ಬೆಂಗಳೂರು : ಸಾಮಾಜಿಕ ಜಾಲತಾಣಗಳಲ್ಲಿ ಮಹಾತ್ಮ ಗಾಂಧೀಜಿ ಅವರ ಕುರಿತು ಅಪಪ್ರಚಾರ ನಡೆಸಲಾಗುತ್ತಿದ್ದು, ಸತ್ಯ ತಿರುಚುವ ಕೆಲಸ ನಡೆಯುತ್ತಿದೆ ಎಂದು ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಗಾಂಧಿ ಸ್ಮಾರಕ ನಿಧಿಯಿಂದ ಗಾಂಧಿ ಭವನದಲ್ಲಿ ಗುರುವಾರ ಆಯೋಜಿಸಿದ್ದ ‘ಗಾಂಧಿ ಸಿನಿಮಾ ಕ್ಲಬ್’ ಉದ್ಘಾಟನೆ, ಸಿನಿಮಾ ಪ್ರದರ್ಶನ ಮತ್ತು ಸಂವಾದ ಸರಣಿಗೆ ಚಾಲನೆ ನೀಡಿ ಮಾತನಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಗಾಂಧೀಜಿ ಕುರಿತು ಮಾಡುತ್ತಿರುವ ಅಪಪ್ರಚಾರದಿಂದ ವಿದ್ಯಾರ್ಥಿಗಳ ಮೇಲೆ ನಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ. ಗಾಂಧೀಜಿ ಬಗ್ಗೆ ಅರಿತುಕೊಳ್ಳಬೇಕೆಂದರೆ ಅದು ಸಿನಿಮಾಗಳ ಮೂಲಕ ಮಾತ್ರ ಸಾಧ್ಯ. ಗಾಂಧೀಜಿಯವರ ಜೀವನ, ಆದರ್ಶ ಮತ್ತು ವ್ಯಕ್ತಿತ್ವವನ್ನು ಸಿನಿಮಾಗಳಲ್ಲಿ ಉತ್ತಮವಾಗಿ ಚಿತ್ರಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಾಂಧೀಜಿ ಅವರು ಒಬ್ಬ ವ್ಯಕ್ತಿಯಲ್ಲ, ಆದರ್ಶ. ಗಾಂಧೀಜಿ ತತ್ವಾದರ್ಶಗಳ ಭಂಡಾರವಾಗಿದ್ದು ಅವರ ತತ್ವ, ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಶತ್ರುಗಳನ್ನು ಯುದ್ಧ ಅಥವಾ ವೀರತನದಿಂದ ಜಯಿಸದೇ ಮಾತೃ ಹೃದಯದಿಂದ ಗೆಲ್ಲಬಹುದು ಎಂಬುದನ್ನು ಗಾಂಧೀಜಿ ತೋರಿಸಿಕೊಟ್ಟಿದ್ದಾರೆ. ಅವರ ಅಹಿಂಸಾ ಮಾರ್ಗ ಎಂದಿಗೂ ಪ್ರಸ್ತುತದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ರಿಚರ್ಡ್ ಆಟಿನ್ ಬರೋ ನಿರ್ದೇಶನದ ‘ಗಾಂಧಿ’ ಸಿನಿಮಾ ಪ್ರದರ್ಶಿಸಲಾಯಿತು. ಗಾಂಧಿವಾದಿ ಇ.ಪಿ.ಮೆನನ್, ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ, ಕಾರ್ಯಾಧ್ಯಕ್ಷ ಎನ್.ಆರ್.ವಿಶುಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ ಮತ್ತಿತರರು ಉಪಸ್ಥಿತರಿದ್ದರುಬೆಂಗಳೂರಿನಲ್ಲ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಗಾಂಧಿ ಸಿನಿಮಾ ಕ್ಲಬ್ ಉದ್ಘಾಟಿಸಿದರು. ಗಾಂಧಿವಾದಿ ಇ.ಪಿ.ಮೆನನ್, ನಿಧಿಯ ಅಧ್ಯಕ್ಷ ವೂಡೇ ಪಿ.ಕೃಷ್ಣ, ಕಾರ್ಯಾಧ್ಯಕ್ಷ ಎನ್.ಆರ್.ವಿಶುಕುಮಾರ್, ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ ಮತ್ತಿತರರು ಉಪಸ್ಥಿತರಿದ್ದರು.