ವಿಜ್ಞಾನ, ವೈದ್ಯಕೀಯ ಸೇರಿ ಹಲವು ಕ್ಷೇತ್ರ ಹಾಗೂ ವಿಷಯಗಳ ಬಗ್ಗೆ ಈವರೆಗೆ ಕನ್ನಡದಲ್ಲಿ ಯಾವುದೇ ಸೂಕ್ತ ಪುಸ್ತಕಗಳೇ ಇಲ್ಲ. ಕನ್ನಡ ಸಾಹಿತ್ಯದ ಅಧ್ಯಯನ ಕೈಗೊಂಡು ವಿಷಯ ತಜ್ಞರ ನೆರವಿನಲ್ಲಿ ಕೃತಿಗಳು ರಚನೆಯಾಗುವ ಅಗತ್ಯವಿದೆ ಎಂದು ಕನ್ನಡದ ರಸಪ್ರಶ್ನೆ ಮಾಸ್ಟರ್ ಡಾ.ನಾ ಸೋಮೇಶ್ವರ್ ಪ್ರತಿಪಾದಿಸಿದರು.
ಬೆಂಗಳೂರು : ವಿಜ್ಞಾನ, ವೈದ್ಯಕೀಯ ಸೇರಿ ಹಲವು ಕ್ಷೇತ್ರ ಹಾಗೂ ವಿಷಯಗಳ ಬಗ್ಗೆ ಈವರೆಗೆ ಕನ್ನಡದಲ್ಲಿ ಯಾವುದೇ ಸೂಕ್ತ ಪುಸ್ತಕಗಳೇ ಇಲ್ಲ. ಈ ಸಂಬಂಧ ಕನ್ನಡ ಸಾಹಿತ್ಯದ ಅಧ್ಯಯನ ಕೈಗೊಂಡು ವಿಷಯ ತಜ್ಞರ ನೆರವಿನಲ್ಲಿ ಕೃತಿಗಳು ರಚನೆಯಾಗುವ ಅಗತ್ಯವಿದೆ ಎಂದು ಕನ್ನಡದ ರಸಪ್ರಶ್ನೆ ಮಾಸ್ಟರ್ ಡಾ.ನಾ ಸೋಮೇಶ್ವರ್ ಪ್ರತಿಪಾದಿಸಿದರು.
ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ಆಯೋಜಿಸಿದ್ದ ಪುಸ್ತಕಗಳ ಅನಾವರಣ ಮತ್ತು ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿ, ಹಲವು ವಿಚಾರ, ಕ್ಷೇತ್ರಗಳ ಕುರಿತು ಈವರೆಗೆ ಕನ್ನಡದಲ್ಲಿ ಪುಸ್ತಕಗಳು ಬಂದಿಲ್ಲ. ಪುಸ್ತಕ ಪ್ರಕಾಶನ ಸಂಸ್ಥೆಗಳು ಕನ್ನಡ ಸಾಹಿತ್ಯದ ಅಧ್ಯಯನ ನಡೆಸಿ, ಅವಲೋಕಿಸಿ ಯಾವ್ಯಾವ ವಿಷಯಗಳ ಕುರಿತು ಕನ್ನಡದಲ್ಲಿ ಪುಸ್ತಕ ರಚನೆ ಆಗಬೇಕು ಎಂಬ ಪಟ್ಟಿ ರೂಪಿಸಬೇಕು. ಮುಂದುವರಿದು ವಿಷಯ ತಜ್ಞರು, ಸಾಹಿತಿ, ಸಂಪಾದಕರ ಸಹಯೋಗದಲ್ಲಿ ಅಂತಹ ಕೃತಿ ರಚಿಸಲು ಹೆಜ್ಜೆಯಿಡಬೇಕು ಎಂದರು.
