ಬ್ರಿಟಿಷರ ಕೈಯಲ್ಲೇ ಆಗಿರಲಿಲ್ಲ ಆರೆಸ್ಸೆಸ್‌ ನಿಷೇಧ

Published : Nov 17, 2025, 12:12 PM IST
Vikas

ಸಾರಾಂಶ

ಸಂಘ ಸ್ಥಾಪನೆ ಆಗಿ ಕೆಲವೇ ವರ್ಷಗಳಲ್ಲಿ 20 ಸಾವಿರಕ್ಕಿಂತ ಹೆಚ್ಚಿನ ಸ್ವಯಂಸೇವಕರು ಅದರ ನಿತ್ಯಶಾಖೆಗಳಲ್ಲಿ ಭಾಗವಹಿಸಲಾರಂಭಿಸಿದ್ದರು. ದಿನೇ ದಿನೇ ಸಂಘಟನೆಯ ಜನಪ್ರಿಯತೆ ವೃದ್ಧಿಯಾಗತೊಡಗಿತು. ರಾಷ್ಟ್ರಪರ ಸಂಘಟನೆಯೊಂದರ  ಬಿರುಸಿನ ವ್ಯಾಪಕತೆಯು ಆಡಳಿತಾರೂಢ ಬ್ರಿಟಿಷ್‌ ಸರಕಾರದ ನಿದ್ದೆಕೆಡಿಸಲಾರಂಭಿಸಿತ್ತು.

- ಸಂಘ ನಿಷೇಧಿಸಲು ಮುಂದೆಯೂ ಆಗದು । ಆಲದಮರವಾಗಿರುವ ಆರೆಸ್ಸೆಸ್‌ಗೆ ಬಾಬಾಸಾಹೇಬರ ಆಶಯಗಳೇ ಶ್ರೀರಕ್ಷೆ

-ವಿಕಾಸ್ ಪುತ್ತೂರು

ಸಾರ್ವಜನಿಕ ಸ್ಥಳಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಡೆಸದಂತೆ ನಿರ್ಬಂಧ ಹೇರಿ ರಾಜ್ಯ ಸರಕಾರ ಹೊರಡಿಸಿದ್ದ ಸುತ್ತೋಲೆಯು ರಾಜ್ಯದಲ್ಲಿ ತೀವ್ರ ವಿವಾದಕ್ಕೆ ಗುರಿಯಾಗಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೂ ಏರಿದೆ. ಇದರ ಕೂಲಂಕಷ ವಿಚಾರಣೆ ನಡೆಸಿದ ನ್ಯಾಯಪೀಠವು ಸರಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಪರಿಣಾಮ ಆರ್‌ಎಸ್ಎಸ್‌ ವಿರುದ್ಧದ ಕಾಂಗ್ರೆಸ್ ಹಗೆ ಸಮರಕ್ಕೆ ಇದೀಗ ಬ್ರೇಕ್‌ ಬಿದ್ದಿದೆ. ಅಂದಹಾಗೆ ಆರ್‌ಎಸ್ಎಸ್‌ ಅನ್ನು ನಿಯಂತ್ರಿಸಬೇಕು, ನಿಗ್ರಹಿಸಬೇಕು, ನಿರ್ಬಂಧಿಸಬೇಕು ಅಥವಾ ನಿಷೇಧಿಸಬೇಕು ಎಂಬ ಕೂಗು ಹೊಸತೇನಲ್ಲ. ಆರ್‌ಎಸ್ಎಸ್‌ಗೆ ಇದೀಗ ನೂರು ವರ್ಷಗಳು ಭರ್ತಿ ತುಂಬಿವೆ. ಅಂತೆಯೇ ಅದರ ವಿರುದ್ಧದ ಕೂಗಿಗೂ ಇನ್ನೇನು ಕೆಲ ವರ್ಷಗಳಲ್ಲಿ ನೂರಾಗಲಿದೆ. ಆದರೂ ಆರ್‌ಎಸ್‌ಎಸ್‌ ಮಾತ್ರ ಚರವೇತಿ, ಚರವೇತಿ ಎನ್ನುತ್ತಲೇ ತನ್ನ ಕಾರ್ಯವನ್ನು ಮುಂದುವರೆಸಿದೆ.

