ಕೆ.ಆರ್.ಪೇಟೆ ತಾಲೂಕು ಕಚೇರಿಯಲ್ಲಿ ಈ ಹಿಂದೆ ಕರ್ತವ್ಯದಲ್ಲಿದ್ದ ಆರ್.ಆರ್.ಟಿ ಶಿರಸ್ತೇದಾರ್ ಬಿ.ಆರ್.ರವಿ ಭ್ರಷ್ಟನಾಗಿ ಸುಮಾರು 241 ಕಡತಗಳನ್ನು ವಿಲೇವಾರಿ ಮಾಡದೆ ತನ್ನಲ್ಲಿಯೇ ಬಾಕಿ ಉಳಿಸಿಕೊಂಡಿದ್ದರಿಂದ ಮೇಲಾಧಿಕಾರಿಗಳು ಸೇವೆಯಿಂದ ಅಮಾನತ್ತು ಮಾಡಿದ್ದರೂ ಕೆಎಟಿ ಆದೇಶದ ಮೇರೆಗೆ ಮತ್ತೆ ಮುಂದುವರಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ದಲಿತರ ಭೂಮಿ ಸಂರಕ್ಷಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಪಟ್ಟಣದ ತಾಲೂಕು ಕಚೇರಿ ಎದುರು ತಮಟೆ ಬಡಿದು ಧರಣಿ ಸತ್ಯಾಗ್ರಹ ನಡೆಸಿದರು.ರೈತಸಂಘ, ತಾಲೂಕು ದಲಿತ ಸಂಘಟನೆಗಳು, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಮುಖಂಡರು ಸೇರಿದಂತೆ ವಿವಿಧ ಸಂಘಟನೆಗಳ ಒಕ್ಕೂಟದ ನೂರಾರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಹಿರಿಯ ರೈತ ಮುಖಂಡ ಎಂ.ವಿ.ರಾಜೇಗೌಡ ಮಾತನಾಡಿ, ತಾಲೂಕು ಕಚೇರಿಯಲ್ಲಿ ಈ ಹಿಂದೆ ಕರ್ತವ್ಯದಲ್ಲಿದ್ದ ಆರ್.ಆರ್.ಟಿ ಶಿರಸ್ತೇದಾರ್ ಬಿ.ಆರ್.ರವಿ ಭ್ರಷ್ಟನಾಗಿ ಸುಮಾರು 241 ಕಡತಗಳನ್ನು ವಿಲೇವಾರಿ ಮಾಡದೆ ತನ್ನಲ್ಲಿಯೇ ಬಾಕಿ ಉಳಿಸಿಕೊಂಡಿದ್ದರಿಂದ ಮೇಲಾಧಿಕಾರಿಗಳು ಸೇವೆಯಿಂದ ಅಮಾನತ್ತು ಮಾಡಿದ್ದರೂ ಕೆಎಟಿ ಆದೇಶದ ಮೇರೆಗೆ ಮತ್ತೆ ಮುಂದುವರಿಸಲಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ತದನಂತರ ಸಾರ್ವಜನಿಕರ ವ್ಯಾಪಕ ದೂರುಗಳ ಹಿನ್ನೆಲೆಯಲ್ಲಿ ಎಸಿ ಶ್ರೀನಿವಾಸ್ ಸರ್ಕಾರಕ್ಕೆ ಸಲ್ಲಿಸಿ ವರದಿ ಆಧಾರದ ಮೇಲೆ ಬಿ.ಆರ್.ರವಿಯನ್ನು ವರ್ಗಾವಣೆ ಮಾಡಲಾಗಿತ್ತು. ಕಡ್ಡಾಯ ನಿರೀಕ್ಷಣಾ ಅವಧಿಯಲ್ಲಿರುವ ರವಿ ಮತ್ತೆ ಕೆಎಟಿ ಮೂಲಕ ತಾಲೂಕು ಕಚೇರಿಗೆ ಮರಳುತ್ತಿದ್ದಾರೆ. ಕಡತ ವಿಲೇವಾರಿಗೆ ರೈತರಿಂದ ಹಣಕ್ಕೆ ಪೀಡಿಸಿ ಕಿರುಕುಳ ನೀಡುತ್ತಿದ್ದವರನ್ನು ಮತ್ತೆ ಕೆ.ಆರ್.ಪೇಟೆಗೆ ನಿಯೋಜಿಸಬಾರದು. ಒಂದು ವೇಳೆ ನಿಯೋಜಿಸಿದರೆ ರೈತರು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಜಿಲ್ಲಾ ರೈತಸಂಘದ ಉಪಾಧ್ಯಕ್ಷ ಮರುವನಹಳ್ಳಿ ಶಂಕರ್ ಮಾತನಾಡಿ, ಶಂಕರ್ ಪೌತಿ ಖಾತೆ ಮಾಡುವಲ್ಲಿ ಗ್ರಾಮ ಲೆಕ್ಕಿಗರು ಸಾಕಷ್ಟು ಭ್ರಷ್ಟಾಚಾರ ನಡೆಸುತ್ತಿದ್ದಾರೆ. ನೈಜ ವಾರಸುದಾರರ ಕುಟುಂಬದ ಸದಸ್ಯರ ಹೆಸರಿಗೆ ಪೌತಿ ಖಾತೆ ಮಾಡದೆ ರಕ್ತ ಸಂಬಂಧಿಕರೇ ಅಲ್ಲದ ಇತರರ ಹೆಸರಿಗೆ ಪೌತಿ ಖಾತೆ ಮಾಡಿ ರೈತರು ಕೋರ್ಟ್ ಕಚೇರಿ ಅಲೆಯುವಂತೆ ಮಾಡುತ್ತಿದ್ದಾರೆ ಎಂದು ದೂರಿದರು.

