ಹತ್ತಿ ಮಿಲ್‌ನಲ್ಲಿ ಅಕ್ಕಿ, ಜೋಳ ಪತ್ತೆ ಪ್ರಕರಣಗಳೂ ಸಿಐಡಿಗೆ

KannadaprabhaNewsNetwork |  
Published : Oct 25, 2025, 01:00 AM ISTUpdated : Oct 25, 2025, 05:11 AM IST
Annabhagya

ಸಾರಾಂಶ

ಜಿಲ್ಲೆಯ ಹತ್ತಿ ಮಿಲ್‌ ಗೋದಾಮಿನಲ್ಲಿ ಅ.14ರಂದು ಪತ್ತೆಯಾದ ಅನ್ನಭಾಗ್ಯ ಅಕ್ಕಿ, ಸರ್ಕಾರದ ಜೋಳ ಹಾಗೂ ಶಾಲಾ ಮಕ್ಕಳ ಕ್ಷೀರಭಾಗ್ಯ ಹಾಲಿನ ಪೌಡರ್‌ ಅಕ್ರಮ ದಾಸ್ತಾನು ಪ್ರಕರಣಗಳನ್ನೂ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ.

 ಆನಂದ್ ಎಂ.ಸೌದಿ

  ಯಾದಗಿರಿ :  ಜಿಲ್ಲೆಯ ಹತ್ತಿ ಮಿಲ್‌ ಗೋದಾಮಿನಲ್ಲಿ ಅ.14ರಂದು ಪತ್ತೆಯಾದ ಅನ್ನಭಾಗ್ಯ ಅಕ್ಕಿ, ಸರ್ಕಾರದ ಜೋಳ ಹಾಗೂ ಶಾಲಾ ಮಕ್ಕಳ ಕ್ಷೀರಭಾಗ್ಯ ಹಾಲಿನ ಪೌಡರ್‌ ಅಕ್ರಮ ದಾಸ್ತಾನು ಪ್ರಕರಣಗಳನ್ನೂ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ.

ಸೆ.8ರಂದು ಜಿಲ್ಲೆಯ ಗುರುಮಠಕಲ್‌ನ ಎರಡು ರೈಸ್‌ಮಿಲ್‌ಗಳಲ್ಲಿ ಪತ್ತೆಯಾದ 3,985 ಕ್ವಿಂಟಲ್‌ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು ಪ್ರಕರಣದ ತನಿಖೆಯನ್ನು ಸರ್ಕಾರ ಈಗಾಗಲೇ ಸಿಐಡಿಗೆ ವಹಿಸಿದೆ. ಹತ್ತಿ ಮಿಲ್‌ನಲ್ಲಿ ಅಕ್ಕಿ, ಜೋಳ, ಹಾಲಿನ ಪುಡಿ ಪತ್ತೆ ಬಗ್ಗೆ ಶ್ರೀಲಕ್ಷ್ಮೀ ತಿಮ್ಮಪ್ಪ ಕಾಟನ್‌ ಜಿನ್ನಿಂಗ್‌ ಮತ್ತು ಪ್ರೆಸ್ಸಿಂಗ್‌ ಹಾಗೂ ವೇರ್ ಹೌಸಿನ ಅಯ್ಯಪ್ಪ ತಂದೆ ನರೇಂದ್ರ ರಾಠೋಡ್‌ ವಿರುದ್ಧ ಗುರುಮಠಕಲ್‌ ಠಾಣೆಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳು ದಾಖಲಾಗಿದ್ದವು. ಶುಕ್ರವಾರ (ಅ.24) ಸರ್ಕಾರ ಈ ಪ್ರಕರಣಗಳನ್ನೂ ಸಹ ಸಿಐಡಿ ತನಿಖೆಗೆ ವಹಿಸಿ, ಆದೇಶಿಸಿದೆ. ಅ.14ರಂದು ದಾಖಲಾದ ಈ ಮೂರೂ ಪ್ರಕರಣಗಳನ್ನು ಸಹ ಸಿಐಡಿ ತನಿಖೆಗೆ ವಹಿಸುವ ಬಗ್ಗೆ ‘ಕನ್ನಡಪ್ರಭ’ ವರದಿ ಮಾಡಿತ್ತು.