ಪರಿಷತ್‌ನಲ್ಲಿ ಬ್ರಿಟಿಷರಿಗೆ ಮುಖಭಂಗ

ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಮೈಸೂರಿನಂತಹ ಅನೇಕ ರಾಜಾಡಳಿತ ಪ್ರಾಂತ್ಯಗಳನ್ನು ಬ್ರಿಟಿಷರು ಸಾಮಂತಿಕೆಯ ಮೂಲಕ ಆಡಳಿತ ನಡೆಸುತ್ತಿದ್ದರು. ಅದೇರೀತಿ ಇನ್ನುಳಿದ ಹನ್ನೊಂದು ರಾಜ್ಯಗಳನ್ನು ಸ್ಥಳೀಯ ಜನಪ್ರತಿನಿಧಿಗಳನ್ನು ಹೊಂದಿದ್ದ ಪ್ರಾಂತ ವಿಧಾನಪರಿಷತ್‌ನ ನಿರ್ಣಯಗಳನ್ನು ಆಧರಿಸಿ ನೇರವಾಗಿ ಗವರ್ನರ್‌ ಮೂಲಕ ಆಡಳಿತ ನಡೆಸುತ್ತಿದ್ದರು. ಮಧ್ಯಪ್ರಾಂತ ಮತ್ತು ಬೆರಾರ್‌ ರಾಜ್ಯವು ಬ್ರಿಟಿಷ್‌ ರಾಜ್ಯಗಳ ಪೈಕಿ ಪ್ರಮುಖವಾಗಿತ್ತು. ಅದೇ ರಾಜ್ಯದ ಭಾಗವಾಗಿದ್ದ ನಾಗಪುರದಲ್ಲಿ 1925ರ ವಿಜಯದಶಮಿಯಂದು ಆರ್‌ಎಸ್‌ಎಸ್‌ ಪ್ರಾರಂಭಗೊಂಡಿತು. ಇದಾಗಿ ಕೆಲವೇ ವರ್ಷಗಳಲ್ಲಿ 20 ಸಾವಿರಕ್ಕಿಂತ ಹೆಚ್ಚಿನ ಸ್ವಯಂಸೇವಕರು ಅದರ ನಿತ್ಯಶಾಖೆಗಳಲ್ಲಿ ಭಾಗವಹಿಸಲಾರಂಭಿಸಿದ್ದರು. ದಿನೇ ದಿನೇ ಸಂಘಟನೆಯ ಜನಪ್ರಿಯತೆ ವೃದ್ಧಿಯಾಗತೊಡಗಿತು. ರಾಷ್ಟ್ರಪರ ಸಂಘಟನೆಯೊಂದರ ಇಂತಹ ಬಿರುಸಿನ ವ್ಯಾಪಕತೆಯು ಆಡಳಿತಾರೂಢ ಬ್ರಿಟಿಷ್‌ ಸರಕಾರದ ನಿದ್ದೆ ಕೆಡಿಸಲಾರಂಭಿಸಿತು.

ಆರ್‌ಎಸ್‌ಎಸ್‌ ನಿಗ್ರಹ ಕಾರ್ಯಸೂಚಿಯನ್ನು ತಯಾರು ಮಾಡಿದ ಬ್ರಿಟಿಷರು ಅದರ ಮೊದಲ ಹಂತವಾಗಿ ಸರಕಾರಿ ನೌಕರರು ಆರ್‌ಎಸ್‌ಎಸ್‌ ಸದಸ್ಯರಾಗದಂತೆ ಹಾಗೂ ಅದರ ಚಟುವಟಿಕೆಗಳಲ್ಲಿ ಭಾಗವಹಿಸದಂತೆ 1932ರಲ್ಲಿ ನಿರ್ಬಂಧನೆಯನ್ನು ಹೇರಿದರು. 1933ರಲ್ಲಿ ಅದನ್ನು ಸ್ಥಳೀಯ ಆಡಳಿತಕ್ಕೂ ವಿಸ್ತರಿಸಿದರು. ಇದೆಲ್ಲದರ ಹೊರತಾಗಿಯೂ ಸಮಾಜದ ಮಧ್ಯೆ ಆರ್‌ಎಸ್‌ಎಸ್‌ ಗಟ್ಟಿಯಾಗಿ ಬೇರೂರತೊಡಗಿತು. ಸಮಾಜದ ಪ್ರತಿಷ್ಠಿತ ವ್ಯಕ್ತಿಗಳು ಬ್ರಿಟಿಷ್‌ ಸರಕಾರದ ಆರ್‌ಎಸ್‌ಎಸ್‌ ವಿರೋಧಿ ನಿಲುವಿನ ವಿರುದ್ಧ ಧ್ವನಿಎತ್ತಿದರು. 1934ರ ಮಾರ್ಚ್‌ 7, 8 ಹಾಗೂ 9ರಂದು ನಡೆದ ವಿಧಾನಪರಿಷತ್ತಿನ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಸುದೀರ್ಘ ಚರ್ಚೆಯಾಯಿತು. ಸರಕಾರದ ನಿರ್ಬಂಧನೆಯ ವಿರುದ್ಧ ವಿಧಾನಪರಿಷತ್ತಿನಲ್ಲಿ ನಿರ್ಣಯವಾದ ಕಾರಣ ಬ್ರಿಟಿಷರಿಗೆ ತೀವ್ರ ಮುಖಭಂಗ ಎದುರಾಗಿ ಆರ್‌ಎಸ್‌ಎಸ್‌ ನಿಗ್ರಹಿಸುವ ಅವರ ಕುತಂತ್ರ ವಿಫಲಗೊಳ್ಳುತ್ತದೆ. ಸ್ವಾತಂತ್ರ್ಯಾನಂತರ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಬ್ರಿಟಿಷರ ಅಪೂರ್ಣ ಕನಸನ್ನು ಸಾಕಾರಗೊಳಿಸಲು ಅವಿರತ ಪ್ರಯತ್ನ ಮಾಡಿದೆ, ಮಾಡುತ್ತಲೇ ಇದೆ.

ಸಂಘದ ಮೇಲೆ ಇಂದಿರಾ ಪ್ರಹಾರ

ಗೋಹತ್ಯೆಯನ್ನು ನಿಷೇಧಿಸುವಂತೆ 1966ರ ನವೆಂಬರ್‌ 7ರಂದು ಆರ್‌ಎಸ್‌ಎಸ್‌ ನೇತೃತ್ವದಲ್ಲಿ ಸಂಸತ್ತಿನೆದುರು ಬೃಹತ್‌ ಪ್ರತಿಭಟನೆ ನಡೆದಿತ್ತು. ಆ ಪ್ರತಿಭಟನೆಯನ್ನು ಹತ್ತಿಕ್ಕಲು ಕಾಂಗ್ರೆಸ್‌ ಸರ್ಕಾರ ಅಂದು ಗೋಲಿಬಾರ್‌ ನಡೆಸಿದ ಕಾರಣ ಹತ್ತಾರು ಪ್ರತಿಭಟನಾಕಾರರು ಅಸುನೀಗಿದ್ದರು. ಈ ಘಟನೆಯ ಬಳಿಕ ರೂಪುಗೊಂಡ ಆರ್‌ಎಸ್‌ಎಸ್‌ ಪರವಾದ ಜನಾಭಿಪ್ರಾಯ ಹಾಗೂ ದೊರೆತ ಅಪಾರ ಜನಬೆಂಬಲದಿಂದ ವಿಚಲಿತಗೊಂಡ ಕಾಂಗ್ರೆಸ್‌, ಆರ್‌ಎಸ್‌ಎಸ್ಸನ್ನು ನಿಯಂತ್ರಿಸಲು ರಣತಂತ್ರ ಹೂಡಿತು. ಅದು ಬಳಸಿದ ಹಲವು ಅಸ್ತ್ರಗಳ ಪೈಕಿ ಸರಕಾರಿ ನೌಕರರ ಮೇಲಿನ ನಿರ್ಬಂಧನೆ ಪ್ರಮುಖವಾದದು. ಕೇಂದ್ರೀಯ ನಾಗರಿಕ ಸೇವೆಗಳ (ನಡತೆ) ನಿಯಮಗಳು, 1964ರ ಅನ್ವಯ ಯಾವುದೇ ರಾಜಕೀಯ ಪಕ್ಷ ಅಥವಾ ಸಕ್ರಿಯ ರಾಜಕಾರಣದಲ್ಲಿ ತೊಡಗುವ ಯಾವುದೇ ಸಂಘಟನೆಯೊಂದಿಗೆ ಸರಕಾರಿ ನೌಕರರು ಗುರುತಿಸಿಕೊಳ್ಳುವಂತಿರಲಿಲ್ಲ. ಈ ಷರತ್ತನ್ನೇ ಆಧಾರವಾಗಿಟ್ಟುಕೊಂಡ ಇಂದಿರಾ ಸರಕಾರ, ಸರ್ಕಾರಿ ನೌಕರರು ಆರ್‌ಎಸ್‌ಎಸ್‌ ಸದಸ್ಯರಾದರೆ ಅಥವಾ ಅದರ ಚಟುವಟಿಕೆಗಳಲ್ಲಿ ಭಾಗಹಿಸಿದರೆ ಕೇಂದ್ರೀಯ ನಾಗರಿಕ ಸೇವೆಗಳ ನಿಯಮ ಉಲ್ಲಂಘನೆಯಾಗಲಿದ್ದು, ಅಂಥವರ ಮೇಲೆ ಶಿಸ್ತುಕ್ರಮ ಜಾರಿಹೊಳಿಸಬಹುದು ಎಂಬರ್ಥದಲ್ಲಿ 1966ರ ನವೆಂಬರ್‌ 30ರಂದು ಅಧಿಕೃತ ಆದೇಶ ಹೊರಡಿಸುತ್ತದೆ. ಈ ಆದೇಶವನ್ನು ಮತ್ತಷ್ಟು ಬಿಗಿಗೊಳಿಸಿ 1970ರ ಜುಲೈ 25ರಂದು, 1975ರ ನವೆಂಬರ್‌ 28ರಂದು ಹಾಗೂ 1980ರ 28ರಂದು ಪರಿಷ್ಕರಿಸಿ ಪುನರ್‌ ಜಾರಿಗೊಳಿಸಲಾಗಿತ್ತು.

ಮ.ಪ್ರ. ಹೈಕೋರ್ಟ್‌ನಿಂದ ಕಪಾಳಮೋಕ್ಷ

ಆರ್‌ಎಸ್‌ಎಸ್ಸನ್ನು ಗುರಿಯಾಗಿಸಿ ಪೂರ್ವಾಗ್ರಹದೊಂದಿಗೆ ಹೊರಡಿಸಲಾಗಿದ್ದ ಈ ಆದೇಶಗಳಲ್ಲಿ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಲಾಗಿತ್ತು. ಈ ಅಂಶವನ್ನು ಗುರುತಿಸಿದ ಪ್ರಸ್ತುತ ಸರಕಾರ 2024ರ ಜುಲೈ 9ರಂದು ನೂತನ ಆದೇಶದ ಮೂಲಕ ಹಿಂದಿನ ಆದೇಶಗಳನ್ನು ರದ್ದುಪಡಿಸುತ್ತದೆ. ಇದರ ಬೆನ್ನಲ್ಲೇ ಜುಲೈ 25ರಂದು ಮಧ್ಯಪ್ರದೇಶದ ಉಚ್ಚ ನ್ಯಾಯಾಲಯವು ಪ್ರಕಟಿಸಿದ ಮಹತ್ವದ ತೀರ್ಪು ಪ್ರಸ್ತುತ ಸರಕಾರದ ಕಾರ್ಯಕ್ಕೆ ಮತ್ತಷ್ಟು ಪುಷ್ಟಿಕೊಟ್ಟಿದೆ. ‘ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಆರ್‌ಎಸ್‌ಎಸ್‌ನಂತಹ ಸಂಘಟನೆಯನ್ನು ನಿಷೇಧದ ಪಟ್ಟಿಯಲ್ಲಿ ದಾಖಲಿಸಿದ್ದು ತಪ್ಪು ಹಾಗೂ ಅದನ್ನು ತೆಗೆಯಬೇಕಿರುವುದು ಅವಶ್ಯಕ, ಕೇಂದ್ರ ಸರಕಾರಕ್ಕೆ ತನ್ನ ತಪ್ಪಿನ ಅರಿವಾಗಲು ಐದು ದಶಕಗಳು ಬೇಕಾದವು, ಆರ್‌ಎಸ್‌ಎಸ್‌ನ ಬಹುತೇಕ ಚಟುವಟಿಕೆಗಳು ರಾಜಕೀಯ ರಂಗಕ್ಕೆ ಸಂಬಂಧಿಸಿರುವುದೇ ಅಲ್ಲʼ ಎಂಬಿತ್ಯಾದಿ ಉಲ್ಲೇಖವಾಗಿರುವುದು ಆರ್‌ಎಸ್‌ಎಸ್ಸನ್ನು ಸುಳ್ಳು ಆರೋಪಗಳಡಿಯಲ್ಲಿ ನಿರ್ಬಂಧಿಸಲೆತ್ನಿಸುವವರಿಗೆ ಮಾಡಿರುವ ಕಪಾಳಮೋಕ್ಷ.

ಕಾಂಗ್ರೆಸ್‌ನಿಂದ ನಿಷೇಧ ಯತ್ನ:

ಕೇಂದ್ರದಲ್ಲಿ ಸುದೀರ್ಘ ಆಡಳಿತದಲ್ಲಿದ್ದ ಕಾಂಗ್ರೆಸ್ ಸರಕಾರಗಳು ಆರ್‌ಎಸ್ಎಸ್ಸನ್ನು ಈ ಹಿಂದೆ ಮೂರು ಬಾರಿ ನಿಷೇಧಿಸಿವೆಯಾದರೂ ಅವುಗಳಿಗೆ ಹೆಚ್ಚು ಆಯುಷ್ಯವಿರಲಿಲ್ಲ. 1948ರ ಜನವರಿ 30ರಂದು ಗಾಂಧೀಜಿಯವರನ್ನು ಸಾರ್ವಜನಿಕವಾಗಿ ಹಿಂದೂ ಮಹಾಸಭಾದ ಗೋಡ್ಸೆ ಗುಂಡಿಟ್ಟು ಕೊಂದರೂ, ನೆಹರು ಸರಕಾರ ಮಹಾಸಭಾವನ್ನು ನಿಷೇಧಿಸಿರಲಿಲ್ಲ. ಬದಲಿಗೆ ಕೃತ್ಯದ ಕುರಿತು ನಿರಾಧಾರ ಆರೋಪಗಳನ್ನು ಹೊರಿಸಿ ಫೆಬ್ರವರಿ 4ರಂದು ಆರ್‌ಎಸ್‌ಎಸ್ಸನ್ನು ನಿಷೇಧಿಸುತ್ತದೆ. ಈ ದುಷ್ಕೃತ್ಯದಲ್ಲಿ ಆರ್‌ಎಸ್ಎಸ್‌ ಪಾತ್ರವಿಲ್ಲವೆಂಬುದನ್ನು ಅಂದಿನ ಗೃಹ ಸಚಿವರಾಗಿದ್ದ ಪಟೇಲರೇ ಖುದ್ದು ಫೆಬ್ರವರಿ 27ರಂದು ಪ್ರಧಾನಿಗಳಿಗೆ ಪತ್ರ ಬರೆದು ದೃಢೀಕರಿಸಿದ್ದರು. ಹಾಗಾದರೆ ನಿಷೇಧದ ಹಿಂದಿನ ನೈಜ ರಹಸ್ಯವಾದರೂ ಏನು?

