ಸಾರಾಂಶ
ಕೆ.ಆರ್.ಎಸ್. ಹಿನ್ನೀರು ಪ್ರದೇಶದ ಬಳಿಯ ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಮೈಸೂರು ಜಿಲ್ಲಾ ಪೊಲೀಸರು ಶನಿವಾರ ತಡರಾತ್ರಿ ದಾಳಿ ನಡೆಸಿದ್ದಾರೆ.
ಮೈಸೂರು : ಕೆ.ಆರ್.ಎಸ್. ಹಿನ್ನೀರು ಪ್ರದೇಶದ ಬಳಿಯ ಖಾಸಗಿ ಜಮೀನಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಮೈಸೂರು ಜಿಲ್ಲಾ ಪೊಲೀಸರು ಶನಿವಾರ ತಡರಾತ್ರಿ ದಾಳಿ ನಡೆಸಿದ್ದಾರೆ.
ಈ ಪಾರ್ಟಿಯಲ್ಲಿದ್ದ 8 ಮಂದಿ ಯುವತಿಯರು ಸೇರಿದಂತೆ 54 ಮಂದಿಯನ್ನು ವಶಕ್ಕೆ ಪಡೆದಿದ್ದು, ಸ್ಥಳದಲ್ಲಿದ್ದ 30 ಹೆಚ್ಚು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ತಾಲೂಕು ಇಲವಾಲ ಹೋಬಳಿಯ ಮೀನಾಕ್ಷಿಪುರ ಬಳಿಯ ಯಡಹಳ್ಳಿ ಗ್ರಾಮದಲ್ಲಿ ಶನಿವಾರ ರಾತ್ರಿ ರೇವ್ ಪಾರ್ಟಿ ಆರಂಭವಾಗಿತ್ತು. ಕಾವೇರಿ ಹಿನ್ನೀರಿನ ಬಳಿಯ ಜಮೀನಿನಲ್ಲಿ ವ್ಯಕ್ತಿಯೊಬ್ಬರು ಈ ಪಾರ್ಟಿಯನ್ನು ಆಯೋಜಿಸಿ, ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು, ಬೆಂಗಳೂರು ಸೇರಿ ತಮಿಳುನಾಡಿನಿಂದ 20ಕ್ಕೂ ಹೆಚ್ಚು ಜೋಡಿಗಳು ಪಾರ್ಟಿಗೆ ನೋಂದಾಯಿಸಿಕೊಂಡಿದ್ದರು.
ಅದರಂತೆ ಶನಿವಾರ ರಾತ್ರಿ 30ಕ್ಕೂ ಹೆಚ್ಚು ಕಾರುಗಳಲ್ಲಿ ಜೋಡಿಗಳು ಪಾರ್ಟಿಗೆ ಆಗಮಿಸಿದ್ದು, ಪಾರ್ಟಿಯಲ್ಲಿ ಡಿಜೆಯನ್ನು ಜೋರಾಗಿ ಹಾಕಿ ಅಬ್ಬರದಲ್ಲಿ ಪಾರ್ಟಿ ನಡೆಸಲಾಗುತ್ತಿತ್ತು. ಈ ಬಗ್ಗೆ ಅಕ್ಕಪಕ್ಕದ ಜಮೀನಿನವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಮೈಸೂರು ಎಸ್ಪಿ ಎನ್. ವಿಷ್ಣುವರ್ಧನ್ ನೇತೃತ್ವದಲ್ಲಿ ಹೆಚ್ಚುವರಿ ಎಸ್ಪಿ ನಾಗೇಶ್, ಡಿವೈಎಸ್ಪಿ ಕರೀಂ ರಾವತರ್, ಇಲವಾಲ ಠಾಣೆಯ ಎಸ್ಐ ಮಂಜುನಾಥ್ ನಾಯಕ್ ಮತ್ತು ಸಿಬ್ಬಂದಿ ದಾಳಿ ನಡೆಸಿ, ಪಾರ್ಟಿಯಲ್ಲಿ ಪಾಲ್ಗೊಂಡಿದ್ದ 54 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಸ್ಥಳದಲ್ಲಿ ಸಿಕ್ಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರೊಂದಿಗೆ ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪಾರ್ಟಿಯಲ್ಲಿದ್ದ ಯುವಕ, ಯುವತಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಠಾಣೆಯಲ್ಲಿ ವೈದ್ಯರ ತಂಡವನ್ನು ಕರೆಸಿ ಎಲ್ಲರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು, ದ್ರವ್ಯ ಸಿಕ್ಕಿಲ್ಲ: ಎಸ್ಪಿ
ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು ಮಾದಕ ದ್ರವ್ಯ ಸಿಕ್ಕಿಲ್ಲ. ಪಾರ್ಟಿ ನಡೆಸುವುದಕ್ಕೆ ಯಾವುದೇ ಅನುಮತಿ ಪಡೆದಿಲ್ಲ ಎಂದು ಮೈಸೂರು ಎಸ್ಪಿ ಎನ್. ವಿಷ್ಣುವರ್ಧನ್ ಸ್ಪಷ್ಟಪಡಿಸಿದ್ದಾರೆ.
ಪಾರ್ಟಿ ನಡೆದ ಜಾಗದಲ್ಲಿ ಮದ್ಯ, ಸಿಗರೇಟ್ ಇತ್ತು. ಅಲ್ಲಿದ್ದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ಎಫ್ಎಸ್ಎಲ್ ತಂಡ ಸಹ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ವರದಿ ಬಂದ ನಂತರ ಈ ಬಗ್ಗೆ ಸ್ಪಷ್ಟತೆ ಸಿಗಲಿದೆ. ಕಾರ್ಯಕ್ರಮದ ಆಯೋಜಕರು, ಭೂ ಮಾಲೀಕರ ವಿರುದ್ಧ ಕ್ರಮ ಜರುಗಿಸಲಾಗುವುದು. ವಿದೇಶಿಗರು ಭಾಗಿಯಾಗಿರುವ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂದರು.
ಮೈಸೂರಿನಲ್ಲಿ ರೇವ್ ಪಾರ್ಟಿ ಬಗ್ಗೆ ಜಿಲ್ಲಾ ಎಸ್ಪಿ ನನಗೆ ಮಾಹಿತಿ ನೀಡಿದ್ದಾರೆ. ಅದರ ಬಗ್ಗೆ ಕಾನೂನಿನ ಪ್ರಕಾರ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ.