ಮಾತು ಬೆಳ್ಳಿ, ಮೌನ ಬಂಗಾರ ಎಂಬ ಅನುಭವದ ಮಾತಿದೆ, ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಎಂದು ಹಿರಿಯರು ಹೇಳಿದ್ದಾರೆ. ಇಂತಹ ಮಾತುಗಳನ್ನು ಅಕ್ಷರಶಃ ಪಾಲಿಸಿಕೊಂಡು ಬರುತ್ತಿರುವವರು ನಮ್ಮ ಸ್ಮಾರ್ಟ್ ರಾಜಕಾರಣಿ, ಮಿತಭಾಷಿ, ವಿಧಾನ ಪರಿಷತ್ ಕಾಂಗ್ರೆಸ್ ಮುಖ್ಯ ಸಚೇತಕ ಸಲೀಂ ಅಹಮದ್.
ಇದಕ್ಕೊಂದು ತಾಜಾ ಉದಾಹರಣೆ ಎಂದರೆ ಇತ್ತೀಚೆಗೆ ವಿಜಯಪುರಕ್ಕೆ ಬಂದಿದ್ದ ಸಲೀಂ ಅಹಮದ್ ಅವರು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ನಡೆದ ಪ್ರಸಂಗ.
ಯಾರು ಏನೇ ಹೇಳಲಿ, ಮುಖ್ಯಮಂತ್ರಿ ಸ್ಥಾನ ಬದಲಾವಣೆ, ನವೆಂಬರ್ ಕ್ರಾಂತಿ ನಿಜನಾ ಎಂಬುದು ರಾಜ್ಯದ ಉದ್ದಕ್ಕೂ ಕೇಳಿ ಬರುವ ಪ್ರಶ್ನೆ. ಇಂತಹ ಪ್ರಶ್ನೆಗಳಿಗೆ ಏನಾದರೂ ಉತ್ತರ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸದಿಂದ ಮಾಧ್ಯಮ ಮಂದಿ ‘ಸಾರ್ ನವೆಂಬರ್ ಬಳಿಕ ಸಿಎಂ ಬದಲಾವಣೆಯಾಗುತ್ತಾರೆಯೇ?’ ಎಂದು ಕೇಳುತ್ತಿದ್ದಂತೆ ಸಲೀಂ ಸಾಹೇಬ್ರು, ‘ನಮಗೆ ಈ ಬಗ್ಗೆ ಮಾತನಾಡಬಾರದು ಎಂದು ಹೈಕಮಾಂಡ್ ಹೇಳಿದೆ. ಹಾಗಾಗಿ ನಮಗೆ ನಿಮ್ಮ ಪ್ರಶ್ನೆಯೇ ಕೇಳಿಸಲಿಲ್ಲ’ ಎಂದು ಬಿಟ್ಟರು. ಹೀಗೆಂದ ಮಾತ್ರಕ್ಕೆ ಪತ್ರಕರ್ತರು ಸುಮ್ಮನೆ ಬಿಟ್ಟಾರೆಯೇ... ತುಸು ಜೋರಾಗಿಯೇ ಸಿಎಂ ಬದಲಾವಣೆ ಆಗುತ್ತಾ? ಎಂದು ಪ್ರಶ್ನೆ ಕೇಳಿದರು. ಆಗಲೂ ನನಗೆ ನಿಮ್ಮ ಪ್ರಶ್ನೆಯೇ ಕೇಳಿಸ್ತಿಲ್ಲ ಎಂದು ಮರು ನುಡಿದರು.
ಇಷ್ಟಾದರೂ ಪಟ್ಟು ಹಿಡಿದ ಪತ್ರಕರ್ತರೊಬ್ಬರು ಪುನಃ ಅದೇ ಪ್ರಶ್ನೆ ದೊಡ್ಡ ಧ್ವನಿಯಲ್ಲಿ ಕೇಳಿದಾಗ, ಸಲೀಂ ಅಹಮದ್ ಅವರು ಕೂಲ್ ಆಗಿ ‘ಇಂಥ ಪ್ರಶ್ನೆಯೇ ನನಗೆ ಕೇಳಿಸಲ್ಲ, ಬೇರೆ ಪ್ರಶ್ನೆ ಕೇಳಿ’ ಎಂದು ನಗುತ್ತಾ ಉತ್ತರಿಸಿದಾಗ ಸಾವರಿಸಿಕೊಳ್ಳುವ ಸರದಿ ಮಾಧ್ಯಮ ಮಂದಿಯದ್ದಾಗಿತ್ತು.
ಹಿರಿಯ ಪತ್ರಕರ್ತರೊಬ್ಬರು ಮಾತ್ರ, ಸಚಿವ ಸಂಪುಟ ಪುನರ್ ರಚನೆಯಾದರೆ ಮಂತ್ರಿಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಈ ಸಮಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಏನಾದರೂ ಮಾಡಿದರೆ ಕಷ್ಟ ಆಗಬಹುದು ಎಂಬ ಅಳುಕು ಇರುವ ಕಾರಣ ಮಾತನಾಡುತ್ತಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಶಿಸ್ತಿನ ಸಿಪಾಯಿ, ವಿವಾದದಿಂದ ದೂರ ಎಂದು ವಿಶ್ಲೇಷಿಸಿದರು. ಇದನ್ನು ಕೇಳಿದ ಕೆಲವರಿಗೆ ಮೂಕನಾಗಬೇಕು ಈ ಜಗದೊಳು ಜ್ವಾಕ್ಯಾಗಿರಬೇಕು... ಎಂಬ ಸಂತ ಕಡಕೋಳ ಮಡಿವಾಳೇಶ್ವರರ ತತ್ವಪದ ನೆನಪು ಆಗಿದ್ದು ಮಾತ್ರ ನಿಜ.
ಕಬ್ಬಿನ ದರ ನಿಗದಿ ಕುರಿತು ಕಬ್ಬಿನ ನಾಡು ಬೆಳಗಾವಿ ಜಿಲ್ಲೆಯ ಗುರ್ಲಾಪುರ ಕ್ರಾಸ್‌ನ ಹೆದ್ದಾರಿ ಮೇಲೆ ಅಹೋರಾತ್ರಿ ನಡೆಯುತ್ತಿದ್ದ ರೈತರ ಪ್ರತಿಭಟನೆ ನಡುವೆ ಒಬ್ಬ ಮುಖಂಡರು ‘ಬರ್ಥ್ ಡೇ’ ಮಾಡಿಕೊಂಡರೆ, ಮತ್ತೊಬ್ಬರು ‘ಡೆತ್ ಡೇ’ ಮಾಡಿಕೊಂಡರಂತೆ!
ಈ ಮಾತನ್ನು ಖುದ್ದು ನಮ್ಮ ಸಕ್ಕರೆ ಮಂತ್ರಿ ಶಿವಾನಂದ ಪಾಟೀಲ್ ಸಾಹೇಬ್ರು ರೈತರ ಮುಂದೆ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಈ ರೀತಿ ಹೇಳಿದ್ದು ಸುಮ್ಮನೆ ಅಲ್ಲ, ಅಂತಹ ಅನುಭವ ಅವರಿಗೆ ಆಯಿತಂತೆ.
ನಡೆದಿದ್ದಿಷ್ಟು, ಗುರ್ಲಾಪುರ ಕ್ರಾಸ್ ಹೆದ್ದಾರಿಯಲ್ಲಿ ತೀವ್ರ ಪ್ರತಿಭಟನೆ ಮಾಡುತ್ತಿದ್ದ ರೈತರ ಜೊತೆ ಚರ್ಚಿಸಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಖುಷಿಯಿಂದ ಸಚಿವರು ಕಾರು ಹತ್ತಿದರು ಅಷ್ಟೆ. ದಿಢೀರ್ ಸಚಿವರ ಕಾರು ಸುತ್ತುವರಿದ ಕೆಲವರು ಘೋಷಣೆ ಕೂಗತೊಡಗಿದರು. ಎಸ್ಪಿ ಹಾಗೂ ಜಿಲ್ಲಾಧಿಕಾರಿಗಳು ಬೆಂಗಾವಲು ಹಾಕಿ ಸಚಿವರನ್ನು ಸ್ಥಳದಿಂದ ಕಳುಹಿಸುವಷ್ಟರಲ್ಲಿ ಸುಸ್ತೋ ಸುಸ್ತು. ಎರಡು ದಿನಗಳ ಬಳಿಕ ಸರ್ಕಾರ ಪ್ರತಿ ಟನ್ ಕಬ್ಬಿಗೆ ₹3300 ದರ ಘೋಷಣೆ ಮಾಡಿದ್ದರಿಂದ ವಿಜಯೋತ್ಸವ ಆಚರಿಸಿದ್ದ ರೈತರು ಸಚಿವರು ಬಂದು ಅಧಿಕೃತ ಘೋಷಣೆ ಮಾಡಿದರೆ ಮಾತ್ರ ಪ್ರತಿಭಟನೆ ಹಿಂದಕ್ಕ ಪಡೀತಿವಿ ಎಂದು ಪಟ್ಟು ಹಿಡಿದು ಕೂತಿದ್ದರು.