ತನ್ನ ಪ್ರಬಲ ರಾಷ್ಟ್ರಪರ ವಿಚಾರಧಾರೆಗಳಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗುವಷ್ಟರಲ್ಲಿ ಅದಾಗಲೇ ಪ್ರಭಾವಶಾಲಿಯಾಗಿ ಬೆಳೆದಿದ್ದ ಆರ್‌ಎಸ್ಎಸ್ಸನ್ನು ನಿಯಂತ್ರಿಸದೆ ಹೋದರೆ, ಸ್ವತಂತ್ರ ಭಾರತದ ಮುಂದಿನ ರಾಜಕಾರಣದಲ್ಲಿ ತಮ್ಮ ಹಿತಾಸಕ್ತಿಗೆ ಹಿನ್ನಡೆಯಾಗುವುದು ಶತಃಸಿದ್ಧವೆಂಬುದನ್ನು ಅರಿತ ಕಾಂಗ್ರೆಸ್‌, ಆರ್‌ಎಸ್ಎಸ್ಸನ್ನು ನಿಯಂತ್ರಿಸಲು ಗಾಂಧೀಜಿಯವರ ಹತ್ಯೆಯನ್ನು ಗಾಳವಾಗಿಸಲು ಯತ್ನಿಸಿತು. ನಿಷೇಧ ಜಾರಿಯಲ್ಲಿರುವಾಗಲೇ, ಪಟೇಲರು, ಸೆಪ್ಟೆಂಬರ್‌ 11ರಂದು ಆರ್‌ಎಸ್ಎಸ್‌ ಸರಸಂಘಚಾಲಕರಾಗಿದ್ದ (ಮುಖ್ಯಸ್ಥ) ಗೋಳ್ವಾಲಕರ್‌ ಅವರಿಗೆ ಸರಕಾರದ ಪರವಾಗಿ ಪತ್ರ ಬರೆದು ಆರ್‌ಎಸ್ಎಸ್‌ ಕಾರ್ಯಕರ್ತರೆಲ್ಲರೂ ಕಾಂಗ್ರೆಸ್‌ ಸೇರುವಂತೆ ಆಗ್ರಹಿಸಿದ್ದರು. ಇದರ ಪ್ರತಿಯಾಗಿ ನವೆಂಬರ್‌ 2ರಂದು ಪತ್ರಿಕಾಗೋಷ್ಠಿ ನಡೆಸಿದ ಗೋಳ್ವಾಲಕರ್‌ರವರು ಕಾಂಗ್ರೆಸ್‌ ಪ್ರಸ್ತಾಪವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು, ಮುಂದುವರಿದು ಉಭಯ ಕಡೆಗಳ ಪ್ರಾತಿನಿಧಿತ್ವದಲ್ಲಿ ಸಭೆಗಳೂ ನಡೆದು ವಿಫಲಗೊಂಡಿದ್ದವು. ಈ ಎಲ್ಲಾ ಬೆಳವಣಿಗೆಗಳಿಂದ ಸಿಡಿದ ಕಾಂಗ್ರೆಸ್, ಗೋಳ್ವಾಲಕರ್‌ರವರನ್ನು ಮತ್ತೊಮ್ಮೆ ಬಂಧಿಸಿ ನಿಷೇಧವನ್ನು ಮತ್ತಷ್ಟು ಬಿಗಿಗೊಳಿಸಿತ್ತು.

ಕಾಂಗ್ರೆಸ್‌ನ ಮೊದಲ ಯತ್ನ ಭಗ್ನ

ಆರ್‌ಎಸ್ಎಸ್‌ ಮೇಲಿನ ಸರಕಾರದ ದಮನನೀತಿಗಳ ವಿರುದ್ಧ ಕ್ರಮೇಣ ರೂಪುಗೊಂಡ ಪ್ರಬಲ ಜನಾಭಿಪ್ರಾಯದ ಪರಿಣಾಮ, ಬೇರೆ ಉಪಾಯವಿಲ್ಲದೆ 1949ರ ಜುಲೈ 12ರಂದು ಸರಕಾರ ನಿಷೇಧ ತೆರವುಗೊಳಿಸುತ್ತದೆ. ‘ರಾಜಕೀಯರಹಿತವಾಗಿ ಕಾರ್ಯನಿರ್ವಹಿಸಲು ಆರ್‌ಎಸ್ಎಸ್‌ ಒಪ್ಪಿರುವ ಕಾರಣ ನಿಷೇಧ ತೆರವುಗೊಳಿಸಲಾಯಿತುʼ ಎಂಬ ಅನಧಿಕೃತ ಸುದ್ದಿಯನ್ನೂ ನಂತರ ಹರಿಬಿಡಲಾಗುತ್ತದೆ. ಅದೇನೇ ಇದ್ದರೂ ಆರ್‌ಎಸ್‌ಎಸ್ಸನ್ನು ಅದರ ವಿಚಾರಧಾರೆಯನ್ನು ಕಟ್ಟಿಹಾಕುವ ಕಾಂಗ್ರೆಸ್‌ನ ಮೊದಲ ಯತ್ನ ಭಗ್ನಗೊಳ್ಳುತ್ತದೆ.

