5. ಇಂದಿನ ಕನ್ನಡ ಸಾಹಿತ್ಯದಲ್ಲಿ ನಿಮಗೆ ಗಮನ ಸೆಳೆಯುತ್ತಿರುವ ಬದಲಾವಣೆ ಯಾವುದು? ಇಂದಿನ ಯುವ ಬರಹಗಾರರಲ್ಲಿ ನಿಮಗೆ ಆಶಾವಾದ ಮೂಡಿಸುವ ಸಂಗತಿ ಯಾವುದು?
ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಕನ್ವೀನರ್ (ಸಂಚಾಲಕ) ಆಗಿ ಕೆಲಸ ಮಾಡಿದ್ದೇನೆ. ಅಲ್ಲಿ ಈ ಕಾಲದವರ ಅನೇಕ ಕೃತಿಗಳನ್ನು ಓದುತ್ತೇವೆ. ಯುವ ಪುರಸ್ಕಾರ ಅಂತಲೂ ಇದೆ. ಅದಕ್ಕೂ ನಾವು ಅನೇಕ ಪುಸ್ತಕ ನೋಡಿದ್ದೇವೆ. ಕೆಲವು ಪುಸ್ತಕಗಳು ಹಿಡಿದುಕೊಳ್ಳಲೂ ಸಾಧ್ಯವಿಲ್ಲ, ಅಷ್ಟು ಬಾಲಿಶವಾಗಿರುತ್ತವೆ. ಕೆಲವು ಬಹಳ ಚೆನ್ನಾಗಿದೆ. ಹೊಸಬರ ಕಲ್ಪನೆಗಳು, ಸೃಷ್ಟಿ ಅಚ್ಚರಿ ಮೂಡಿಸುತ್ತದೆ. ಉತ್ತಮ ಪುಸ್ತಕ, ಚೆನ್ನಾಗಿಲ್ಲದ ಕೃತಿ ಎಲ್ಲ ಕಾಲದಲ್ಲೂ ಬರುತ್ತದೆ. ಜೊಳ್ಳು ಅನಿಸುವ ಸಾಹಿತ್ಯಿಕ ಕೆಲಸಗಳು ಹಾರಿ ಹೋಗುತ್ತೆ. ಗಟ್ಟಿ ಕಾಳು ಉಳಿದೇ ಉಳಿಯುತ್ತದೆ. ಕೆಲವು ಸಂದರ್ಭಗಳಲ್ಲಿ ಯುವಕರಿಗೆ ತಾವು ದೊಡ್ಡ ಕವಿ, ತಮಗೆ ಆ ಪ್ರಶಸ್ತಿ ಬಂತು, ಈ ಗೌರವ ಬಂತು ಅನ್ನುವುದು ತಲೆಗೇರಿರುವಂತೆ ಕಾಣುತ್ತದೆ. ವಿನಯ, ಸಹೃದಯತೆ ಇಲ್ಲ. ಸಮಕಾಲೀನ ಲೇಖಕರ ಬಗೆಗಿನ ಅಸಹನೆ ಎದ್ದು ಕಾಣುತ್ತದೆ. ಅದು ಒಳ್ಳೆಯದಲ್ಲ. ಹಿಂದಾದರೆ ಹುಡುಕಿಕೊಂಡು ಹೋಗಿ ಜಗತ್ತಿಗೆ ನಾವೇ ನಮ್ಮ ಸಾಹಿತ್ಯ ತಲುಪಿಸಬೇಕಿತ್ತು. ಈಗಿನವರಿಗೆ ಇಡೀ ಜಗತ್ತೇ ಅವರ ಎದುರಿಗಿದೆ. ಕೆಲಸ ಸುಲಭವಾಗಿದೆ.
6. ಇಂದು ಜೆನ್ ಝೀ ಥರದ ಸಾಮಾಜಿಕ ಚಳವಳಿಗಳು ಇವೆ. ಇದು ಮುಂದಿನ ಸಾಹಿತ್ಯಕ್ಕೆ ದಿಕ್ಸೂಚಿ ಆಗಬಹುದಾ?
