ಹಬ್ಬದ ಶಾಪಿಂಗ್‌ ಇಎಂಐ ಕಡೆ ಇರಲಿ ಗಮನ, ಜೇಬು ಜೋಪಾನ

Published : Oct 20, 2026, 12:48 PM IST
shopping

ಸಾರಾಂಶ

ದಸರಾ ಮತ್ತು ದೀಪಾವಳಿ ಬಂದರೆ ಸಾಕು, ಹೊಸ ವಾಹನಗಳು, ದೂರದರ್ಶನ, ಮೊಬೈಲ್ ಫೋನ್‌ಗಳಿಂದ ಹಿಡಿದು ಚಿನ್ನಾಭರಣಗಳವರೆಗೆ ಪ್ರತಿಯೊಂದರ ಮೇಲೂ ಆಕರ್ಷಕ ರಿಯಾಯಿತಿಗಳು ಮತ್ತು ಸುಲಭ ಸಾಲಗಳು ದೊರೆಯುತ್ತವೆ.

ದಸರಾ ಮತ್ತು ದೀಪಾವಳಿ ಬಂದರೆ ಸಾಕು, ಹೊಸ ವಾಹನಗಳು, ದೂರದರ್ಶನ, ಮೊಬೈಲ್ ಫೋನ್‌ಗಳಿಂದ ಹಿಡಿದು ಚಿನ್ನಾಭರಣಗಳವರೆಗೆ ಪ್ರತಿಯೊಂದರ ಮೇಲೂ ಆಕರ್ಷಕ ರಿಯಾಯಿತಿಗಳು ಮತ್ತು ಸುಲಭ ಸಾಲಗಳು ದೊರೆಯುತ್ತವೆ.

‘ಮುಂಗಡ ಹಣವಿಲ್ಲದೆ ಖರೀದಿ’, ‘ಬಡ್ಡಿ ರಹಿತ ಮಾಸಿಕ ಕಂತು’, ‘ಈಗಲೇ ಖರೀದಿಸಿ, ಆಮೇಲೆ ಪಾವತಿಸಿ’ ಮತ್ತು ಮೊಬೈಲ್ ಮೂಲಕ ಕೆಲವೇ ನಿಮಿಷಗಳಲ್ಲಿ ಕೈಸೇರುವ ತುರ್ತು ವೈಯಕ್ತಿಕ ಸಾಲಗಳು ಸಾಮಾನ್ಯ ಗ್ರಾಹಕನಿಗೆ ತಕ್ಷಣದ ಆರ್ಥಿಕ ಬಲ ನೀಡಿದಂತೆ ಕಾಣುತ್ತವೆ. ಆದರೆ ಈ ಆಕರ್ಷಕ ಆಮಿಷಗಳಿಗೆ ಮರುಳಾಗುವ ಮುನ್ನ ಗ್ರಾಹಕರು ಪ್ರಮುಖವಾಗಿ ಗಮನಿಸಬೇಕಾದ ಅಂಶಗಳು ಹೀಗಿವೆ:

1. ಸಣ್ಣ ಕಂತುಗಳ ಅಪಾಯಕಾರಿ ಬಲೆ

ತಿಂಗಳಿಗೆ ಕೇವಲ ಒಂದು ಅಥವಾ ಎರಡು ಸಾವಿರ ರೂಪಾಯಿ ಅಷ್ಟೇ ತಾನೇ ಎಂದುಕೊಂಡು ಹಬ್ಬದ ಸಂಭ್ರಮದಲ್ಲಿ ಮೂರ್ನಾಲ್ಕು ಹೊಸ ವಸ್ತುಗಳನ್ನು ಕಂತಿನ ಆಧಾರದಲ್ಲಿ ಖರೀದಿಸುವುದು ಸುಲಭ. ಆದರೆ ತಿಂಗಳ ಕೊನೆಗೆ ಈ ಎಲ್ಲಾ ಕಂತುಗಳು ಒಟ್ಟಾದಾಗ ನಿಮ್ಮ ಗಳಿಕೆಯ ಬಹುಪಾಲು ಕೇವಲ ಕಂತುಗಳನ್ನು ಕಟ್ಟುವುದಕ್ಕೇ ಖಾಲಿಯಾಗುತ್ತದೆ. ಸಾಲ ನಿಮ್ಮ ಆದಾಯದ ಶೇಕಡಾ 30 ರಿಂದ 40ಕ್ಕಿಂತ ಹೆಚ್ಚಿರದಂತೆ ನೋಡಿಕೊಳ್ಳಿ.

2. ಬಡ್ಡಿ ರಹಿತ ಕಂತು ನಿಜವಾಗಿಯೂ ಉಚಿತವೇ?

ಮಾರಾಟಗಾರರು ಬಡ್ಡಿ ರಹಿತ ಎಂದು ಪ್ರಚಾರ ಮಾಡಿದರೂ, ಬಹುತೇಕ ಕಡೆಗಳಲ್ಲಿ ಕಡತ ನಿರ್ವಹಣಾ ಶುಲ್ಕ ಹಾಗೂ ಅದರ ಮೇಲಿನ ಸರಕು ಮತ್ತು ಜಿಎಸ್‌ಟಿ ಗ್ರಾಹಕರ ಖಾತೆಗೇ ಬೀಳುತ್ತದೆ. ಸಂಪೂರ್ಣ ನಗದು ನೀಡಿ ಖರೀದಿಸಿದರೆ ಸಿಗುವ ಮುಂಗಡ ನಗದು ರಿಯಾಯಿತಿ ಇಂತಹ ಕಂತಿನ ಸೌಲಭ್ಯ ಪಡೆದಾಗ ಲಭಿಸುವುದಿಲ್ಲ. ಅಂದರೆ, ನೀವು ರಿಯಾಯಿತಿ ಕಳೆದುಕೊಳ್ಳುವ ಮೂಲಕವೇ ಪರೋಕ್ಷವಾಗಿ ಬಡ್ಡಿಯನ್ನು ಪಾವತಿಸುತ್ತಿರುತ್ತೀರಿ.

3. ಕನಿಷ್ಠ ಪಾವತಿ ಮೋಹಕ್ಕೆ ಬೀಳಬೇಡಿ

ಹಬ್ಬದ ಖರೀದಿಯ ಮೊತ್ತ ಹೆಚ್ಚಾದಾಗ ಹಲವರು ಕೇವಲ ಕನಿಷ್ಠ ಮೊತ್ತವನ್ನು ಮಾತ್ರ ಪಾವತಿಸಿ ಸುಮ್ಮನಾಗುತ್ತಾರೆ. ಉಳಿದ ಬಾಕಿ ಮೊತ್ತಕ್ಕೆ ವಾರ್ಷಿಕ ಶೇಕಡಾ 36 ರಿಂದ 45ರವರೆಗೆ ಅತ್ಯಧಿಕ ಬಡ್ಡಿ ಬೀಳುತ್ತದೆ. ಇದು ನಿಮ್ಮನ್ನು ಸದ್ದಿಲ್ಲದೆ ಭಾರಿ ಸಾಲದ ಸುಳಿಗೆ ತಳ್ಳುತ್ತದೆ. ಕ್ರೆಡಿಟ್‌ ಕಾರ್ಡ್ ಬಳಸುವಾಗ ಯಾವಾಗಲೂ ಸಂಪೂರ್ಣ ಹಣವನ್ನು ನಿಗದಿತ ದಿನಾಂಕದೊಳಗೆ ಪಾವತಿಸುವ ಸಾಮರ್ಥ್ಯವಿದ್ದರೆ ಮಾತ್ರ ಬಳಸುವುದು ಜಾಣತನ.

4. ಸಿಬಿಲ್‌ ಸ್ಕೋರ್ ಮೇಲಾಗುವ ಹೊಡೆತ

ಕಂಡಕಂಡ ಜಾಲತಾಣಗಳಲ್ಲಿ ಸಣ್ಣಪುಟ್ಟ ಸಾಲಗಳಿಗೆ ಸತತವಾಗಿ ಅರ್ಜಿ ಸಲ್ಲಿಸುವುದು ಮತ್ತು ನಂತರ ಕಂತುಗಳನ್ನು ತಡವಾಗಿ ಕಟ್ಟುವುದು ನಿಮ್ಮ ಸಿಬಿಲ್ ಸ್ಕೋರ್ ಕುಸಿಯುವಂತೆ ಮಾಡುತ್ತದೆ. ಒಮ್ಮೆ ಈ ಅಂಕಗಳು ಕುಸಿದರೆ, ಮುಂದಿನ ದಿನಗಳಲ್ಲಿ ಮನೆ ಕಟ್ಟಲು ಅಥವಾ ತುರ್ತು ವೈದ್ಯಕೀಯ ಚಿಕಿತ್ಸೆಗೆ ಬ್ಯಾಂಕುಗಳಿಂದ ನ್ಯಾಯಯುತ ಬಡ್ಡಿದರದಲ್ಲಿ ಅಧಿಕೃತ ಸಾಲ ಪಡೆಯುವುದು ಕಷ್ಟಸಾಧ್ಯವಾಗುತ್ತದೆ.

PREV
Read more Articles on

Recommended Stories

ಸತ್ಪ್ರಜೆಗಳಿಂದ ಸಮೃದ್ಧ ದೇಶ ನಿರ್ಮಾಣ
ವಿಜಯದಶಮಿ: ಹಬ್ಬವಲ್ಲ, ಬದುಕಿನ ವಿಜಯದರ್ಶನ!