1975ರ ಜೂನ್‌ 25ರಂದು ದೇಶದ ಮೇಲೆ ಸಂವಿಧಾನಬಾಹಿರವಾಗಿ ಇಂದಿರಾ ತುರ್ತುಪರಿಸ್ಥಿತಿಯನ್ನು ಹೇರಿದರು. ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿ ಆ ಬಳಿಕ ರೂಪುಗೊಂಡ ಹೋರಾಟದಲ್ಲಿ ತ್ಯಾಗ, ಬಲಿದಾನ ಹಾಗೂ ರಾಷ್ಟ್ರಸೇವೆಗೆ ಅನ್ವರ್ಥರಾಗಿದ್ದ ಆರ್‌ಎಸ್ಎಸ್‌ ಸ್ವಯಂಯಂಸೇವಕರು ಮುಂಚೂಣಿಯಲ್ಲಿದ್ದುದನ್ನು ಗಮನಿಸಿದ ಇಂದಿರಾ ತಮ್ಮ ಅಧಿಕಾರಕ್ಕೆ ಅವರ ಹೋರಾಟ ಚ್ಯುತಿ ತರಲಿದೆ ಎಂಬುದನ್ನು ಪೂರ್ವಾಲೋಚಿಸಿ ಜುಲೈ 4ರಂದು ಆರ್‌ಎಸ್ಎಸ್ಸನ್ನು ನಿಷೇಧಿಸುತ್ತಾರೆ. ಸಹಸ್ರಾರು ಸ್ವಯಂಸೇವಕರನ್ನು ಬಂಧಿಸಲಾಗುತ್ತದೆ. ಇದೆಲ್ಲದರ ನಡುವೆಯೇ ಸತತ 18 ತಿಂಗಳ ಯಶಸ್ವಿ ಭೂಗತ ಕಾರ್ಯಾಚರಣೆ ಹಾಗೂ ಹೋರಾಟದ ಪರಿಣಾಮ, ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲುಂಡು ಜನತಾ ಪಕ್ಷ ಅಧಿಕಾರಕ್ಕೆ ಬರುತ್ತದೆ. ಇದರ ಬೆನ್ನಲ್ಲೇ 1977ರ ಮಾರ್ಚ್‌ 22ರಂದು ನಿಷೇಧ ತೆರವುಗೊಂಡು ಕಾಂಗ್ರೆಸ್‌ನ ಎರಡನೇ ಪ್ರಯತ್ನವೂ ವಿಫಲಗೊಳ್ಳುತ್ತದೆ.

ಮುಂದೆ 1992ರ ಡಿಸೆಂಬರ್‌ 6ರಂದು ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿದ್ದ ಬಾಬ್ರಿ ಮಸೀದಿಯನ್ನು ರಾಮಭಕ್ತರು ಕೆಡವುತ್ತಾರೆ. ಇದಾಗಿ ಕೇವಲ ನಾಲ್ಕೇ ದಿವಸಗಳಲ್ಲಿ ಸತ್ಯಕ್ಕೆ ದೂರವಾದ ಆರೋಪಗಳನ್ನು ಹೊರಿಸಿ ಆರ್‌ಎಸ್ಎಸ್ಸನ್ನು ನಿಷೇಧಿಸಲಾಗುತ್ತದೆ. ಈ ಪ್ರಕರಣವು ಮುಂದೆ ಜಸ್ಟೀಸ್‌ ಬಾಹ್ರಿ ನೇತೃತ್ವದ ನ್ಯಾಯಮಂಡಳಿಯ ಅಂಗಣಕ್ಕೆ ಬಂದಾಗ, ಈ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆದು ಆರ್‌ಎಸ್ಎಸ್‌ನ ಮೇಲಿನ ಆರೋಪಗಳು ಸುಳ್ಳು ಎಂಬುದು ಋಜುವಾತಾಗಿ 1993ರ ಜೂನ್‌ 4ರಂದು ನಿಷೇಧ ರದ್ದುಗೊಳ್ಳುತ್ತದೆ.