ಬರಲೇಬೇಕಲ್ಲಾ.. ಈಗ ಜೆನ್ ಜೀಗಳಿಂದ ವ್ಯಕ್ತವಾದದ್ದು ಒಂದು ಬಗೆಯ ಆಕ್ರೋಶ. ಬಹಳ ಕಾಲದಿಂದ ಮಡುಗಟ್ಟಿದ ಹಾಗಿದ್ದದ್ದು ಈಗ ಸ್ಫೋಟವಾಗಿದೆ. ಇಷ್ಟು ವರ್ಷಗಳ ಅವಧಿಯಲ್ಲಿ ಯಾರೂ ಇಷ್ಟು ದಿಟ್ಟವಾಗಿ ಮಾತನಾಡುತ್ತಿರಲಿಲ್ಲ, ಇವರು ಮಾತನಾಡಿದರು. ಆದರೆ ಬರೀ ಆಕ್ರೋಶ ಇದ್ದರಷ್ಟೇ ಸಾಕಾಗುವುದಿಲ್ಲ. ಒಂದು ಐಡಿಯಾಲಜಿಯೂ ಬೇಕಾಗುತ್ತದೆ. ಇದು ಮುಂದೆ ಒಂದು ಚಳವಳಿಯಾಗುತ್ತದೋ, ಒಂದು ಪಕ್ಷ ಆಗುತ್ತದೋ ಅನ್ನೋದು ಬೇಕು. ಭಾರತ ಬಹಳ ದೊಡ್ಡ ದೇಶ. ಇಲ್ಲಿರುವ ಸಂಕೀರ್ಣತೆ ಜಗತ್ತಿನ ಯಾವ ದೇಶದೊಳಗೂ ಇರಲು ಸಾಧ್ಯವಿಲ್ಲ. ಹೀಗಿರುವ ದೇಶ ಯುವಜನರ ಈ ಆಕ್ರೋಶವನ್ನು ಅರ್ಥ ಮಾಡಿಕೊಳ್ಳಬೇಕಲ್ಲಾ. ಈಗ ಹೊಮ್ಮಿರುವ ಆಕ್ರೋಶ ರಚನಾತ್ಮಕವಾಗಿ ಹೊರಹೊಮ್ಮಿದರೆ ಅವರೇ ಲೀಡರ್‌ಗಳಾಗುತ್ತಾರೆ. ಹಿಂದೆ ತುರ್ತು ಪರಿಸ್ಥಿತಿ ಸಮಯದಲ್ಲಿ ಹೀಗೇ ಆಗಿತ್ತಲ್ವಾ, ಆಗಲೂ ಯುವಕರೇ ಚಳವಳಿ ಮಾಡಿದ್ದು, ಸರ್ಕಾರವನ್ನೇ ಬದಲಿಸಿದರು. ಆಕ್ರೋಶದಲ್ಲಿರುವ ಶಕ್ತಿಯನ್ನು ತಡೆದು ನಿಲ್ಲಿಸಲಾಗದು. ಆದರೆ ಅದನ್ನು ರಚನಾತ್ಮಕವಾಗಿ ರೂಪುಗೊಳಿಸಬೇಕು.
7. ಕನ್ನಡ ಸಾಹಿತ್ಯದಲ್ಲಿ ಬೆಳಗಾವಿ ಮತ್ತು ಉತ್ತರ ಕರ್ನಾಟಕದ ಲೇಖಕರಿಗೆ ಸಿಗಬೇಕಾದಷ್ಟು ಗುರುತಿಸುವಿಕೆ ಸಿಗುತ್ತಿಲ್ಲ ಎಂಬ ಭಾವನೆ ನಿಮಗಿದೆಯೇ? ಇದ್ದರೆ ಅದಕ್ಕೆ ಕಾರಣವೇನು?
ಬರೀ ಬೆಳಗಾವಿ ಅಥವಾ ಹುಬ್ಬಳ್ಳಿ ಧಾರವಾಡ ಅಂತಲ್ಲ, ಇಡೀ ಉತ್ತರ ಕರ್ನಾಟಕ 7 ಜಿಲ್ಲೆಗಳು, ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಗಳು. ಅಂದರೆ ಕಲ್ಯಾಣ ಕರ್ನಾಟಕ ಅಂತೀವಿ, ಕಿತ್ತೂರು ಕರ್ನಾಟಕದ ಭಾಗಗಳು ಮೊದಲಿಂದಲೂ ಪ್ರಭುತ್ವದಲ್ಲಿ ಮಲತಾಯಿ ಧೋರಣೆ ಅನುಸರಿಸಿದ್ದನ್ನು ನೋಡಿದ್ದೇವೆ. ಸರ್ಕಾರದ ಅವಕಾಶಗಳು, ಯೋಜನೆಗಳು ಇಲ್ಲಿಯವರೆಗೆ ಬರುವುದೇ ಇಲ್ಲ. ಈ ಬಗ್ಗೆ ಬಹಳಷ್ಟು ಹೋರಾಟ ನಡೆದವು. ಪ್ರತ್ಯೇಕ ರಾಜ್ಯದ ಕೂಗೆದ್ದಿತು. ಇದರ ಹಿಂದಿದ್ದದ್ದು ಆಕ್ರೋಶದ ದನಿ.
ಇದಕ್ಕೆ ಕಾರಣ ಅಂದರೆ ಉತ್ತರ ಕರ್ನಾಟಕ ರಾಜಧಾನಿಯಿಂದ ದೂರವಿದೆ. ಹೀಗಾಗಿ ಇಲ್ಲಿಯವರ ಮೇಲೆ ಬೆಳಕು ಬೀಳುವುದಿಲ್ಲ, ಬಿದ್ದರೂ ಮಬ್ಬು ಮಬ್ಬಾದ ಬೆಳಕು. ಈಗದು ಸ್ವಲ್ಪ ಕಡಿಮೆ ಆಗ್ತಿದೆ. ಸಾಹಿತ್ಯದ ವಿಚಾರದಲ್ಲೂ ಹಾಗೇ ಆಗಿದೆ.
