ಒಂದು ಜಿಲ್ಲೆಗೆ ಎರಡು ಸೆಂಟರ್‌ಗಿಂತ ಹೆಚ್ಚಿನ ಭೇಟಿಗೆ ನಿರ್ಬಂಧ । ಭೇಟಿ ಸಮಯ ಕಡ್ಡಾಯವಾಗಿ ಎಂಪ್ಯಾನಲ್ ಮಾಡಿಸಲು ಸೂಚನೆ
ವಿಶೇಷ ವರದಿಕನ್ನಡಪ್ರಭ ವಾರ್ತೆ ಮಂಡ್ಯ
ಖಾಸಗಿ ನರ್ಸಿಂಗ್ ಹೋಂ ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸುವ ಸ್ಕ್ಯಾನಿಂಗ್ ವೈದ್ಯರು ಒಂದು ಜಿಲ್ಲೆಯಲ್ಲಿ ಎರಡು ಸೆಂಟರ್‌ಗಳಿಗಿಂತ ಹೆಚ್ಚು ಸೆಂಟರ್‌ಗಳಿಗೆ ಭೇಟಿ ನೀಡುವಂತಿಲ್ಲ ಎಂಬ ನಿರ್ಬಂಧ ವಿಧಿಸುವುದರೊಂದಿಗೆ ಮೂಗುದಾರ ಹಾಕಲಾಗಿದೆ.ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆಯ ನಿಯಮ ೩(೩)ರಲ್ಲಿ ತಿಳಿಸಿರುವಂತೆ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸ್ಕ್ಯಾನಿಂಗ್ ಕಾರ್ಯನಿರ್ವಹಿಸುತ್ತಿರುವ ವೈದ್ಯರು ಆಯಾ ಜಿಲ್ಲೆಯ ಎರಡು ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಮಾತ್ರ ಭೇಟಿ ಮಾಡಲು ಹಾಗೂ ಭೇಟಿಯ ಸಮಯವನ್ನು ಕಡ್ಡಾಯವಾಗಿ ಎಂಪ್ಯಾನಲ್ ಮಾಡಿಸಬೇಕು ಎಂದು ರಾಜ್ಯ ಸಕ್ಷಮ ಪ್ರಾಧಿಕಾರ (ಪಿಸಿ ಅಂಡ್ ಪಿಎನ್‌ಡಿಟಿ ಕಾಯ್ದೆ)ದ ಯೋಜನಾ ನಿರ್ದೇಶಕರು (ಆರ್‌ಸಿಏಚ್) ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ರೆಡಿಯಾಲಜಿಸ್ಟ್, ಸ್ತ್ರೀರೋಗ ತಜ್ಞರು, ಸೋನಾಲಜಿಸ್ಟ್ ಮತ್ತು ಕಾರ್ಡಿಯಾಲಜಿಸ್ಟ್‌ಗಳಿಗೆ ಸ್ಕ್ಯಾನಿಂಗ್ ಮಾಡುವುದಕ್ಕೆ ನಿಯಮಾನುಸಾರ ಅವಕಾಶವಿದೆ. ಎರಡಕ್ಕಿಂತ ಹೆಚ್ಚು ಸೆಂಟರ್‌ಗಳಲ್ಲಿ ಸ್ಕ್ಯಾನಿಂಗ್ ಕಾರ್ಯನಿರ್ವಹಿಸುವ ಸಂಬಂಧ ಸ್ಕ್ಯಾನಿಂಗ್ ವೈದ್ಯರು ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಅದಕ್ಕೆ ಸಮರ್ಪಕವಾದ ದಾಖಲೆ ಮತ್ತು ಕಾರಣವನ್ನು ನೀಡಲು ಸಾಧ್ಯವಾಗದಿದ್ದರಿಂದ ನ್ಯಾಯಾಲಯ ಪ್ರಕರಣವನ್ನು ವಜಾಗೊಳಿಸಿ ಪಿಸಿ ಅಂಡ್ ಪಿಎನ್‌ಡಿಟಿ ಕಾಯ್ದೆ ನಿಯ ೩(೩)ನ್ನು ಎತ್ತಿಹಿಡಿದಿದೆ.ಸ್ಕ್ಯಾನಿಂಗ್ ಕಾರ್ಯದಲ್ಲಿ ತೊಡಗಿದ್ದ ವೈದ್ಯರು ಜಿಲ್ಲೆಯಲ್ಲಿ ಕನಿಷ್ಠ ೫ ರಿಂದ ೬ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸ್ಕ್ಯಾನಿಂಗ್ ಕಾರ್ಯನಿರ್ವಹಿಸುತ್ತಿದ್ದರು. ಯಾವ ಯಾವ ಸ್ಕ್ಯಾನಿಂಗ್ ವೈದ್ಯರು ಎಲ್ಲೆಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಯಾವ ಸಮಯದಲ್ಲಿ ಸ್ಕ್ಯಾನಿಂಗ್‌ನಲ್ಲಿ ತೊಡಗಿರುತ್ತಾರೆ ಎಂಬ ನಾಮಫಲಕಗಳನ್ನು ಆ ಸೆಂಟರ್‌ಗಳಲ್ಲಿ ಅಳವಡಿಸಿರಲಿಲ್ಲವೆಂಬ ಬಗ್ಗೆ ಆರೋಪಗಳು ಕೇಳಿಬಂದಿದ್ದವು. ಜೊತೆಗೆ ಹೆಣ್ಣು ಭ್ರೂಣ ಲಿಂಗ ಪತ್ತೆ ಮತ್ತು ಹತ್ಯೆ ಸಂಬಂಧ ಸ್ಕ್ಯಾನಿಂಗ್ ವೈದ್ಯರ ಕಾರ್ಯನಿರ್ವಹಣೆಯನ್ನು ಅನುಮಾನಾಸ್ಪದವಾಗಿ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಕೆಲವರು ಆಸ್ಪತ್ರೆಯಲ್ಲಿರುವ ತಾಂತ್ರಿಕ ಸಹಾಯಕರಿಗೆ ಸ್ಕ್ಯಾನಿಂಗ್ ಬಗ್ಗೆ ತರಬೇತಿ ಕೊಟ್ಟು ಅವರ ಮೂಲಕ ಸ್ಕ್ಯಾನಿಂಗ್ ಮಾಡಿಸಿ ಆನ್‌ಲೈನ್ ಮೂಲಕ ತರಿಸಿಕೊಂಡು ಆ ಮೂಲಕವೇ ರಿಪೋರ್ಟ್ ನೀಡುತ್ತಿದ್ದ ಬಗ್ಗೆಯೂ ದೂರುಗಳಿವೆ. ಸ್ಕ್ಯಾನಿಂಗ್ ವೈದ್ಯರ ಸಂಖ್ಯೆ ಕಡಿಮೆ ಇರುವುದರಿಂದ ಎಲ್ಲಾ ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸುವುದಕ್ಕೆ ಹೇಗೆ ಸಾಧ್ಯ ಎಂಬ ಅನುಮಾನಗಳೂ ವ್ಯಕ್ತವಾಗಿದ್ದವು.ಈಗಾಗಲೇ ಎರಡಕ್ಕಿಂತ ಹೆಚ್ಚು ಸೆಂಟರ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸ್ಕ್ಯಾನಿಂಗ್ ವೈದ್ಯರಿಗೆ ನೋಟೀಸ್ ಕೊಟ್ಟು ರದ್ದುಪಡಿಸಲಾಗಿದೆ. ಎರಡು ಸೆಂಟರ್‌ಗಳನ್ನಷ್ಟೇ ಆಯ್ಕೆ ಮಾಡಿಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆಯನ್ನೂ ನೀಡಲಾಗಿದೆ. ಅವರು ಆಯ್ಕೆ ಮಾಡಿಕೊಳ್ಳುವ ಸೆಂಟರ್‌ಗಳಿಗೆ ಜಿಲ್ಲಾ ಆರೋಗ್ಯಾಧಿಕಾರಿಗಳು ಪತ್ರ ಬರೆದು ನೋಂದಾಯಿತ ಸ್ಕ್ಯಾನಿಂಗ್ ವೈದ್ಯರ ಹೆಸರು, ಅವರು ಕಾರ್ಯನಿರ್ವಹಿಸುವ ಸಮಯವನ್ನು ಸೆಂಟರ್‌ಗಳಲ್ಲಿ ಅಳವಡಿಸುವಂತೆ ಸೂಚಿಸಲಾಗುತ್ತಿದೆ. ಎರಡಕ್ಕಿಂತ ಹೆಚ್ಚು ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ವೈದ್ಯರು ಕಾರ್ಯನಿರ್ವಹಿಸುವುದು ಕಂಡುಬಂದರೆ ಪಿಸಿ ಅಂಡ್‌ಪಿಎನ್‌ಡಿಟಿ ಕಾಯ್ದೆಯನುಸಾರ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
----ಕೋಟ್....
ಸರ್ಕಾರದ ಹೊಸ ಸುತ್ತೋಲೆ ಪ್ರಕಾರ ಸ್ಕ್ಯಾನಿಂಗ್ ವೈದ್ಯರು ಎರಡು ಕಡೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶವಿದೆ. ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಈಗಾಗಲೇ ಎರಡಕ್ಕಿಂತ ಹೆಚ್ಚು ಕಡೆ ಸ್ಕ್ಯಾನಿಂಗ್ ಮಾಡುತ್ತಿರುವ ವೈದ್ಯರನ್ನು ರದ್ದುಗೊಳಿಸಿ, ಎರಡು ಸೆಂಟರ್‌ಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಸೂಚಿಸಿದ್ದೇವೆ. ಆ ವೈದ್ಯರ ಹೆಸರು, ಭೇಟಿಯ ಸಮಯವನ್ನು ನಾಮಫಲಕದಲ್ಲಿ ಅಳವಡಿಸುವಂತೆಯೂ ಸೆಂಟರ್‌ಗಳಿಗೆ ಸೂಚಿಸಿದ್ದೇವೆ.-ಡಾ.ಕೆ.ಮೋಹನ್, ಜಿಲ್ಲಾ ಆರೋಗ್ಯಾಧಿಕಾರಿ.