ನೀವು ಉದ್ಧಾರ ಆಗಬೇಕಾ? ಹಾಗಿದ್ದರೆ, ಮೊದಲು ತಲೆ ಬಾಚ್ಕಳಿ, ಆಮೇಲೆ ಸೀದಾ ಕೊಪ್ಪಳಕ್ಕೆ ಹೋಗಿ ರಾಯರಡ್ಡಿ ಧರ್ಮ ಸೇರಿಕೊಳ್ಳಿ! ಇದು ಓಪನ್ ಆಫರ್! ಈಗ ಕರ್ನಾಟಕದಲ್ಲೆಲ್ಲ ಧರ್ಮ ದಂಗಲ್ ನಡೀತಿದೆಯಲ್ಲ, ಲಿಂಗಾಯತ ಧರ್ಮ, ವೀರಶೈವ ಧರ್ಮ ಅಂತೆಲ್ಲ ಸ್ಯಾನೆ ಕಿತಾಪತಿ ಫಜೀತಿ ಇರೋ ಕಾಲ ಅಲ್ವ ಇದು. ಈ ಕಾಲದಲ್ಲಿ 16 ಬಾರಿ ಬಜೆಟ್ ಮಂಡಿಸಿರೋ ನಮ್ ಸಿಎಂ ಸಿದ್ದು ಸಾಹೇಬರಿಗೆ ಆರ್ಥಿಕ ಸಲಹೆ ನೀಡೋ ಬಸವರಾಜ ರಾಯರಡ್ಡಿ ಅದಾರಲ್ಲ ಅವರು ಪಟಾಪಟ್ ಅಂತ ಧರ್ಮವೊಂದನ್ನು ಸ್ಥಾಪಿಸಲಿದ್ದಾರೆ.
ಮೊನ್ನೆ ಕೊಪ್ಪಳದಲ್ಲಿ ಸಾಹೇಬರು ಪತ್ರಿಕಾಗೋಷ್ಠಿ ಮಾಡಿದರು. ಆಗ ಪತ್ರಕರ್ತರು ಜಾತಿ ಗಣತಿ ವೇಳೆ ಲಿಂಗಾಯತ ಧರ್ಮ ಬರೆಸುವ ಕುರಿತು ಕೇಳಿದ ಪ್ರಶ್ನೆ ಕೇಳಿದರು. ಆಗ ರಡ್ಡಿ ಸಾಹೇಬರು, ಲಿಂಗಾಯತ ಧರ್ಮವೇ ಅಲ್ಲ ಅದು ಶರಣ ಚಳವಳಿ ಎಂದರು. ವ್ಹಾವ್ ಎಂತಾ ಒಳನೋಟ ಎಂದುಕೊಂಡ ಪತ್ರಕರ್ತರ ಅಚ್ಚರಿ ಇಮ್ಮಡಿಗೊಳಿಸುವಂತೆ ಹಿಂದೂ ಧರ್ಮ, ಮುಸ್ಲಿಂ ಧರ್ಮ, ಜೈನ್ ಧರ್ಮ ಹೀಗೆ ಧರ್ಮಗಳ ಬಗ್ಗೆ ವ್ಯಾಖ್ಯಾನ ನೀಡಿದರು. ವಾರೇ ವ್ಹಾವ್ ಎಂದು ಕೆಲ ಪತ್ರಕರ್ತರು ಹೇಳುತ್ತಿದ್ದಂತೆಯೇ. ಆ ಧರ್ಮ ಎಲ್ಲಾ ಬಿಡ್ರಿ, ನಾನೊಂದು ಧರ್ಮ ಸ್ಥಾಪಿಸುತ್ತೇನೆ. ನೀವು ಅನುಯಾಯಿ ಆಗುತ್ತಿರಾ ಎಂದು ಬ್ಯಾಂಡ್ ಬಜಾಯಿಸಿಬಿಟ್ಟರು.
ಪತ್ರಕರ್ತರಿಗೆ ಮಾತೇ ಹೊರಡಲಿಲ್ಲ. ಪಕ್ಕದಲ್ಲೇ ಇದ್ದ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಅಮರಿಕೊಂಡ ರಡ್ಡಿ ಸಾಹೇಬರು ನೀನು ಸೇರ್ತಿಯನಪ್ಪಾ ನಮ್ಮ ಧರ್ಮಕ್ಕ... ಎಂದರು. ಅದಕ್ಕೆ ಹಿಟ್ನಾಳ್ ಅವರು, ಸರ್, ಮೊದಲು ಕ್ಯಾಬಿನೆಟ್ ಸೇರೋಣ. ಆಮೇಲೆ ಯಾವ ಧರ್ಮ ಬೇಕಾಧರೂ ಸೇರೋಣ ಅಂತ ಹೇಳಲಿಲ್ಲ ನೋಡಿ!