ನಿರ್ಬಂಧ, ನಿಷೇಧ ಹೇಳಿಕೆಗಳಿಗೆ ಇಲ್ಲ ಮೌಲ್ಯ

ಕಾಂಗ್ರೆಸ್‌ನ ಕೆಲ ನಾಯಕರು ತಾವು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಆರ್‌ಎಸ್ಎಸ್ಸನ್ನು ನಿರ್ಬಂಧಿಸುವುದಷ್ಟೇ ಅಲ್ಲ ಅದನ್ನು ಶಾಶ್ವತವಾಗಿ ನಿಷೇಧಿಸುತ್ತೇವೆ ಎಂಬಿತ್ಯಾದಿ ಪೂರ್ವಗ್ರಹಯುಕ್ತ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಒಂದು ಸಮುದಾಯದ ಮತವನ್ನು ಅಂತಹ ಹೇಳಿಕೆಗಳು ದೃಢಗೊಳಿಸಲಿದೆ ಎಂಬ ದುರಾಲೋಚನೆಯೂ ಅಂತಹ ಹೇಳಿಕೆಗಳನ್ನು ನೀಡುವಂತೆ ಪ್ರಚೋದಿಸುತ್ತದೆ. ಆರ್‌ಎಸ್ಎಸ್‌ ಬಗ್ಗೆ ಸಮಾಜದಲ್ಲಿರುವ ಪ್ರಚಲಿತತೆ ಹಾಗೂ ಗ್ರಹಿಕೆಯ ಕಾರಣಗಳಿಗೆ ಅಂತಹ ಹೇಳಿಕೆಗಳು ವ್ಯಾಪಕ ಪ್ರಚಾರವನ್ನೂ ಪಡೆದುಕೊಳ್ಳುತ್ತವೆ, ತುದಿಕಾಣದ ಚರ್ಚೆಗಳೂ ನಡೆಯುತ್ತವೆ. ಅದೇನೇ ಇದ್ದರೂ ಅಂತಹವುಗಳಿಗೆ ಮಹತ್ವವಾಗಲಿ, ಮೌಲ್ಯವಾಗಲಿ ಇಲ್ಲ. ಕಾಂಗ್ರೆಸ್‌ ಸರಕಾರ ಈ ಹಿಂದೆ ಆರ್‌ಎಸ್ಎಸ್ಸನ್ನು ನಿರ್ಬಂಧಿಸಲು ಹಾಗೂ ನಿಷೇಧಿಸಲು ಮಾಡಿರುವ ಯಾವುದೇ ಪ್ರಯತ್ನಗಳು ಸಫಲವಾಗಿಲ್ಲ, ಮುಂದೆಯೂ ಅದು ಸಾಧ್ಯವಾಗದು. ನೂರು ವರ್ಷಗಳಿಂದಲೂ ಸಂವಿಧಾನದ ಚೌಕಟ್ಟಿನಲ್ಲಿಯೇ ಕಾರ್ಯನಿರ್ವಹಿಸುತ್ತಾ ಆಲದಮರವಾಗಿ ಬೆಳೆದಿರುವ ಆರ್‌ಎಸ್ಎಸ್‌ಗೆ ಬಾಬಾಸಾಹೇಬರ ಆಶಯಗಳೇ ಶ್ರೀರಕ್ಷೆ ಎಂಬುದು ಕಾಂಗ್ರೆಸ್‌ಗೂ ತಿಳಿದಿದೆ.

PREV
Read more Articles on

Recommended Stories

ಸರ್‌ ನವೆಂಬರ್ ಕ್ರಾಂತಿ ; ಏನು ? ಕೇಳಿಸ್ತಿಲ್ಲ ! - ಸಲೀಂ ಅಹಮದ್‌
ವಿಶೇಷ ಸೌಲಭ್ಯಗಳುಳ್ಳ ಐಷಾರಾಮಿ ಮನೆಗಳಿಗೆ ಬೇಡಿಕೆ ಹೆಚ್ಚಳ : ವಿಶೇಷ ಲೇಖನ