8. ನೀವು ಬಂಡಾಯ ದಲಿತ ಸಾಹಿತ್ಯದಲ್ಲಿ ಹೆಚ್ಚು ಕೃಷಿ ಮಾಡಿದಿರಿ. ಇಂದಿನ ದಲಿತ ಸಾಹಿತ್ಯದ ಶಕ್ತಿ ಅಥವಾ ದೌರ್ಬಲ್ಯಗಳನ್ನು ಗುರುತಿಸುವುದಾದರೆ, ಯಾವುದನ್ನು ಗುರುತಿಸುತ್ತೀರಿ?
ದಲಿತ ಸಾಹಿತ್ಯ ಹಿಂದೆ ನೊಂದವರ, ದಮನಿತರ ಆಕ್ರೋಶಕ್ಕೆ ಧ್ವನಿಯಾಗಿ ಬಂತು. ಇತ್ತೀಚೆಗೆ ದಲಿತ ಸಾಹಿತಿಗಳೆಲ್ಲ ಬಂಡಾಯದಲ್ಲಿ ಇದ್ದಾರೆ. ಅವರೆರಡೂ ಬೇರೆ ಬೇರೆ ಅಲ್ಲ. ಇದೇ ಪ್ರಗತಿಪರ ಸಾಹಿತ್ಯವೂ ಆಗಿದೆ.
9. ಪ್ರಖರ ದಲಿತ ಬರಹಗಾರರಿದ್ದಾರೆ. ಸಂಘಟನೆಗಳಿಲ್ಲ ಅಲ್ಲವೇ?
ಹಿಂದೆ ಆ ಅಗತ್ಯ ಇತ್ತು. ಹೋರಾಟಕ್ಕೆ ಮಾರ್ಗದರ್ಶಿ ಸೂತ್ರ ಬೇಕಿತ್ತು, ಪ್ರೇರಣೆ ನೀಡುವ ಕವಿತೆಗಳನ್ನು ಬರೆಯಬೇಕಾಗಿ ಬಂದು ಕವಿಗಳು ಹುಟ್ಟಿದರು. ಸಿದ್ದಲಿಂಗಯ್ಯ ಹುಟ್ಟಿದ್ದು ಹಾಗೇ. ಅವರೆಲ್ಲ ಹೋರಾಟಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡೇ ಬರೆಯುತ್ತ ಹೋದರು.
10. ಸಾಹಿತ್ಯದಲ್ಲಿ ವೈಚಾರಿಕತೆ ಮತ್ತು ಮಾನವೀಯತೆ ಇವೆರಡರಲ್ಲಿ ಯಾವುದಕ್ಕೆ ನೀವು ಹೆಚ್ಚು ಮಹತ್ವ ಕೊಡುತ್ತೀರಿ? ಅಥವಾ ಎರಡನ್ನೂ ಬೇರ್ಪಡಿಸಲಾಗುವುದಿಲ್ಲವೆಂದು ಭಾವಿಸುತ್ತೀರಾ?
ಸಾಹಿತ್ಯ ರಚನೆಗೆ ಮಾನವೀಯತೆ, ವೈಚಾರಿಕತೆ ಇವೆರಡೂ ಬೇಕು. ಅವೆರೆಡೂ ಇಲ್ಲದಿದ್ದರೆ ಅದು ಬರೀ ಅಕ್ಷರವಾಗುತ್ತದೆ. ಜೀವಂತಿಕೆ ಬರುವುದಿಲ್ಲ. ಕುವೆಂಪು ಬರಹದಲ್ಲಿ ವೈಚಾರಿಕತೆ, ಮಾನವೀಯತೆ ಎರಡೂ ಇದೆ.
11. ಇಷ್ಟು ದೀರ್ಘ ಸಾಹಿತ್ಯ ಮತ್ತು ಪತ್ರಿಕೋದ್ಯಮದ ಬದುಕಿನ ನಂತರವೂ ಇನ್ನೂ ಬರೆಯಬೇಕೆನಿಸುವ ವಿಷಯ ಯಾವುದು? ನಿಮ್ಮಿಂದ ಇನ್ನೂ ಬರಬೇಕಿರುವ ಕೃತಿ ಯಾವ ರೀತಿಯದ್ದಾಗಿರಬೇಕು ಎಂದು ನೀವು ಬಯಸುತ್ತೀರಿ?
ಸಾಕಷ್ಟು ಬರೆಯಬೇಕಿದೆ. ಬರವಣಿಗೆಯೂ ನಡೆಯುತ್ತಿದೆ. ಗತಿಸಿದ ನಾಯಕ ಜಾರ್ಜ್ ಫೆರ್ನಾಂಡಿಸ್ ಜೀವನದ ಸುತ್ತ ಬರೆದ ಕೃತಿಯೊಂದು ಈ ವರ್ಷದಲ್ಲೇ ಹೊರಬರಲಿದೆ. ಜೊತೆಗೆ ಬೇರೆ ಬೇರೆ ಕೃತಿಗಳೂ ಪ್ರಕಟಗೊಳ್ಳಲಿವೆ.