ಶಾಲೆಗೆ ರಜೆ, ಮಳೆಗೂ ರಜೆ
ಉತ್ತರ ಕನ್ನಡದಲ್ಲಿ ಪ್ರತಿ ಮಳೆಗಾಲದಲ್ಲೂ ಭಾರಿ ಮಳೆ ಸಾಮಾನ್ಯ. ಮಳೆಯಾಗುತ್ತಿದ್ದಂತೆ ಶಾಲೆಗಳಿಗೆ ರಜೆ ನೀಡಲೇಬೇಕು. ತುಂಬಿ ಹರಿಯುವ ಹಳ್ಳಕೊಳ್ಳಗಳು, ಪ್ರವಾಹ... ಹೀಗಾಗಿ ಮಕ್ಕಳು ಶಾಲೆಗೆ ಹೋಗುವುದು ಅಪಾಯಕರವೇ ಸೈ. ಆದರೆ ಬಹುತೇಕ ಸಂದರ್ಭಗಳಲ್ಲಿ ಶಾಲೆಗೆ ರಜೆ ನೀಡಿದಾಗೆಲ್ಲ ಮಳೆಯಾಗುವುದೇ ಇಲ್ಲ. ಬೀಳುತ್ತಿರುವ ಮಳೆ, ಪ್ರವಾಹ ಪರಿಸ್ಥಿತಿ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆ ಅವಲಂಬಿಸಿ ರಜೆ ನೀಡಲಾಗುತ್ತದೆ. ಕಳೆದ ಮಳೆಗಾಲದುದ್ದಕ್ಕೂ 7-8 ದಿನಗಳ ಕಾಲ ಶಾಲೆಗಳಿಗೆ ರಜೆ ನೀಡಲಾಗಿತ್ತು. ವಿಪರ್ಯಾಸ ಎಂದರೆ ರಜೆ ನೀಡಿದ ದಿನ ಮಳೆಗೂ ರಜೆ. ರಜೆ ಕೊಟ್ಟಿಲ್ಲ ಎಂದರೆ ಧೋ ಎಂದು ಮಳೆ ಸುರಿಯುತ್ತದೆ. ಯಾಕೆ ರಜೆ ಕೊಟ್ಟಿಲ್ಲ ಎಂದು ಪಾಲಕರು ಹಿಡಿಶಾಪ ಹಾಕುತ್ತಾರೆ.
ಇನ್ನು ರಜೆ ನೀಡಿದಾಗೆಲ್ಲ ಮಳೆಯೇ ಆಗುವುದಿಲ್ಲ. ಎರಡು ದಿನಗಳ ಕಾಲ ಅವ್ಯಾಹತವಾಗಿ ಮಳೆ ಸುರಿಯುತ್ತಿದ್ದರೂ ಶಾಲೆಗಳಿಗೆ ರಜೆ ನೀಡಿದರೆ ಮಳೆ ಬಂದ್ ಆಗುತ್ತದೆ. ಇದೇ ಕಾರಣಕ್ಕಾಗಿ ಜಿಲ್ಲಾಧಿಕಾರಿ ಮರುದಿನ ರಜೆ ನೀಡುವ ಬದಲು ಸ್ಥಳೀಯವಾಗಿ ರಜೆ ಬಗ್ಗೆ ನಿರ್ಧರಿಸಿ ರಜೆ ನೀಡುವ ಅಧಿಕಾರವನ್ನು ಆಯಾ ತಹಸೀಲ್ದಾರರು, ಬಿಇಓಗೆ ನೀಡುವಂತಾಯಿತು. ರಜೆ ಹಾಗೂ ಮಳೆಯ ಆಟದಿಂದಾಗಿ ಕಾರವಾರದ ಜನತೆಗೆ ನಿಸರ್ಗದ ರಹಸ್ಯವೊಂದು ಮನದಟ್ಟಾಗಿದೆ. ಅದು- ವಿಪರೀತವಾಗಿ ಸುರಿದು ಕಾಡುವ ಮಳೆ ನಿಲ್ಲಬೇಕೇ? ಹಾಗಿದ್ದರೆ, ಶಾಲೆಗೆ ರಜೆ ಕೊಡಿ.
