ಸಾರಾಂಶ
ರಾಮನಗರ : ರೇವ್ ಪಾರ್ಟಿ ಮೇಲೆ ಪೊಲೀಸರು ದಾಳಿ ನಡೆಸಿದ್ದು, 130ಕ್ಕೂ ಹೆಚ್ಚು ಯುವಕ-ಯುವತಿಯರನ್ನು ವಶಕ್ಕೆ ಪಡೆದಿರುವ ಘಟನೆ ಬೆಂಗಳೂರು ದಕ್ಷಿಣ ಜಿಲ್ಲೆ ಕಗ್ಗಲೀಪುರದ ಅಡವಿ ಹೋಮ್ ಸ್ಟೇನಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.
ಕಗ್ಗಲೀಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಹೋಮ್ ಸ್ಟೇ ತೆರೆಯಲಾಗಿದ್ದು, ಅನುಮತಿ ಪಡೆಯದೇ ಪಾರ್ಟಿ ಆಯೋಜನೆ ಮಾಡುತ್ತಿದ್ದಾರೆ. ಇದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ತೊಂದರೆಯಾಗುತ್ತಿದೆ ಎಂಬುದಾಗಿ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಕಗ್ಗಲೀಪುರ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.
‘ಜೆನ್ ಜೀ’ ಎಂಬ ವಾಟ್ಸ್ ಆಪ್ ಗ್ರೂಪ್
ಈ ವಿದ್ಯಾರ್ಥಿಗಳು ‘ಜೆನ್ ಜೀ’ ಎಂಬ ವಾಟ್ಸ್ ಆಪ್ ಗ್ರೂಪ್ ಮಾಡಿಕೊಂಡಿದ್ದು, ಅದರಲ್ಲಿ ಅಪ್ ಡೇಟ್ ಮಾಡಿಕೊಂಡು ಪ್ರತಿ ಬಾರಿಯೂ ಪಾರ್ಟಿ ಆಯೋಜನೆ ಮಾಡುತ್ತಿದ್ದರು. ವಶಕ್ಕೆ ಪಡೆಯಲಾಗಿರುವ ಯುವಕ-ಯುವತಿಯರು ಬೆಂಗಳೂರು ಮೂಲದವರಾಗಿದ್ದು, 19-23 ವಯೋಮಾನದ ಕಾಲೇಜು ವಿದ್ಯಾರ್ಥಿಗಳು. ಪಾರ್ಟಿ ವೇಳೆ ಇವರು ಮಾದಕ ವಸ್ತು ಸೇವಿಸಿರುವ ಸಂಶಯ ಮೂಡಿದ್ದು, ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಇವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಅವರ ವಿಳಾಸ ಪಡೆದು ಕಳುಹಿಸಿದ್ದೇವೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಈ ಪಾರ್ಟಿಯಲ್ಲಿ ಸುಮಾರು 130ಕ್ಕೂ ಹೆಚ್ಚು ಜನ
ಈ ಪಾರ್ಟಿಯಲ್ಲಿ ಸುಮಾರು 130ಕ್ಕೂ ಹೆಚ್ಚು ಜನರಿದ್ದರು. ಮೂವರು ಅಪ್ರಾಪ್ತೆಯರೂ ಸೇರಿ 70 ಮಂದಿ ಯುವತಿಯರಿದ್ದರು. ಆ ಪೈಕಿ ಕೆಲವರು ಮಾದಕ ವ್ಯಸನಿಗಳಿದ್ದು, ಸ್ಥಳದಲ್ಲಿ ಕೆಲ ಇಂಜೆಕ್ಷನ್ ರೀತಿಯ ಮಾದಕ ವಸ್ತುಗಳು ಪತ್ತೆಯಾಗಿವೆ. ಅದೆಲ್ಲವನ್ನು ವಶಕ್ಕೆ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಿದ್ದೇವೆ. ನಾಲ್ವರು ಕಾರ್ಯಕ್ರಮ ಆಯೋಜಕರ ಮೇಲೆ ಪ್ರಕರಣ ದಾಖಲಿಸಿದ್ದೇವೆ ಎಂದು ಶ್ರೀನಿವಾಸ್ ಗೌಡ ತಿಳಿಸಿದರು.
;Resize=(690,390))


;Resize=(128,128))
;Resize=(128,128))