ಮರುದಿನ ಮತ್ತೆ ಪ್ರತಿಭಟನಾ ಸ್ಥಳಕ್ಕೆ ಸರ್ಕಾರದ ಆದೇಶದೊಂದಿಗೆ ಬಂದ ಸಚಿವ ಶಿವಾನಂದ ಪಾಟೀಲ್ರು ಹಿಂದೆ ಆಗಮಿಸಿದ್ದಾಗಿನ ಘಟನೆ ನೆನಿಸಿಕೊಳ್ಳುತ್ತ, 10 ದಿನದಲ್ಲೇ ನೀವು ನನಗೆ ಅಂಜಿಸಿ ಬಿಟ್ರಿ... ನಮ್ಮವರು ಅದಾರ ಅಂತ ಇಲ್ಲಿಗ ಬಂದ್ರ ನನಗೇ ಹೆಣ ಮಾಡಿದ್ರಿ... ನಾ ಇನ್ನೂ ಜೀವಂತ ಅದೇನಿ ಅಂತ ಹೇಳಾಕ ಬಂದಿವ್ನಿ. ಅದನ್ನ ಹೇಳಾಕೂ ನೀವು ಅವಕಾಶ ಕೊಡ್ತಿಲ್ಲ. ನೀವು ನನಗ ಹೆಣ ಮಾಡಿದ್ದಿಲ್ಲಾಂದ್ರ ಸರ್ಕಾರ ಹೆಣ ಆಗ್ತಿತ್ತು ಎನ್ನುತ್ತಿದ್ದಂತೆಯೇ ರೈತರಿಂದ ಚಪ್ಪಾಳೆ ಮೊಳಗಿತು.
ವಿಜಯೇಂದ್ರನದು ಎಂತಾ ನಸೀಬೈತಿ ನೋಡ್ರಿ... ಅವರು ಇಲ್ಲಿಗೆ ಬಂದು ಬರ್ಥ್ ಡೇ ಮಾಡಿಕೊಂಡ ಹೋದ್ರ ನಾನು ಡೆತ್ ಡೇ ಮಾಡಿಕೊಳ್ಳುವಂತಾಗಿತ್ತು. ಅವರ ಹಣೆಬರಹದಲ್ಲಿ ಬರ್ಥ್ ಡೇ ಬರದಿದ್ರ, ನಮ್ಮ ಹಣೆಬರಹದಾಗ ಡೆತ್ ಡೇ ಬರೆದಿತ್ತು ಎಂದು ಹೇಳುತ್ತ, ಖುದಾ ಮೆಹರ್ಬಾನ್ ಹೈ ತೋ ಬಂದಾ ಪೈಲ್ವಾನ್ ಎಂಬಂತೆ ಅವರ ಹಣೆ ಬರಹದಲ್ಲಿ ಹಂಗ ಬರೆದೈತ ಎನ್ನುತ್ತಿದ್ದಂತೆಯೇ ರೈತರು ಚಪ್ಪಾಳೆ ತಟ್ಟತೊಡಗಿದರು.
-ಶಶಿಕಾಂತ ಮೆಂಡೆಗಾರ
-ಸದಾನಂದ ಮಜತಿ