ಅತ್ತೆ ಬೈದ್ರೆ ಅಡ್ಜಸ್ಟ್ ಮಾಡ್ಕೋ
ಅದೊಂದು ಕೌಟುಂಬಿಕ ಕಲಹದ ಕೇಸು. ವಿಚಾರಣೆ ನಡೆದಿತ್ತು. ಪತಿ ಹಾಗೂ ಅತ್ತೆಯ ಕಾಟದಿಂದ ಮುಕ್ತಿ ಪಡೆಯಲು ಮಹಿಳೆಯೊಬ್ಬರು ಈ ಕೇಸು ಹಾಕಿದ್ದರು. ಮಹಿಳೆಯ ಪರ ವಕೀಲ ಫುಲ್ ಜೋಶ್‌ನಲ್ಲಿ ವಾದ ಮಂಡಿಸುತ್ತಿದ್ದರು. ‘ಸ್ವಾಮಿ.. ನನ್ನ ಕಕ್ಷಿದಾರರಿಗೆ ಪತಿ ಮತ್ತು ಆಕೆಯ ಅತ್ತೆ ಸಿಕ್ಕಾಪಟ್ಟೆ ಕಿರುಕುಳ ನೀಡುತ್ತಿದ್ದಾರೆ. ಅತ್ತೆ ಚಿಕ್ಕ-ಚಿಕ್ಕ ವಿಚಾರಕ್ಕೂ ಬೈಯ್ಯುತ್ತಾರೆ. ಪತಿಯೊಂದಿಗೆ ಒಟ್ಟಾಗಿರಲು ಬಿಡಲ್ಲ. ಮನೆಯಲ್ಲಿ ಅತ್ತೆಯದ್ದೇ ಪಾರುಪತ್ಯ. ತಾಯಿ ಮಾತನ್ನು ಪತಿ ಮೀರುವುದಿಲ್ಲ. ಪತಿ ತನ್ನ ತಾಯಿಯೊಂದಿಗೆ ಸೇರಿ ಪತ್ನಿಯನ್ನು ಸದಾ ನಿಂದಿಸುತ್ತಾರೆ...’ ಹೀಗೆ ಮುಂದುವರೆದಿದ್ದ ವಾದವನ್ನು ತುಂಡರಿಸಿದ ನ್ಯಾಯಾಧೀಶರು, ಅತ್ತೆಗೆ ವಯಸ್ಸಾಗಿದೆಯೇ? ಎಂದು ಕೇಳಿದರು.
ಹೌದು ಎಂದು ಉತ್ತರಿಸಿದ ಮಹಿಳೆ ಪರ ವಕೀಲ, ವಯಸ್ಸು ಎಷ್ಟು ಎಂಬ ಪ್ರಶ್ನೆಗೆ ‘70’ ಎಂಬ ಉತ್ತರ ಕೊಟ್ಟರು. ಆಗ ನ್ಯಾಯಾಧೀಶರು, ‘ಅತ್ತೆ ದೇಶಕ್ಕೆ ಸ್ವತಂತ್ರ ಬಂದಾಗ ಹುಟ್ಟಿದ್ದಾರೆ ಎಂದರಲ್ಲದೆ, ವಯಸ್ಸು ಆಗಿರೋ ಅತ್ತೆ ಬೈಯ್ಯೋದು ಮಾಮೂಲು. ಅತ್ತೆ ಮಾತನ್ನು ತಲೆಗೆ ಹಾಕಿಕೊಂಡರೆ ಸಂಸಾರ ಮಾಡೋಕೆ ಆಗುತ್ತೇನ್ರಿ. ಅತ್ತೆ ಮಾತಿಗೆ ಅಡ್ಜಸ್ಟ್ ಮಾಡಿಕೊಂಡು ಹೋಗಬೇಕು. ಪತಿಯೊಂದಿಗೆ ರಾಜಿ ಸಂಧಾನ ಮಾಡಿಕೊಂಡು, ಸಂಸಾರ ಸಾಗಿಸಬೇಕು. ಇಲ್ಲವಾದರೆ ಕಲಹಕ್ಕೆ ಕೊನೆಯೇ ಇಲ್ಲ. ನೋಡಿ... ಪತಿಯ ಜೊತೆಗೂಡಿ ದಾಂಪತ್ಯ ಮುಂದುವರಿಸಿಕೊಂಡು ಹೋಗಬೇಕು. ವಿಚ್ಛೇದನ ಪಡೆದರೆ ಮುಂದಿನ ಜೀವನ ಚೆನ್ನಾಗಿರೋದಿಲ್ಲ’ ಎಂದು ಸಲಹೆ ನೀಡಿದರು.
ಅದಕ್ಕೆ ಏನು ಹೇಳಬೋಕೋ ತಿಳಿಯದ ಮಹಿಳೆ ಪರ ವಕೀಲರು, ‘ಸ್ವಾಮಿ, ಈಗ ನಾನು ಏನೂ ಹೇಳಲಾಗದು. ನಿಮ್ಮ ಸಲಹೆಯನ್ನು ನಮ್ಮ ಕಕ್ಷಿದಾರರಿಗೆ (ಪತ್ನಿ) ತಿಳಿಸುವೆ. ಅವರ ನಿಲುವು ತಿಳಿದು ಹೇಳುವೆ. ವಿಚಾರಣೆ ಕೆಲ ದಿನ ಮುಂದೂಡಬೇಕು’ ಎಂದು ಕೋರಿದರು. ನ್ಯಾಯಾಧೀಶರು ವಿಚಾರಣೆ ಮುಂದೂಡಿ, ‘ಮುಂದಿನ ಬಾರಿ ದಂಪತಿ ಒಂದುಗೂಡಲು ಪರಿಹಾರ ಸೂತ್ರ ಸಿದ್ಧಪಡಿಸಿಕೊಂಡು ಬನ್ನಿ’ ಎಂದು ಸೂಚಿಸಿದರು.
-ಸೋಮರಡ್ಡಿ ಅಳವಂಡಿ
-ವಸಂತಕುಮಾರ್ ಕತಗಾಲ
-ವೆಂಕಟೇಶ್ ಕಲಿಪಿ