ಇದೇ ಕಾಟನ್ ಜಿನ್ನಿಂಗ್ ಮಿಲ್ ಮಾಲೀಕತ್ವದ ಶ್ರೀ ಲಕ್ಷ್ಮಿ ಬಾಲಾಜಿ ಹಾಗೂ ಶ್ರೀ ಲಕ್ಷ್ಮಿ ವೆಂಕಟೇಶ್ವರ ಇಂಡಸ್ಟ್ರೀಸ್‌ನ ರೈಸ್ ಮಿಲ್‌ಗಳಲ್ಲಿ ಸೆಪ್ಟಂಬರ್ 8ರಂದು ₹1.21 ಕೋಟಿ ಮೌಲ್ಯದ 3,985 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ ಮಾಡಿ ಪ್ರಕರಣ ದಾಖಲಿಸಲಾಗಿತ್ತು. ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ, ಆದೇಶಿಸಿತ್ತು. ಗುರುಮಠಕಲ್‌ನ ‘ಅನ್ನಭಾಗ್ಯ ಅಕ್ಕಿ ಫಾರಿನ್‌’ಗೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖೆ ನಡೆಸುತ್ತಿರುವ ಸಿಐಡಿ ತಂಡದ ಅಧಿಕಾರಿಗಳು ಅ.14ರಂದು ಸ್ಥಳ ಮಹಜರು ನಡೆಸುವ ವೇಳೆ, ಅಲ್ಲಿನ ವ್ಹೇ ಬ್ರಿಡ್ಜ್‌ (ತೂಕ ಯಂತ್ರ) ಸಮೀಪದ ಹತ್ತಿ ಮಿಲ್‌ನ ಸಹಜವಾಗಿ ತೆರಳಿದ್ದಾಗ, ಅಲ್ಲಿನ ಗೋದಾಮುಗಳಲ್ಲಿ ಪಡಿತರ ಆಹಾರಧಾನ್ಯಗಳು ಕಂಡಿದ್ದವು. ತಕ್ಷಣವೇ ಈ ಬಗ್ಗೆ ಜಿಲ್ಲಾಡಳಿತಕ್ಕೆ ಸಿಐಡಿ ತಂಡ ತಿಳಿಸಿತ್ತು. ಹತ್ತಿ ಮಿಲ್ಲಲ್ಲಿ ತನಿಖೆಗೆ ಯಾರೂ ಬರುವುದಿಲ್ಲ ಎಂದು ಅಂದಾಜಿಸಿ, ಅಲ್ಲಿನ ಗೋದಾಮುಗಳಲ್ಲಿ ಪಡಿತರ ಆಹಾರ ಧಾನ್ಯಗಳ ಅಡಗಿಸಿ ಇಟ್ಟಿರುವುದು ಪತ್ತೆಯಾಗಿತ್ತು.

*ಏನು ಪ್ರಕರಣಗಳು?

ಪ್ರಕರಣ ಸಂಖ್ಯೆ: 188/2025: ಗುರುಮಠಕಲ್‌ ಆಹಾರ ನಿರೀಕ್ಷಕ ಅನ್ವರ್‌ ಹುಸೇನ್‌ ನೀಡಿದ ಪ್ರಕರಣವೊಂದರಲ್ಲಿ ₹27.96 ಲಕ್ಷ ಮೌಲ್ಯದ ಸರ್ಕಾರದ ವಿವಿಧ ಯೋಜನೆಯ ಜೋಳ, ₹15.27 ಲಕ್ಷ ಮೌಲ್ಯದ 441 ಕ್ವಿಂಟಾಲ್‌ ಅಕ್ಕಿ, ₹54 ಸಾವಿರ ಮೌಲ್ಯದ 30 ಕ್ವಿಂಟಾಲ್‌ ಅಕ್ಕಿ ನುಚ್ಚು ಜಪ್ತಿ ಮಾಡಲಾಗಿತ್ತು.

ಪ್ರಕರಣ ಸಂಖ್ಯೆ 189/2025: ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶರಣಬಸಪ್ಪ ಬೆಳಗುಂಪಿ ನೀಡಿದ ದೂರಿನ ಮೇರೆಗೆ, ಅ.18ರಂದು ಎರಡನೇ ಪ್ರಕರಣ ದಾಖಲಿಸಲಾಗಿದೆ. 500 ಗ್ರಾಂ ತೂಕದ, ₹32,740 ಮೌಲ್ಯದ, 96 ಕೇಜಿ 192 ಹಾಲಿನ ಪುಡಿಯ ಪ್ಯಾಕೇಟ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು.

ಪ್ರಕರಣ ಸಂಖ್ಯೆ 190/2025: ಪಿಎಂ ಪೋಷಣ್‌ ಅಭಿಯಾನದ ಸಹಾಯಕ ನಿರ್ದೇಶಕ ಚೆನ್ನಪ್ಪ ಕಲ್ಮನಿ ನೀಡಿದ ಅ.18ರ ದೂರಿನ ಮೇರೆಗೆ ಮೂರನೇ ಪ್ರಕರಣ ದಾಖಲಾಗಿದೆ. 1 ಕೇಜಿ ತೂಕದ ₹75,757 ಮೌಲ್ಯದ 222 ಹಾಲಿನ ಪ್ಯಾಕೇಟ್‌ಗಳನ್ನು ಜಪ್ತಿ ಮಾಡಲಾಗಿತ್ತು.

 ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ!

ಯಾದಗಿರಿಯ ಹತ್ತಿ ಮಿಲ್‌ನಲ್ಲಿ ಅನ್ನಭಾಗ್ಯ ಅಕ್ಕಿ, ಪಡಿತರ ಜೋಳ ಹಾಗೂ ಕ್ಷೀರಭಾಗ್ಯ ಹಾಲಿನಪುಡಿ ಪತ್ತೆಯಾಗಿರುವ ಬಗ್ಗೆ ‘ಕನ್ನಡಪ್ರಭ’ ಮಾತ್ರ ವಿಶೇಷ ವರದಿ ಪ್ರಕಟಿಸಿತ್ತು.

PREV
Read more Articles on

Recommended Stories

ತುರ್ತು ಚಿಕಿತ್ಸೆ : ಗೋಲ್ಡನ್ ಅವರ್ ಕುರಿತು ನೀವು ತಿಳಿದಿರಬೇಕಾದ ವಿಚಾರಗಳು
ಫ್ಯೂಜನ್‌ ಸೀರೆಯ ಕಲರ್‌ಫುಲ್‌ ವೈಬ್‌ - ವಾರ್ಡ್‌ರೋಬ್‌ನಲ್ಲಿ ಚಿತ್ರ ವಿಚಿತ್ರ ಕಾಂಬಿನೇಶನ್‌