ಹಿರಿಯ ಕವಿ ಬಿ.ಆರ್.ಲಕ್ಷ್ಮಣರಾವ್ ಮಾತನಾಡಿ, 1971ರಲ್ಲಿ ನನ್ನ ಮೊದಲ ಕೃತಿ ಬಿಡುಗಡೆ ಆಗಿತ್ತು. ಅಕ್ಷರ ಪ್ರಕಾಶನದಿಂದ ಕೃತಿ ಬಿಡುಗಡೆ ಆಗುವುದು ಆಗ ಪ್ರತಿಷ್ಠೆಯ ವಿಚಾರವಾಗಿತ್ತು. ಆಗಿನ ಪ್ರಕಾಶನ ಸಂಸ್ಥೆಗಳು ನವ್ಯ ಚಳವಳಿಯ ಜತೆಗೆ ಗುರುತಿಸಿಕೊಂಡಿದ್ದವು. ಆದರೆ ಇವತ್ತು ಸಾಕಷ್ಟು ಪುಸ್ತಕ ಪ್ರಕಾಶನ ಇದ್ದರೂ ಎಲ್ಲ ಗುಣಮಟ್ಟದ ಪುಸ್ತಕಗಳೇ ಬರುತ್ತಿವೆ ಎಂದು ಹೇಳಲಾಗಲ್ಲ, ಅದಕ್ಕೆ ಹಲವು ಕಾರಣಗಳೂ ಇವೆ ಎಂದು ಹೇಳಿದರು.
ಕನ್ನಡಪ್ರಭ ಪುರವಣಿ ಸಂಪಾದಕ ಜೋಗಿ ( ಗಿರೀಶ್ ರಾವ್ ಹತ್ವಾರ್) ಮಾತನಾಡಿ, ಸಾಹಿತ್ಯವನ್ನು ಓದುವವರು, ಪ್ರೀತಿಸುವವರು ಇನ್ನೊಬ್ಬರ ಅಭಿಪ್ರಾಯದ ಗುಲಾಮ ಆಗಿರಬಾರದು. ಸ್ವಂತಿಕೆ ಬೆಳೆಸಿಕೊಂಡು ಕೃತಿಗಳನ್ನು ಓದಿ, ತಾವೇ ಮೌಲ್ಯಮಾಪನ ಮಾಡಿ ಪುಸ್ತಕ ಹೇಗಿದೆ ಎಂಬುದನ್ನು ನಿರ್ಧರಿಸಬೇಕು. ಪುಸ್ತಕ ಓದುವುದರ ಬಗ್ಗೆ ಮಾತನಾಡಬೇಕೆ ವಿನಃ ಪುಸ್ತಕದ ಅಭಿಪ್ರಾಯದ ಬಗ್ಗೆ ಮಾತನಾಡುವುದು ಸೂಕ್ತವಲ್ಲ ಎಂದು ಹೇಳಿದರು.
ಸಂಸ್ಥೆಯ ಎಸ್.ಎಲ್.ಅಶ್ವಥ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಪದ್ಮರಾಜ ದಂಡಾವತಿ ಅವರ ‘ಉಳಿದಾವ ನೆನಪು’ ಕೃತಿಗೆ ಕ್ರಿಯೇಟಿವ್ ಪುಸ್ತಕ ಪ್ರಶಸ್ತಿ-2024 ಪ್ರದಾನ ಮಾಡಲಾಯಿತು. ಹಳೆಮನೆ ರಾಜಶೇಖರ ಪುಸ್ತಕ ಪರಿಚಯ ಮಾಡಿದರು.
ಬಿಡುಗಡೆಯಾದ ಪುಸ್ತಕಗಳು
ಕೆ. ಸತ್ಯನಾರಾಯಣ ವಿರಚಿತ ‘ಅಂಪೈರ್ ಮೇಡಂ’, ನರೇಂದ್ರ ಪೈರವರ ‘ಕಾವ್ಯ ಸಂಭವ’, ಡಾ.ವಿ.ಎ.ಲಕ್ಷ್ಮಣ ಅವರ ‘ಕವಲುಗುಡ್ಡ’, ಡಿ.ಎಸ್.ಚೌಗಲೆ ಅವರ ‘ವಾರಸಾ’, ನರೇಂದ್ರ ರೈ ದೇರ್ಲ ಅವರ ‘ಹಸಿರು ಅಧ್ಯಾತ್ಮ’ ಕೃತಿಗಳು ಲೋಕಾರ್ಪಣೆ ಆದವು. ಬಾಳಾ ಸಾಹೇಬ್ ಲೋಕಾಪುರ ಅವರ ''''ದೇಹಿ’ ಕೃತಿಯ ಮುಖಪುಟವನ್ನೂ ಅನಾವರಣ ಮಾಡಲಾಯಿತು.