ತಾಲೂಕಿನ ವಿವಿಧ ಗ್ರಾಮ ಲೆಕ್ಕಿಗರು ಮತ್ತು ಶಿರಸ್ತೇದಾರರು ಪರಸ್ಪರ ಶಾಮೀಲಾಗಿ ಯಾರದೋ ಆಸ್ತಿಯನ್ನು ಮತ್ತ್ಯಾರದೂ ಹೆಸರಿಗೆ ಪೌತಿ ಖಾತೆ ಮಾಡಿ ರೈತ ಕುಟುಂಬಗಳನ್ನು ಕೋರ್ಟ್ ಕಚೇರಿಗೆ ಸುತ್ತಾಡುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಪುರಸಭೆ ಮಾಜಿ ಸದಸ್ಯ ಡಿ.ಪ್ರೇಂಕುಮಾರ್ ಮಾತನಾಡಿ, ಪಟ್ಟಣದ ಅಂಬೇಡ್ಕರ್ ಮತ್ತು ಬಾಬು ಜಗಜೀವನ ರಾಂ ಭವನದ ಕಾಮಗಾರಿ ವಿಳಂಭವಾಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಭವನಗಳನ್ನು ಲೋಕಾರ್ಪಣೆಗೊಳಿಸಬೇಕು ಎಂದು ಒತ್ತಾಯಿಸಿದರು.

ಕಳೆದ ಒಂದು ವರ್ಷದಿಂದ ಪರಿಶಿಷ್ಟ ಜಾತಿ, ವರ್ಗದ ಕುಂದುಕೊರತೆಗಳ ಸಭೆ ನಡೆದಿಲ್ಲ. ತಕ್ಷಣ ಸಭೆ ಕರೆಯಬೇಕು. ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ಮುಚ್ಚಿರುವ ರೈತರ ರಸ್ತೆಯನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಡೀಸಿ ಡಾ.ಕುಮಾರ ಮಾತನಾಡಿ, ಆರ್.ಆರ್.ಟಿ ಶಿರಸ್ತೇದಾರ್ ಬಿ.ಆರ್.ರವಿ ಅವರು ತಂದಿರುವ ಕೆ.ಎ.ಟಿ ಆದೇಶವನ್ನು ನಾವು ಪಾಲಿಸಬೇಕು. ನಿಮ್ಮ ಮನವಿಯನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮಕ್ಕೆ ಮನವಿ ಮಾಡುತ್ತೇನೆ. ಇತರೆ ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಈ ವೇಳೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಪ್ರತಿಭಟನೆಯಲ್ಲಿ ತಾಲೂಕು ರೈತಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ, ರೈತ ಮುಖಂಡರಾದ ಎಲ್.ಬಿ.ಜಗದೀಶ್, ಲತಾ ಕೇಶವ, ಕರೋಟಿ ತಮ್ಮಯ್ಯ, ಹಿರೀಕಳಲೆ ಬಸವರಾಜು, ದಲಿತ ಸಂಘಟನೆಗಳ ಮುಖಂಡರಾದ ಕಿಕ್ಕೇರಿ ರಾಜಣ್ಣ, ಕೃಷ್ಣ, ಮಾಂಬಳ್ಳಿ ಜಯರಾಂ, ಹರಿಹರಪುರ ನರಸಿಂಹ, ಬಂಡೀಹೊಳೆ ರಮೇಶ್, ಮಹೇಂದ್ರ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.